ಮೂಲಭೂತ ಹಕ್ಕುಗಳ ಪ್ರತಿಪಾದಕಿ

ಶಾಯರಾ ಬಾನೊ
ಶಾಯರಾ ಬಾನೊ

ವಾರದಿಂದೀಚೆಗೆ ದೇಶಾದ್ಯಂತ ಸಮಾನ ನಾಗರಿಕ ಸಂಹಿತೆ ವಿಚಾರ ಚರ್ಚೆಗೆ ಒಳಗಾಗುತ್ತಿದೆ. ಮುಸ್ಲಿಮರಲ್ಲಿ ಷರೀಯತ್ ಕಾನೂನು ಪ್ರಕಾರ ಚಾಲ್ತಿಯಲ್ಲಿರುವ ತ್ರಿವಳಿ ತಲಾಖ್, ಹಿಂದುಗಳಲ್ಲಿ ವಿಶೇಷವಾಗಿ ಗುಜರಾತ್‍ನ ಕೆಲವೆಡೆ ರೂಢಿಯಲ್ಲಿರುವ ಮೈತ್ರಿ ಕರಾರು, ಕ್ರಿಶ್ಚಿಯನ್ನರಲ್ಲಿ ಚಾಲ್ತಿಯಲ್ಲಿರುವ ವಿಚ್ಛೇದನ ಪ್ರಕ್ರಿಯೆಯಿಂದಾಗಿ ವಿಶೇಷವಾಗಿ ಮಹಿಳೆಯರು ಅನ್ಯಾಯಕ್ಕೊಳಗಾಗುತ್ತಿದ್ದಾರೆ. ಹೀಗಾಗಿ, ಸಂವಿಧಾನದ ಅನುಚ್ಛೇದ 44ರ ರಾಜನೀತಿಯ ನಿರ್ದೇಶಕ ತತ್ತ್ವಾನುಸಾರ `ಸಮಾನ ನಾಗರಿಕ ಸಂಹಿತೆ’ ಚಾಲ್ತಿಗೆ ತಂದು ಮಹಿಳಾ ಹಕ್ಕುಗಳ ರಕ್ಷಣೆ ಮಾಡಬಾರದೇಕೆ? ಎಂಬುದು ಚರ್ಚೆಯ ಕೇಂದ್ರಬಿಂದು. ಮಹಿಳಾ ಹಕ್ಕುಗಳ ವಿಚಾರದಲ್ಲಿ ಇಂಥದ್ದೊಂದು ಚರ್ಚೆಗೆ ವೇದಿಕೆ ಒದಗಿಸಿದ್ದು, ಶಾಯರಾ ಬಾನೊ ಎಂಬ ಮಹಿಳೆ ಈ ವರ್ಷದ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದ ರಿಟ್ ದಾವೆ. ಈ ದಾವೆಯು ಅಡಕಗಳೂ ಸೇರಿ 150ಕ್ಕೂ ಹೆಚ್ಚಿನ ಪುಟಗಳನ್ನು ಹೊಂದಿದೆ. ಸಂವಿಧಾನದತ್ತವಾದ ಮೂಲಭೂತ ಹಕ್ಕುಗಳನ್ನು ವಿಶೇಷವಾಗಿ ಸಮಾನತೆಯ ಹಕ್ಕನ್ನು ಕೊಡಮಾಡುವಂತೆ ಆಗ್ರಹಿಸಿ ಅವರು ರಿಟ್ ಅರ್ಜಿ ಸಲ್ಲಿಸಿದ್ದರಿಂದಾಗಿ ಪ್ರಸ್ತುತ ಸಮಾನ ನಾಗರಿಕ ಸಂಹಿತೆಯು ಹಿಂದೆಂದಿಗಿಂತಲೂ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಶಾಯರಾ ಬಾನೊ ಕಳೆದ ವಾರ ಗಮನ ಸೆಳೆದ ವ್ಯಕ್ತಿ.
