ನ್ಯಾಯಾಧಿಪನ ಹಾದಿ..

ದ್ಯದ ಪರಿಸ್ಥಿತಿಯಲ್ಲಿ `ಮಹಾಭಿಯೋಗ’ ಎಂಬ ಈ ಶಬ್ದ ಕಿವಿಗೆ ಬೀಳುತ್ತಿರುವಂತೆಯೇ ಸ್ಮೈತಿ ಪಟಲದಲ್ಲಿ ಮೂಡುವ ಚಿತ್ರ ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ಅವರದ್ದು. ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿ ಇನ್ನೂ ವರ್ಷಪೂರ್ತಿ ಆಗಿಲ್ಲ. ಪದಗ್ರಹಣದ ಬೆನ್ನಲ್ಲೇ ಅವರನ್ನು ಪದಚ್ಯುತಗೊಳಿಸುವುದಕ್ಕೆ ಇನ್ನಿಲ್ಲದ ಪ್ರಯತ್ನ ಆರಂಭವಾಗಿದೆ.  ಈ ಪ್ರಯತ್ನಕ್ಕೆ ಕಾರಣವೇನು ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲವಾದರೂ, ಒಂದಷ್ಟು ಚದುರಿದ ಮಾಹಿತಿಗಳು ಕಣ್ಣ ಮುಂದೆ ನಿಲ್ಲುತ್ತವೆ. ಬಹುಶಃ ಆ ಮಾಹಿತಿಗಳಲ್ಲಿ ಅವರ ವ್ಯಕ್ತಿತ್ವದ ಚಿತ್ರಣವನ್ನೂ ನಾವು ಕಾಣಬಹುದೇನೋ..
ಸಿಜೆಐ ಆಗಿ ಅಧಿಕಾರ ಸ್ವೀಕರಿಸುವ ಮೊದಲೇ ಮಹತ್ವದ ತೀರ್ಪುಗಳ ಮೂಲಕ ದೇಶದ ಗಮನಸೆಳೆದವರು ನ್ಯಾಯಮೂರ್ತಿ ದೀಪಕ್ ಮಿಶ್ರಾ. ಮುಂಬೈ ಸ್ಫೋಟದ ಅಪರಾಧಿಗಳಲ್ಲೊಬ್ಬನಾದ ಉಗ್ರ ಯಾಕೂಬ್ ಮೆಮೋನನ್ನು ಗಲ್ಲಿಗೇರಿಸಬಾರದು ಎಂದು ಲಾಬಿ ಮಾಡಿ ರಾಷ್ಟ್ರಪತಿಗೆ ಪತ್ರಬರೆದವರ ಪೈಕಿ ನಿವೃತ್ತ ನ್ಯಾಯಮೂರ್ತಿಗಳಾದ ಎಚ್.ಎಸ್.ಬೇಡಿ, ಪಿ.ಬಿ.ಸಾವಂತ್, ಎಚ್.ಸುರೇಶ್, ಕೆ.ಪಿ.ಸಿವ ಸುಬ್ರಮಣಿಯಂ, ಎಸ್.ಎನ್.ಭಾರ್ಗವ, ಕೆ.ಚಂದ್ರು, ನಾಗ್‍ಮೋಹನ ದಾಸ್, ಸಂಸದರಾದ ಶತ್ರುಘ್ನ ಸಿನ್ಹಾ, ಮಣಿಶಂಕರ್ ಅಯ್ಯರ್, ರಾಮ್ ಜೇಠ್ಮಲಾನಿ, ಸಿಪಿಐಎಂ ಪಾಲಿಟ್ ಬ್ಯೂರೋ ಸದಸ್ಯರಾದ ಪ್ರಕಾಶ್ ಕಾರಟ್, ಬೃಂದಾ ಕಾರಟ್ ಮತ್ತಿತರರು ಇದ್ದರೆಂಬುದನ್ನು ನಮ್ಮ ದೇಶದ ಗುಪ್ತಚರ ಸಂಸ್ಥೆ `ರಾ’ದ ಪಾಕಿಸ್ತಾನ ವಿಭಾಗದ ಮುಖ್ಯಸ್ಥರಾಗಿದ್ದ ಬಿ.ರಾಮನ್ ಲೇಖನವೊಂದರಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ಪ್ರಕರಣದಲ್ಲಿ ಯಾಕೂಬ್ ಸಲ್ಲಿಸಿದ್ದ ದಯಾಅರ್ಜಿಯನ್ನು ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠ 2015ರ ಮಧ್ಯಭಾಗದಲ್ಲಿ ತಿರಸ್ಕರಿಸಿತ್ತು. ಇದಕ್ಕೆ ಪ್ರತಿಯಾಗಿ ನ್ಯಾ.ಮಿಶ್ರಾ ಅವರಿಗೆ ಅನಾಮಧೇಯ `ಕೊಲೆ ಬೆದರಿಕೆ’ ಪತ್ರ ಬಂದಿತ್ತು. ಹೀಗೆ ಅವರ ಕಠಿಣ ನಿಲುವುಗಳ ಕಾರಣಕ್ಕೆ ಬೆದರಿಕೆಗಳೂ ಸರ್ವೇಸಾಮಾನ್ಯ ಎಂಬ ಭಾವನೆಯೂ ಅಂದೂ ಇತ್ತು, ಇಂದೂ ಇದೆ.
ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಅವರಿಂದ ತೆರವಾದ ಸಿಜೆಐ ಸ್ಥಾನಕ್ಕೆ ಕಳೆದ ವರ್ಷ ಆಗಸ್ಟ್  28ರಂದು ನಿಯೋಜಿತರಾದವರು ನ್ಯಾಯಮೂರ್ತಿ ದೀಪಕ್ ಮಿಶ್ರಾ. ಅವರ ಅಧಿಕಾರಾವಧಿ ಇರುವುದೇ 13 ತಿಂಗಳು. ಅಂದರೆ ಈ ವರ್ಷ ಅಕ್ಟೋಬರ್ 2ರಂದು ಅವರು ನಿವೃತ್ತರಾಗಲಿದ್ದಾರೆ. ಸಿಜೆಐ ಆಗಿ ಪದಗ್ರಹಣ ಮಾಡುವುದಕ್ಕೂ ಮೊದಲೇ, ಅಯೋಧ್ಯೆ ರಾಮಮಂದಿರ ಪ್ರಕರಣದ ತೀರ್ಪನ್ನು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೀಡುವವರಿದ್ದಾರೆ ಎಂಬರ್ಥದ ಸುದ್ದಿಗಳು ಪ್ರಕಟವಾಗಿದ್ದವು. ಇದು ದೇಶದ ಗಮನಸೆಳೆದಿತ್ತು ಕೂಡ.
ಸಿಜೆಐ ಆಗಿ ನಾಲ್ಕು ತಿಂಗಳಾಗುತ್ತಲೇ ಸುಪ್ರೀಂ ಕೋರ್ಟ್‍ನ ಕೇಸುಗಳ ಹಂಚಿಕೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಅಪಸ್ವರ ಕೇಳಿತು. ಬೆನ್ನಲ್ಲೇ ಸುಪ್ರೀಂ ಕೋರ್ಟ್‍ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ, ರಂಜನ್ ಗೊಗೋಯ್, ಮದನ್ ಲೋಕುರ್, ಕುರಿಯನ್ ಜೋಸೆï ಜನವರಿ 12ರಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, `ಸಿಜೆಐ ಆಡಳಿತ ವೈಖರಿ ಮತ್ತು ಕೇಸು ಹಂಚಿಕೆ ವಿಧಾನ ಸರಿ ಇಲ್ಲ. ಅಯೋಧ್ಯೆಯ ರಾಮಜನ್ಮಭೂಮಿ ವಿವಾದ, ಆಧಾರ್, ಭೂಸ್ವಾಧೀನ, ಜಸ್ಟೀಸ್ ಬಿ.ಎಚ್.ಲೋಯಾ ಅಸಹಜ ಸಾವಿನ ಕುರಿತ ಮಹತ್ವದ ಸಾರ್ವಜನಿಕ ಹಿತಾಸಕ್ತಿ ದಾವೆ(ಪಿಐಎಲ್)ಗಳನ್ನು ವಿಚಾರಣೆಗಾಗಿ ಹಂಚಿಕೆ ಮಾಡಲು ಅನುಸರಿಸುತ್ತಿರುವ ರೋಸ್ಟರ್ ವಿಧಾನ ಸಮರ್ಪಕವಾದುದಲ್ಲ. ಆ ವಿಧಾನ ಸಿಜೆಐ ವಿವೇಚನೆಗೆ ಬಿಟ್ಟದ್ದಾದರೂ, ಹಿರಿಯ ನ್ಯಾಯಮೂರ್ತಿಗಳನ್ನು ಬಿಟ್ಟು ಉಳಿದವರಿಗೆ ಪ್ರಮುಖ ಕೇಸುಗಳನ್ನು ಹಂಚಿಕೆ ಮಾಡುತ್ತಿರುವ ಬಗ್ಗೆ ಆಕ್ಷೇಪ ಇದೆ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆದಾಗ್ಯೂ, ನ್ಯಾಯಮೂರ್ತಿ ಮಿಶ್ರಾ ಈ ಆರೋಪಗಳನ್ನು ತಳ್ಳಿಹಾಕಿದ್ದರು.
