ಕೆಲಸ ಇಲ್ದಿದ್ರೂ ಆದಾಯ!?

ಪ್ರತಿಯೊಬ್ಬರಿಗೂ ಬೇಷರತ್ತಾಗಿ ಮೂಲ ಆದಾಯ ಒದಗಿಸುವ ನಿಟ್ಟಿನಲ್ಲಿ ಮಂಡಿಸಿದ್ದ ಖಾಸಗಿ ಮಸೂದೆಯನ್ನು ಸ್ವಿಜರ್ಲೆಂಡ್ನ ಜನತೆ ಜೂನ್ ಮೊದಲ ವಾರ ತಿರಸ್ಕರಿಸಿದ್ದರು. ಇದರೊಂದಿಗೆ ಜಗತ್ತಿನ ವಿವಿಧ ದೇಶಗಳಲ್ಲಿ ಮೂಲ ಆದಾಯ, ಕನಿಷ್ಠ ಆದಾಯ ಒದಗಿಸುವ ಕುರಿತ ಪ್ರಯತ್ನಗಳು ಚರ್ಚೆಗೆ ಬಂದವು.

OPED-21ನಿರುದ್ಯೋಗ ಪಿಂಚಣಿ, ಅಂಗವಿಕಲ ಪಿಂಚಣಿ, ವೃದ್ಧಾಪ್ಯ ಪಿಂಚಣಿ ಹೀಗೆ ಹಲವು ಸಾಮಾಜಿಕ ಭದ್ರತೆಯ ಯೋಜನೆಗಳನ್ನು ಸರ್ಕಾರ ಗಳು ಜಾರಿಗೊಳಿಸಿರುವುದನ್ನು ನೋಡಿದ್ದೇವೆ. ಆದರೆ, ಈ ಪಿಂಚಣಿಗಳ ಮೂಲಕ ಸಿಗುವ ಆರ್ಥಿಕ ನೆರವು ಕನಿಷ್ಠ ಪ್ರಮಾಣದ್ದು. ಇದಲ್ಲದೇ, ಸಾಮಾಜಿಕ ಭದ್ರತೆಯ ಹೆಸರಿನಲ್ಲಿ ಜಾರಿಗೊಳಿಸುವ ಯೋಜನೆಗಳನ್ನು ಗಮನಿಸಿದಾಗ, ‘ಉದ್ಯೋಗ ಇರಲಿ, ಇಲ್ಲದಿರಲಿ ಪ್ರತಿ ತಿಂಗಳೂ ನಿಯತವಾಗಿ ಒಂದಿಷ್ಟು ಆದಾಯ ಅಂತ ಕೈಗೆ ಬರುವಂತಹ ಯೋಜನೆಯೊಂದು ಜಾರಿಗೊಂಡಿದ್ದರೆ…’ ಎಂದು ಜನರ ಮನಸ್ಸು ಬಯಸಿದರೆ ತಪ್ಪೇನಿಲ್ಲ ಬಿಡಿ.. ಇಂಥದ್ದೊಂದು ಕಲ್ಪನೆಯೇ ಮನಸ್ಸಿಗೆ ಇಷ್ಟೊಂದು ಮುದ ನೀಡುತ್ತದೆ ಎಂದಾದರೆ, ವೋಟ್‌ಬ್ಯಾಂಕ್ ರಾಜಕಾರಣ ನಡೆಸುವವರು ಕಣ್ಣು ಮುಚ್ಚಿ ಇದಕ್ಕೆ ‘ಸೈ’ ಎಂದು ಬಿಡಬಹುದು. ಆದರೆ, ಇದರ ನಿಭಾವಣೆಯೇ ಬಲು ಕಷ್ಟ. ಇತ್ತೀಚೆಗೆ ಸ್ವಿಜರ್‌ಲೆಂಡ್ ಜನ ಇಂಥದ್ದೊಂದು ಯೋಜನೆಗೆ ಸಂಬಂಧಿಸಿದ ಮಸೂದೆಯನ್ನು ವಿವೇಚನೆಯಿಂದ ತಿರಸ್ಕರಿಸಿದ್ದೂ ಇದೇ ಕಾರಣಕ್ಕೆ. ಆದರೆ, ಪ್ರತಿಯೊಬ್ಬರಿಗೂ ಮೂಲ ಆದಾಯ ಖಾತರಿಪಡಿಸುವ ನಿಟ್ಟಿನಲ್ಲಿ ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿ ಒಂದಷ್ಟು ಜನರ ಪ್ರಯತ್ನ ಇನ್ನೂ ಮುಂದುವರಿದಿದೆ.

ಏನಿದು ಮೂಲ ಆದಾಯ?