ಶಾ ಬಾನೊ ಮತ್ತು ಶಾಯರಾ ಬಾನೊ ವಿಷಯಕ್ಕೆ ಸಂಬಂಧಿಸಿದಂತೆ ಜನರಲ್ಲಿ ಸಣ್ಣ ಗೊಂದಲ ಏರ್ಪಟ್ಟಿರುವುದೂ ನಿಜ. ಇವೆರಡೂ ಪ್ರಕರಣಗಳು ವಿಭಿನ್ನ. 1985ರಲ್ಲಿ ದೇಶಾದ್ಯಂತ ಸಂಚಲನ ಮೂಡಿಸಿದ್ದು ಶಾ ಬಾನೊ ಪ್ರಕರಣ. ಇದು ತಲಾಖ್ ನಂತರದಲ್ಲಿ ಜೀವನಾಂಶ ಕೋರಿದ ಪ್ರಕರಣವಾಗಿತ್ತು. ಆದರೆ, ಶಾಯರಾ ಬಾನೊ ಪ್ರಕರಣವು 2016 ಫೆಬ್ರವರಿಯಲ್ಲಿ ದಾಖಲಾದುದು. ಈ ಪ್ರಕರಣ ಕಳೆದೊಂದು ವಾರದಿಂದ ಸಂಚಲನ ಸೃಷ್ಟಿಸಿದೆ. ಇದರಲ್ಲಿ ತ್ರಿವಳಿ ತಲಾಖ್, ನಿಖಾಹ್ ಹಲಾಲ್, ತಲಾಖ್-ಎ-ಬಿದತ್, ಬಹುಪತ್ನಿತ್ವಗಳಿಂದಾಗಿ ಮಹಿಳೆಯರಿಗಾಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಲಾಗಿದ್ದು, ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ಎತ್ತಿತೋರಿಸಲಾಗಿದೆ. ಹೀಗೆ, ಷರೀಯತ್ ಕಾನೂನಿನಲ್ಲಿ ಮೂಲಭೂತ ಹಕ್ಕುಗಳ ನಿರಾಕರಣೆಯನ್ನು ಪ್ರಶ್ನಿಸಿ ಸಲ್ಲಿಸಿದ ಮೊದಲ ದಾವೆ ಇದಾಗಿದೆ.
ಅಂದ ಹಾಗೆ ಯಾರು ಈ ಶಾಯರಾ ಬಾನೊ?- ಉತ್ತರಾಖಂಡದ ಕಾಶಿಪುರದ ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿದಾಕೆ ಶಾಯರಾ. ತಂದೆ ಇಕ್ಬಾಲ್ ಸೇನೆಯಲ್ಲಿ ಅಕೌಂಟೆಂಟ್ ಆಗಿದ್ದವರು. ಕಾಶಿಪುರದ ಹೇಮಪುರ ರೀಮೌಂಟ್ ಟ್ರೇನಿಂಗ್ ಸ್ಕೂಲ್ ಆ್ಯಂಡ್ ಡಿಪೋದ ಪುಟ್ಟ ಸೇನಾ ಕ್ವಾಟ್ರ್ರಸ್‍ನಲ್ಲಿ ಪತ್ನಿ ಮತ್ತು ಮೂವರು ಪುತ್ರಿಯರು(ಶಾಯರಾ ಸೇರಿ), ಪುತ್ರ ಅರ್ಷಾದ್ ಅಲಿ, ಆತನ ಪತ್ನಿ ಮತ್ತು ಇಬ್ಬರು ಮೊಮ್ಮಕ್ಕಳೊಂದಿಗೆ ವಾಸ. ಶಾಯರಾ ಹಿರಿಯ ಪುತ್ರಿ. ಉಪನ್ಯಾಸಕಿ ಆಗಬೇಕೆಂಬ ಹಂಬಲದೊಂದಿಗೆ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದಿರುವ ಆತ್ಮವಿಶ್ವಾಸಿ. ಮೃದು ಮಿತಭಾಷಿ. ಕೆಲ ಕಾಲ ಸ್ಥಳೀಯ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದರು. ಮಗಳ ವಿವಾಹ ನೆರವೇರಿಸಲು ಹೆತ್ತವರು ನಿರ್ಧರಿಸಿದರು. ಅದು 2000-2001ರ ಸಂದರ್ಭ. ಉತ್ತರಪ್ರದೇಶದ ಅಲಹಾಬಾದ್‍ನ ರಿಯಲ್‍ಎಸ್ಟೇಟ್ ಉದ್ಯಮಿ ರಿಜ್ವಾನ್ ಅಹ್ಮದ್ ಜತೆಗೆ ವಿವಾಹ ನೆರವೇರಿತು. ಸಂಪ್ರದಾಯದಂತೆ ರಿಜ್ವಾನ್‍ಗೆ ನಾಲ್ಕು-ನಾಲ್ಕೂವರೆ ಲಕ್ಷ ರೂಪಾಯಿ ವರದಕ್ಷಿಣೆಯೂ ದಕ್ಕಿತು. ಚಿನ್ನಾಭರಣಗಳೂ ಮನೆ ಸೇರಿದವು.
