ಪ್ರವಾಹದ ವಿರುದ್ಧ ಈಜು

ಆಕೆಗಿನ್ನೂ ಹದಿಹರೆಯ. ಮೂವರು ಸಹೋದರಿಯರ ಪೈಕಿ ಆಕೆ ಮಧ್ಯದವಳು. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಆಕೆ, ಜಿಮ್ನಾಸ್ಟಿಕ್ಸ್ ಕ್ಲಬ್ಗೆ ಹೋಗಿ ಅಭ್ಯಾಸ ನಡೆಸುತ್ತಿದ್ದಳು. ಈಜುವುದು ಕೂಡ ಆಕೆಯ ಪ್ರೀತಿಯ ಹವ್ಯಾಸಗಳಲ್ಲೊಂದು. ಈಜಿನಲ್ಲಿ ಉತ್ತಮ ಸಾಧನೆಯನ್ನೂ ಮಾಡಿರುವ ಆಕೆಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಸಿರಿಯನ್ ಒಲಿಂಪಿಕ್ ಕಮಿಟಿ ಉತ್ತೇಜನ ನೀಡಿತ್ತು. ಆದರೆ, ವಿಧಿಬರಹ ಬೇರೆಯೇ ಇತ್ತು. ಸಿರಿಯಾದಲ್ಲಿ ಶುರುವಾದ ಹಿಂಸಾಚಾರ ಎಲ್ಲ ಕನಸುಗಳನ್ನೂ ನುಚ್ಚುನೂರು ಮಾಡಿತು. ಆದರೂ, ಆಕೆ ಈಗ ರಿಯೋ ಒಲಿಂಪಿಕ್ ಈಜುಸ್ಪರ್ಧಿ. ಇಷ್ಟೇ ಆಗಿದ್ದರೆ ಈ ಯುವತಿ ಹೆಸರು ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸುವ ಪ್ರಮೇಯವಿರಲಿಲ್ಲ. ಹೊಸ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಸಮುದ್ರದಲ್ಲಿ ಈಜಿ ಬಂದು ನಿರಾಶ್ರಿತರ ಶಿಬಿರ ಸೇರಿ, ಇದೀಗ ಟೀಮ್ ರೆಫ್ಯೂಜಿಯ ರೈಸಿಂಗ್ ಸ್ಟಾರ್ ಎಂಬಂತೆ ಬಿಂಬಿಸಲ್ಪಟ್ಟಿರುವುದು ಈ ಯುವತಿಯ ವಿಶೇಷತೆ.

pencil_sketch_YUSRAಆಕೆಯ ಹೆಸರು ಯುಸ್ರಾ ಮಾರ್ದಿನಿ. ಹದಿನೆಂಟರ ಹರೆಯದ ಚೆಲುವೆ. ಅರಳು ಹುರಿದಂತೆ ಪಟಪಟನೆ ನಗುನಗುತ್ತ ಮಾತನಾಡುವ ಆಕೆಯ ಆ ನಗುವಿನ ಹಿಂದೆ ಬದುಕಿನ ನೋವು ಹೆಪ್ಪುಗಟ್ಟಿಕೊಂಡಿರುವುದು ತಕ್ಷಣಕ್ಕೆ ಗಮನಕ್ಕೆ ಬರುವುದಿಲ್ಲ. ಆಕೆ ತನ್ನ ಬದುಕಿನ ಕತೆಯನ್ನು ಮಾಧ್ಯಮದೆದುರು ಹೀಗೆ ತೆರೆದಿಟ್ಟಿದ್ದಾಳೆ: ‘ನಾನು ಹುಟ್ಟಿದ್ದು ಸಿರಿಯಾದ ರಾಜಧಾನಿ ಡಮಾಸ್ಕಸ್ನಲ್ಲಿ. ತಂದೆ ಈಜು ತರಬೇತುದಾರ. ನಮ್ಮ ಮನೆಯ ಮೇಲ್ಛಾವಣಿಯಲ್ಲಿ ಈಜುಕೊಳವಿತ್ತು. ಅಲ್ಲೇ ಅಪ್ಪ ನನಗೆ ಈಜು ಕಲಿಸಿದ್ದು. ನಮ್ಮ ದೇಶದಲ್ಲಿ ಕಳೆದ ನಾಲ್ಕೂವರೆ ವರ್ಷದಿಂದ ಘರ್ಷಣೆ-ಹಿಂಸಾಚಾರ ಅತಿಯಾಗಿದೆ. ಬಾಂಬ್ ದಾಳಿಗೆ ಮನೆ ನಾಶವಾಯಿತು. ಈಜುಕೊಳವೂ ಇಲ್ಲದಾಯಿತು. ಯಮಯಾತನೆ, ಹಿಂಸೆ ಹೆಚ್ಚಾಯಿತು. ನನಗೆ ಪರಿಚಿತರಾಗಿದ್ದ ಅನೇಕ ಕ್ರೀಡಾಪಟುಗಳು ದಾಳಿಗೆ ತುತ್ತಾಗಿ ಮರಣಿಸಿದರು. ಕೊನೆಗೆ ನನ್ನ ಎದುರು ಇದ್ದುದು ಎರಡೇ ಆಯ್ಕೆ – ಒಂದು ಯಾವುದೇ ನಿರೀಕ್ಷೆಗಳಿಲ್ಲದೇ ಜೀವಚ್ಛವವಾಗಿ ತಾಯ್ನಾಡಿನಲ್ಲೇ ಉಳಿಯುವುದು. ಇಲ್ಲವೇ ಅಲ್ಲಿಂದ ಬಚಾವ್ ಆಗಿ ಹೊಸ ಬದುಕು ಕಟ್ಟಿಕೊಳ್ಳುವುದು. ಎರಡು ಆಯ್ಕೆಗಳೂ ಅಪಾಯಕಾರಿಯಾದುದೇ ಆಗಿತ್ತು. ತಾಯ್ನಾಡಿನಲ್ಲೇ ಉಳಿದರೂ ಎಷ್ಟು ದಿನದ ಬದುಕು ಎಂಬ ಸ್ಪಷ್ಟತೆ ಇರಲಿಲ್ಲ. ಇನ್ನು ಬಚಾವ್ ಆಗಬೇಕು ಅಂದರೂ ಪ್ರಯಾಣದ ನಡುವೆ ಬದುಕಿರುತ್ತೇನೆ ಎಂಬ ಭರವಸೆಯೂ ಇರಲಿಲ್ಲ. ಕೊನೆಗೆ ಮನಸ್ಸನ್ನು ಗಟ್ಟಿಮಾಡಿಕೊಂಡು ಊರು ಬಿಡಲು ನಿರ್ಧರಿಸಿದೆ.

ಅಂದು 2015ರ ಆಗಸ್ಟ್ 12. ನಾನು, ಹಿರಿಯ ಸಹೋದರಿ ಸಾರಾ ಮತ್ತು ತಂದೆಯ ಇಬ್ಬರು ಸೋದರ ಸಂಬಂಧಿಗಳು ಹೊರಟೆವು. ಹೀಗೆ ವಲಸೆ ಹೊರಟವರ ಗುಂಪಿನಲ್ಲಿ 20 ಜನ ಇದ್ದೆವು. ನಾವೆಲ್ಲ ಪ್ರಯಾಣ ಆರಂಭಿಸಿದೆವು. ತಂದೆ, ತಾಯಿ ಮತ್ತು ತಂಗಿ ಕಣ್ಣೀರಿಡುತ್ತ ನಮ್ಮನ್ನು ಅಲ್ಲಿಂದ ಬೀಳ್ಕೊಟ್ಟರು. ಅವರು ಜಿಪಿಎಸ್ ಮೂಲಕ ನಮ್ಮ ಪ್ರಯಾಣವನ್ನು ಗಮನಿಸುತ್ತಿದ್ದರು. ಡಮಾಸ್ಕಸ್ನಿಂದ ಹೊರಟ ನಾವು ಬೈರಟ್ಗೆ ರಸ್ತೆ ಮೂಲಕ ಪ್ರಯಾಣಿಸಿದೆವು. ಅದರಲ್ಲೂ ದಕ್ಷಿಣ ಟರ್ಕಿಯ ಕಡಿದಾದ ಬೆಟ್ಟ ಗುಡ್ಡಗಳ ನಡುವಿನ ಪ್ರಯಾಣ ಅತ್ಯಂತ ಅಪಾಯಕಾರಿಯದ್ದಾಗಿತ್ತು. ನಾಲ್ಕು ರಾತ್ರಿಗಳನ್ನು ಆ ಅರಣ್ಯ ಪ್ರದೇಶದಲ್ಲಿ ಕಳೆದಿದ್ದೆವು. ಅಲ್ಲಿ ಆಹಾರ, ನೀರು ಏನೂ ಇಲ್ಲ. ಸಶಸ್ತ್ರಧಾರಿ ಕಳ್ಳಸಾಗಣೆದಾರರದ್ದೇ ಅಲ್ಲಿ ಪ್ರಾಬಲ್ಯ. ಅವರೇ ಮೆಡಿಟರೇರಿಯನ್ ಸಮುದ್ರದ ಮೂಲಕ ಗ್ರೀಸ್ಗೆ ತಲುಪಿಸುವವರು. ಅದು ಕೂಡಾ ಸಾಕಷ್ಟು ಹಣ ನೀಡಿದಲ್ಲಿ ಮಾತ್ರವೇ ಅವರು ಆ ಕೆಲಸ ಮಾಡುತ್ತಿದ್ದರು.

ಹೀಗೆ ಬೈರಟ್ನಿಂದ ಇಝ್ಮಿರ್ಗೆ ತೆರಳಿ ಅಲ್ಲಿಂದ ಲೆಸ್ಬೋಸ್ ಎಂಬ ದ್ವೀಪದ ಕಡೆ ಸಾಗುವಾಗ ನಾವು ರಬ್ಬರ್ ಬೋಟ್ ಬಳಸಿದ್ದೆವು. ಬೋಟ್ನಲ್ಲಾದರೆ ಆ ಅಂತರವನ್ನು ಅರ್ಧಗಂಟೆಯಲ್ಲಿ ಕ್ರಮಿಸಬಹುದು. ಆದರೆ ಅರ್ಧ ದಾರಿ ಸಾಗುವಷ್ಟರಲ್ಲಿ ಬೋಟ್ನ ಎಂಜಿನ್ ಕೆಟ್ಟುಹೋಯಿತು. ಆರೇಳು ಜನ ಕೂರುವ ಸಾಮರ್ಥ್ಯದ ಬೋಟ್ ಅದಾಗಿದ್ದರೂ 20 ಜನ ಇದ್ದೆವು. ಆರೇಳು ಜನ ಕೆಳಗಿಳಿದರಷ್ಟೇ ಬೋಟನ್ನು ಮುಂದೆ ತಳ್ಳಿಕೊಂಡು ಹೋಗಲು ಸಾಧ್ಯ. ಈಜು ಗೊತ್ತಿದ್ದದ್ದು ಬೆರಳೆಣಿಕೆ ಜನರಿಗಷ್ಟೇ. ಅವರ ಪೈಕಿ ನಾನು, ಸಹೋದರಿಯೂ ಇದ್ದೆವು. ಬೋಟ್ನಿಂದ ಕೆಳಗಿಳಿದು ಈಜುತ್ತ ಬೋಟ್ ತಳ್ಳುವವರಾರು? ಎಂಬ ಪ್ರಶ್ನೆ ಎದುರಾದಾಗ ನನ್ನ ಸಹೋದರಿ ಸಾರಾ ತಾನು ಇಳಿಯುತ್ತೇನೆ ಎಂದಳು. ಅಷ್ಟೇ ಅಲ್ಲ, ನೀನು ಬೋಟಲ್ಲೇ ಇರು ಎಂದು ನನಗೆ ಹೇಳಿದಳು. ಆದರೆ ಅವಳು ಆ ಕಡೆ ಇಳಿದ ಕೂಡಲೇ ನಾನು ಕೂಡ ಈ ಕಡೆಯಿಂದ ಇಳಿದೆ. ಆಗ ನಮ್ಮ ಬಳಿ ಉಟ್ಟ ಬಟ್ಟೆ ಬಿಟ್ಟರೆ ಈಜುವುದಕ್ಕೆ ಅಗತ್ಯವಾದ ಉಪಕರಣಗಳಾವುವೂ ಇರಲಿಲ್ಲ. ಸಮುದ್ರ ಯಾನ ಕೇಳಬೇಕೆ. ಮೈ ಹೆಪ್ಪುಗಟ್ಟಿಸುವ ಚಳಿ. ಉಪ್ಪು ನೀರು ಕಣ್ಣಿನೊಳಕ್ಕೆ ಹೋಗಿ ಉರಿಯಲಾರಂಭಿಸಿತು. ಅದು ಸಾವು-ಬದುಕಿನ ಹೋರಾಟವಾಗಿತ್ತು. ನಮ್ಮ ಜೊತೆ ಇನ್ನೊಬ್ಬ ಯುವತಿಯೂ ಇದ್ದಳು. ಸತತ ಮೂರು ಗಂಟೆ ಈಜಿದಾಗ ದಡ ಗೋಚರಿಸಲಾರಂಭಿಸಿತು. ಆದರೆ, ನನ್ನ ಕೈ ಕಾಲುಗಳು ಸೋತಿದ್ದವು. ಶರೀರದ ಶಕ್ತಿ ಉಡುಗಿಹೋಗಿತ್ತು. ಅದುವರೆಗಿನ ಬದುಕಿನ ಸುಖ, ದುಃಖಗಳ ಚಿತ್ರಣ ಕಣ್ಣಮುಂದೆ ಹಾದು ಹೋಯಿತು. ಅಪ್ಪ, ಅಮ್ಮ, ತಂಗಿ, ಹುಟ್ಟೂರು ಎಲ್ಲವೂ ನೆನಪಾಯಿತು. ಬದುಕಬೇಕು ಎಂಬ ಇಚ್ಛೆ ಬಲವಾಯಿತು. ಪುನಃ ಶಕ್ತಿಯನ್ನೆಲ್ಲ ಒಗ್ಗೂಡಿಸಿಕೊಂಡು ಈಜಲಾರಂಭಿಸಿದೆ. ಒಟ್ಟು ಮೂರೂವರೆ ಗಂಟೆ ಈಜಿ ನಾವು ಹಾಗೂ ಬೋಟ್ನಲ್ಲಿದ್ದವರು ಸುರಕ್ಷಿತವಾಗಿ ನೆಲ ಮುಟ್ಟಿದೆವು. ಮೈ ಎಲ್ಲ ನಡುಗುತ್ತಿತ್ತು. ಅಷ್ಟಕ್ಕೇ ನಮ್ಮ ಪ್ರಯಾಣ ಮುಗಿಯಿತು ಅಂದುಕೊಳ್ಳಬೇಡಿ. ಮುಂದೆ ಜರ್ಮನಿಯಲ್ಲಿ ನೆಲೆ ಕಂಡುಕೊಳ್ಳುವುದು ನಮ್ಮ ಗುರಿ ಆಗಿತ್ತು. ಅದಕ್ಕಾಗಿ ಹೆಚ್ಚು ಕಡಿಮೆ 1000 ಮೈಲಿ ದೂರ ಕ್ರಮಿಸಬೇಕಿತ್ತು. ಗ್ರೀಸ್ನಿಂದ ಹೊರಟ ನಾವು ಮಾಸಿಡೋನಿಯಾ, ಸೆರ್ಬಿಯಾ, ಹಂಗರಿ, ಆಸ್ಟ್ರಿಯಾಗಳನ್ನು ದಾಟಿ ಮ್ಯೂನಿಚ್ ತಲುಪುವ ಮುನ್ನ ಕೆಲವೆಡೆ ನಡೆದುಕೊಂಡು, ಇನ್ನು ಕೆಲವೆಡೆ ಬಸ್, ರೈಲುಗಳ ಮೂಲಕ ಪ್ರಯಾಣಿಸಿ ಮುನ್ನಡೆದೆವು. ಕೊನೆಗೆ ಬರ್ಲಿನ್ಗೆ ಹೊರಟೆವು. ಒಟ್ಟು 25 ದಿನಗಳ ಪ್ರಯಾಣ ಅದಾಗಿತ್ತು.

ಆ ದಿನಗಳನ್ನು ನೆನಪಿಸಿಕೊಳ್ಳಲೂ ಹೆದರಿಕೆಯಾಗುತ್ತದೆ. ಪರಸ್ಪರ ಅಪರಿಚಿತರಾಗಿ ಹೊರಟಿದ್ದ ನಿರಾಶ್ರಿತರು ನಾವು. ಕೊನೆಗೆ ನಾವೆಲ್ಲ ಒಂದು ಕುಟುಂಬದವರಂತಾಗಿ ಪರಸ್ಪರ ಕಾಳಜಿ ತೋರಲಾರಂಭಿಸಿದ್ದೆವು. ಜರ್ಮನಿ ತಲುಪಿದ ಬಳಿಕವಂತೂ ಪರಸ್ಪರರ ನಡುವೆ ಆ ಸ್ನೇಹ ಸಂಬಂಧ ಇನ್ನಷ್ಟು ಹೆಚ್ಚಾಯಿತು.

ಜರ್ಮನಿಯ ಮನೆಯೊಂದರಲ್ಲಿ ತಾತ್ಕಾಲಿಕವಾಗಿ ನಿರಾಶ್ರಿತರ ಶಿಬಿರ ಏರ್ಪಡಿಸಲಾಗಿತ್ತು. ಆ ಅಪರಿಚಿತ ನಗರದಲ್ಲಿ ನಾನು ಕೇಳಿದ ಮೊದಲ ಪ್ರಶ್ನೆ – ಇಲ್ಲಿ ಈಜುಕೊಳ ಎಲ್ಲಿದೆ? ಈಜಿಪ್ಟ್ನ ದುಭಾಷಿಯೊಬ್ಬರು ನಮ್ಮನ್ನು ಬರ್ಲಿನ್ನ ಹಳೆಯ ಸ್ವಿಮ್ಮಿಂಗ್ ಕ್ಲಬ್ಗೆ ಕರೆದೊಯ್ದರು. ನಮ್ಮಿಬ್ಬರ ಈಜುವ ಟೆಕ್ನಿಕ್ಗಳನ್ನು ಕಂಡ ಅವರು ನಮಗೆ ಪ್ರವೇಶ ಒದಗಿಸಿದರು. ಸ್ವೆನ್ ಸ್ಪ್ಯಾನ್ನರ್ಕ್ರೆಬ್ಸ್ ಎಂಬುವರು ಕೋಚ್ ಆಗಿ ಸಿಕ್ಕರು. ರಿಯೋ ಒಲಿಂಪಿಕ್ ಆರಂಭಕ್ಕೆ ಇನ್ನೇನು ಎರಡು ತಿಂಗಳಿದೆ ಎನ್ನುವಾಗ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯಿಂದ ಒಂದು ಇಮೇಲ್ ಸಂದೇಶ ಲಭಿಸಿತು. ನಿರಾಶ್ರಿತರ ಶಿಬಿರದ ಟೀಮ್ ಪರವಾಗಿ ಆಯ್ಕೆಯಾದ 47 ಕ್ರೀಡಾಪಟುಗಳ ಪೈಕಿ ನಾನೂ ಒಬ್ಬಳಾಗಿದ್ದೆ’.

ಈ ರೀತಿಯಾಗಿ ಬದುಕಿನ ಪಥವನ್ನು ತೆರೆದಿಡುವ ಯುಸ್ರಾ, ಕಳೆದ ಏಪ್ರಿಲ್ನಲ್ಲಿ 400 ಮೀ. ಮಿಡ್ಲೇಯನ್ನು 5 ನಿಮಿಷ 21.3 ಸೆಕೆಂಡ್ನಲ್ಲಿ ಪೂರ್ತಿಗೊಳಿಸಿದ್ದಾರೆ. ಇದು ಈವರೆಗಿನ ಸಿರಿಯನ್ ಮಹಿಳೆಯರ ದಾಖಲೆಯಾಗಿದೆ. ಸದ್ಯ ರಿಯೋ ಒಲಿಂಪಿಕ್ಸ್ನಲ್ಲಿ 100 ಮೀ. ಫ್ರೀಸ್ಟೈಲ್, 100 ಮೀ. ಬಟರ್ ಫ್ಲೈ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಸಂಕಷ್ಟದ ಹಾದಿಯಲ್ಲಿ ಈಜುತ್ತ ಬಂದ ಯುಸ್ರಾ ರಿಯೋದಲ್ಲಿಯೂ ಮಿಂಚುತ್ತಾರಾ? ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

Leave a Reply

Your email address will not be published. Required fields are marked *