ನೈಂಟಿಯಲ್ಲೂ ಬೇಕಿತ್ತಾ ಈ ಆಟ?

ಕರುಣಾನಿಧಿ
ಕರುಣಾನಿಧಿ

ತಮಿಳುನಾಡಿನಲ್ಲೀಗ ವಿಧಾನಸಭಾ ಚುನಾವಣಾ (ಮೇ 16) ಕಾವು ದಿನೇದಿನೆ ಏರತೊಡಗಿದೆ. ಒಂದಷ್ಟು ರಾಜಕೀಯ ಬೆಳವಣಿಗೆಗಳೂ ನಡೆಯುತ್ತಿವೆ. ಇವೆಲ್ಲದರ ನಡುವೆ, ಪ್ರಚಾರ ಕಣದಲ್ಲಿ ತಮಿಳುನಾಡಿನ ಜನರ ದುರದೃಷ್ಟವೋ ಎಂಬಂತೆ ತೊಂಭತ್ತು ದಾಟಿದ ನಾಯಕರೊಬ್ಬರು ಮತ್ತೆ ಮುಖ್ಯಮಂತ್ರಿಯಾಗಲು ಹವಣಿಸುತ್ತಿದ್ದಾರೆ. ಅವರ ಆ `ಅದಮ್ಯ ಉತ್ಸಾಹ’ ತಮಿಳುನಾಡಿನ ಅಭಿವೃದ್ಧಿಗೋ ಅಥವಾ ಅಲ್ಲಿನ ಜನರ ಉದ್ಧಾರಕ್ಕೋ ಅಲ್ಲ ಎಂಬುದು ಗಮನಾರ್ಹ. ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳಬೇಕೆಂಬ ಮಕ್ಕಳಿಬ್ಬರ ಕಿತ್ತಾಟದ ಫಲವೋ ಎಂಬಂತೆ ಈ ಇಳಿವಯಸ್ಸಿನಲ್ಲೂ ಅವರಿಗೆ ಮತ್ತೊಮ್ಮೆ ಮುಖ್ಯಮಂತ್ರಿ ಗಾದಿಯ ಆಸೆ ಹುಟ್ಟಿಸಿದೆ.
ಕಪ್ಪು ಕನ್ನಡಕ, ಬಕ್ಕ ತಲೆ, ಕುರುಚಲು ಮೀಸೆ, ಬಿಳಿ ಅಂಗಿ, ಬಿಳಿ ಪಂಚೆ, ಕತ್ತಿನ ಸುತ್ತ ಹಳದಿ ಶಾಲು ಹಾಕಿ ವೀಲ್‍ಚೇರ್ ಮೇಲೆ ಕುಳಿತೇ ತಮಿಳುನಾಡಿನ ರಾಜಕೀಯದಲ್ಲಿ ಸಕ್ರಿಯವಾಗಿರುವ ನಾಯಕ- ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಮುಖ್ಯಸ್ಥ ಎಂ. ಕರುಣಾನಿಧಿ ಅರ್ಥಾತ್ ಮುತ್ತುವೇಲ್ ಕರುಣಾನಿಧಿ.
ಈಗಾಗಲೇ ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದವರು ಅವರು. ಸದ್ಯ ಅವರ ವಯಸ್ಸು 92 ವರ್ಷ. ರಾಜತಂತ್ರ ನಿಪುಣ, ಚಾಣಕ್ಷ ರಾಜಕಾರಣಿ. ಇಳಿವಯಸ್ಸಿನ ಅನಾರೋಗ್ಯ ಕಾಡುತ್ತಿದ್ದರೂ, ತಾವಿರುವಲ್ಲಿಂದಲೇ ಪಕ್ಷ ನಿಭಾಯಿಸುವ ಸಾಮಥ್ರ್ಯ ಹೊಂದಿರುವುದು ಅವರ ಪ್ಲಸ್‍ಪಾಯಿಂಟ್. ಇದು ಅವರ ಮಕ್ಕಳ ಪಾಲಿಗೆ ಮೈನಸ್ ಪಾಯಿಂಟ್ ಕೂಡ ಹೌದು. ಅಂದ ಹಾಗೆ, ಈ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುತ್ತಿರುವುದು ಅವರ ಪುತ್ರ ಎಂ.ಕೆ. ಸ್ಟಾಲಿನ್. ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಸ್ಟಾಲಿನ್ ಅವರನ್ನೇ ಬಿಂಬಿಸಬಹುದೆಂಬ ನಿರೀಕ್ಷೆ ಕೆಲಕಾಲದಿಂದ ಇತ್ತು. ಆದರೂ, ಈಗ್ಗೆ ಕೆಲ ತಿಂಗಳ ಹಿಂದೆ ಸ್ವತಃ ಸ್ಟಾಲಿನ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಕರುಣಾನಿಧಿ ಅವರೇ ಆಗಿದ್ದಾರೆ ಎಂದು ಘೋಷಿಸಿದ್ದರು. ಇದರೊಂದಿಗೆ ಕರುಣಾನಿಧಿ ಅವರು ಮತ್ತೊಂದು ಅವಧಿಗೆ ಮುಖ್ಯಮಂತ್ರಿ ಹುದ್ದೆಗೇರುವ ಕನಸು ಕಾಣುತ್ತಿರುವುದು ಸ್ಪಷ್ಟವಾಗಿದೆ.
ಪ್ರಸ್ತುತ ತಮಿಳುನಾಡಿನ ರಾಜಕೀಯ ಸನ್ನಿವೇಶ ಗಮನಿಸಿದರೆ, ಆಡಳಿತಾರೂಢ ಎಐಎಡಿಎಂಕೆಗೆ ಕಠಿಣ ಸ್ಪರ್ಧೆ ಒಡ್ಡುವುದಕ್ಕೆ ಡಿಎಂಕೆಯನ್ನು ಕರುಣಾನಿಧಿ ಸಜ್ಜುಗೊಳಿಸುತ್ತಿದ್ದಾರೆ. ಕಾಂಗ್ರೆಸ್ ಸೇರಿ ಸಣ್ಣಪುಟ್ಟ ಪಕ್ಷಗಳ ನಾಯಕರನ್ನು ಒಟ್ಟುಸೇರಿಸಿ ಮೈತ್ರಿಕೂಟ ರಚಿಸಿಕೊಂಡಿದ್ದು, ಇದಕ್ಕೆ ನಟ ವಿಜಯಕಾಂತ್ ಅವರ ಡಿಎಂಡಿಕೆಯನ್ನೂ ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಈಗಾಗಲೇ ಜಯಾ ಸರ್ಕಾರದ ಭ್ರಷ್ಟಾಚಾರ, ದುರಾಡಳಿತದ ವಿರುದ್ಧ ಸಮರ ಸಾರಿರುವ ಅವರು, ಚುನಾವಣೆಯಲ್ಲಿ ಅವರನ್ನು ಎದುರಿಸುವುದಕ್ಕೆ ತಕ್ಕ ರಣತಂತ್ರ ಹೆಣೆಯತೊಡಗಿದ್ದಾರೆ.
ಇಳಿವಯಸ್ಸಿನಲ್ಲಿರುವ ಕರುಣಾ ಈಗಲೂ ಮತ ಸೆಳೆಯಬಲ್ಲ ಸ್ಟಾರ್ ನಾಯಕ ಎನ್ನುವುದಕ್ಕೆ ಕೆಲವು ನಿದರ್ಶನಗಳೂ ಇವೆ. ಅದು 2009ರ ಫೆಬ್ರವರಿ, ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದ ಕರುಣಾ ಅವರು, ಬೆನ್ನುಹುರಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿದ್ದರು. ಅಷ್ಟಾಗ್ಯೂ, ಏಪ್ರಿಲ್‍ನಲ್ಲಿ ಉತ್ತರ ಚೆನ್ನೈನಲ್ಲಿ ಏರ್ಪಡಿಸಿದ್ದ ಲೋಕಸಭಾ ಚುನಾವಣಾ ರ್ಯಾಲಿಯಲ್ಲಿ ಸಂಬಂಧಿ ದಯಾನಿಧಿ ಮಾರನ್ ಪರವಾಗಿ ವೀಲ್‍ಚೇರ್‍ನಲ್ಲಿ ಕುಳಿತೇ 15 ನಿಮಿಷ ಕಾಲ ಭಾಷಣ ಮಾಡಿದ್ದರು. ಪರಿಣಾಮ ಆ ಚುನಾವಣೆಯಲ್ಲಿ ತಮಿಳುನಾಡಿನ 39 ಲೋಕಸಭಾ ಸ್ಥಾನಗಳ ಪೈಕಿ 27 ಡಿಎಂಕೆ, ಕಾಂಗ್ರೆಸ್ ಮೈತ್ರಿಕೂಟದ ಪಾಲಾಗಿತ್ತು.