ಸಾಮಾಜಿಕ ಭದ್ರತೆಯ ಹೆಸರಿನಲ್ಲಿ ಪ್ರತಿ ತಿಂಗಳೂ ಒಂದಿಷ್ಟು ಮೊತ್ತದ ಹಣವನ್ನು ಬೇಷರತ್ತಾಗಿ ಸರ್ಕಾರ ಅಥವಾ ಸರ್ಕಾರದ ಅಧಿನ ಸಂಸ್ಥೆಗಳ ಮೂಲಕ ದೇಶದ ಪ್ರಜೆಗಳಿಗೆ ಆದಾಯ ರೂಪದಲ್ಲಿ ಒದಗಿಸುವ ಯೋಜನೆ. ಈ ಮೂಲಕ ಪ್ರಜೆಗಳಿಗೆ ಸಲ್ಲಿಕೆಯಾಗುವ ಹಣವನ್ನು ಬೇಷರತ್ ಮೂಲ ಆದಾಯ (ಅನ್‌ಕಂಡಿಷನಲ್ ಬೇಸಿಕ್ ಇನ್‌ಕಂ) ಎಂದು ಪರಿಗಣಿಸಲಾಗುತ್ತದೆ. ಇದನ್ನೇ ಬೇಸಿಕ್ ಇನ್‌ಕಂ, ಬೇಸಿಕ್ ಇನ್‌ಕಂ ಗ್ಯಾರೆಂಟಿ, ಸಾರ್ವತ್ರಿಕ ಮೂಲ ಆದಾಯ, ಯೂನಿವರ್ಸಲ್ ಡೆಮಾಗ್ರಾಂಟ್ ಅಥವಾ ಪ್ರಜೆಗಳ ಆದಾಯ ಎಂದೂ ಕರೆಯಲಾಗುತ್ತದೆ. ಇದು ಸಾಮಾಜಿಕ ಭದ್ರತಾ ವ್ಯವಸ್ಥೆಯ ಒಂದು ಭಾಗ. ಇನ್ನೂ ಸರಳವಾಗಿ ಹೇಳಬೇಕೆಂದರೆ, ಪ್ರಜೆಗಳು ದುಡಿಯಲಿ ಅಥವಾ ದುಡಿಯದಿರಲಿ, ಅವರ ಖಾತೆಗೆ ಪ್ರತೀ ತಿಂಗಳೂ ಒಂದಿಷ್ಟು ಮೊತ್ತದ ಹಣ ಜಮೆಯಾಗುವ ವ್ಯವಸ್ಥೆ.

ಪರಿಕಲ್ಪನೆ ಹೊಸದಲ್ಲ

ಮೂಲ ಆದಾಯದ ಪರಿಕಲ್ಪನೆ ಹೊಸದೇನಲ್ಲ. ಪಾಶ್ಚಾತ್ಯ ಇತಿಹಾಸವನ್ನು ಕೆದಕಿದರೆ ಅದು ಹೋಗಿನಿಲ್ಲುವುದು ಹದಿನಾರನೇ ಶತಮಾನಕ್ಕೆ. ಥಾಮಸ್ ಮೂರ್ ತನ್ನ ಪ್ರಸಿದ್ಧ ‘ಉಟೋಪಿಯಾ’ ಕೃತಿಯನ್ನು ಬೆಲ್ಜಿಯಂನಲ್ಲಿ 1516ರಲ್ಲಿ ಪ್ರಕಟಿಸಿದ್ದ. ಅದರಲ್ಲಿ ರಾ-ಲ್ ನಾನ್‌ಸೆನ್ಸೊ ಎಂಬ ಪೋರ್ಚುಗೀಸ್ ಪ್ರವಾಸಿಗ ‘ಕಳ್ಳತನ’ ಕಡಿಮೆ ಮಾಡುವುದಕ್ಕೆ ನೀಡಿದ ಪರಿಹಾರವನ್ನು ಉಲ್ಲೇಖಿಸಿದ್ದ. ಪ್ರತಿಯೊಬ್ಬ ಪ್ರಜೆಗೂ ಕನಿಷ್ಠ ಆದಾಯ ಖಾತರಿಪಡಿಸುವ ಚಿಂತನೆಯನ್ನು ಜಾರಿಗೊಳಿಸಿದರೆ ಕಳ್ಳತನದ ಪ್ರಮಾಣ ಕಡಿಮೆಯಾದೀತು; ಕಳ್ಳರಿಗೆ ಮರಣದಂಡನೆಯನ್ನೋ ಅಥವಾ ಇನ್ನಿತರ ಶಿಕ್ಷೆಯನ್ನೋ ನೀಡುವುದು ಪರಿಹಾರವಾಗಲಾರದು ಎಂದು ರಾಫೆಲ್ ಹೇಳಿದ್ದ.

