ನೇಪಾಳದ ಪ್ರಥಮ ಪ್ರಜೆ

bidyadevibhandari
bidyadevibhandari

ನೇಪಾಳದಲ್ಲಿ ಪುರುಷ ಪ್ರಧಾನ ಕುಟುಂಬ ವ್ಯವಸ್ಥೆ ಇದೆ. ಇಲ್ಲಿ ಮಹಿಳೆ ಯಾವತ್ತಿಗೂ ಪುರುಷನಿಗೆ ಸರಿಸಮನಾಗಿ ಇರುವುದು ಸಾಧ್ಯವಿಲ್ಲ. ಕೆಲವು ಸ್ತ್ರೀಪರ ಹೋರಾಟಗಾರರು ಪೌರಾತ್ಯ ವ್ಯವಸ್ಥೆಯನ್ನು ನೇಪಾಳದಲ್ಲಿ ಹೇರುವ ಪ್ರಯತ್ನದಲ್ಲಿದ್ದಾರೆ. ಇಲ್ಲಿನ ಸಂಸ್ಕೃತಿಯಲ್ಲಿ ಇದಕ್ಕೆ ಮನ್ನಣೆ ಸಿಗದು’- ಹೀಗೆಂದು ಬಹಿರಂಗವಾಗಿ ರೋಷ ವ್ಯಕ್ತಪಡಿಸಿದ್ದ ರಾಜಕೀಯ ನಾಯಕಿ ಇಂದು ನೇಪಾಳದ ಪ್ರಥಮ ಪ್ರಜೆ. ಅವರ ಈ ಹೇಳಿಕೆಗೆ ನೇಪಾಳದ ಸ್ತ್ರೀಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಸಾಮಾಜಿಕ ತಾಣಗಳಲ್ಲೂ ಈ ಬಗ್ಗೆ ಕಟುಟೀಕೆಗಳು ವ್ಯಕ್ತವಾಗಿವೆ. ಈಗ ನೇಪಾಳದ ಪ್ರಥಮ ಪ್ರಜೆಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ಕುಹಕಗಳೂ ಕೇಳಿಬಂದಿವೆ. ಅಂದಹಾಗೆ ಈ ನಾಯಕಿಯ ಹೆಸರು ವಿದ್ಯಾದೇವಿ ಭಂಡಾರಿ. ಪ್ರಧಾನಿ ಕೆ.ಪಿ.ಶರ್ವ ಒಲಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು.

ಕಳೆದ ವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ 327 ಮತಗಳಿಸಿದ ವಿದ್ಯಾದೇವಿ, ಸಮೀಪದ ಪ್ರತಿಸ್ಪರ್ಧಿ ನೇಪಾಳಿ ಕಾಂಗ್ರೆಸ್ ಪಕ್ಷದ ಕಲ್ ಬಹಾದುರ್ ಗುರಂಗ್ ವಿರುದ್ಧ ಸ್ಪಷ್ಟ ಗೆಲುವು ದಾಖಲಿಸಿ ಇತಿಹಾಸ ಬರೆದರು. ಇದಕ್ಕೂ ಹನ್ನೆರಡು ದಿನಕ್ಕೆ ಮುನ್ನ ಒನ್ಸಾರಿ ಘರತಿ ಮಾಗರ್ ಎಂಬ ಮಹಿಳೆ ನೇಪಾಳದ ಸಂಸತ್ತಿನ ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಈ ಮೂಲಕ ಇಬ್ಬರು ಸ್ತ್ರೀಯರು ಇದೇ ಮೊದಲಬಾರಿ ನೇಪಾಳದಲ್ಲಿ ಪ್ರಮುಖ ಸ್ಥಾನವನ್ನು ಅಲಂಕರಿಸಿದಂತಾಗಿದೆ.

2008ರಲ್ಲಿ ನೇಪಾಳವನ್ನು ಪ್ರಜಾಪ್ರಭುತ್ವ ರಾಷ್ಟ್ರ ಎಂದು ಘೊಷಿಸಿದ ಬಳಿಕ, ಸೃಷ್ಟಿಯಾಗಿದ್ದು ಈ ಅಧ್ಯಕ್ಷ ಹುದ್ದೆ. ಸಂಸತ್ ಸದಸ್ಯರು ಮತಚಲಾಯಿಸಿ ಬಹುಮತ ಗಳಿಸಿದವರನ್ನು ಈ ಹುದ್ದೆಗೆ ನೇಮಿಸುವ ಪರಿಪಾಠ ಆರಂಭವಾಗಿದೆ. ಅಧ್ಯಕ್ಷೀಯ ಹುದ್ದೆಯ ಅವಧಿ ಐದು ವರ್ಷಗಳಾಗಿದ್ದು, ಸತತ ಎರಡು ಅವಧಿಗೆ ಆಯ್ಕೆಯಾಗಬಹುದು. ಎಲ್ಲ ರಾಷ್ಟ್ರಗಳ ಅಧ್ಯಕ್ಷರಂತೆ ಇಲ್ಲೂ ಪ್ರತ್ಯೇಕ ಅಧಿಕಾರಿಗಳಿಲ್ಲ. ಪ್ರಧಾನ ಮಂತ್ರಿ ನೇತೃತ್ವದ ಸಚಿವ ಸಂಪುಟವೇ ನಿತ್ಯದ ವ್ಯವಹಾರಗಳನ್ನು ಮಾಡುತ್ತದೆ.

