ಪೋರ್ಚುಗಲ್​ನ ‘ಗಾಂಧಿ’

António_Costa
António_Costa

ಗೋವಾದ ರಾಜಧಾನಿ ಪಣಜಿಯಿಂದ ಮೂವತ್ತೊಂದು ಕಿ.ಮೀ. ದೂರದ ಮಡಗಾಂವ್​ನ ರುವಾ ಅಬಾಡೆ ಫರಿಯಾದಲ್ಲಿರುವ ಶತಮಾನದಷ್ಟು ಹಳೆಯದಾದ ಮನೆಯ ಸದಸ್ಯರು ಗುರುವಾರ (ನ.26) ಭಾರಿ ಸಂಭ್ರಮ, ಸಡಗರದಿಂದಿದ್ದರು. ಪೋರ್ಚುಗಲ್​ನ ನೂತನ ಪ್ರಧಾನಮಂತ್ರಿಯಾಗಿ ಅಂಟೋನಿಯೋ ಲೂಯಿಸ್ ಸಂತೋಸ್ ಡ ಕೋಸ್ಟಾ ಅಧಿಕಾರ ಸ್ವೀಕರಿಸಿದ ದಿನ ಅದು. ಪೋರ್ಚುಗಲ್​ಗೂ ಗೋವಾದ ಮಡಗಾಂವ್​ಗೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ಹುಬ್ಬೇರಿಸಬೇಡಿ. ಅಂಟೋನಿಯೋ ಅವರ ಮೂಲ ಭಾರತದ ಗೋವಾ. ಸಂಭ್ರಮ ಸಡಗರದಲ್ಲಿದ್ದ ಮಡಗಾಂವ್​ನ ಶತಮಾನದಷ್ಟು ಹಳೆಯದಾದ ಮನೆಯ ಸದಸ್ಯರು ಅಂಟೋನಿಯೋ ಅವರ ಸಂಬಂಧಿಕರು.

ಅಂಟೋನಿಯೋ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದು ಒಂದು ವಿಚಿತ್ರ ಸನ್ನಿವೇಶದಲ್ಲಿ. ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಪೋರ್ಚುಗಲ್ ಅಕ್ಟೋಬರ್​ನಲ್ಲಿ ಸಾರ್ವತ್ರಿಕ ಚುನಾವಣೆ ಎದುರಿಸಿತ್ತು. ಚುನಾವಣೆ ಪ್ರಚಾರ ಸಂದರ್ಭದಲ್ಲಿ ಸೋಷಿಯಲಿಸ್ಟ್ ಪಾರ್ಟಿ ನೇತೃತ್ವವಹಿಸಿದ್ದ ಕೋಸ್ಟಾ ಸರ್ಕಾರದ ಬೇಲ್ ಔಟ್ ಪ್ಯಾಕೇಜ್ ವಿರುದ್ಧ ಪ್ರಚಾರ ನಡೆಸಿದ್ದರು. ಅಂಟೋನಿಯೋ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಸೋಷಿಯಲಿಸ್ಟ್ ಪಕ್ಷ ಬಿಂಬಿಸಿತ್ತು. ಆ ದೇಶದ ರಾಜಕೀಯ ಇತಿಹಾಸದಲ್ಲೇ ಮೊದಲ ಸಲ, ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಬೇಲ್ ಔಟ್ ಪ್ಯಾಕೇಜ್ ಎದುರು ನೋಡುತ್ತಿದ್ದ ಆಡಳಿತ ಮೈತ್ರಿಕೂಟಕ್ಕೆ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯುವ ಭಾಗ್ಯ ಲಭಿಸಿತ್ತು. ಹಾಗೆ ಆಡಳಿತದಲ್ಲಿದ್ದ ಪೆಟ್ರೋ ಪಸ್ಸೋಸ್ ಕೋಎಲ್ಹೋ ನೇತೃತ್ವದ ಸೆಂಟರ್- ರೈಟ್ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿತು. ಜನಾದೇಶ ಪೆಟ್ರೋ ಪಸ್ಸೋಸ್ ಪರವಾಗಿತ್ತು !

ನಂತರ ನಡೆದಿದ್ದು ರಾಜಕೀಯ ಚದುರಂಗದಾಟ. ಸಂಸತ್ತಿನಲ್ಲಿ ಪೆಟ್ರೋ ಪಸ್ಸೋಸ್ ಅವರ ಮೈತ್ರಿಕೂಟಕ್ಕೆ ಹೆಚ್ಚಿನ ಸ್ಥಾನಗಳಿತ್ತು. ಆದರೆ, ಬೇಲ್ ಔಟ್ ಪ್ಯಾಕೇಜ್ ವಿಚಾರದಲ್ಲಿ ಪೆಟ್ರೋ ಪಸ್ಸೋಸ್ ನಿಲುವನ್ನು ಸೋಷಿಯಲಿಸ್ಟ್ ಪಕ್ಷ, ಎಡರಂಗ ಪಕ್ಷಗಳು ವಿರೋಧಿಸುತ್ತಿದ್ದವು. ಸಂಸತ್ತಿನಲ್ಲಿ ಚರ್ಚೆ ನಡೆದಾಗ ಪೆಟ್ರೋ ಪಸ್ಸೋಸ್ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. ಪರಿಣಾಮ, ಅಕ್ಟೋಬರ್ ಕೊನೆಯಲ್ಲಿ ಅಧಿಕಾರ ಸ್ವೀಕರಿಸಿದ ಹನ್ನೊಂದು ದಿನಗಳ ಬಳಿಕ ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸಲಾರದೇ ಪೆಟ್ರೋ ಪಸ್ಸೋಸ್ ಸರ್ಕಾರ ಪತನವಾಯಿತು. ಹೊಸ ಮೈತ್ರಿಕೂಟ ಉದಯಿಸುವುದಕ್ಕೆ ಇದು ನಾಂದಿಯಾಯಿತು.

ಸರ್ಕಾರದ ಪತನವಾದ ಬಳಿಕ ಪೋರ್ಚುಗಲನ್ನು ಕಾಡಿದ್ದು ಅರಾಜಕತೆ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದ ಕಾರಣ ಮೈತ್ರಿ ಸರ್ಕಾರ ರಚಿಸಬೇಕಾದ ಅನಿವಾರ್ಯತೆ ಇತ್ತು. ಸಂಸತ್ತಿನಲ್ಲಿ ಬೇಲ್​ಔಟ್ ಪ್ಯಾಕೇಜ್ ವಿಚಾರದಲ್ಲಿ ಒಂದಾಗಿದ್ದ ಸೋಷಿಯಲಿಸ್ಟ್ ಪಾರ್ಟಿ ಮತ್ತು ಎಡರಂಗ ಪಕ್ಷಗಳು ಮೈತ್ರಿ ಮಾಡಿಕೊಂಡವು. ಈ ಪಕ್ಷಗಳ ಪೈಕಿ ಅತಿ ಹೆಚ್ಚು ಸ್ಥಾನ ಹೊಂದಿದ್ದ ಸೋಷಿಯಲಿಸ್ಟ್ ಪಾರ್ಟಿಯ ನಾಯಕ ಅಂಟೋನಿಯೋ ಕೋಸ್ಟಾ ಮೈತ್ರಿಕೂಟದ ನಾಯಕ ಸ್ಥಾನವನ್ನು ಅಲಂಕರಿಸಿದರು. ಬೆನ್ನಲ್ಲೇ, ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರತರಬೇಕಾದರೆ ಸೋಷಿಯಲಿಸ್ಟ್ ಪಾರ್ಟಿ ಮತ್ತು ಎಡರಂಗ ಮೈತ್ರಿಕೂಟವೊಂದೇ ಪರಿಹಾರ ಎಂಬುದನ್ನು ಕೋಸ್ಟಾ ಸಾರಿದರು.

ಹಾಗೆ ಲಿಸ್ಬನ್​ನ ಮಾಜಿ ಮೇಯರ್, ಸಮಾಜವಾದಿ ನಾಯಕ, ಆಪ್ತರ ಬಳಗದಲ್ಲಿ ಪೋರ್ಚುಗಲ್ ಗಾಂಧಿ ಎಂದೇ ಗುರುತಿಸಿಕೊಂಡಿರುವ ಕೋಸ್ಟಾ ಪೋರ್ಚುಗಲ್​ನ ಪ್ರಧಾನಿಯಾದರು. ಇದೀಗ ಅವರ ಮುಂದೆ 78 ಶತಕೋಟಿ ಯುರೋಗಳ ಆರ್ಥಿಕ ಬಿಕ್ಕಟ್ಟನ್ನು ಸಮತೋಲನದೊಂದಿಗೆ ಎದುರಿಸಿ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಇದೆ. ಅದರ ಜತೆಗೆ ಹೊಸ ಮಿತ್ರಪಕ್ಷಗಳಾದ ಎಡ ಪಕ್ಷಗಳ ಬೇಕುಬೇಡಗಳನ್ನೂ ಗಮನಿಸುವ ಸವಾಲೂ ಇದೆ. ಇದೊಂಥರಾ ಹಗ್ಗದ ಮೇಲಿನ ನಡಿಗೆ. ಕೋಸ್ಟಾರನ್ನು ಬೆಂಬಲಿಸುತ್ತಿರುವ ಕಮ್ಯೂನಿಸ್ಟ್ ಹಾಗೂ ಲೆಫ್ಟ್ ಬ್ಲಾಕ್ ಪಕ್ಷದ ಸದಸ್ಯರು ಷರತ್ತುಗಳನ್ನು ವಿಧಿಸಿದ್ದು, ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕಾಗಿ ಹಿಂದಿನ ಸರ್ಕಾರ ಪಿಂಚಣಿ ಖಾತೆಗಳ ಸ್ತಂಭನವನ್ನು ತೆರವು ಗೊಳಿಸುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.

ರಾಜಕೀಯ ಜೀವನದ ಹಾದಿಯಲ್ಲಿ ಕಠಿಣ ಸವಾಲುಗಳನ್ನೆದುರಿಸಿದ ಕೋಸ್ಟಾ, ವೃತ್ತಿಯಲ್ಲಿ ವಕೀಲ. ಮುನ್ಸಿಪಲ್ ಕೌನ್ಸಿಲ್​ನ ಡೆಪ್ಯುಟಿ ಮೇಯರ್ ಆಗಿ ರಾಜಕೀಯ ಜೀವನ ಆರಂಭಿಸಿದ ಅವರು, ಮೂರು ಬಾರಿ ಲಿಸ್ಬನ್​ನ ಮೇಯರ್ ಆಗಿದ್ದರು. 1997- 1999ರ ಅವಧಿಯಲ್ಲಿ ಅಂದಿನ ಪ್ರಧಾನಿ ಅಂಟೋನಿಯೋ ಗಟರ್ಸ್ ಸಚಿವ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿ ಕೆಲಸ ಮಾಡಿದ್ದರು. 1999-2002ರ ತನಕ ನ್ಯಾಯ (ಕಾನೂನು) ಸಚಿವರಾಗಿ ಕರ್ತವ್ಯ ನಿಭಾಯಿಸಿದ್ದರು.

ಯುರೋಪಿಯನ್ ಸಂಸತ್ತಿನಲ್ಲಿ ಸೋಷಿಯಲಿಸ್ಟ್ ಪಾರ್ಟಿ (ಪಿಇಎಸ್)ನ ಪ್ರತಿನಿಧಿಯಾಗಿ, 2004ರಲ್ಲಿ ಜುಲೈ 20ರಂದು ಯುರೋಪಿಯನ್ ಸಂಸತ್ತಿನ 14 ಉಪಾಧ್ಯಕ್ಷರ ಪೈಕಿ ಒಬ್ಬರಾಗಿ ನೇಮಕಗೊಂಡಿದ್ದರು. ನಾಗರಿಕ ಸ್ವಾತಂತ್ರ್ಯ ನ್ಯಾಯ ಮತ್ತು ಗೃಹ ಖಾತೆ ವ್ಯವಹಾರಗಳ ಸಮಿತಿಯ ಹೊಣೆಗಾರಿಕೆಯನ್ನೂ ನಿರ್ವಹಿಸಿದ್ದರು. 2005ರ ಮಾರ್ಚ್​ನಲ್ಲಿ ಯುರೋಪಿಯನ್ ಸಂಸತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಅವರು, ಪೋರ್ಚುಗಲ್​ನ ರಾಜ್ಯ ಮತ್ತು ಆಂತರಿಕ ಆಡಳಿತ ಸಚಿವರಾಗಿ ಕೆಲಸ ಮಾಡಿದ್ದರು. ಅಂದು ಜೋಸ್ ಸಾಕ್ರೆಟಸ್ ಸರ್ಕಾರ ಅಸ್ತಿತ್ವದಲ್ಲಿತ್ತು. ಪಕ್ಷದಲ್ಲಿ ಹಾಗೆಯೇ ರಾಜಕೀಯ ಜೀವನದಲ್ಲಿ ಹಂತ ಹಂತವಾಗಿ ಅಧಿಕಾರದ ಏಣಿ ಹಿಡಿದು ಮೇಲಕ್ಕೇರಿದ ಅವರು ಇಂದು ಆ ದೇಶದ ಪ್ರಧಾನಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಅಂಟೋನಿಯೋ ಕೋಸ್ಟಾ 1987ರಲ್ಲಿ ಫರ್ನಾಂಡಾ ಮರಿಯಾ ಗೋನ್​ಕ್ಲೇವ್ಸ್ ಟ್ಯಾಡು ಅವರನ್ನು ವಿವಾಹವಾದರು. ಫರ್ನಾಂಡಾ ಮರಿಯಾ ವೃತ್ತಿಯಲ್ಲಿ ಶಿಕ್ಷಕಿ. ದಂಪತಿಗೆ ಒಬ್ಬ ಮಗ, ಒಬ್ಬಳು ಮಗಳಿದ್ದಾರೆ. ಅಂಟೋನಿಯೋ ಅವರ ತಂದೆ ಒರ್ಲಾಂಡೋ ಡ ಕೋಸ್ಟಾ ಒಬ್ಬ ಲೇಖಕ, ಕವಿಯಾಗಿ ಪ್ರಸಿದ್ಧಿ ಪಡೆದವರು. ಪೋರ್ಚುಗೀಸ್ ಕಮ್ಯೂನಿಸ್ಟ್ ಪಕ್ಷದ ಜತೆ ಗುರುತಿಸಿಕೊಂಡಿದ್ದವರು. ತಾಯಿ ಮರಿಯಾ ಅಂಟೋನಿಯಾ ಪಲ್ಲಾ, ಪ್ರಸಿದ್ಧ ಲೇಖಕಿ. ಒರ್ಲಾಂಡೋ ಅವರು ಆಫ್ರಿಕಾದ ಲುಸೋಫೋನಿಯಾನ್ ಕಾಲನಿ- ಮೊಝಾಂಬಿಕ್​ನಲ್ಲಿ 1929ರಲ್ಲಿ ಜನಿಸಿದರು. ಆದರೆ, ಬಾಲ್ಯ ಮತ್ತು ಯೌವನ ಕಳೆದಿದ್ದು ಭಾರತದ ಗೋವಾದಲ್ಲಿ. ಗೋವಾದ ಮಡಗಾಂವ್​ನಲ್ಲಿ ಒರ್ಲಾಂಡೋ ಅವರ ರಕ್ತ ಸಂಬಂಧಿಗಳು ಈಗಲೂ ಇದ್ದಾರೆ. ಹದಿನೆಂಟನೇ ವಯಸ್ಸಿನಲ್ಲಿ ಒರ್ಲಾಂಡೋ ಗೋವಾದಿಂದ ಲಿಸ್ಬನ್​ಗೆ ವಲಸೆ ಹೋದರು. ಅಲ್ಲಿ ಕಮ್ಯೂನಿಸ್ಟ್ ಸಿದ್ಧಾಂತಗಳಿಂದ ಪ್ರೇರಿತರಾಗಿ ರಾಜಕೀಯದಲ್ಲೂ ತೊಡಗಿಸಿಕೊಂಡರು.

ಕೌಟುಂಬಿಕ ಹಿನ್ನೆಲೆಯಲ್ಲೂ ರಾಜಕಾರಣದ ಗಂಧಗಾಳಿ ಇದ್ದ ಕಾರಣ ಅಂಟೋನಿಯೋ ಕೂಡ ರಾಜಕಾರಣದತ್ತ ಆಕರ್ಷಿತರಾದರು. ಅಪ್ಪ ಒರ್ಲಾಂಡೋ ಕಮ್ಯೂನಿಸ್ಟ್ ಸಿದ್ಧಾಂತದ ಪ್ರತಿಪಾದಕರಾಗಿದ್ದರೂ ಅಂಟೋನಿಯೋ ಒಲವಿದ್ದುದು ಸಮಾಜವಾದದ ಕಡೆಗೆ. ಹೀಗಾಗಿ ಸೋಷಿಯಲಿಸ್ಟ್ ಪಾರ್ಟಿ ಸೇರಿ ಇದೀಗ ರಾಜಕಾರಣದ ಉತ್ತುಂಗ ತಲುಪಿದ್ದಾರೆ. ಸದ್ಯ ಅವರ ಎದುರು ಪೋರ್ಚುಗಲ್ ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರುಮಾಡಬೇಕಾದ ಬಹುದೊಡ್ಡ ಸವಾಲಿದೆ. ಅಕಸ್ಮಾತ್ ಎಡವಿದರೆ ಕಾಲೆಳೆಯುವುದಕ್ಕೆ ಮಿತ್ರಪಕ್ಷಗಳಾದ ಎಡಪಕ್ಷಗಳು ಸದಾ ಸನ್ನದ್ಧವಾಗಿವೆ. ಹೀಗಾಗಿ ಈ ಸವಾಲನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದು ಸದ್ಯದ ಪ್ರಶ್ನೆ.

Leave a Reply

Your email address will not be published. Required fields are marked *