ಜಗತ್ತಿನ ಮೊದಲ ರೆಫೆರೆಂಡಮ್

  • ಮಸೂದೆಯನ್ನು ತಿರಸ್ಕರಿಸಿದ ಸ್ವಿಸ್ ಜನ

ಸ್ವಿಜರ್‌ಲೆಂಡ್‌ನಲ್ಲಿ ಮೂಲ ಆದಾಯ ಕುರಿತ ಚರ್ಚೆ ಈ ತಿಂಗಳ ಆರಂಭದಲ್ಲಿ ಖಾಸಗಿ ಮಸೂದೆ ರೂಪದಲ್ಲಿ ಜನಾದೇಶವನ್ನು ಎದುರು ನೋಡಿತ್ತು. ಸಾಮಾಜಿಕ ಭದ್ರತೆಯನ್ನು ಒದಗಿಸುವುದಕ್ಕಾಗಿ ವಯಸ್ಕರಿಗೆ ಪ್ರತಿ ತಿಂಗಳು 2500 ಸ್ವಿಸ್ ಫ್ರಾಂಕ್(1,60,658 ರೂ.) ಹಾಗೂ ಮಕ್ಕಳಿಗೆ ಪ್ರತಿ ತಿಂಗಳು 625 ಫ್ರಾಂಕ್(40,165 ರೂ.) ನೀಡುವ ಪ್ರಸ್ತಾಪ ಆ ಮಸೂದೆಯಲ್ಲಿತ್ತು. ಜೂನ್ 5ರಂದು ನಡೆದ ಜನಾದೇಶದಲ್ಲಿ ಪ್ರಸ್ತಾವನೆಯ ಪರವಾಗಿ ಶೇಕಡ 23, ವಿರುದ್ಧವಾಗಿ ಶೇಕಡ 77ರಷ್ಟು ಮತಗಳು ಬಿದ್ದವು. ಒಂದೊಮ್ಮೆ ಇದು ಜಾರಿಗೊಂಡಿದ್ದರೆ 80 ಲಕ್ಷ ಜನ ಇದರ ಫಲಾನುಭವಿಗಳಾಗುತ್ತಿದ್ದರು. ಆದರೆ, ಇದು ಬೊಕ್ಕಸಕ್ಕೆ ಹೊರೆ ಹಾಗೂ ಇನ್ನಿತರ ತಾಂತ್ರಿಕ ಕಾರಣಗಳಿಗಾಗಿ ಜನ ತಿರಸ್ಕರಿಸಿದರು. ಇದು ಮೂಲ ಆದಾಯ ಕುರಿತ ಜಗತ್ತಿನ ಮೊದಲ ರೆಫೆರೆಂಡಮ್ ಎಂಬ ಕೀರ್ತಿಗೆ ಭಾಜನವಾಗಿದೆ.

ರೆಫೆರೆಂಡಮ್ ಹಿನ್ನೆಲೆ: ಸ್ವಿಜರ್‌ಲೆಂಡ್‌ನಲ್ಲಿ ಮೂಲ ಆದಾಯ ಕುರಿತ ಚರ್ಚೆ 1980ರ ದಶಕದಲ್ಲೇ ಆರಂಭವಾಗಿತ್ತು. ಆಗ ಕೆಲವು ಶಿಕ್ಷಣ ತಜ್ಞರು, ಸಮಾಜಶಾಸಜ್ಞರು ಈ ವಿಷಯದ ಕುರಿತು ಚರ್ಚೆ, ಸಂವಾದಗಳನ್ನು ನಡೆಸಿದ್ದರು. ಬಡತನ ನಿವಾರಣೆಗೆ ಈ ಯೋಜನೆ ಪರಿಹಾರವಾದೀತು ಅಷ್ಟೇ ಅಲ್ಲ, ಈಗಿರುವ ಸಾಮಾಜಿಕ ಭದ್ರತಾ ಯೋಜನೆಗಳಿಗಿಂತ ಇದು ಹೆಚ್ಚು ಫಲನೀಡೀತು ಎಂಬ ಭಾವನೆ ಅವರಲ್ಲಿ ಬೇರೂರಿತ್ತು. ಆದರೆ, 1980ರಿಂದ 2000ದ ನಡುವಿನ ಅವಧಿಯಲ್ಲಿ ಈ ವಿಷಯವಾಗಿ ಯಾವುದೇ ಮಹತ್ವದ ಸಾರ್ವಜನಿಕ ಚರ್ಚೆಗಳಾಗಲಿಲ್ಲ. 2000ನೇ ಇಸವಿಯ ಆರಂಭದಲ್ಲಿ ಈ ವಿಷಯವಾಗಿ ಜರ್ಮನ್‌ನಲ್ಲಿ ಪುಟ್ಟ ಚರ್ಚೆ ನಡೆಯಿತು. ಪರಿಣಾಮ ‘ಇನಿಷಿಯೇಟಿವ್ ಗ್ರುಡೈನ್‌ಕೊಮ್ಮೆನ್’ ಮತ್ತು ‘ಬೇಸಿಕ್ ಇನ್‌ಕಮ್ ಅರ್ಥ್ ನೆಟ್‌ವರ್ಕ್- ಸ್ವಿಜರ್‌ಲೆಂಡ್’ ಎಂಬ ಎರಡು ಸಂಘಟನೆಗಳು ಹುಟ್ಟಿಕೊಂಡವು. ಇವುಗಳ ಜೊತೆಗೆ ‘ಅಸೋಸಿಯೇಷನ್ -ರ್ ದ ಟ್ಯಾಕ್ಸೇಷನ್ ಫಾರ್ ದ ಟ್ಯಾಕ್ಸೇಷನ್ ಆಫ ಫಿನಾನ್ಷಿಯಲ್ ಟ್ರಾನ್ಸಾಕ್ಷನ್ಸ್ ಆಂಡ್ ಸಿಟಿಝನ್ಸ್ ಆಕ್ಷನ್’ ಎಂಬ ಗುಂಪು ಕೂಡ ಈ ವಿಷಯದ ಪರವಾಗಿ ಕೆಲಸ ಮಾಡಲಾರಂಭಿಸಿತು. ಮಾಧ್ಯಮಗಳಲ್ಲಿ ಈ ಚಿಂತನೆಯ ಕುರಿತು ಲೇಖನಗಳು ಪ್ರಕಟವಾದವು. 2012ರ ಏಪ್ರಿಲ್‌ನಲ್ಲಿ ಮೂಲ ಆದಾಯ ಹೊಂದುವುದು ಸಾಂವಿಧಾನಿಕ ಹಕ್ಕು ಎಂಬುದನ್ನು ಪ್ರತಿಪಾದಿಸುವ ಜನಾದೇಶ ನಡೆಸುವಂತೆ ಈ ಸಂಘಟನೆಗಳು ಅಹವಾಲು ಸಲ್ಲಿಸಿದವು. ಆರು ತಿಂಗಳ ಅವಧಿಯಲ್ಲಿ 42,000 ಜನ ಇದಕ್ಕೆ ಸಹಿಹಾಕಿದ್ದರು. 2013ರ ಏಪ್ರಿಲ್ ವೇಳೆಗೆ ಇದರ ಪರ ಸಹಿಹಾಕಿದವರ ಸಂಖ್ಯೆ 70,000, ಅಕ್ಟೋಬರ್‌ನಲ್ಲಿ 1,30,000 ದಾಟಿತ್ತು. ಇವೆಲ್ಲದರ ಪರಿಣಾಮವೇ ಈ ವರ್ಷ ಜೂನ್‌ನಲ್ಲಿ ನಡೆದ ಜನಾದೇಶ ಪ್ರಕ್ರಿಯೆ.

