ಮಹಾಸಮರ ಸಾರಿದ ಮಹಾದಲಿತ `ಸಿಎಂ’!

ವಿಜಯವಾಣಿ ಪತ್ರಿಕೆಯ ಫೆ.೮ರ ಸಂಚಿಕೆಯಲ್ಲಿ ಪ್ರಕಟವಾದ ವ್ಯಕ್ತಿವಿಶೇಷ.
ವಿಜಯವಾಣಿ ಪತ್ರಿಕೆಯ ಫೆ.೮ರ ಸಂಚಿಕೆಯಲ್ಲಿ ಪ್ರಕಟವಾದ ವ್ಯಕ್ತಿವಿಶೇಷ.

ಜಿತನ್ ರಾಮ್ ಮಾಂಝಿ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ವೇಳೆ ಅವರನ್ನು ಬಹುತೇಕರು ಹಗುರವಾಗಿಯೇ ಪರಿಗಣಿಸಿದ್ದರು. ಜಿತನ್ ಪರಿಪೂರ್ಣ ಸಿಎಂ ಆಗಲಾರರು, ಅವರೇನಿದ್ದರೂ ಮಾಜಿ ಸಿಎಂ ನಿತೀಶ್ ಕುಮಾರ್ ಅವರ `ರಬ್ಬರ್ ಸ್ಟಾಂಪ್’ ಎಂಬ ಮಾತೇ ಕೇಳಿಬಂದಿತ್ತು. ಆದರೆ, ಈ ಎಲ್ಲ ಲೆಕ್ಕಾಚಾರ ಎಂಟೂವರೆ ತಿಂಗಳ ಅವಧಿಯಲ್ಲಿ ತಲೆಕೆಳಗಾಗಿದೆ.

ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಜೆಡಿಯು ಹೀನಾಯ ಸೋಲು ಅನುಭವಿಸಿದ್ದ ಹಿನ್ನೆಲೆಯಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ನಿತೀಶ್‍ಕುಮಾರ್ ಅವರ ಬಗ್ಗೆ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿತ್ತು. ತತ್‍ಕ್ಷಣದ ಪರಿಹಾರವಾಗಿ ಸಿಎಂ ಕುರ್ಚಿ ಬಿಟ್ಟು ಕೆಳಗಿಳಿದ ನಿತೀಶ್, ತಮ್ಮ ಸಚಿವ ಸಂಪುಟದ ಸಹೋದ್ಯೋಗಿ ಜಿತನ್ ರಾಮ್ ಮಾಂಝಿ ಅವರನ್ನು ಸಿಎಂ ಪಟ್ಟಕ್ಕೇರಿಸಿದ್ದರು. ಅವರ ಮೂಲಕ ರಾಜ್ಯಭಾರ ನಡೆಸುವ ಕನಸು ಕಂಡಿದ್ದರು. ಅಷ್ಟೇ ಅಲ್ಲ, ಮಹಾದಲಿತ ಸಮುದಾಯದ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿಯನ್ನಾಗಿಸಿದ ಕೀರ್ತಿಯೂ ತಮ್ಮ ಪಾಲಿಗೆ ಸಿಗುತ್ತದೆ. ಮುಂದಿನ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ, ಮಾಂಝಿ ಅವರನ್ನು ಕೆಳಕ್ಕಿಳಿಸಿ ತಾನು ಮತ್ತೆ ಸಿಎಂ ಆಗಬಹುದೆಂಬ ದೂರದೃಷ್ಟಿಯ ರಾಜಕೀಯ ಲೆಕ್ಕಾಚಾರವೂ ಅದರ ಹಿಂದಿತ್ತು. ಆದರೆ, ಸಿಎಂ ಕುರ್ಚಿ ಏರಿದ ಕೂಡಲೇ ಮಾಂಝಿ, ತಾನು ರಬ್ಬರ್‍ಸ್ಟಾಂಪ್ ಅಲ್ಲ ಎಂಬುದನ್ನು ಖಚಿತಪಡಿಸಿದರು. ಪರಿಣಾಮ ಅವರ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು. ನಿತೀಶ್ ಆಪ್ತರೆನಿಸಿಕೊಂಡ ಅಧಿಕಾರಿಗಳಿಗೆ, ಸಚಿವರಿಗೆ ಬಿಸಿ ಮುಟ್ಟಿಸಿದರು. ಸರ್ಕಾರದೊಳಗಿನ ಆಂತರಿಕ ಸಂಘರ್ಷ ಹೆಚ್ಚಾಗಿದ್ದು, ಕಳೆದ ವಾರ ಅದು ಅತಿರೇಕಕ್ಕೆ ಹೋಯಿತು. ಯಾವಾಗ ತನ್ನ ಸ್ಥಾನಕ್ಕೇ ಚ್ಯುತಿ ಬರಲಿದೆ ಎಂಬುದು ಮನವರಿಕೆಯಾಯಿತೋ ಮಾಂಝಿ ಎಚ್ಚೆತ್ತುಕೊಂಡರು. `ನಿತೀಶ್‍ಕುಮಾರ್ ಅವರು ಯಾಕೆ ಮಹಾಭಾರತದ ಭೀಷ್ಮ ಪಿತಾಮಹರಂತೆ ವರ್ತಿಸುತ್ತಿದ್ದಾರೆ ಎಂದು ನಾನರಿಯೆ. ಅವರ ಮಾರ್ಗದರ್ಶನದಲ್ಲೇ ಸರ್ಕಾರ ನಡೆಸುತ್ತಿದ್ದೆ. ಆದರೆ, ಅವರಿಗೆ ನನ್ನ ಬಗ್ಗೆ ವಿಶ್ವಾಸ ಇರಲಿಲ್ಲ ಅನ್ನೋದು ಮನವರಿಕೆಯಾಯಿತು. ಈಗ ನಿಜವಾದ ಯುದ್ಧ ಆರಂಭವಾಗಿದೆ. ಈ ಹಂತದಲ್ಲಿ ನಾನು ಓಡಿ ಹೋಗಲಾರೆ’ ಎಂದು ಶುಕ್ರವಾರ (ಫೆ.6) ಸಾರ್ವಜನಿಕ ಸಮಾರಂಭವೊಂದರಲ್ಲಿ ಹೇಳಿದ್ದರು. ಇದರ ಬೆನ್ನಲ್ಲೇ, ಸಚಿವ ಸಂಪುಟದಲ್ಲಿ ತಮ್ಮ ವಿರುದ್ಧ ನಡೆದ ಇಬ್ಬರು ಸಚಿವರ(ನಿತೀಶ್ ಆಪ್ತರು)ನ್ನು ವಜಾಗೊಳಿಸಿ ಫೆ.6ರಂದು ಆದೇಶ ಹೊರಡಿಸಿದರು. ಇದಾಗಿ, ಫೆ.7ರಂದು ಬೆಳಗ್ಗೆ ತುರ್ತಾಗಿ ಸಚಿವ ಸಂಪುಟ ಸಭೆ ಕರೆದು ಸರ್ಕಾರ ವಿಸರ್ಜಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿ ರಾಜ್ಯಪಾಲರಿಗೆ ಸಂದೇಶವನ್ನೂ ರವಾನಿಸಿದರು. ಮಧ್ಯಾಹ್ನ ನಂತರ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದು, ನಿತೀಶ್ ಕುಮಾರ್ ಅವರು ಮತ್ತೆ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸುದ್ದಿಯೂ ಬಿತ್ತರಗೊಂಡಿದೆ. ಪಕ್ಷದೊಳಗೆ ತಲ್ಲಣ ಸೃಷ್ಟಿಯಾಗಿದೆ.

ಈ ರೀತಿ ಬಂಡಾಯ ಏಳುವ ಮೂಲಕ ಜೆಡಿಯು ನಾಯಕರಿಗೆ ರಾಜಕೀಯ ಪಾಠ ಕಲಿಸಲು ಮುಂದಾದ ಮಾಂಝಿ ಏಕಾಕಿಯಾಗಿ ರಾಜಕೀಯದಲ್ಲಿ ಮೇಲೆ ಬಂದವರಲ್ಲ. ಕಡುಬಡತನದ ಕೌಟುಂಬಿಕ ಹಿನ್ನೆಲೆಯಿಂದ ಬಂದ ಮಾಂಝಿ ಯಾವುದೇ ಒಂದು ಪಕ್ಷಕ್ಕೆ ಅಂಟಿ ರಾಜಕಾರಣ ನಡೆಸಿದವರಲ್ಲ. ಹಂತ ಹಂತವಾಗಿ ಸ್ವ ಪರಿಶ್ರಮದಿಂದಲೇ ರಾಜಕಾರಣದಲ್ಲಿ ಮೇಲೆ ಬಂದವರು. ಬಡತನವಿದ್ದರೂ ಪತ್ನಿ ಶಾಂತಿದೇವಿ ಮತ್ತು ಇಬ್ಬರು ಪುತ್ರರು, ಐವರು ಪುತ್ರಿಯರನ್ನೊಳಗೊಂಡ ಸುಖಸಂಸಾರ ಇವರದ್ದು.

