ಪ್ರವೇಶ ಪರೀಕ್ಷೆ!

ತೃಪ್ತಿ ದೇಸಾಯಿ
ತೃಪ್ತಿ ದೇಸಾಯಿ

ಲಿಂಗ ತಾರತಮ್ಯ ಕೊನೆಯಾಗಬೇಕು ಎಂಬ ಕೂಗು ಆಗೀಗ ಕೇಳುತ್ತಿರುತ್ತಿದೆ. ಮಹಿಳಾ ದಾಸ್ಯ, ಶೋಷಣೆ ನಿಲ್ಲಬೇಕು ಎಂಬ ಆಗ್ರಹ ಕೂಡ ಇಂದು ನಿನ್ನೆಯದಲ್ಲ. ಆದರೆ, ಈ ವಿಷಯದ ಮೂಲಕ ಇತ್ತೀಚೆಗೆ ಸುದ್ದಿಯಲ್ಲಿರುವ ಸಂಘಟನೆ ಪುಣೆ ಮೂಲದ ಭೂಮಾತಾ ಬ್ರಿಗೇಡ್. ಸ್ತ್ರೀಯರಿಗೂ ಪುರುಷರಷ್ಟೇ ಸಮಾನ ಧಾರ್ಮಿಕ ಹಕ್ಕುಗಳಿದ್ದು, ಎಲ್ಲ ದೇವಸ್ಥಾನಗಳಿಗೂ ಅವರಿಗೂ ಪ್ರವೇಶಾವಕಾಶ ಕಲ್ಪಿಸಬೇಕು ಎಂಬ ಚಳವಳಿಯನ್ನು ಇದೇ ಬ್ರಿಗೇಡ್‍ನ ಭಾಗವಾದ ಭೂಮಾತಾ ರಣ್‍ರಾಗಣಿ ಬ್ರಿಗೇಡ್ ಆರಂಭಿಸಿತು. ಅವರ ಮುಖ್ಯ ಗುರಿ ಇದ್ದುದು ಶನಿಶಿಂಗ್ಣಾಪುರ ಕ್ಷೇತ್ರ. ಅಲ್ಲಿ ಸ್ತ್ರೀಯರಿಗೆ ಪ್ರವೇಶ ಕಲ್ಪಿಸಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಈ ಮೂಲಕ ಸುದ್ದಿಯ ಕೇಂದ್ರಬಿಂದುವಾದವರು ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ.
ತೃಪ್ತಿ ದೇಸಾಯಿ ಅಪಾರ ಧಾರ್ಮಿಕ ಶ್ರದ್ಧೆ, ನಂಬಿಕೆ ಇರುವಂಥವರು ಎಂಬ ಮಾತಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಮಹಿಳೆಯರ ವಿಷಯದಲ್ಲಾಗುತ್ತಿರುವ ಅನ್ಯಾಯದ ಬಗ್ಗೆ ಅವರಿಗೆ ನೋವು, ಅಸಹನೆಯೂ ಇದೆ ಎಂಬುದೂ ಅಷ್ಟೇ ಸ್ಪಷ್ಟ. ಈ ಅಸಮಾಧಾನಕ್ಕೆ ಪ್ರತಿಭಟನೆಯ ರೂಪು ಸಿಕ್ಕಿದ್ದು ಡಿಸೆಂಬರ್ ತಿಂಗಳಲ್ಲಿ.
ಅದು ನವೆಂಬರ್ ತಿಂಗಳ ಮಧ್ಯಭಾಗ. `ಮಹಾರಾಷ್ಟ್ರದ ಶನಿ ಶಿಂಗ್ಣಾಪುರ ದೇವಸ್ಥಾನದಲ್ಲಿ ಶುದ್ಧಿ ಕಾರ್ಯ’ ಎಂಬ ಸುದ್ದಿ ದೇಶದ ಗಮನಸೆಳೆಯಿತು. ಮಹಿಳೆಯೊಬ್ಬರು ದೇವಸ್ಥಾನದೊಳಗೆ ದೇವರ ಮೂರ್ತಿಗೆ ತೈಲಾಭಿಷೇಕ ಮಾಡಲು ಪ್ರಯತ್ನಿಸಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಅಲ್ಲಿನ ಅರ್ಚಕರು ಆ ಶುದ್ಧಿಕಾರ್ಯ ಕೈಗೊಂಡಿದ್ದರು ಎಂಬುದು ಆ ಸುದ್ದಿಯ ಸಾರಾಂಶವಾಗಿತ್ತು. ಭೂಮಾತಾ ರಣ್‍ರಾಗಣಿ ಬ್ರಿಗೇಡ್‍ನ ಪ್ರತಿಭಟನೆಗೆ ಈ ಘಟನೆಯೇ ಪ್ರೇರಣೆ.
ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. `ಶನಿ ಶಿಂಗ್ಣಾಪುರದ ಆ ಘಟನೆ ನನ್ನ ಮನಸ್ಸಿನಲ್ಲಿ ಅಗಾಧ ನೋವನ್ನುಂಟುಮಾಡಿತು. ಮಹಿಳೆಯರ ಸ್ಥಾನಮಾನದ ಬಗ್ಗೆ ಚಿಂತಿಸುವಂತೆ ಮಾಡಿತು. ಸಂವಿಧಾನದ ಪ್ರಕಾರ ದೇಶದ ಎಲ್ಲ ಪ್ರಜೆಗಳೂ ಸಮಾನರು. ಆದರೆ, ದೇವಸ್ಥಾನ ಹಾಗೂ ಕೆಲವು ಧಾರ್ಮಿಕ ವಿಷಯಗಳು ಬಂದಾಗ, ಸಂಪ್ರದಾಯಗಳ ಹೆಸರಿನಲ್ಲಿ ಸಮಾನತೆ ನಿರಾಕರಿಸಲ್ಪಡುತ್ತವೆ. ಇದಕ್ಕೇನಾದರೂ ಪರಿಹಾರವನ್ನು ನಾವೇ ಕಂಡುಕೊಳ್ಳಬೇಕಾಗಿದೆ’ ಎಂದು ಮುಂದಿನ ಹೋರಾಟಕ್ಕೆ ತೃಪ್ತಿ ದೇಸಾಯಿ ಪೀಠಿಕೆ ಹಾಕಿದರು.
ಬ್ರಿಗೇಡ್ ಸದಸ್ಯರ ಚಿಂತನ ಮಂಥನದ ಪರಿಣಾಮವೇ ಡಿಸೆಂಬರ್ 4ರ ಶನಿಶಿಂಗ್ಣಾಪುರ ಮುತ್ತಿಗೆ, ಪೂಜಾಕಾರ್ಯ. ಮಹಿಳೆಯರ ತಂಡಕ್ಕೆ ತೃಪ್ತಿಯದ್ದೆ ನೇತೃತ್ವ. ಮೊದಲೇ ಘೋಷಿಸಿದ ಪರಿಣಾಮ ಇವರ ತಂಡವನ್ನು ಹಳ್ಳಿ ಜನರು ತಡೆದರಲ್ಲದೇ, ಪೆÇಲೀಸರೂ ಶನಿಶಿಂಗ್ಣಾಪುರ ದೇವಸ್ಥಾನದ ಕಡೆ ಹೋಗದಂತೆ ಹಿಮ್ಮೆಟ್ಟಿಸಿದರು. ಆಗ ನಡೆಸಿದ ಪ್ರತಿಭಟನೆಯ ಮೂಲಕ ದೇಶದ ಗಮನಸೆಳೆದವರು ತೃಪ್ತಿ ದೇಸಾಯಿ. ಅವರ ಈ ಹೋರಾಟಕ್ಕೆ ಕಾನೂನು ಬೆಂಬಲವೂ ಸಿಕ್ಕಿದ್ದು, ಬಾಂಬೆ ಹೈಕೋರ್ಟ್ ಆದೇಶದಂತೆ ಏಪ್ರಿಲ್ ಮೊದಲವಾರ ತೃಪ್ತಿ ಮತ್ತು ಸಂಗಡಿಗರು ನೂರಾರು ಬೆಂಬಲಿಗರೊಂದಿಗೆ ಶನಿ ಶಿಂಗ್ಣಾಪುರಕ್ಕೆ ತೆರಳಿ ಶನಿದೇವರಿಗೆ ತೈಲಾಭಿಷೇಕವನ್ನು ಮಾಡಿ ವಿಜಯೋತ್ಸವ ಆಚರಿಸಿದರು.