ಉದ್ದೇಶ ಏನಿತ್ತು: ಪ್ರತಿಯೊಂದು ಕೆಲಸಕ್ಕೂ ಇದೀಗ ಕಂಪ್ಯೂಟರ್‌ಗಳು, ರೊಬಾಟ್‌ಗಳನ್ನು ಬಳಸಲಾರಂಭಿಸಲಾಗಿದೆ. ಹೀಗಾಗಿ ಮನುಷ್ಯನಿಗೆ ಉದ್ಯೋಗ ಸಿಗುವುದು ದುಸ್ತರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮೂಲ ಆದಾಯ ಖಾತರಿ ಪಡಿಸದಿದ್ದರೆ ಮುಂದೊಂದು ದಿನ ಅದರ ಪರಿಣಾಮಗಳು ವ್ಯತಿರಿಕ್ತವಾದೀತು. ಸಂಭಾವ್ಯ ಅಪಾಯ ತಡೆಗಟ್ಟುವ ಸಲುವಾಗಿ ಮೂಲ ಆದಾಯ ನಿಗದಿಪಡಿಸಬೇಕು ಎಂಬುದು ರೆಫೆರೆಂಡಂನ ಉದ್ದೇಶವಾಗಿತ್ತು.

ಪ್ರತಿಯೊಬ್ಬರಿಗೂ ಬೇಷರತ್ತಾಗಿ ಮೂಲ ಆದಾಯ ಒದಗಿಸುವ ನಿಟ್ಟಿನಲ್ಲಿ ಮಂಡಿಸಿದ್ದ ಖಾಸಗಿ ಮಸೂದೆಯನ್ನು ಸ್ವಿಜರ್‌ಲೆಂಡ್‌ನ ಜನತೆ ಜೂನ್ ಮೊದಲ ವಾರ ತಿರಸ್ಕರಿಸಿದ್ದರು. ಇದರೊಂದಿಗೆ ಜಗತ್ತಿನ ವಿವಿಧ ದೇಶಗಳಲ್ಲಿ ಮೂಲ ಆದಾಯ, ಕನಿಷ್ಠ ಆದಾಯ ಒದಗಿಸುವ ಕುರಿತ ಪ್ರಯತ್ನಗಳು ಚರ್ಚೆಗೆ ಬಂದವು. ಇಂತಹ ಆಯ್ದ ಕುತೂಹಲಕಾರಿ ಪ್ರಯತ್ನಗಳನ್ನು ವಿವರಿಸಿದ್ದಾರೆ ಉಮೇಶ್ ಕುಮಾರ್ ಶಿಮ್ಲಡ್ಕ.

  • ಜಗತ್ತಿನಾದ್ಯಂತ ಗರಿಗೆದರಿದೆ ಮೂಲ ಆದಾಯದ ಚರ್ಚೆ

ಸಾರ್ವತ್ರಿಕ ಮೂಲ ಆದಾಯ ಅವಕಾಶ ಮತ್ತು ಅಪಾಯ

ಎರಡನೇ ವಿಶ್ವ ಯುದ್ಧದ ತರುವಾಯ ಯುರೋಪ್ ರಾಷ್ಟ್ರಗಳಲ್ಲಿ ನಿರುದ್ಯೋಗ, ಆರ್ಥಿಕ ಮುಗ್ಗಟ್ಟು ಸೇರಿ ಹಲವು ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಆಗ ಅಲ್ಲಿನ ಸರ್ಕಾರಗಳು ಪ್ರಜೆಗಳ ಕ್ಷೇಮಕ್ಕಾಗಿ ಅನೇಕ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸಿದ್ದವು.

ಇದುಸರ್ಕಾರದ ಬೊಕ್ಕಸಕ್ಕೆ ಹೊರೆಯೇ ಆಗಿತ್ತು. ಅದಕ್ಕೆ ತಕ್ಕಂತೆ ಯುರೋಪ್ ರಾಷ್ಟ್ರಗಳಲ್ಲಿ ತೆರಿಗೆ ಪ್ರಮಾಣವೂ ಗರಿಷ್ಠ ಮಟ್ಟದಲ್ಲಿದೆ. 2008ರ ಆರ್ಥಿಕ ಬಿಕ್ಕಟ್ಟಿನ ನಂತರದಲ್ಲಿ ಈ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನ ದುಬಾರಿ ಎನಿಸಲಾರಂಭಿಸಿದೆ. ಈ ನಡುವೆ, ಫಿನ್‌ಲ್ಯಾಂಡ್ ಸರ್ಕಾರ ಪ್ರಜೆಗಳಿಗೆ ಮೂಲ ಆದಾಯ ಒದಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಅಲ್ಲಿ, ಸರಾಸರಿ ಶೇಕಡ 10ರಷ್ಟು ನಿರುದ್ಯೋಗವಿದೆ. ಯುವಜನರ ಪೈಕಿ ಶೇಕಡ 22ರಷ್ಟು ಜನರು ನಿರುದ್ಯೋಗಿಗಳು. ಒಟ್ಟು ಜನಸಂಖ್ಯೆ 54 ಲಕ್ಷ. ಇವೆಲ್ಲದರ ಪರಿಣಾಮವೇ ಮೂಲ ಆದಾಯ ಯೋಜನೆ ಕುರಿತ ಚಿಂತನೆ.

ಹೊಸ ಉದ್ಯೋಗ ಮತ್ತು ಕಾಲಕ್ಕೆ ತಕ್ಕಂತೆ ಇಲ್ಲದ ಕಲ್ಯಾಣ ಯೋಜನೆಗಳು ಯುರೋಪ್‌ನಲ್ಲಿ ‘ಸಾರ್ವತ್ರಿಕ ಮೂಲ ಆದಾಯ’ ಕುರಿತ ಚಿಂತನೆಯನ್ನು ಮುನ್ನೆಲೆಗೆ ತಂದಿವೆ. ನಿರುದ್ಯೋಗಿಗಳಿಗೆ ಈ ಯೋಜನೆ ಜೀವನ ಮಟ್ಟದಲ್ಲಿ ಸ್ಥಿರತೆ ಕಾಪಾಡಲು ಸಹಕಾರಿ ಎಂದು ಯೋಜನೆ ಪರವಾಗಿರುವವರು ವಾದಿಸಿದರೆ, ಇದರಿಂದ ನಿರುದ್ಯೋಗಿಗಳು ಉದ್ಯೋಗ ಹುಡುಕದೇ ಸೋಮಾರಿಗಳಾಗುತ್ತಾರೆ ಎಂದು ವಿರೋಧವಾಗಿರುವವರು ವಾದಿಸುತ್ತಾರೆ.

  • ಜಗತ್ತಿನಾದ್ಯಂತ ಗರಿಗೆದರಿದೆ ಮೂಲ ಆದಾಯದ ಚರ್ಚೆ

ಹೀಗೊಂದು ವಿಲಕ್ಷಣ ಪ್ರಯೋಗ

ಸ್ವಿಜರ್‌ಲೆಂಡ್ ವಿದ್ಯಮಾನದ ಹಿನ್ನೆಲೆಯಲ್ಲಿ ಲೇಖಕ ಜೇಮ್ಸ್ ಸರೋವಿಕ್ ಕೆನಡಾದ ಮನಿಟೋಬಾ ಪ್ರಾಂತ್ಯದಲ್ಲಿ ನಡೆದ ವಿಲಕ್ಷಣ ಪ್ರಯೋಗದ ಬಗ್ಗೆ ಗಮನಸೆಳೆದಿದ್ದಾರೆ. ಅದು 1970ರ ದಶಕದ ಮಧ್ಯಭಾಗ. ಮನಿಟೋಬಾ ಪ್ರಾಂತ್ಯದ ಸರ್ಕಾರ ಡೌಫಿನ್ ಪಟ್ಟಣದ ನಿವಾಸಿಗಳ ಖಾತೆಗೆ ಹಣ ಪಾವತಿಸಲಾರಂಭಿಸಿತು. ಇದು ಅವರಿಗೆ ಮೂಲ ಆದಾಯ ಖಾತರಿಪಡಿಸುವ ಯೋಜನೆಯಾಗಿತ್ತು. “Mincome’ ಎಂಬುದು ಯೋಜನೆಯ ಹೆಸರು. ಪ್ರಾಯೋಗಿಕವಾಗಿ ಚಾಲ್ತಿಗೆ ಬಂದ ಈ ಯೋಜನೆ ಪರಿಣಾಮ ಏನಾಯ್ತು ಗೊತ್ತೆ? ಮುಂದೆ ಕನ್ಸರ್‌ವೇಟಿವ್ ಸರ್ಕಾರ ಬಂದಾಗ 1979ರಲ್ಲಿ ಈ ಯೋಜನೆಯನ್ನು ರದ್ದುಗೊಳಿಸಿತು. ಜನ ಕೆಲಸಕ್ಕೆ ಹೋಗುವುದು ನಿಲ್ಲಿಸಿದ್ದಾರೆ.