ಈ ಪತ್ರಿಕಾಗೋಷ್ಠಿ ಬೆನ್ನಲ್ಲೇ ನ್ಯಾಯಮೂರ್ತಿ ಚೆಲಮೇಶ್ವರ್ ಮತ್ತು ಕಮ್ಯೂನಿಸ್ಟ್  ಪಾರ್ಟಿ ಆï ಇಂಡಿಯಾದ ನಾಯಕ ಡಿ.ರಾಜಾ ಭೇಟಿ ದೇಶದ ಗಮನ ಸೆಳೆದಿತ್ತು. ಈ ಭೇಟಿ, ಮಾತುಕತೆ ಪತ್ರಿಕಾಗೋಷ್ಠಿ ಪ್ರಕರಣಕ್ಕೆ ಹೊಸ ತಿರುವು ನೀಡಿತು. ಈ ಬಗ್ಗೆ ಆ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಅಡ್ವೋಕೇಟ್ ಜನರಲ್ ಬಿ.ವಿ.ಆಚಾರ್ಯ ನೀಡಿದ ಹೇಳಿಕೆ -`ನ್ಯಾಯಮೂರ್ತಿಗಳು ಮಾಧ್ಯಮದೆದುರು ಹೋಗುವುದು ಸಮರ್ಥನೀಯವೇ ಅಲ್ಲ. ಆದಾಗ್ಯೂ, ಅನಿವಾರ್ಯ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಸಿದರೂ ಆ ಹೇಳಿಕೆಗೊಂದು ತೂಕ ಇರಬೇಕು. ಆದರೆ, ಇಲ್ಲಿ ಡಿ.ರಾಜಾ ಅವರ ಜತೆಗಿನ ಮಾತುಕತೆ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಇಲ್ಲಿ ರಾಜಕಾರಣಿಗಳು ಏನೋ ಆಟ ಆಡುತ್ತಿದ್ದಾರೆ. ಯಾರು ಏನೇ ಹೇಳಿದರೂ ನ್ಯಾಯಮೂರ್ತಿ ಚೆಲಮೇಶ್ವರ್ ಸಿಪಿಐ ನಾಯಕ ಡಿ.ರಾಜಾ ಅವರನ್ನು ಭೇಟಿಯಾಗಲೇ ಬಾರದಿತ್ತು’ ಎಂಬುದನ್ನು ಇಲ್ಲಿ ಉಲ್ಲೇಖಿಸುವುದು ವಿಷಯ ಸ್ಪಷ್ಟತೆ ದೃಷ್ಟಿಯಿಂದ ಅವಶ್ಯ.