ಇವರ ಹೋರಾಟದ ಹಾದಿಗೆ ಎಂಟು ವರ್ಷಗಳ ಇತಿಹಾಸ. 2008ರಲ್ಲಿ ಮೊದಲ ಬಾರಿ ಮಹಾರಾಷ್ಟ್ರದ ರಾಜ್ಯಮಟ್ಟದ ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿಯಾಗಿದ್ದರು. ಟಿವಿ ಮಾಧ್ಯಮಗಳಲ್ಲಿ ಚರ್ಚೆಗೆ ವಿಷಯವನ್ನೊದಗಿಸಿದ್ದರು. ರಾಜ್ಯದ ಪ್ರಭಾವಿ ರಾಜಕೀಯ ಕುಟುಂಬವೆನಿಸಿಕೊಂಡ ಪವಾರ್ ಕುಟುಂಬಸ್ಥರು ನಡೆಸುತ್ತಿದ್ದ ಅಜಿತ್ ಕೋಆಪರೇಟಿವ್ ಬ್ಯಾಂಕ್‍ನಲ್ಲಾದ ಆರ್ಥಿಕ ಅವ್ಯವಹಾರಗಳ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಅಂದಿನ ಸಹಕಾರ ಸಚಿವ ಪರಂಗರಾವ್ ಕದಮ್ ಅವರಿಗೆ ಘೇರಾವ್ ಹಾಕಿದ ಸ್ತ್ರೀಯರ ಗುಂಪಿನ ನಾಯಕತ್ವ ವಹಿಸಿದ್ದು ಇದೇ ತೃಪ್ತಿ. ಆಗಿನ್ನೂ ಆಕೆಗೆ 22-23 ವರ್ಷ ವಯಸ್ಸು. ಆ ಪ್ರತಿಭಟನೆ ಎಂಥಾ ಸಂಚಲನ ಮೂಡಿಸಿತ್ತು ಎಂದರೆ, ಅದರಿಂದ ಸಚಿವರೂ ಪ್ರಭಾವಿತರಾಗಿದ್ದರು. ಪರಿಣಾಮ 2012ರ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ತೃಪ್ತಿಗೆ ಕಾಂಗ್ರೆಸ್ ಟಿಕೆಟ್ ಒಲಿದುಬಂತು. ಬಾಲಾಜಿ ನಗರ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಅವರು ಸೋಲನುಭವಿಸಿದರು.
ಈ ನಡುವೆ, ಸಾಮಾಜಿಕ ಚಟುವಟಿಕೆಯ ರುಚಿ ಹತ್ತಿಸಿಕೊಂಡ ತೃಪ್ತಿ 2010ರಲ್ಲಿ ಭೂಮಾತಾ ಬ್ರಿಗೇಡ್ ಸ್ಥಾಪಿಸಿದರು. ಈ ಸಂಘಟನೆ ಸ್ಥಾಪನೆಯಾದಂದಿನಿಂದಲೂ ಒಂದಿಲ್ಲೊಂದು ರೀತಿಯಲ್ಲಿ ರಾಜ್ಯದಲ್ಲಿ ಸುದ್ದಿಯಾಗುತ್ತಲೇ ಇದೆ. ಪ್ರಚಾರಕ್ಕೂ ತಂತ್ರಗಾರಿಕೆ ನಡೆಸುವ ತೃಪ್ತಿ, ತಮ್ಮ ನಡೆ, ನುಡಿ ಹಾಗೂ ಉಡುಪುಗಳ ಬಗ್ಗೆ ಬಹಳ ಕಾಳಜಿವಹಿಸುತ್ತಾರೆ. ಅನೌಪಚಾರಿಕವಾಗಿ ಮಾತನಾಡುತ್ತಿರುವಾಗ ಮಾಧ್ಯಮ ಛಾಯಾಗ್ರಾಹಕರು ಫೋಟೊ ತೆಗೆಯಲು ಮುಂದಾದರೆ, ಸ್ವಲ್ಪ ತಡೀರಿ ಎಂದು ಓವರ್ ಕೋಟ್ ಧರಿಸಿ ನಂತರವಷ್ಟೇ ಫೋಟೋ, ವಿಡಿಯೋ ಚಿತ್ರೀಕರಣಕ್ಕೆ ಅನುಮತಿ ನೀಡುತ್ತಾರೆ ಎಂಬುದು ಅವರ ಆಪ್ತವಲಯದ ಪಿಸುನುಡಿ.