ಸರ್ಕಾರ ನೀಡುತ್ತಿರುವ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿದರು ಎಂಬ ನೆಪವೊಡ್ಡಿ ಆ ಸರ್ಕಾರ ರದ್ದುಗೊಳಿಸಿತೋ ಏನೋ? ಆದರೆ, ಆಸಕ್ತಿದಾಯಕ ವಿಚಾರ ಎಂದರೆ ಮನಿಟೋಬಾ ಯೂನಿವರ್ಸಿಟಿಯ ಅರ್ಥಶಾಸಜ್ಞೆ ಎವ್ಲಿನ್ -ರ್ಗೆಟ್ ಎಂಬುವರು  ಈ ಯೋಜನೆ ಅನುಷ್ಠಾನದಲ್ಲಿದ್ದ ಅವಧಿಯಲ್ಲಾದ ಪರಿಣಾಮಗಳೇನು ಎಂಬುದರ ಅಧ್ಯಯನ ನಡೆಸಿದರು. ಆ ಸಂದರ್ಭದಲ್ಲಿ ಅವರು ಕಂಡುಕೊಂಡ ಸತ್ಯ ಅಚ್ಚರಿಪಡುವಂಥದ್ದು. ಯೋಜನೆ ಜಾರಿಯಲ್ಲಿದ್ದಾಗ ಡೌಫಿನ್ ಜನರ ಜೀವನ ಮಟ್ಟ ಗಣನೀಯವಾಗಿ ಸುಧಾರಿಸಿತ್ತು. ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆಯಾಗಿತ್ತು. ಹದಿಹರೆಯದವರು ಸರಿಯಾಗಿ ಶಾಲಾ, ಕಾಲೇಜುಗಳಿಗೆ ತೆರಳಿ ಶಿಕ್ಷಣ ಪಡೆದರು. ಕೆಲಸಕ್ಕೆ ಹೋಗುವವರ ಪ್ರಮಾಣದಲ್ಲೇನೂ ಕಡಿಮೆಯಾಗಿರಲಿಲ್ಲ. ಒಟ್ಟಾರೆ ಎಲ್ಲರೂ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪರಿಣಾಮ ಈ ಯೋಜನೆಯಿಂದಾಗಿತ್ತು.

ಸಾರ್ವತ್ರಿಕ ಮೂಲ ಆದಾಯ- ಕನಿಷ್ಠ ಆದಾಯ ಖಾತರಿ ವಾದ ಪ್ರತಿವಾದ

ವಿವಿಧ ದೇಶಗಳಲ್ಲಿರುವ ಆದಾಯ ಯೋಜನೆಗಳು

ಅಮೆರಿಕ: ಅರವತ್ತೈದು ವರ್ಷ ಮತ್ತು ಮೇಲ್ಪಟ್ಟವರಿಗಾಗಿ ಹಾಗೂ ಅಂಧರು, ಅಂಗವಿಕಲರಿಗಾಗಿ ಪೂರಕ ಭದ್ರತಾ ಆದಾಯ (Supplemental Security Income (SSI)) ಎಂಬ ಯೋಜನೆಯನ್ನು ಅಮೆರಿಕ ಸರ್ಕಾರ 1974ರಲ್ಲೇ ಆರಂಭಿಸಿದೆ. ಇದಕ್ಕೆಂದೇ ಸೋಷಿಯಲ್ ಸೆಕ್ಯುರಿಟಿ ಟ್ರಸ್ಟ್ ಫಂಡನ್ನು ಅದು ರಚಿಸಿದೆ. ಇದಕ್ಕೂ ಮುನ್ನ ಫೆಡರಲ್ ಸ್ಟೇಟ್ ಅಡಲ್ಟ್ ಅಸಿಸ್ಟನ್ಸ್ ಪ್ರೋಗ್ರಾಂ ಚಾಲ್ತಿಯಲ್ಲಿತ್ತು. ಅಂದಾಜು 80 ಲಕ್ಷ ಅಮೆರಿಕನ್ನರು ಇದರ ಫಲಾನುಭವಿಗಳು.

ಬ್ರಿಟನ್: ಉದ್ಯೋಗ ಅರಸುತ್ತಿರುವವರ ಅನುಕೂಲಕ್ಕಾಗಿ ಬ್ರಿಟನ್‌ನಲ್ಲಿ ‘ಇನ್‌ಕಂ ಸಪೋರ್ಟ್’ ಯೋಜನೆ ಜಾರಿಯಲ್ಲಿದೆ. ಇದನ್ನು ಜಾಬ್‌ಸೀಕರ್’ಸ್ ಅಲೋವೆನ್ಸ್ ಅಥವಾ ಎಂಪ್ಲಾಯ್‌ಮೆಂಟ್ ಆಂಡ್ ಸಪೋರ್ಟ್ ಅಲೋವೆನ್ಸ್ ಎನ್ನುತ್ತಾರೆ. ಈ ಭತ್ಯೆ ಪಡೆಯುವವರು ಒಂಟಿಯಾಗಿರಬೇಕು, ಉಳಿತಾಯ ಖಾತೆಯಲ್ಲಿ 16,000 ಪೌಂಡ್‌ಗಿಂತ ಹೆಚ್ಚು ಹಣ ಇರಬಾರದು ಎಂಬಿತ್ಯಾದಿ ನಿಬಂಧನೆಗಳಿವೆ.

ಇದೇ ರೀತಿ ಫ್ರಾನ್ಸ್, ಯುರೋಪ್‌ನ ಕೆಲವು ರಾಷ್ಟ್ರಗಳು ಸೇರಿ ಅನೇಕ ರಾಷ್ಟ್ರಗಳಲ್ಲಿ ಈ ರೀತಿಯ ಪೂರಕ ಯೋಜನೆಗಳು ಚಾಲ್ತಿಯಲ್ಲಿವೆ. ಆದರೆ, ಪ್ರತಿಯೊಬ್ಬರಿಗೂ ಮೂಲ ಆದಾಯ ಅಥವಾ ಖಚಿತ ಮೂಲ ಆದಾಯ ಯೋಜನೆ ಜಾರಿಯಲ್ಲಿಲ್ಲ.

ಮೂಲ ಆದಾಯ v/s ಖಚಿತ ಮೂಲ ಆದಾಯ

ಸರ್ಕಾರ ಅಥವಾ ಸರ್ಕಾರಿ ಸಂಸ್ಥೆ ನೀಡುವ ಮೂಲ ಆದಾಯಕ್ಕೆ ಯಾವುದೇ ಷರತ್ತು ನಿಬಂಧನೆಗಳು ಇರುವುದಿಲ್ಲ. ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ ಭದ್ರತೆಯ ಪ್ರಕಾರ ಇದನ್ನು ಕೊಡಬೇಕೆನ್ನುವುದು ಪ್ರಸ್ತಾವನೆ. ಅದೇ ರೀತಿ, ಖಚಿತ ಮೂಲ ಆದಾಯವನ್ನೂ ಸರ್ಕಾರವೇ ಪ್ರತಿ ಪ್ರಜೆಗೂ ಕೊಡುವುದಾದರೂ, ಈ ಹಣ ಪಡೆಯುವುದಕ್ಕೆ ಹಾಗೂ ಖರ್ಚು ಮಾಡುವುದಕ್ಕೆ ಕೆಲವೊಂದು ನಿಬಂಧನೆಗಳಿವೆ. ಇದು ಈ ಎರಡೂ ಆದಾಯಗಳ ನಡುವಿನ ಪ್ರಮುಖ ವ್ಯತ್ಯಾಸ.

ಜಗತ್ತಿನ ವಿವಿಧೆಡೆ

ಅಮೆರಿಕ, ಬ್ರಿಟನ್ ಸೇರಿ ಜಗತ್ತಿನ ಹಲವು ದೇಶಗಳಲ್ಲಿ ಬೇಸಿಕ್ ಇನ್‌ಕಂ ಕುರಿತು ಪ್ರಯೋಗಗಳಾಗಿವೆ ಮತ್ತು ನಡೆಯುತ್ತಲೇ ಇವೆ. ಮೂಲ ಆದಾಯದ ಕುರಿತ ಚಿಂತನೆ ಮತ್ತು ಅದಕ್ಕೆ ಸಂಬಂಧಿಸಿದ ಪ್ರಯೋಗ ಆರಂಭವಾಗಿದ್ದು ಅಮೆರಿಕದಲ್ಲಿ. ಅಮೆರಿಕ ಹಾಗೂ ಕೆನಡಾದಲ್ಲಿ 1960-70ರ ದಶಕದಲ್ಲಿ ಇದರ ಪ್ರಾಯೋಗಿಕ ಯೋಜನೆಗಳು ಜಾರಿಯಾಗಿದ್ದವು. ತರುವಾಯ ಅದು ಯುರೋಪ್ ಮತ್ತು ಇತರೆ ಭಾಗಗಳಿಗೆ ಹರಡಿತು. ಅಲಾಸ್ಕಾ ಪರ್ಮನೆಂಟ್ ಫಂಡ್ ಎಂಬುದು ಬೇಸಿಕ್ ಇನ್‌ಕಮ್ ಯೋಜನೆಗೆ ಒಂದು ಉತ್ತಮ ನಿದರ್ಶನ ಎನ್ನಬಹುದು. ಇದು ಪ್ರಜೆಗಳಿಗೆ ಭಾಗಶಃ ಆದಾಯವನ್ನು ಖಾತರಿಯಾಗಿ ನೀಡುತ್ತದೆ. ಇದೇ ರೀತಿ, ಬ್ರೆಜಿಲ್‌ನ ಬೋಲ್ಸಾ ಫೆಮಿಲಿಯಾ, ಮಕಾವೋ ಹಾಗೂ ಇರಾನ್‌ನಲ್ಲಿರುವ ಭಾಗಶಃ ಮೂಲ ಆದಾಯ ಯೋಜನೆಗಳು ಕೂಡ ಗಮನಾರ್ಹ. ನಮೀಬಿಯಾ(2008)ದಲ್ಲೂ ಮೂಲ ಆದಾಯದ ಪ್ರಾಯೋಗಿಕ ಅನುಷ್ಠಾನ ಆಗಿತ್ತು.

ನೆದರ್‌ಲೆಂಡ್‌ನಲ್ಲಿ ಮುಂದಿನ ವರ್ಷ ಜಾರಿ

  • ಮತ್ತೊಂದು ಪ್ರಯೋಗಕ್ಕೆ ವೇದಿಕೆ ಸಜ್ಜು

ನೆದರ್‌ಲೆಂಡ್‌ನ ಉಟ್ರೆಚ್ ಪಟ್ಟಣ ಇದನ್ನು ಪ್ರಾಯೋಗಿಕವಾಗಿ 2017ರಿಂದ ಜಾರಿಗೊಳಿಸಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಪಟ್ಟಣದ ಸಾಮಾಜಿಕ ಕಲ್ಯಾಣ ಯೋಜನೆಯ -ಲಾನುಭವಿಗಳನ್ನು ಐದು ಗುಂಪುಗಳನ್ನಾಗಿ ವಿಭಜಿಸಲಾಗಿದೆ. ಪ್ರತಿಯೊಂದು ವಿಭಾಗದ -ಲಾನುಭವಿಗಳ ಮೇಲೆ ಆ ಯೋಜನೆಯ ಪರಿಣಾಮವನ್ನು ಅಧ್ಯಯನ ನಡೆಸಲಾಗುತ್ತದೆ. ಈ ಪ್ರಯೋಗ ಎರಡು ವರ್ಷ ನಡೆಯಲಿದೆ.