ಸುಂದರ ಸುಖ ಸಂಸಾರದ ಕನಸು ಹೊತ್ತವರಿಗೆ ಶಾಯರಾಗೆ ಪತಿಯ ಮನೆಯಲಿ ನರಕದರ್ಶನವಾಗಲಾರಂಭಿಸಿತು. ಹದಿನೈದು ವರ್ಷಗಳ ಬಳಿಕ ತಲಾಖ್ ಪಡೆದ ಆ ಹೆಣ್ಮಗಳು, ಪತಿಯ ಮನೆಯಲ್ಲಿ ಅನುಭವಿಸಿದ್ದ ಆ ಯಾತನೆಯನ್ನು ಮಾಧ್ಯಮಗಳ ಜತೆ ಹಂಚಿಕೊಂಡಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ಹೇಳುವುದು ವಾಸಿ- `ವಿವಾಹವಾಗಿ ಪತಿಯ ಮನೆಗೆ ತಲುಪಿದ ಕೂಡಲೇ ಅಲ್ಲಿ ನನ್ನ ಸ್ಥಾನಮಾನಗಳೇನು ಎಂಬುದು ಮನವರಿಕೆಯಾಗಿಬಿಟ್ಟಿತು. ಮೊದಮೊದಲು ಕಾರು ಮತ್ತು ಹೆಚ್ಚಿನ ಹಣ ತರುವಂತೆ ಪೀಡಿಸಿದರು. ಅಂದು ನಿಜವಾಗಿ ಅದೇನೂ ದೊಡ್ಡ ಸಮಸ್ಯೆಯೆಂದು ನನಗೆ ಅನಿಸಿರಲಿಲ್ಲ. ಆದರೆ, ಸಂಸಾರ ಶುರುವಿಟ್ಟುಕೊಂಡ ಮೊದಲ ದಿನದಿಂದಲೇ ನನ್ನ ಸಣ್ಣಪುಟ್ಟ ತಪ್ಪುಗಳನ್ನೇ ಮುಂದಿಟ್ಟುಕೊಂಡು ಪತಿಯು ಪ್ರತಿ ಬಾರಿ ತಲಾಖ್ ನೀಡುವ ಬೆದರಿಕೆಯೊಡ್ಡುತ್ತಿದ್ದರು. ಅದು ನಿಜಕ್ಕೂ ನನ್ನಲ್ಲಿ ಭೀತಿಯನ್ನು ಸೃಷ್ಟಿಸಿತ್ತು. ಇದಕ್ಕೆ ಪೂರಕ ಎಂಬಂತೆ ಮೊದಲ ಎರಡು ವರ್ಷ ನಮಗೆ ಮಕ್ಕಳಾಗಲಿಲ್ಲ. ನನಗೆ ವಿಚ್ಛೇದನ ನೀಡುವಂತೆ ಪದೇಪದೆ ಪತಿಯ ಮೇಲೆ ಒತ್ತಡ ಹೇರುತ್ತಿದ್ದರು ಅವರ ತಾಯಿ. ಆದರೆ, ಈಗ ನನಗೆ 14 ವರ್ಷದ ಪುತ್ರ, 12 ವರ್ಷದ ಪುತ್ರಿ ಇದ್ದಾರೆ. ಅವರಿಬ್ಬರೂ ಇಂದು ಪತಿಯ ಮನೆಯಲ್ಲಿದ್ದಾರೆ.
ಪತಿಯ ಮನೆಯಲ್ಲಿದ್ದ 15 ವರ್ಷಗಳ ಅವಧಿಯಲ್ಲಿ ಅದೇ ನಗರದಲ್ಲಿರುವ ನನ್ನ ಸಹೋದರಿಯ ಮನೆಗೂ ಹೋಗಗೊಡಲಿಲ್ಲ. ಆಕೆಯ ಮದುವೆಗೂ ನನ್ನನ್ನು ಕಳುಹಿಸಲಿಲ್ಲ. ಈ ನಡುವೆ, ಆರೋ ಏಳೋ ಬಾರಿ ಬಲವಂತವಾಗಿ ಗರ್ಭಪಾತಕ್ಕೆ ಒಳಗಾಗಬೇಕಾಯಿತು. ಹೀಗೆ ಪದೇಪದೆ ಗರ್ಭಪಾತಕ್ಕೆ ಒಳಗಾಗುವ ಬದಲು ಟ್ಯೂಬೆಕ್ಟಮಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತೇನೆ ಎಂದರೂ, ಅದಕ್ಕೆ ಅವಕಾಶ ಕೊಡಲಿಲ್ಲ. ಅವರಿಗೆ ಅದರಲ್ಲಿ ವಿಶ್ವಾಸವಿರಲಿಲ್ಲ, ಅದು ಧರ್ಮವಿರೋಧಿ ಎಂದಿದ್ದರು. ಆ ನೋವು ತಡೆದುಕೊಳ್ಳುವ ಶಕ್ತಿ ನನಗೆ ಇರಲಿಲ್ಲ. ಕಳೆದ ವರ್ಷ ಏಪ್ರಿಲ್‍ನಲ್ಲಿ ನನ್ನ ಆರೋಗ್ಯ ಸ್ಥಿತಿ ಪೂರ್ಣ ಹದಗೆಟ್ಟುಹೋಗಿತ್ತು. ಆ ಸಂದರ್ಭದಲ್ಲಿ ನನ್ನ ಅಪ್ಪನಿಗೆ ಫೆÇೀನ್ ಮಾಡಿದ ಪತಿ, ಮೊರಾದಾಬಾದ್‍ಗೆ ಬರುವಂತೆ ಸೂಚಿಸಿದ್ದರು. ನನಗೆ ಬ್ಯಾಗ್ ತುಂಬಿಕೊಂಡು ಜತೆಗೆ ಬರುವಂತೆ ತಿಳಿಸಿದ್ದರು. ಹಾಗೆ, ನನ್ನನ್ನು ಮೊರಾದಾಬಾದ್ ಸಮೀಪ ಅಪ್ಪನಿಗೊಪ್ಪಿಸಿ, ಗುಣವಾದ ಬಳಿಕ ಬರುವಂತೆ ಹೇಳಿ ಹೋದರು. ನಿಧಾನವಾಗಿ ನನ್ನ ಆರೋಗ್ಯ ಸುಧಾರಿಸಿತು. ಪತಿಗೆ ಕರೆ ಮಾಡಿ, ಮನೆಗೆ ಕರೆದೊಯ್ಯುವಂತೆ ಹೇಳಿದೆ. ಆದರೆ, ವಾಪಸ್ ಮನೆಗೆ ಬರಬೇಡ ಎಂದರು. ಮಕ್ಕಳ ಜತೆಗೂ ಮಾತನಾಡಲು ಅವಕಾಶ ನೀಡಲಿಲ್ಲ. ಇದಾಗಿ, ಆರು ತಿಂಗಳ ತನಕ ಪತಿಗಾಗಿ ಕಾದುಕುಳಿತೆ. ಪತಿ ತಲಾಖ್ ನೀಡಿದರೆ ಎಂಬ ಭೀತಿ ಮನದಲ್ಲಾವರಿಸಿತ್ತು. ಅಕ್ಟೋಬರ್ ತಿಂಗಳಲ್ಲಿ ಆ ಭೀತಿ ನಿಜವಾಯಿತು. ಅಂಚೆ ಮೂಲಕ ಬಂತೊಂದು ಪತ್ರ. ಅದರಲ್ಲಿದ್ದು ಮೂರೇ ಮೂರು ಶಬ್ದ- ತಲಾಖ್, ತಲಾಖ್, ತಲಾಖ್. ಪತಿಗೆ ಮನೆಯವರ ಮೂಲಕ ಕರೆ ಮಾಡಿಸಿದರೆ, `ಷರೀಯತ್ ಮತ್ತು ಹದಿತ್ ಪ್ರಕಾರ ನಾನು ಆಕೆಗೆ ವಿಚ್ಛೇದನ ನೀಡಿದ್ದೇನೆ. ಈಗ ಆಕೆಯನ್ನು ಮನೆಗೆ ಸೇರಿಸಲಾಗದು. ಅದು ಧರ್ಮಕ್ಕೆ ವಿರೋಧವಾದುದು’ ಎಂದು ಬಿಟ್ಟರು.
ಮನಸ್ಸಿನಲ್ಲಿ ಶೂನ್ಯ ಆವರಿಸಿಬಿಟ್ಟಿತು. ಮುಂದೇನು ಎಂಬುದು ತೋಚದಾಯಿತು. ಸಹೋದರ ಅರ್ಷಾದ್ ಅಲಿ ಮತ್ತು ಕುಟುಂಬದ ಸದಸ್ಯರ ಬೆಂಬಲ ಸಿಕ್ಕ ಕಾರಣ, ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದೇನೆ. ಸಂವಿಧಾನ ಪ್ರಕಾರ ಕೊಡಮಾಡಲ್ಪಟ್ಟಿರುವ ಸಮಾನತೆಯ ಹಕ್ಕು ಮಹಿಳೆಯರಾದ ನಮಗೂ ಸಿಗಬೇಕು. ಏಕಪಕ್ಷೀಯವಾಗಿ ಹೇಳುವ ತ್ರಿವಳಿ ತಲಾಖ್, ನಿಖಾಹ್ ಹಲಾಲಾ ಮುಂತಾದ ಪದ್ಧತಿಗಳಲ್ಲಿ ಮಹಿಳೆಯರಿಗೆ ನ್ಯಾಯಸಿಗಬೇಕು ಎಂಬ ಅಪೇಕ್ಷೆ ಇದೆ’ ಎಂದು ನಿಟ್ಟುಸಿರು ಬಿಡುತ್ತಾರೆ ಆಕೆ.
ಮದುವೆ ಮುನ್ನ ಇದ್ದ ಆತ್ಮವಿಶ್ವಾಸ ವಿಚ್ಛೇದನದ ಸಂದರ್ಭದಲ್ಲಿ ಪೂರ್ತಿಯಾಗಿ ಕುಸಿದು ಹೋಗಿತ್ತು. ಆ ಆಘಾತದಿಂದ ಚೇತರಿಸಿಕೊಂಡು ಸುಪ್ರೀಂ ಕೋರ್ಟ್‍ನಲ್ಲಿ ಪ್ರಕರಣ ದಾಖಲಿಸಲು ಮೂರ್ನಾಲ್ಕು ತಿಂಗಳು ತೆಗೆದುಕೊಂಡರು. ಆ ರಿಟ್ ದಾವೆಯಲ್ಲಿ ಅವರು, ಕೇವಲ ತಮಗಾದ ಅನ್ಯಾಯವನ್ನಷ್ಟೇ ದಾಖಲಿಸಲಿಲ್ಲ. ಮುಸ್ಲಿಂ ಸಮುದಾಯದ ಮಹಿಳೆಯರಿಗಾಗುತ್ತಿರುವ ಅನ್ಯಾಯವನ್ನೇ ಅವರು ತೆರೆದಿಟ್ಟರು. ಶಾಯರಾ ನಡೆಯಿಂದ ಪ್ರೇರಣೆಗೊಂಡು ಇದೇ ರೀತಿ ದೌರ್ಜನ್ಯಕ್ಕೆ ಒಳಗಾದವರು ಒಬ್ಬೊಬ್ಬರಾಗಿ, ಮೂಲಭೂತ ಹಕ್ಕು ನಿರಾಕರಣೆ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರತೊಡಗಿದ್ದಾರೆ. ಜೈಪುರ ಅಫ್ರೀನ್ ರೆಹಮಾನ್ ಪ್ರಕರಣ ಇದಕ್ಕೆ ಇತ್ತೀಚಿನ ಉದಾಹರಣೆ. ಹೀಗಾಗಿ ಶಾಯರಾ ಈಗ ಸುಶಿಕ್ಷಿತ ಮುಸ್ಲಿಂ ಮಹಿಳೆಯರ ಪಾಲಿನ ಐಕಾನ್ ಆಗಿ ಹೊರಹೊಮ್ಮಿದ್ದಾರೆ.

Leave a Reply

Your email address will not be published. Required fields are marked *