ಅಣ್ಣಾ ಹಜಾರೆಯವರು 2010ರಲ್ಲಿ ಭಷ್ಟಾಚಾರ ವಿರೋಧಿ ಪ್ರತಿಭಟನೆ ಆರಂಭಿಸಿದಾಗ, ಭೂಮಾತಾ ಬ್ರಿಗೇಡ್ ಕಾರ್ಯಕರ್ತೆಯರೂ ಭಾಗಿಯಾಗಿದ್ದರು. ಬಾಬಾ ರಾಮದೇವ್ ಅವರು ಲೋಕಪಾಲಕ್ಕೆ ಸಂಬಂಧಿಸಿ ಹೋರಾಟ ನಡೆಸಿದಾಗ ಅದರಲ್ಲೂ ಇವರು ಭಾಗಿಯಾಗಿದ್ದರು. ಈ ಎರಡು ಹೋರಾಟಗಳು,ಸಮಾಜದಿಂದ ಸಿಕ್ಕ ಪ್ರೋತ್ಸಾಹ ಭೂಮಾತಾ ಬ್ರಿಗೇಡ್‍ಗೆ ಪ್ರೇರಣೆಯಾಯಿತು ಎನ್ನುತ್ತಾರೆ ತೃಪ್ತಿ. `ಪತ್ನಿಯ ಶಿರಚ್ಛೇದ ಮಾಡಿದ ಆರೋಪಿ ರಾಮಚಂದ್ರ ಚವ್ಹಾಣ್ ಎಂಬಾತನನ್ನು ಕಳೆದ ಅಕ್ಟೋಬರ್‍ನಲ್ಲಿ ಪುಣೆ ಕೋರ್ಟ್‍ಗೆ ಪೊಲೀಸರು ಹಾಜರುಪಡಿಸಿದ ವೇಳೆ, ನಾವು ಒಂದಿಷ್ಟು ಮಹಿಳೆಯರು ಮುತ್ತಿಗೆ ಹಾಕಿ ಚವ್ಹಾಣ್ ಕತ್ತಿಗೆ ಚಪ್ಪಲಿ ಹಾರ ಹಾಕಿ, ಆತನ ಕೃತ್ಯಕ್ಕೆ ಪ್ರತಿಭಟನೆ ವ್ಯಕ್ತಪಡಿಸಿದ್ದೆವು. ನಮ್ಮದು ತೀವ್ರಗಾಮಿ ಪ್ರತಿಭಟನೆಯಾದ ಕಾರಣ ಸಾಕಷ್ಟು ಕೇಸ್‍ಗಳು ನಮ್ಮ ಮೇಲೆ ದಾಖಲಾಗಿವೆ. ಹೀಗಾಗಿ ಪ್ರತಿಯೊಂದು ಪ್ರತಿಭಟನೆ ನಡೆಸುವಾಗಲೂ ವಕೀಲರನ್ನು ಜೊತೆಗೇ ಕರೆದೊಯ್ಯುತ್ತೇವೆ. ಜಾಮೀನು ಪಡೆಯುವುದಕ್ಕೆ ಇದು ಅನಿವಾರ್ಯ. ಪ್ರಸ್ತುತ ನಮ್ಮ ಸಂಘಟನೆಯಲ್ಲಿ ರಾಜ್ಯಾದ್ಯಂತ ಗೃಹಿಣಿಯರಿಂದ ಹಿಡಿದು ವಿದ್ಯಾರ್ಥಿನಿಯರ ತನಕ 4,000 ಸದಸ್ಯರಿದ್ದಾರೆ’ ಎಂದು ಹೋರಾಟದ ಹಾದಿಯನ್ನು ವಿವರಿಸುತ್ತಾರೆ ತೃಪ್ತಿ ದೇಸಾಯಿ.
ಮೂವತ್ತೊಂದು ವರ್ಷದ ತೃಪ್ತಿ ಅವರಿಗೆ ಆರು ವರ್ಷದ ಯೋಗಿರಾಜ್ ಎಂಬ ಪುತ್ರನಿದ್ದಾನೆ. ಪತಿ ಪ್ರಶಾಂತ್ ದೇಸಾಯಿ. ಏರ್‍ಟೆಲ್ ಫ್ರಾಂಚೈಸಿ ನಡೆಸುತ್ತಿರುವ ಪ್ರಶಾಂತ್, ಭೂವ್ಯವಹಾರಗಳನ್ನೂ ಮಾಡುತ್ತಿದ್ದಾರೆ. ತೃಪ್ತಿ ದೇಸಾಯಿ ಕೊಲ್ಹಾಪುರ ಮೂಲದವರು. 2005ರಲ್ಲಿ ಶಿಕ್ಷಣಕ್ಕಾಗಿ ಪುಣೆಗೆ ಬಂದವರು ಅಲ್ಲೇ ನೆಲೆ ಕಂಡುಕೊಂಡರು. ಗೃಹ ವಿಜ್ಞಾನ ಪದವೀಧರೆಯಾಗಿರುವ ಅವರು ಸದ್ಯ ಮಹಿಳಾ ಶೋಷಣೆ, ಹಲ್ಲೆ ಮತ್ತು ಭ್ರಷ್ಟಾಚಾರದ ವಿರುದ್ಧ, ಲಿಂಗ ಸಮಾನತೆ ಪರವಾಗಿ ಹೋರಾಟ ನಡೆಸುತ್ತಿದ್ದಾರೆ. ಪತಿ ಪ್ರಶಾಂತ್ ಹೇಳುವ ಪ್ರಕಾರ, `ಅಧ್ಯಾತ್ಮದ ಕಡೆಗೆ ತೃಪ್ತಿಗೆ ಅತೀವ ಒಲವಿದೆ. ಗಗನ್‍ಗಿರಿ ಮಹಾರಾಜರ ಅನುಯಾಯಿ ಕೂಡ ಹೌದು. ಹೀಗಾಗಿ ಧಾರ್ಮಿಕ ಆಚರಣೆಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾಳೆ. ಶನಿ ಶಿಂಗ್ಣಾಪುರದಲ್ಲಿ ನಡೆದ ಘಟನೆ ಆಕೆಯ ಮನಸ್ಸಿಗೆ ಘಾಸಿ ಉಂಟುಮಾಡಿತ್ತು. ಹೀಗಾಗಿ ಅದರ ವಿರುದ್ಧ ಹೋರಾಟ ನಡೆಸಿದರು’.
ಪ್ರಸ್ತುತ ತೀರ್ಪಿನ ಹಿನ್ನೆಲೆಯಲ್ಲಿ, ಎಚ್ಚೆತ್ತುಕೊಂಡ ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನದ ಆಡಳಿತ ಮಂಡಳಿಯೂ ಮಹಿಳೆಯರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದೆ. ಆದಾಗ್ಯೂ, ಗರ್ಭಗೃಹ ಪ್ರವೇಶ(ಅರ್ಚಕರ ಹೊರತಾಗಿ ಯಾರಿಗೂ ಪ್ರವೇಶವಿಲ್ಲದ ಸ್ಥಳ)ಕ್ಕೆ ಹೋರಾಟ ಮುಂದುವರಿಸಿರುವ ತೃಪ್ತಿ ಅವರ ಮೇಲೆ ಹಲ್ಲೆಯೂ ನಡೆದಿದೆ. ಈ ನಡುವೆ, ಶಬರಿಮಲೆ ಪ್ರವೇಶವೂ ಪಟ್ಟಿಯಲ್ಲಿದೆ ಎಂದು ಎಚ್ಚರಿಸಿದ್ದಾರೆ. ಈ ಸೀಮಿತ ಉದ್ದೇಶದ ಹೋರಾಟಕ್ಕೆ ಪ್ರತಿರೋಧವೂ ವ್ಯಕ್ತವಾಗಿದೆ. ಹೀಗಾಗಿ ಹೋರಾಟದ ಕಾವನ್ನು ಹೇಗೆ ಕಾಯ್ದುಕೊಳ್ಳುತ್ತಾರೆ ಎಂಬ ಕುತೂಹಲವೂ ಇದೆ.

Leave a Reply

Your email address will not be published. Required fields are marked *