ಇಂತಹ ಮಾಂಝಿ, 1944ರ ಅಕ್ಟೋಬರ್ 6ರಂದು ಗಯಾ ಜಿಲ್ಲೆಯ ಮಹ್ಕಾರ್ ಗ್ರಾಮದಲ್ಲಿ ರಾಮ್‍ಜಿತ್ ರಾಮ್ ಮತ್ತು ಸುಕ್ರಿ ದೇವಿಯವರ ಮಗನಾಗಿ ಜನಿಸಿದರು. ತಂದೆ, ತಾಯಿ ಇಬ್ಬರೂ ಕೃಷಿ ಕಾರ್ಮಿಕರು. ಬಾಲ್ಯದಲ್ಲಿ ಮಾಂಝಿಯವರೂ ಜಮೀನ್ದಾರರ ಕೃಷಿ ಭೂಮಿಯಲ್ಲಿ ಕೂಲಿ ಕೆಲಸ ಮಾಡಿದ್ದವರು. ಮಹಾದಲಿತ ಸಮುದಾಯ ಮುಷಹರ್ ಜಾತಿಗೆ ಸೇರಿದವರಾದ ಮಾಂಝಿಗೆ, ಬಾಲ್ಯದಲ್ಲೇ ಶಿಕ್ಷಣದ ಬಗ್ಗೆ ಭಾರಿ ಒಲವಿತ್ತು. ಜಮೀನ್ದಾರರ ಮಕ್ಕಳಿಗೆ ಶಿಕ್ಷಕರು ಪಾಠ ಹೇಳುತ್ತಿದ್ದಾಗ ಮಾಂಝಿ ಕೂಡಾ ಅಲ್ಲೇ ಸಮೀಪ ನಿಂತು ಶ್ರದ್ಧೆಯಿಂದ ಕೇಳುತ್ತಿದ್ದರು. ತಂದೆಯ ಪ್ರೋತ್ಸಾಹವೂ ಇದಕ್ಕೆ ಸಿಕ್ಕಿತ್ತು. ಹೀಗಾಗಿ ಶಾಲೆಗೆ ಹೋಗದೇ ಏಳನೇ ತರಗತಿ ತನಕ ಅವರು ಓದು ಮುಗಿಸಿದ್ದರು. ಬಳಿಕ ಹೈಸ್ಕೂಲ್ ವಿದ್ಯಾಭ್ಯಾಸವನ್ನೂ ಕೈಗೊಂಡರು.

1957ರ ಚುನಾವಣೆ ನಡೆದ ಸಂದರ್ಭವದು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಒಬ್ಬರು ಮಾಂಝಿಯನ್ನು ತಮ್ಮ ಪ್ರಚಾರ ವಾಹನದಲ್ಲಿ ಕರೆದೊಯ್ದು, ಅವರ ಮೂಲಕವೇ ಪ್ರಚಾರ ನಡೆಸಿದ್ದರು. ಕೆಳವರ್ಗದ ಜನರ ಮತ ಸೆಳೆಯಲು ಕಾಂಗ್ರೆಸ್‍ನವರು ಮಾಡಿದ ತಂತ್ರ ಅದಾಗಿತ್ತು. ಮಾಂಝಿ ಅಂದು, `ನನ್ನಂತಹ ಮುಷಾಹರ್ ಜಾತಿಯ ಹುಡುಗ ಓದುವುದಕ್ಕೆ ಸರ್ಕಾರ ಹಣ ನೀಡುತ್ತಿದೆ. ಹೀಗಾಗಿ ನಮ್ಮ ಪಕ್ಷಕ್ಕೆ ಮತ ಹಾಕಿ’ ಎಂದು ಮೈಕ್ ಮೂಲಕ ಹೇಳುತ್ತಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಆಗಿನಿಂದಲೇ ರಾಜಕೀಯದ ನಂಟು ಬೆಳೆಸಿಕೊಂಡ ಅವರು, 1967ರಲ್ಲಿ ಇತಿಹಾಸದ ವಿಷಯದಲ್ಲಿ ಪದವಿ ಶಿಕ್ಷಣ ಪೂರೈಸಿದರು. 1966ರಲ್ಲೇ ಅವರು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಬಯಸಿದ್ದರಾದರೂ, ಕಾಲೇಜು ಶಿಕ್ಷಣ ಮುಗಿದ ಬೆನ್ನಲ್ಲೇ 1968ರಲ್ಲಿ ಅಂಚೆ ಮತ್ತು ತಂತಿ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿಕೊಂಡರು. ರಾಜಕೀಯ ಪ್ರವೇಶಕ್ಕೆ ಸೂಕ್ತ ಅವಕಾಶ ಹುಡುಕುತ್ತಿದ್ದ ಮಾಂಝಿ 1980ರಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಪಕ್ಷ ಸೇರಿದರು.
ಮೊದಲಬಾರಿ ಫತೇಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಅವರು, ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಲ್ಲದೇ ಚಂದ್ರಶೇಖರ್ ಸಿಂಗ್ ಸರ್ಕಾರದಲ್ಲಿ ಸಹಾಯಕ ಸಚಿವರೂ ಆದರು. 1985ರಲ್ಲಿ ಮತ್ತೊಂದು ಅವಧಿಗೆ ಅದೇ ಕ್ಷೇತ್ರದಿಂದ ಗೆಲುವು ಕಂಡರು. ಆದರೆ, 1990ರಲ್ಲಿ ಸೋಲನುಭವಿಸಿದರು. 1980- 90ರ ನಡುವಿನ ಅವಧಿಯಲ್ಲಿ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಬಿಂದೇಶ್ವರಿ ದುಬೆ, ಸತ್ಯೇಂದ್ರ ನಾರಾಯಣ ಸಿನ್ಹಾ, ಜಗನ್ನಾಥ ಮಿಶ್ರಾ ಸಚಿವ ಸಂಪುಟದಲ್ಲಿ ಸಹಾಯಕ ಸಚಿವರಾಗಿದ್ದರು.

