ಊ…..ದ್ದದ ವಸತಿ ಸಂಕೀರ್ಣ..!

ವಿಜಯವಾಣಿ ಪತ್ರಿಕೆಯ ಪ್ರಾಪರ್ಟಿ ಪುರವಣಿಯಲ್ಲಿ ಫೆ.೨೦ರಂದು ಪ್ರಕಟವಾದ ಅಂಕಣ..
ವಿಜಯವಾಣಿ ಪತ್ರಿಕೆಯ ಪ್ರಾಪರ್ಟಿ ಪುರವಣಿಯಲ್ಲಿ ಫೆ.೨೦ರಂದು ಪ್ರಕಟವಾದ ಅಂಕಣ..

ಸಾಮಾನ್ಯವಾಗಿ ವಸತಿ ಸಂಕೀರ್ಣ ಎಂದಾಗ ಬಹುಮಹಡಿ/ಗಗನ ಚುಂಬಿ ಅಪಾರ್ಟ್‍ಮೆಂಟ್ ಕಟ್ಟಡಗಳು ಕಣ್ಣಮುಂದೆ ಸುಳಿಯುವುದು ಸಹಜ. ಅತಿ ಉದ್ದದ ವಸತಿ ಸಂಕೀರ್ಣವನ್ನೂ ಜಗತ್ತಿನಲ್ಲಿ ನಿರ್ಮಿಸಿದ್ದಾರೆ ಎಂದರೆ ಅದಕ್ಕಿಂತ ಅಚ್ಚರಿ ಇನ್ನೇನಿದೆ ಅಲ್ಲವೇ?
ಹೌದು.. “ಕಾರ್ಲ್ ಮಾಕ್ರ್ಸ್-ಹೋಫ್’’ ಜಗತ್ತಿನ ಅತಿ ಉದ್ದದ ವಸತಿ ಸಂಕೀರ್ಣ ಎಂಬ ಕೀರ್ತಿಗೆ ಭಾಜನವಾಗಿದೆ. ಇದು ಬರೋಬ್ಬರಿ ಒಂದು ಕಿ.ಮೀ. ಉದ್ದಕ್ಕೆ ವ್ಯಾಪಿಸಿದೆ. ಆಸ್ಟ್ರಿಯಾದ ವಿಯೆನ್ನಾ ನಗರಕ್ಕೆ ಸನಿಹದಲ್ಲೇ ಇದಿದೆ. ಈ ವಸತಿ ಸಂಕೀರ್ಣ ಇತ್ತೀಚೆಗೆ ನಿರ್ಮಿಸಿದ್ದು ಎಂದು ಭಾವಿಸಬೇಡಿ.. 1927- 1930 ನಡುವೆ ಈ ಕಟ್ಟಡ ನಿರ್ಮಾಣವಾಗಿದೆ. ನಗರ ವಿನ್ಯಾಸಕಾರ ಕಾರ್ಲ್ ಎಹ್ನ್ ಇದರ ನಿರ್ಮಾತೃ. 1100 ಮೀಟರ್ ಉದ್ದ ಇರುವ ಈ ವಸತಿ ಸಂಕೀರ್ಣದ ಸಾರಿಗೆ ಸಂಪರ್ಕ ವ್ಯವಸ್ಥೆಯಾಗಿ ಟ್ರಾಮ್ ಅಳವಡಿಸಲಾಗಿದೆ. ನಾಲ್ಕು ಕಡೆ ಟ್ರಾಮ್ ನಿಲ್ದಾಣಗಳಿವೆ. ಈ ಕಟ್ಟಡದ ನಡುವೆಯೇ ರಸ್ತೆ ವ್ಯವಸ್ಥೆಯೂ ಇದ್ದು, ನಗರದ ಸಾರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನಿರ್ಮಿಸಿರುವುದು ವಿಶೇಷ. ಅಲ್ಲಲ್ಲಿ ಕಟ್ಟಡಗಳ ನಡುವೆ ಮಾರ್ಗ ಹಾದು ಹೋಗುವುದರಿಂದಾಗಿ ಸುರಂಗದೊಳಕ್ಕೆ ಹೋದ ಅನುಭವವಾಗುತ್ತದೆ.
ಈ ವಸತಿ ಸಂಕೀರ್ಣದ ಹಿಂದೊಂದು ಕಥೆಯಿದೆ. ಮೊದಲ ಮಹಾಯುದ್ಧ ನಡೆದ ಬಳಿಕ ಸಾವಿರಾರು ಜನ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದ ಸಂದರ್ಭದಲ್ಲಿ ಅವರಿಗೆ ಪುನರ್ ವಸತಿ ಕಲ್ಪಿಸಲು ಈ ವಸತಿ ಸಂಕೀರ್ಣ ನಿರ್ಮಿಸಲಾಗಿತ್ತಂತೆ. 