ಇದಾಗಿ ಎಂಟು ವರ್ಷದ ಬಳಿಕ ಅವರು ಮತ್ತೊಮ್ಮೆ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. ಜತೆಗೆ ಉತ್ತರಾಧಿಕಾರಿ ಕಿರಿಯ ಪುತ್ರ ಸ್ಟಾಲಿನ್ ಜೊತೆಗಿದ್ದಾರೆ. ಈ ಸಲದ ಚುನಾವಣಾ ಪ್ರಚಾರಕ್ಕೆ ಕರುಣಾ ಅವರು ವೀಲ್‍ಚೇರ್ ಜೊತೆಗೆ ಓಡಾಡಲು ಅನುಕೂಲವಾಗುವಂತಹ ಹೊಸ ಟೆಂಪೆÇೀ ಟ್ರಾವಲರ್ ಒಂದನ್ನು ಕೊಯಮತ್ತೂರಿನಲ್ಲಿ ಸಿದ್ಧಪಡಿಸಲಾಗುತ್ತಿದೆ. `ನಮ್ಮ ತಲೈವರ್ ರೂಮಿನೊಳಗೆ ಕುಳಿತಿರಲಾರರು. ಅವರಿಂದದು ಸಾಧ್ಯವೂ ಇಲ್ಲ. ತಿರುಚ್ಚಿ, ತಂಜಾವೂರ್, ಮಧುರೈ, ಕೊಯಮತ್ತೂರು ಮುಂತಾದೆಡೆ ಅವರು ಪ್ರಚಾರ ಕಾರ್ಯಕೈಗೊಳ್ಳಲಿದ್ದಾರೆ ಎಂಬ ನಿರೀಕ್ಷೆಯಲ್ಲಿz್ದÉೀವೆ’ ಎಂದು ಅನೇಕ ಕಾರ್ಯಕರ್ತರು ಹೇಳುತ್ತಿರುವುದು ದುರಂತವಲ್ಲದೇ ಮತ್ತಿನ್ನೇನು? ಒಳಜಗಳ, ಅಶಿಸ್ತಿನಿಂದ ನಲುಗಿಹೋದ ಪಕ್ಷ ಇನ್ನೂ 92ರ ಕರುಣಾನಿಧಿಯವರನ್ನೇ ನೆಚ್ಚಿಕೊಂಡಿರುವುದು ಅದರ ದಯನೀಯತೆಗೆ ಸಾಕ್ಷಿ.