ಇದರ ಬೆನ್ನಿಗೇ ಜಸ್ಟೀಸ್ ಲೋಯಾ ಪ್ರಕರಣದ ಪಿಐಎಲ್ ಸದ್ದು ಮಾಡಿತು. ಇದು ರಾಜಕೀಯ ತಿರುವು ಪಡೆಯುತ್ತಿರುವಂತೆಯೇ ಜಸ್ಟೀಸ್ ಲೋಯಾ ಪುತ್ರ ಅನುಜ್ ಲೋಯಾ, `ತಂದೆಯವರ ನಿಧನ ಹಠಾತ್ ಆಗಿದ್ದಾದರೂ ಅದರ ಹಿಂದೆ ಯಾವುದೇ ಸಂದೇಹ ನಮಗಿಲ್ಲ. ದಯವಿಟ್ಟು ಯಾರೂ ಈ ವಿಷಯವನ್ನು ರಾಜಕೀಯಕ್ಕೆ ಬಳಸಿ ನಮ್ಮ ಕುಟುಂಬದ ಸದಸ್ಯರನ್ನು ಘಾಸಿಗೊಳಿಸಬೇಡಿ’ ಎಂದು ಮನವಿ ಮಾಡಿಕೊಂಡದ್ದು ಕೂಡ ಸುದ್ದಿಯಾಯಿತು. ಇಷ್ಟಾಗ್ಯೂ, ಸುಪ್ರೀಂ ಕೋರ್ಟ್‍ನ ಸಿಜೆಐ ನೇತೃತ್ವದ ನ್ಯಾಯಪೀಠ ಈ ಸಂಬಂಧದ ಪಿಐಎಲ್ ವಿಚಾರಣೆ ನಡೆಸಿ, ಅದರ ಹಿಂದಿನ ರಾಜಕೀಯ ಹಿತಾಸಕ್ತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡು ಅರ್ಜಿಯನ್ನು ವಜಾಗೊಳಿಸಿತ್ತು.
ಈ ಇಷ್ಟು ಬೆಳವಣಿಗೆಗಳಲ್ಲಿ ಅಯೋಧ್ಯೆ ರಾಮ ಜನ್ಮಭೂಮಿ ವಿವಾದ ಪ್ರಕರಣದ ವಿಚಾರಣೆ ವಿಷಯ ಪದೇಪದೆ ವ್ಯಕ್ತವಾಗಿದೆ. ಇದು ಸಿಜೆಐ ನೇತೃತ್ವದ ನ್ಯಾಯಪೀಠದಲ್ಲೇ ನಡೆಯಲಿರುವುದು ಹಲವರ ಆತಂಕಕ್ಕೆ ಕಾರಣ. ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಈ ಪ್ರಕರಣದ ವಿಚಾರಣೆಗೆ ಹಾಜರಾಗಿ 2019ರ ಲೋಕಸಭೆ ಚುನಾವಣೆ ನಂತರದಲ್ಲಿ ವಿಚಾರಣೆ ಮುಂದುವರಿಸುವಂತೆ ಮನವಿ ಮಾಡಿದ್ದರು. ಈ ಬಗ್ಗೆ ರಾಜಕೀಯವಾಗಿ ಕೂಡ ಆಕ್ಷೇಪ ವ್ಯಕ್ತವಾಗಿತ್ತಲ್ಲದೇ, ಅವರು ಯಾರನ್ನು ಪ್ರತಿನಿಧಿಸಿದ್ದರು ಎಂಬ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು.
ಏತನ್ಮಧ್ಯೆ, ಲೋಕಸಭೆಯಲ್ಲಿ ಸಿಜೆಐ ವಿರುದ್ಧ ಮಹಾಭಿಯೋಗ ನಡೆಸುವುದಕ್ಕೆ ಕಾಂಗ್ರೆಸ್ ಪಕ್ಷ ಪ್ರಯತ್ನಿಸಿ ಸೋತಿತ್ತು. ನಂತರ ಸದ್ದಿಲ್ಲದೆ ರಾಜ್ಯಸಭೆಯಲ್ಲಿ ಮಹಾಭಿಯೋಗ ಮಂಡನೆಗೆ ಸಿದ್ಧತೆ ನಡೆಸಿದ್ದು ಈಗ ಮುಂದೇನು ಎಂಬ ಪ್ರಶ್ನೆಯೊಂದಿಗೆ ಎಲ್ಲರೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ನಿರ್ಣಯದತ್ತ ಗಮನಹರಿಸಿದ್ದಾರೆ. ಒಂದೊಮ್ಮೆ ಮಹಾಭಿಯೋಗ ನಿಲುವಳಿ ಸ್ವೀಕೃತವಾದರೆ ಸಿಜೆಐಗೆ ನೋಟಿಸ್ ಜಾರಿಯಾಗುತ್ತದೆ. ಆ ಸಂದರ್ಭ ಎದುರಾದರೆ, ಮಹಾಭಿಯೋಗ ಇತ್ಯರ್ಥವಾಗುವ ತನಕ ಅಯೋಧ್ಯೆ ರಾಮಜನ್ಮಭೂಮಿ ವಿಚಾರಣೆ ಸೇರಿ ಬೇರಾವುದೇ ವಿಚಾರಣೆ ನಡೆಸುವಂತಿಲ್ಲ. ಇದು Àಲಿಸಿದರೆ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ರಾಜಕೀಯ ಅಜೆಂಡಾ ಕಾರ್ಯಗತವಾದಂತೆ ಎಂಬ ಮಾತೂ ಈಗ ಕೇಳುತ್ತಿದೆ.