ನೇಪಾಳದ ಸಂಸ್ಕೃತಿ, ಹಾಲಿ ಸಾಮಾಜಿಕ ವ್ಯವಸ್ಥೆಯನ್ನು ಒಪ್ಪಿಕೊಂಡು, ಸ್ತ್ರೀಪರ ಸಂಘಟನೆಗಳ ವಿರೋಧ ಕಟ್ಟಿಕೊಂಡ ವಿದ್ಯಾದೇವಿ ಅಧ್ಯಕ್ಷೀಯ ಚುನಾವಣೆಯ ಗೆಲುವಿನ ಕಾರಣಕ್ಕೆ ವಾರ ಪೂರ್ತಿ ಸುದ್ದಿಯಲ್ಲಿದ್ದರು. ಹಾಗಂತ ಅವರೇನೂ ಏಕಾಏಕಿಯಾಗಿ ಈ ಗೆಲುವು ಕಂಡದ್ದಲ್ಲ. ಅವರ ರಾಜಕೀಯ ಬದುಕಿನ ಹಾದಿ ಸರಳವಾದುದಾಗಿರಲಿಲ್ಲ. ವಿದ್ಯಾರ್ಥಿ ನಾಯಕಿಯ ಮಟ್ಟದಿಂದ ಬೆಳೆದು ಬಂದವರು. 1978ರಲ್ಲಿ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಿದ ಅವರು, ನೇಪಾಳದ ಯೂತ್ ಲೀಗ್ ಆಫ್ ಕಮ್ಯೂನಿಸ್ಟ್ ಪಾರ್ಟಿಯ ಕಾರ್ಯಕರ್ತರಾಗುವ ಮೂಲಕ ರಾಜಕಾರಣ ಆರಂಭಿಸಿದರು. ಭೋಜಪುರವನ್ನು ಕಾರ್ಯಕ್ಷೇತ್ರವನ್ನಾಗಿಸಿಕೊಂಡು, 1979ರಿಂದ 1987ರ ತನಕ ಎಎನ್​ಎನ್​ಎಫ್ ವಿದ್ಯಾರ್ಥಿ ಸಂಘಟನೆಯ ಪೂರ್ವ ವಲಯ ಸಮಿತಿಯ ಉಸ್ತುವಾರಿ ನೋಡಿಕೊಂಡಿದ್ದರು. 1980ರಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಫ್ ನೇಪಾಳ್ (ಎಂಎಲ್) ಸದಸ್ಯತ್ವ ಪಡೆದು ರಾಜಕೀಯ ಮುಖ್ಯವಾಹಿನಿಯಲ್ಲೂ ಸಕ್ರಿಯರಾದರು. 1982ರಲ್ಲಿ ಕಮ್ಯೂನಿಸ್ಟ್ ನಾಯಕ ಮದನ್ ಭಂಡಾರಿಯನ್ನು ವಿವಾಹವಾದರು. ಮದನ್ ಅವರು ಕಮ್ಯೂನಿಸ್ಟ್ ಪಾರ್ಟಿ ಆಫ್ ನೇಪಾಳ್​ನ ಸಂಸ್ಥಾಪಕರಲ್ಲೊಬ್ಬರು. ಪಕ್ಷವೇ ಮುಂದೆ ನಿಂತು ಇವರ ವಿವಾಹ ನಡೆಸಿಕೊಟ್ಟಿತ್ತು. ಅಂದು ವಿದ್ಯಾದೇವಿಗೆ 21 ವರ್ಷ ವಯಸ್ಸು. ಗೃಹಿಣಿಯಾಗಿ ಜೀವನ ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಪರಿಣಾಮ ಅಲ್ಲಿಂದಾಚೆಗೆ 1993ರ ತನಕ ರಾಜಕೀಯ ಮುಖ್ಯವಾಹಿನಿಯಿಂದ ದೂರ ಉಳಿಯಬೇಕಾಗಿ ಬಂತು.