1990ರ ಚುನಾವಣೆ ಸೋತ ಬೆನ್ನಲ್ಲೇ ಜನತಾದಳ ಸೇರಿದ ಮಾಂಝಿ, ಅದು ಇಬ್ಭಾಗವಾದಾಗ ರಾಷ್ಟ್ರೀಯ ಜನತಾದಳದ ಜೊತೆ ಹೋದರು. 1996ರಲ್ಲಿ ಬಾರಾಚಟ್ಟಿ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದು ಲಾಲು ಪ್ರಸಾದ್ ಯಾದವ್ ಅವರ ಸಚಿವ ಸಂಪುಟ ಸೇರಿದರು. 2005ರ ತನಕವೂ ಆರ್‍ಜೆಡಿಯಲ್ಲಿದ್ದ ಅವರು, ನಂತರ ಜೆಡಿಯುಗೆ ಸೇರಿದÀರು. ಚುನಾವಣೆಯಲ್ಲಿ ಗೆದ್ದು ಸಚಿವ ಸಂಪುಟ ಸೇರ್ಪಡೆಯಾದರೂ, ಹಿಂದಿನ ಸರ್ಕಾರದಲ್ಲಿ ನಕಲಿ ಬಿಎಡ್ ಸರ್ಟಿಫಿಕೇಟ್ ಹಗರಣದಲ್ಲಿ ಸಿಲುಕಿದ ಕಾರಣ ಸಂಪುಟದಿಂದ ಅವರನ್ನು ಕೈಬಿಡಲಾಗಿತ್ತು. ಬಳಿಕ 2008ರಲ್ಲಿ ಸಂಪುಟಕ್ಕೆ ಮರುಸೇರ್ಪಡೆಗೊಳಿಸಲಾಗಿತ್ತು. 2010ರ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿ ನಿತೀಶ್‍ಕುಮಾರ್ ಸರ್ಕಾರದಲ್ಲಿ ಪರಿಶಿಷ್ಟ ಜಾತಿ/ಪಂಗಡಗಳ ಕಲ್ಯಾಣ ಖಾತೆ ಸಚಿವರಾದರು. ಹೀಗೆ ಒಟ್ಟು ಆರು ಬಾರಿ ಶಾಸಕರಾಗಿ, ಸಚಿವರಾಗಿ ಅನುಭವ ಹೊಂದಿದ್ದ ಮಾಂಝಿ ಮುಖ್ಯಮಂತ್ರಿ ಸ್ಥಾನವೇರಿದ್ದು ಆಕಸ್ಮಿಕವೇ. ಈಗ ನಿತೀಶ್‍ಕುಮಾರ್ ವಿರುದ್ಧವೇ ಬಂಡಾಯವೆದ್ದು ಗಮನಸೆಳೆದಿರುವ ಮಾಂಝಿ ಅವರ ಮುಂದಿನ ರಾಜಕೀಯ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *