ರೆಬಲ್ ಸಿಎಂ

ಕಲಿಖೊ ಪುಲ್
ಕಲಿಖೊ ಪುಲ್

ಶಾನ್ಯದ ತುತ್ತತುದಿಯಲ್ಲಿರುವ ಅರುಣಾಚಲ ಪ್ರದೇಶ ಭಾರತದ ಮಟ್ಟಿಗೆ ಪ್ರಮುಖ ಆಯಕಟ್ಟಿನ ರಾಜ್ಯಗಳಲ್ಲೊಂದು. ದಶಕಗಳಿಂದ ಕಾಂಗ್ರೆಸ್ ಆಳ್ವಿಕೆ ಕಂಡ ರಾಜ್ಯ. ಅಷ್ಟೇ ಅಲ್ಲ, ಕಾಂಗ್ರೆಸ್‍ನೊಳಗಿನ ಭಿನ್ನಮತದಿಂದಾಗಿ ಕಾಲಕಾಲಕ್ಕೆ ಮುಖ್ಯಮಂತ್ರಿಗಳು ಬದಲಾಗಿದ್ದಕ್ಕೂ ಆ ರಾಜ್ಯ ಸಾಕ್ಷಿಯಾಗಿದೆ. ಇದೀಗ ನಬಂ ಟುಕಿ ಸರದಿ. ಅವರ ವಿರುದ್ಧ ಬಂಡಾಯ ಎದ್ದ ಅವರ ಮಾಜಿ ಸಂಪುಟ ಸಹೋದ್ಯೋಗಿ ಕಲಿಖೊ ಪುಲ್ ಈಗ ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ.
ಕಳೆದ ಆರೇಳು ತಿಂಗಳಿನಿಂದ ಅಲ್ಲಿ ರಾಜಕೀಯ ಕ್ಷೋಭೆ ಮುಗಿಲುಮುಟ್ಟಿತ್ತು. ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ಭಿನ್ನಮತ ಭುಗಿಲೆದ್ದು, ಮುಖ್ಯಮಂತ್ರಿ ನಬಂ ಟುಕಿ ವಿರುದ್ಧ ಅವರ ಆಪ್ತ ಕಲಿಖೊ ಪುಲ್ ಬಂಡಾಯದ ಬಾವುಟ ಹಾರಿಸಿದ್ದರು. ನಂತರದ ನಾಟಕೀಯ ಬೆಳವಣಿಗೆಯಲ್ಲಿ ರೆಬಲ್ ನಾಯಕ `ಪುಲ್’ ಮುಖ್ಯಮಂತ್ರಿ ಪಟ್ಟಕ್ಕೇರಿದ್ದು, ಶುಕ್ರವಾರ ರಾತ್ರಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ(2014 ಏಪ್ರಿಲ್)ಯಲ್ಲಿ ನಬಂ ಟುಕಿ ನಾಯಕತ್ವದಲ್ಲಿ 60 ವಿಧಾನಸಭಾ ಸ್ಥಾನಗಳ ಪೈಕಿ 47 ಕಾಂಗ್ರೆಸ್ ಪಾಲಾಗಿತ್ತು. ಮತ್ತೆ ಟುಕಿ ಮುಖ್ಯಮಂತ್ರಿಯಾದರು. ಅವರ ಸಮಕಾಲೀನ ನಾಯಕ ಕಲಿಖೊ ಪುಲ್ ಕೂಡ ಸಚಿವ ಸಂಪುಟ ಸೇರಿದರು. ಎಂಟೊಂಭತ್ತು ತಿಂಗಳ ಕಾಲ ಎಲ್ಲವೂ ಸರಿಯಾಗೇ ಇತ್ತು. ಮುಖ್ಯಮಂತ್ರಿ ಕುರ್ಚಿಗೆ ಪುಲ್ ಕಣ್ಣಿಟ್ಟು ಒಳಸಂಚು ರೂಪಿಸುತ್ತಿದ್ದಾರೆ ಎಂಬ ಸುದ್ದಿ ಟುಕಿ ಕಿವಿಗೆ ಬಿತ್ತು. 2014ರ ನವೆಂಬರ್‍ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪುಲ್, ಸರ್ಕಾರದ ಹಣಕಾಸು ಅಶಿಸ್ತಿನ ವಿಚಾರವನ್ನೆತ್ತಿದ್ದರು. ಪರಿಣಾಮ ಡಿಸೆಂಬರ್‍ನಲ್ಲಿ ಅವರನ್ನು ಸಂಪುಟದಿಂದ ಕೈಬಿಡಲಾಯಿತು. ಈ ಕ್ರಮದಿಂದ ರೊಚ್ಚಿಗೆದ್ದ ಪುಲ್, ಸಚಿವರನ್ನು ಒಗ್ಗೂಡಿಸುವ ಪ್ರಯತ್ನ ಆರಂಭಿಸಿದರು. ನಾಲ್ಕಕ್ಕೂ ಹೆಚ್ಚು ಸಚಿವರು ಪದೇಪದೆ ಪುಲ್ ಅವರನ್ನು ಭೇಟಿ ಮಾಡುತ್ತಿರುವುದು ಟುಕಿ ಗಮನಕ್ಕೆ ಬಂತು. ಹೀಗಾಗಿ ಅವರೂ ಸಂಪುಟದಿಂದ ಔಟ್. ಈ ನಡುವೆ ಭಿನ್ನಮತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 2015ರ ಏಪ್ರಿಲ್ 2ರಂದು ಆರು ವರ್ಷಗಳ ಕಾಲ ಪಕ್ಷದಿಂದ ಪುಲ್‍ರನ್ನು ಉಚ್ಚಾಟಿಸಲಾಯಿತು. ಬೂದಿ ಮುಚ್ಚಿದ ಕೆಂಡದಂತಿದ್ದ ಭಿನ್ನಮತ ಸ್ಫೋಟಿಸಿತು. ಪುಲ್ ಬಹಿರಂಗವಾಗಿಯೇ ಸರ್ಕಾರದ ವಿರುದ್ಧ ಸಮರ ಸಾರಿದರು. ಆರು ಸಾವಿರ ಕೋಟಿ ರೂಪಾಯಿ ಮೊತ್ತದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಗೊಳಿಸಿದರು. ಸಾರ್ವಜನಿಕವಾಗಿ ಇದು ಅಷ್ಟೊಂದು ಸಂಚಲನ ಮೂಡಿಸಲಿಲ್ಲ. ಆದರೆ, ಯಾವಾಗ ಸಾಮಾನ್ಯ ಪಿಂಚಣಿ ನಿಧಿ(ಜಿಪಿಎಫ್) ಹಾಗೂ ಹೊಸ ಪಿಂಚಣಿ ನಿಧಿ(ಎನ್‍ಪಿಎಫ್) ಮತ್ತು ನಿವೃತ್ತಿ ಸೌಲಭ್ಯಗಳಲ್ಲಿ ಅವ್ಯವಹಾರ ನಡೆದಿದೆ. 864 ಕೋಟಿ ರೂಪಾಯಿಯಷ್ಟಿದ್ದ ಜಿಪಿಎಫ್, 87 ಕೋಟಿ ರೂಪಾಯಿಯಷ್ಟಿದ್ದ ಎನ್‍ಪಿಎಫ್ ಖಾತೆಗಳೀಗ ಶೂನ್ಯಕ್ಕೆ ತಲುಪಿವೆ ಎಂದು ಬಾಂಬ್ ಸಿಡಿಸಿದರೋ ಆಗ ಟುಕಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿತು. ಈ ನಡುವೆ, ಉಚ್ಚಾಟನೆಗೆ ತಡೆ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದ ಪುಲ್‍ಗೆ ಅಲ್ಲಿ ಜಯ ಸಿಕ್ಕಿತು.
ಇಷ್ಟೆಲ್ಲ ಆಗುವಾಗ ಅತ್ತ ಬಿಜೆಪಿಯಲ್ಲೂ ಗಮನಾರ್ಹ ಬೆಳವಣಿಗೆ ನಡೆಯತೊಡಗಿತ್ತು. ಕಾಂಗ್ರೆಸ್‍ನ ಒಳಜಗಳ ಗಮನಿಸಿದ 11 ಬಿಜೆಪಿ ಶಾಸಕರು ಪ್ರತಿಪಕ್ಷ ಸ್ಥಾನದ `ಕರ್ತವ್ಯ’ ನಿರ್ವಹಿಸಲು ಮುಂದಾದರು. ರಾಜಭವನಕ್ಕೆ ತೆರಳಿ ದಾಖಲೆಗಳನ್ನು ಸಲ್ಲಿಸಿದರು. ಆದರೆ, ಅಂದು ರಾಜ್ಯಪಾಲರಾಗಿದ್ದ ಲೆ.ಜ.ನಿರ್ಭಯ್ ಶರ್ಮಾ ಯುಪಿಎ-2ರ ಅವಧಿಯಲ್ಲಿ ನೇಮಕಗೊಂಡವರಾಗಿದ್ದು, ಸರ್ಕಾರದ ಬಗ್ಗೆ ಮೃದುಧೋರಣೆ ತಾಳಿದ ಸಂಶಯ ವ್ಯಕ್ತವಾಯಿತು. ಪರಿಣಾಮ, ಅವರ ಸ್ಥಾನಕ್ಕೆ ಅಸ್ಸಾಂನ ಮಾಜಿ ಮುಖ್ಯಕಾರ್ಯದರ್ಶಿ ಜ್ಯೋತಿ ಪ್ರಸಾದ್ ರಾಜಖೋವಾ ಅವರನ್ನು 2015ರ ಜೂನ್ 1ರಂದು ನೇಮಿಸಲಾಯಿತು.