ರೊಬಾಟ್ ಬಳಕೆಗೆ ಇದು ಪರಿಹಾರವಾದೀತೆ? 

ಬದಲಾದ ಕಾಲಘಟ್ಟದಲ್ಲಿ ಉದ್ಯೋಗ ಕ್ಷೇತ್ರಗಳಲ್ಲಿ ಕಂಪ್ಯೂಟರ್, ರೊಬಾಟ್‌ಗಳ ಬಳಕೆ ಹೆಚ್ಚಾಗಿದೆ. ಇದರಿಂದಾಗಿ ಮಾನವ ಸಂಪನ್ಮೂಲದ ಬಳಕೆ ಕಡಿಮೆಯಾಗುತ್ತಿದೆ. ಮುಂದೆ ಮಾನವ ಸಂಪನ್ಮೂಲದ ಜಾಗವನ್ನು ರೊಬಾಟ್ ತುಂಬಿದರೆ ಮನುಷ್ಯರು ನಿರುದ್ಯೋಗಿಗಳಾಗುವುದು ಖಚಿತ. ಅಂತಹ ಸನ್ನಿವೇಶದಲ್ಲಿ ಈಗ ಚರ್ಚೆಗೊಳಗಾಗುತ್ತಿರುವ ಮೂಲ ಆದಾಯ ಅಥವಾ ಖಚಿತ ಮೂಲ ಆದಾಯ ಯೋಜನೆ ನೆರವಿಗೆ ಬಂದೀತೇ? ಎಂಬುದು ಸದ್ಯದ ಜಿಜ್ಞಾಸೆ.

ಭಾರತದಲ್ಲಿ ಏನಾಗಿತ್ತು?

ಯುನಿಸೆಫ ಸಹಯೋಗದಲ್ಲಿ ಭಾರತದ ಸೆಲ್ ಎಂಪ್ಲಾಯ್ಡ್ ವಿಮೆನ್ಸ್ ಅಸೋಸಿಯೇಷನ್ (ಸೇವಾ) ಬೇಸಿಕ್ ಇನ್‌ಕಂ ಪ್ರಾಜೆಕ್ಟನ್ನು 2011ರಲ್ಲಿ ಜಾರಿಗೊಳಿಸಿತ್ತು. ಈ ಕುರಿತು ಚರ್ಚೆ, ಸಂವಾದಗಳನ್ನೂ ಅದು ಏರ್ಪಡಿಸಿತ್ತು. ಈ ಯೋಜನೆಗಾಗಿ ಮಧ್ಯಪ್ರದೇಶದ ಒಟ್ಟು 20 ಹಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಪೈಕಿ ಎಂಟು ಗ್ರಾಮಸ್ಥರಿಗೆ ಮೂಲ ಆದಾಯ ಒದಗಿಸಲಾಗಿತ್ತು. ಉಳಿದ ಗ್ರಾಮಸ್ಥರು ಈ ಯೋಜನೆಯ ನಿಯಂತ್ರಕರಾಗಿದ್ದರು. 2012ರ ಸೆಪ್ಟೆಂಬರ್ ವೇಳೆಗೆ ಈ ಯೋಜನೆಯ -ಲಾನುಭವಿಗಳ ಸಂಖ್ಯೆ 6460 ಆಗಿತ್ತು. ಇವರಲ್ಲಿ ಬಹುತೇಕರು ಬಡವರು. ಪರಿಣಾಮ ಅವರ ಜೀವನ ಗುಣಮಟ್ಟ ಸುಧಾರಿಸಿದ್ದಲ್ಲದೆ,

ಗ್ರಾಮಸ್ಥರ ಆಹಾರ ಹಾಗೂ ಆರೋಗ್ಯ ಕಾಳಜಿ ಹೆಚ್ಚಾಯಿತು. ಶೇಕಡ 68 ಕುಟುಂಬಗಳ ಮಕ್ಕಳ ಶಾಲಾ ಶಿಕ್ಷಣ ನಿರಾತಂಕವಾಗಿ ಮುಂದುವರಿಯಿತು. ವೈಯಕ್ತಿಕ ಉಳಿತಾಯ  ಮೂರು ಪಟ್ಟು ಹೆಚ್ಚಿತು. ಹೊಸ ಹೊಸ ಉದ್ಯಮ, ವ್ಯಾಪಾರಗಳನ್ನು ಅವರು ಆರಂಭಿಸಿದರು ಎಂಬ ಅಂಶವನ್ನು ವರದಿಯೊಂದು  (mondediplo.
com/2013/05/04income) ) ಗುರುತಿಸಿದೆ.

Tags :

Leave a Reply

Your email address will not be published. Required fields are marked *