ಇನ್ನೊಂದೆಡೆ ಮದನ್ ಭಂಡಾರಿ ರಾಜಕೀಯ ಜೀವನ ಉತ್ತುಂಗಕ್ಕೇರತೊಡಗಿತ್ತು. ಪಕ್ಷದ ಹಲವು ಜವಾಬ್ದಾರಿಗಳು ಹೆಗಲೇರಿದ್ದವು. ವಿದ್ಯಾದೇವಿ ಹಾಗೂ ಮದನ್ ದಾಂಪತ್ಯದ ಕುರುಹಾಗಿ ಇಬ್ಬರು ಪುತ್ರಿಯರ ಜನನವೂ ಆಯಿತು. ಈ ಅವಧಿಯಲ್ಲಿ ರಾಜಪ್ರಭುತ್ವದ ವಿರುದ್ಧ ಚಳವಳಿ ಆರಂಭವಾಗಿ ಕೊನೆಗೆ 1991ರಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಫ್ ನೇಪಾಳ್ (ಎಂಎಲ್) ಕಮ್ಯೂನಿಸ್ಟ್ ಪಾರ್ಟಿ ಆಫ್ ನೇಪಾಳ್ (ಯುನೈಟೆಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್) ಜತೆ ವಿಲೀನವಾಯಿತು. ಮದನ್ ಅದರ ಪ್ರಧಾನ ಕಾರ್ಯದರ್ಶಿಯಾದರು. ಇದೇ ವರ್ಷ ನೇಪಾಳದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ವಿಜಯವನ್ನೂ ಪಕ್ಷ ದಾಖಲಿಸಿತು. ಪ್ರಜಾಸತ್ತಾತ್ಮಕ ಕಮ್ಯೂನಿಸಂ ಆಡಳಿತ ಜಾರಿಗೊಳಿಸಲು ಮದನ್ ಪ್ರಯತ್ನಿಸಿದ್ದರು. ಆದರೆ, 1993ರಲ್ಲಿ ಚಿತ್ವಾನ್​ನ ದಸ್​ದುಂಗಾದಲ್ಲಿ ನಡೆದ ಕಾರು ಅಪಘಾತದಲ್ಲಿ ಮದನ್ ಸಾವನ್ನಪ್ಪಿದರು. ಇದು ಹತ್ಯೆ ಎಂಬ ಶಂಕೆ ಕೂಡ ಇದೆ. ವಿದ್ಯಾದೇವಿ ಭಂಡಾರಿಯವರ ರಾಜಕೀಯ ಮರುಪ್ರವೇಶಕ್ಕೆ ಈ ದುರಂತ ವೇದಿಕೆ ಸೃಷ್ಟಿಸಿಕೊಟ್ಟಿತು. 1993ರಲ್ಲಿ ಜನರಲ್ ಫೆಡರೇಷನ್ ಆಫ್ ನೇಪಾಳ್ ಟ್ರೇಡ್ ಯೂನಿಯನ್​ನ ಮಹಿಳಾ ವಿಭಾಗದ ಮುಖ್ಯಸ್ಥೆಯ ಹೊಣೆಗಾರಿಕೆ ಬಂತು. ಇದೇ ಅವಧಿಯಲ್ಲಿ ಕಾಠ್ಮಂಡುವಿನ ಒಂದನೇ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಪಕ್ಷ ವಿದ್ಯಾ ಭಂಡಾರಿಯನ್ನು ಕಣಕ್ಕಿಳಿಸಿತ್ತು. ಅಲ್ಲಿ ನೇಪಾಳಿ ಕಾಂಗ್ರೆಸ್​ನ ಅಂದಿನ ಅಧ್ಯಕ್ಷ ಕೃಷ್ಣಪ್ರಸಾದ್ ಭಟ್ಟರಾಯ್ ವಿರುದ್ಧ ವಿದ್ಯಾದೇವಿ ಭರ್ಜರಿ ಗೆಲುವು ದಾಖಲಿಸಿದರು. ಇದು ಅವರ ರಾಜಕೀಯದ ಎರಡನೇ ಇನಿಂಗ್ಸ್​ಗೂ ಭದ್ರ ಬುನಾದಿ ಒದಗಿಸಿತು. 1994ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ನೇಪಾಳಿ ಕಾಂಗ್ರೆಸ್ ನಾಯಕ ದಮನ್ ನಾಥ್ ಧುನ್​ಗಂಗಾ ವಿರುದ್ಧ ಕಾಠ್ಮಂಡು ಎರಡನೇ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. ತರುವಾಯ 1997ರಲ್ಲಿ ಸಿಪಿಎನ್ ಯುಎಂಎಲ್ ಪಕ್ಷದ ಸೆಂಟ್ರಲ್ ಕಮಿಟಿಯ ಸದಸ್ಯೆಯಾಗುವ ತನಕ ಟ್ರೇಡ್ ಯೂನಿಯನ್​ಗಳ ಮಹಿಳಾ ವಿಭಾಗದ ಹೊಣೆಗಾರಿಕೆ ಮುಂದುವರಿದಿತ್ತು.

1999ರ ಸಂಸತ್ ಚುನಾವಣೆ ವೇಳೆಗೆ ವಿದ್ಯಾದೇವಿ ಪಕ್ಷದಲ್ಲಿ ಪ್ರಭಾವಿಯಾಗಿ ಬೆಳೆದುಬಿಟ್ಟಿದ್ದರು. ಇದು ಅನೇಕರಿಗೆ ಸಹಿಸಲಾಗದ ಬೆಳವಣಿಗೆಯಾಗಿತ್ತು. ಪತಿಯ ಸಾವಿನ ನಂತರ ಸೃಷ್ಟಿಯಾದ ಅನುಕಂಪದ ಆಧಾರದಲ್ಲಿ ವಿದ್ಯಾದೇವಿ ಬೆಳೆದರು ಎಂದು ಟೀಕಾಕಾರರು ಟೀಕಿಸುವುದುಂಟು. ಆದರೆ, ವಾಸ್ತವ ಅದಲ್ಲ. 1970ರ ದಶಕದಲ್ಲಿ ಚಿಕ್ಕ ವಯಸ್ಸಿನಲ್ಲೇ ರಾಜಕೀಯ ರಂಗ ಪ್ರವೇಶಿಸಿದ ವಿದ್ಯಾದೇವಿಗೆ ರಾಜಕೀಯ ಪಟ್ಟುಗಳು ಕರಗತವಾಗಿವೆ. ಇಲ್ಲದೆ ಹೋದರೆ, ಕಾಠ್ಮಂಡುವಿನಲ್ಲಿ ಮೂರು ಬಾರಿ ಗೆಲುವು ಸಾಧಿಸುವುದು ಸುಲಭದ ಮಾತಲ್ಲ ಎನ್ನುತ್ತಾರೆ ಪಕ್ಷದ ಕೆಲವು ಸಹೋದ್ಯೋಗಿಗಳು.

ಅವರು ಮಹಿಳಾ ವಿರೋಧಿ ಎಂಬ ಟೀಕೆ ಇತ್ತೀಚೆಗೆ ವ್ಯಾಪಕವಾಗಿದೆ. ಆದರೆ, 2006ರಲ್ಲಿ ಅವರು ಸಂಸದೆಯಾಗಿದ್ದಾಗ ಶೇಕಡ 33ರಷ್ಟು ಮಹಿಳಾ ಮೀಸಲು ಜಾರಿಗೊಳಿಸಬೇಕು ಎಂದು ನಿಲುವಳಿ ಮಂಡಿಸಿದ್ದರು. ಇದು 2008ರಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿದೆ. ಶಾಸನಸಭೆಗಳು ಮತ್ತು ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇಕಡ 33 ಮೀಸಲು ನೀಡುವ ಪ್ರಕ್ರಿಯೆ ಇದೀಗ ಅನುಷ್ಠಾನವಾಗುತ್ತಿದೆ ಎಂಬ ಮಾತನ್ನು ಪಕ್ಷದ ಸಹೋದ್ಯೋಗಿಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ 2009ರಲ್ಲಿ ಬಟ್ವಾಲ್​ನಲ್ಲಿ ಪಕ್ಷದ ಸರ್ವ ಸದಸ್ಯರ ಸಭೆ ನಡೆದಾಗ, ಅಲ್ಲಿ ವಿದ್ಯಾದೇವಿ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಅದೇ ವರ್ಷ ಮಾಧವ ಕುಮಾರ್ ನೇತೃತ್ವದ ಸರ್ಕಾರದ ಸಚಿವ ಸಂಪುಟದಲ್ಲಿ ದೇಶದ ಮೊದಲ ರಕ್ಷಣಾ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದರು. 2009ರ ಮೇ 25ರಿಂದ 2011ರ ಫೆ.6ರ ತನಕ ರಕ್ಷಣಾ ಸಚಿವರ ಕರ್ತವ್ಯ ನಿಭಾಯಿಸಿದ್ದರು. ಸದ್ಯ ಹೊಸ ಹುದ್ದೆಯಲ್ಲಿ ಅವರ ಕಾರ್ಯನಿರ್ವಹಣೆ ಹೇಗಿರಬಹುದೆಂಬ ಕುತೂಹಲ ಎಲ್ಲರಲ್ಲೂ ಇದೆ.

Leave a Reply

Your email address will not be published. Required fields are marked *