ನ್ಯಾಯಾಂಗದ ಇತಿಹಾಸದಲ್ಲಿ ಇಷ್ಟೊಂದು ತೀವ್ರತರದ ರಾಜಕೀಯ ವಿರೋಧ ಕಟ್ಟಿಕೊಂಡ ನ್ಯಾಯಮೂರ್ತಿ ಮಿಶ್ರಾ ಒಡಿಶಾ ಮೂಲದವರು. 1953ರ ಅಕ್ಟೋಬರ್ 3ರಂದು ಕಟಕ್‍ನಲ್ಲಿ ಜನನ. ಕಾನೂನು ವ್ಯಾಸಂಗದ ಮಾಡಿದ ಅವರು 1997ರ ಫೆಬ್ರವರಿ 14ರಂದು ಒಡಿಶಾ ಹೈಕೋರ್ಟ್‍ನ ಬಾರ್‍ನಲ್ಲಿ ವಕೀಲಿಕೆಗೆ ನೋಂದಣಿ ಮಾಡಿಕೊಂಡರು. 1996ರಲ್ಲಿ ಹೈಕೋರ್ಟ್‍ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿ, ಮುಂದೆ ಮಧ್ಯಪ್ರದೇಶ ಹೈಕೋರ್ಟ್‍ನಲ್ಲಿ ಕಾಯಂ ನ್ಯಾಯಮೂರ್ತಿಯಾಗಿ, ನಂತರ ಪಟನಾ ಹೈಕೋರ್ಟ್, ದೆಹಲಿ ಹೈಕೋರ್ಟ್‍ಗಳಲ್ಲಿ ಮುಖ್ಯನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದರು. 2011ರ ಅಕ್ಟೋಬರ್ 10ರಂದು ಸುಪ್ರೀಂ ಕೋರ್ಟ್‍ಗೆ ಬಡ್ತಿ ಪಡೆದರು. ವೈಯಕ್ತಿಕ ಬದುಕಿನೆಡೆ  ಗಮನಿಸಿದರೆ ಮದುವೆ ಆಗಿದ್ದು, ಉಳಿದ ವಿವರಗಳು ಲಭ್ಯವಿಲ್ಲ.
ಸಿನಿಮಾ ಹಾಲ್‍ಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯ ಮಾಡಿದ್ದ ನ್ಯಾಯಮೂರ್ತಿ ಮಿಶ್ರಾ ಅವರ ನ್ಯಾಯಪೀಠದ ಎದುರು, ಆಧಾರ್ ಖಾಸಗಿತನದ ಪ್ರಕರಣ, ಕಾವೇರಿ, ಕೃಷ್ಣಾ ನದಿ ನೀರಿನ ಹಂಚಿಕೆ ಸೇರಿ ಹಲವು ಪ್ರಮುಖ ಪ್ರಕರಣಗಳ ವಿಚಾರಣೆ ಪ್ರಗತಿಯಲ್ಲಿದೆ. ಅವರ ಅಧಿಕಾರಾವಧಿ ಮುಗಿಯುವುದರೊಳಗೆ ಕೆಲವು ಪ್ರಕರಣಗಳು ಇತ್ಯರ್ಥಗೊಳ್ಳಬಹುದೆಂಬ ನಿರೀಕ್ಷೆ, ಆಶಾಭಾವನೆ ಹಲವರಲ್ಲಿದೆ.

Leave a Reply

Your email address will not be published. Required fields are marked *