ಅನಾರೋಗ್ಯದ ನಡುವೆಯೂ ಕಾರ್ಯಪ್ರವೃತ್ತರಾಗಿರುವ ಕರುಣಾ ಮುಂಜಾನೆ ನಾಲ್ಕು ಗಂಟೆಗೆ ಎದ್ದರೆ, ಒಂದು ಸುತ್ತ ಎಲ್ಲ ಪತ್ರಿಕೆಗಳ ಮೇಲೂ ಕಣ್ಣಾಡಿಸಿ, ಸ್ನಾನ, ಉಪಾಹಾರ ಇತ್ಯಾದಿ ನಿತ್ಯ ಕರ್ಮಗಳನ್ನು ಮುಗಿಸುತ್ತಾರೆ. ನಂತರ ಪಕ್ಷದ ಹಿರಿಯ ಸದಸ್ಯರ ಜೊತೆ ಆಯಾ ದಿನದ ಕಾರ್ಯಗಳು ಹಾಗೂ ರಾಜತಂತ್ರಗಳ ಕುರಿತು ಚರ್ಚೆ ನಡೆಸುತ್ತಾರೆ. ತರುವಾಯ ಪಕ್ಷದ ಕೇಂದ್ರ ಕಚೇರಿಗೆ ಆಗಮಿಸುತ್ತಾರೆ. ಈಗ ಚುನಾವಣೆ ಸನ್ನಿಹಿತವಾಗಿರುವ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ಸದಸ್ಯರೊಡಗೂಡಿ ಅಭ್ಯರ್ಥಿಗಳ ಸಂದರ್ಶನ ನಡೆಸಿ ಅರ್ಹರನ್ನು ಆಯ್ಕೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಸ್ಟಾಲಿನ್ ಅವರ ಸಂದರ್ಶನ ನಡೆಸಿದ್ದು ಸುದ್ದಿಯಾಗಿತ್ತು. ಇದಲ್ಲದೆ, ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಈ ಸಲ ಸಾಮಾಜಿಕ ತಾಣಗಳ ಮೂಲಕವೂ ಪ್ರಚಾರ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಇಂತಹ ಕರುಣಾ ಅವರು ರಾಜಕೀಯ ಪ್ರವೇಶಿಸಿದ್ದು 14ರ ಹರೆಯದಲ್ಲಿ. ಜಸ್ಟೀಸ್ ಪಕ್ಷದ ನಾಯಕ ಅಳಗಿರಿಸ್ವಾಮಿಯ ಭಾಷಣವೇ ಅದಕ್ಕೆ ಪ್ರೇರಣೆ. ತರುವಾಯ ಹಿಂದಿ ಭಾಷಾ ವಿರೋಧಿ ಚಳವಳಿಯಲ್ಲಿ ಭಾಗಿಯಾದರು. ಸ್ಥಳೀಯ ಯುವಕರನ್ನು ಒಗ್ಗೂಡಿಸಿ ಸಂಘಟನೆ ಕಟ್ಟಿ, ಮಾನವರ್ ನೇಸನ್ ಎಂಬ ಕೈಬರಹದ ಪತ್ರಿಕೆಯನ್ನು ಸದಸ್ಯರಿಗೆಲ್ಲ ಹಂಚಿದರು. ವಿದ್ಯಾರ್ಥಿ ದೆಸೆಯಲ್ಲಿ ತಮಿಳುನಾಡು ತಮಿಳ್ ಮಾನವರ್ ಮಂದ್ರ್ಮ್ ಎಂಬ ವಿದ್ಯಾರ್ಥಿ ಸಂಘಟನೆ ಸ್ಥಾಪಿಸಿದರು. ದ್ರಾವಿಡ ಚಳವಳಿಯ ಮೊದಲ ವಿದ್ಯಾರ್ಥಿ ಸಂಘಟನೆ ಇದುವೇ ಆಗಿತ್ತು. ವಿದ್ಯಾರ್ಥಿದೆಸೆಯಲ್ಲೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದ ಅವರು, ಮುರಸೋಳಿ ಎಂಬ ಪತ್ರಿಕೆ ಸ್ಥಾಪಿಸಿದರು. ಇದು ಇಂದು ಪಕ್ಷದ ಮುಖವಾಣಿಯಾಗಿ ಪ್ರಸಿದ್ಧಿ ಪಡೆದಿದೆ. ಕಳ್ಳಕುಡಿ (ಪ್ರಸ್ತುತ ದಾಲ್ಮಿಯಪುರಂ) ಎಂಬಲ್ಲಿ ಸಿಮೆಂಟ್ ಫ್ಯಾಕ್ಟರಿ ಸ್ಥಾಪನೆ ವಿರೋಧಿಸಿ ನಡೆಸಿದ ಪ್ರತಿಭಟನೆ ಅವರ ರಾಜಕೀಯ ಜೀವನಕ್ಕೆ ಮಹತ್ವ ತಿರುವನ್ನು ಒದಗಿಸಿತು.
ತಮಿಳು ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಕರುಣಾನಿಧಿ, ಅನೇಕ ಕವನ, ನಾಟಕ, ಕಾದಂಬರಿ, ಐತಿಹಾಸಿಕ ಕಾದಂಬರಿ, ಸಿನಿಮಾ ಗೀತೆಗಳು, ಸಂಭಾಷಣೆ ಬರೆದಿದ್ದಾರೆ. ಇದಲ್ಲದೆ ಪ್ರಬಂಧಗಳನ್ನೂ ಬರೆದಿದ್ದಾರೆ. ಕನ್ಯಾಕುಮಾರಿಯಲ್ಲಿ 133 ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಹಿಂದೆ ಕರುಣಾ ಅವರ ಶ್ರಮವಿದೆ.
ಇಂತಹ ಕರುಣಾ ಅವರು ತಿರುವರೂರ್‍ನ ತಿರುಕುವಲೈನಲ್ಲಿ 1924ರ ಜೂನ್ 3ರಂದು ಮುತ್ತುವೇಲ್ ಹಾಗೂ ಅಂಜುಗಂ ದಂಪತಿ ಪುತ್ರನಾಗಿ ಜನಿಸಿದರು. ದಕ್ಷಿಣಾಮೂರ್ತಿ ಎಂಬುದು ಜನ್ಮನಾಮ. ಕೌಟುಂಬಿಕ ವಿಚಾರಕ್ಕೆ ಬಂದರೆ, ಕರುಣಾನಿಧಿ ಅವರಿಗೆ ಪದ್ಮಾವತಿ ಅಮ್ಮಾಳ್(ಈಗಿಲ್ಲ), ದಯಾಳು ಅಮ್ಮಾಳ್, ರಜತಿಯಮ್ಮಾಳ್ ಎಂಬ ಮೂವರು ಪತ್ನಿಯರು. ಎಂ.ಕೆ.ಮುತ್ತು ಪದ್ಮಾವತಿ ಅಮ್ಮಾಳ್ ಮಗ, ಅಳಗಿರಿ, ಸ್ಟಾಲಿನ್, ಸೆಲ್ವಿ ಮತ್ತು ತಮಿಳರಸು ದಯಾಳುಅಮ್ಮಾಳ್ ಮಕ್ಕಳು. ಕನ್ನಿಮೊಳಿ ರಜತಿಯಮ್ಮಾಳ್ ಪುತ್ರಿ.
ರಾಜಕೀಯ ಬದುಕಿನಲ್ಲಿ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿಕೊಂಡ ಕರುಣಾ ಈ ಹಿಂದೆ ರಾಮಸೇತುವಿನ ವಿಚಾರದಲ್ಲಿ ಹಿಂದುಗಳ ಭಾವನೆಯನ್ನು ಘಾಸಿಗೊಳಿಸುವಂತೆ ಮಾತನಾಡಿ ಬಹುಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗಿದ್ದರು. ಹಲವು ಬಾರಿ ಅವರ ದುರಹಂಕಾರದ ಮಾತುಗಳೇ ಅವರಿಗೆ ಶತ್ರುವಾಗಿದ್ದಿದೆ. 2ಜಿ ಹಗರಣದ ಕಳಂಕವೂ ಈ ಕುಟುಂಬದ ಮೇಲಿದೆ. ಇದಲ್ಲದೆ ತಮಿಳುನಾಡಿನಲ್ಲೇ ಅಧಿಕಾರಾವಧಿಯಲ್ಲಿ ಮಾಡಿದ ಅನೇಕ ಭ್ರಷ್ಟಾಚಾರ ಪ್ರಕರಣಗಳ ಕಳಂಕವೂ ಇದೆ. ಇಷ್ಟೆಲ್ಲ ಆದ ಬಳಿಕವೂ, ಯುವ ನಾಯಕತ್ವಕ್ಕೆ ಮಣೆಹಾಕದೆ ಮತ್ತದೇ ಹಿರಿತಲೆಯನ್ನೇ ನೆಚ್ಚಿಕೊಳ್ಳಬೇಕಾಗಿ ಬಂದಿರುವುದು ಆ ಪಕ್ಷ ಹಾಗೂ ಆ ನಾಡಿನ ದುರಂತವೇ ಸರಿ.

Leave a Reply

Your email address will not be published. Required fields are marked *