1918ರಲ್ಲಿ ಮಹಾಯುದ್ಧ ಮುಗಿದ ಬಳಿಕ ಆಸ್ಟ್ರಿಯಾದ ಆರ್ಥಿಕ ಸ್ಥಿತಿ ಹದಗೆಟ್ಟು, ನಿರುದ್ಯೋಗ, ಬಡತನ, ಬರ ಪರಿಸ್ಥಿತಿ ಎದುರಾದ್ದರಿಂದ ವಿಯೆನ್ನಾ ನಗರಕ್ಕೆ ಗರಬಡಿದಂತಾಗಿತ್ತು. ಅಂತಹ ಕಾಲದಲ್ಲಿ ಸುಮಾರು 2.5 ಲಕ್ಷ ಕಾರ್ಮಿಕರು ಪುರಾತನ ಅಪಾರ್ಟ್‍ಮೆಂಟ್ ಒಂದರಲ್ಲಿ ಕಿಕ್ಕಿರಿದು ವಾಸಿಸುತ್ತಿದ್ದರು. ಆ ವಸತಿ ಸಂಕೀರ್ಣಕ್ಕೋ ನೀರಿನ ಸಂಪರ್ಕವೇ ಇರಲಿಲ್ಲ. 1919ರಲ್ಲಿ ಅಲ್ಲಿ ಚುನಾವಣೆ ನಡೆದು ಸೋಷಿಯಲ್ ಡೆಮಾಕ್ರಟ್‍ಗಳು ಅಧಿಕಾರಕ್ಕೆ ಬಂದ ಬಳಿಕ ಬದಲಾವಣೆ ಪರ್ವ ಆರಂಭವಾಯಿತು. ದೇಶದ ಅಭಿವೃದ್ಧಿ ಕಡೆಗೆ ಹೊಸ ಸರ್ಕಾರ ಗಮನಹರಿಸಿತು. ಅಂತಹ ಒಂದು ಯೋಜನೆಯಲ್ಲಿ ಇದೂ ಒಂದು.
ಈ ವಸತಿ ಸಂಕೀರ್ಣ ಒಟ್ಟು 1.56 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿ ವ್ಯಾಪಿಸಿದೆ. 30 ಚ.ಮೀ ವಿಸ್ತೀರ್ಣದ ಸಿಂಗಲ್ ಬೆಡ್ ರೂಮ್, 60 ಚ.ಮೀ. ವಿಸ್ತೀರ್ಣದ ಡಬಲ್ ಬೆಡ್ ರೂಮ್ ಫ್ಲ್ಯಾಟ್‍ಗಳು ಸೇರಿದಂತೆ ಒಟ್ಟು 1382 ಫ್ಲ್ಯಾಟ್‍ಗಳು ವಸತಿ ಸಂಕೀರ್ಣದಲ್ಲಿವೆ. ಪ್ರತಿ ಮನೆಯೊಳಗೇ ನೀರು ಪೂರೈಕೆ ಸೌಲಭ್ಯ, ನಿರಂತರ ವಿದ್ಯುತ್ ಇತ್ಯಾದಿ ಸೌಲಭ್ಯಗಳಿದ್ದವು. ಅಷ್ಟೇ ಅಲ್ಲ, ವಿಯೆನ್ನಾದ ಮಟ್ಟಿಗೆ ಅಟ್ಯಾಚ್ಡ್ ಟಾಯ್ಲೆಟ್ ಸೌಲಭ್ಯ ಹೊಂದಿದ ಮೊದಲ ವಸತಿ ಸಂಕೀರ್ಣ ಅದಾಗಿತ್ತು.
ಅಂದಿನ ಕಾಲಕ್ಕೇ, ಅಂತಹ ಪುಟ್ಟ ದೇಶದಲ್ಲಿ ಪರಿಪೂರ್ಣ ವಸತಿ ಸಂಕೀರ್ಣ ನಿರ್ಮಾಣವಾಗಿತ್ತು. ಪುಟ್ಟ ಮಕ್ಕಳ ಉದ್ಯಾನ, ಆಟದ ಮೈದಾನ, ಹೆರಿಗೆ ಆಸ್ಪತ್ರೆ, ಆರೋಗ್ಯ ಕೇಂದ್ರ, ಗ್ರಂಥಾಲಯ, ಲಾಂಡ್ರಿಗಳು, ಯುವಕ ಸಂಘಗಳು, ಅಂಚೆ ಕಚೇರಿ, ಮೆಡಿಕಲ್‍ಗಳು, ದಿನಸಿ, ತರಕಾರಿ, ಮಾಂಸದ ಅಂಗಡಿಗಳು ಸೇರಿದಂತೆ ಎಲ್ಲ ಮೂಲಸೌಕರ್ಯಗಳೂ ಅದರಲ್ಲಿ ಇದ್ದವು.
ಅದು ಅಂದಿನ ಮಟ್ಟಿಗೆ ಅತ್ಯುತ್ತಮ ಸೌಕರ್ಯ ಹೊಂದಿದ ವಸತಿ ಸಂಕೀರ್ಣವಾಗಿತ್ತು. ಆದರೆ, ಬದಲಾದ ಕಾಲಮಾನದಲ್ಲಿ ತಂತ್ರಜ್ಞಾನ ಮನುಷ್ಯನ ಬದುಕಿನಲ್ಲಿ ಹಾಸುಹೊಕ್ಕಿರುವಾಗ, ವಾಷಿಂಗ್ ಮಷಿನ್, ರೆಫ್ರಿಜರೇಟರ್ ಮೊದಲಾದವನ್ನು ಅಳವಡಿಸುವುದಕ್ಕೆ ಅಲ್ಲಿ ಆಗುತ್ತಿಲ್ಲ ಎಂಬ ಕೊರಗು ಅಲ್ಲಿನ ನಿವಾಸಿಗಳನ್ನು ಕಾಡತೊಡಗಿದೆಯಂತೆ.. ಏನೇ ಆದರೂ ಈ ವಸತಿ ಸಂಕೀರ್ಣ ಇಂದಿಗೂ ಜಗತ್ತಿನ ಅತಿ ಉದ್ದದ ವಸತಿ ಸಂಕೀರ್ಣ ಎಂಬ ದಾಖಲೆಯನ್ನು ಉಳಿಸಿಕೊಂಡಿದೆ..

Leave a Reply

Your email address will not be published. Required fields are marked *