ನಂತರದ ಬೆಳವಣಿಗೆಯಲ್ಲಿ ರಾಜ್ಯಪಾಲ ರಾಜಖೋವಾ, ರಾಜ್ಯ ಸರ್ಕಾರಕ್ಕೆ 18 ಪತ್ರ ರವಾನಿಸಿ ಸ್ಪಷ್ಟೀಕರಣ ಕೇಳಿದರು. ಅದರಲ್ಲೂ ಮುಖ್ಯವಾಗಿ, `ಹೊಲೊಂಗಿ ಗ್ರೀನ್‍ಫೀಲ್ಡ್ ಏರ್‍ಪೆÇೀರ್ಟ್ ಪ್ರಾಜೆಕ್ಟ್’ನಲ್ಲಿ ಒಟ್ಟು ಯೋಜನಾ ವೆಚ್ಚದ 1150 ಕೋಟಿ ರೂಪಾಯಿ ಪೈಕಿ 500 ಕೋಟಿ ರೂಪಾಯಿ ಭೂ ಪರಿಹಾರಕ್ಕೆ ಮೀಸಲಿಟ್ಟದ್ದನ್ನು ಪ್ರಶ್ನಿಸಿದ್ದರು. ಈ ಪರಿಹಾರದ ಬಹುತೇಕ ಹಣ ಟುಕಿ ಮತ್ತು ಅವರ ಕುಟುಂಬದ ಸದಸ್ಯರ ಪಾಲಾದ ಆರೋಪವಿತ್ತು. ಈ ಪತ್ರದಿಂದಾಗಿ ಮುಖ್ಯಮಂತ್ರಿ ಕಚೇರಿ ಹಾಗೂ ರಾಜ್ಯಪಾಲರ ಕಚೇರಿ ನಡುವಿನ ಸಂಪರ್ಕ ಬಹುತೇಕ ಕಡಿದು ಹೋಯಿತು. ಎರಡು ಪತ್ರಗಳಿಗಷ್ಟೇ ಮುಖ್ಯಮಂತ್ರಿ ಕಚೇರಿ ಉತ್ತರಿಸಿತ್ತು.
ಇವೆಲ್ಲದರ ನಡುವೆ, ರಾಜಕೀಯ ಗುಂಪುಗಾರಿಕೆಯನ್ನು ಪುಲ್ ಮುಂದುವರಿಸಿದ್ದರು. ಬಂಡಾಯ ಶಾಸಕರೊಂದಿಗೆ ದೆಹಲಿಯಲ್ಲಿ ಬೀಡುಬಿಟ್ಟು ಹೈಕಮಾಂಡ್ ಭೇಟಿಗೆ ಪ್ರಯತ್ನಿಸಿದರು. ಆದರೆ, ಸೋನಿಯಾ ಅಥವಾ ರಾಹುಲ್ ಗಾಂಧಿ ಜತೆಗೆ ಭೇಟಿ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಇದನ್ನು ಕೇಂದ್ರ ಸರ್ಕಾರದ ವಿರುದ್ಧ ಅಸ್ತ್ರವನ್ನಾಗಿ ಬಳಸಲು ಚಿಂತನೆ ನಡೆಸಿತ್ತು. ಇದು ಪುಲ್ ಮತ್ತು ತಂಡಕ್ಕೆ ನೋವುಂಟು ಮಾಡಿತು. 2015ರ ಅಕ್ಟೋಬರ್ ವೇಳೆಗೆ ಟುಕಿ ಬೆಂಬಲಿಗ ಕಾಂಗ್ರೆಸ್ ಶಾಸಕರ ಸಂಖ್ಯೆ 47 ಇದ್ದಿದ್ದು 26ಕ್ಕೆ ಬಂದು ನಿಂತಿತ್ತು. 21 ಶಾಸಕರು ಪುಲ್ ಬೆಂಬಲಕ್ಕೆ ನಿಂತರು. ಇದರೊಂದಿಗೆ ಭಿನ್ನಮತ ಉಲ್ಭಣಗೊಂಡಿತು. ಇಂತಹ ಸನ್ನಿವೇಶದಲ್ಲಿ ಚಳಿಗಾಲದ ಅಧಿವೇಶನ ನಡೆಸಲಾಗದು ಎಂಬುದನ್ನು ಟುಕಿ ಮನಗಂಡರು. ಹೀಗಾಗಿ ರಾಜ್ಯಪಾಲರ ಸಲಹೆ ರೂಪದ ಆದೇಶಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. ಈ ಎಲ್ಲ ಬೆಳವಣಿಗೆ ಪರಿಣಾಮ ಜನವರಿ 27ರಿಂದ ಫೆ.19ರ ತನಕ ರಾಷ್ಟ್ರಪತಿ ಆಳ್ವಿಕೆ ಹೇರಲ್ಪಟ್ಟಿತು. ಈ ನಡುವೆ, ಪುಲ್ ಬೆಂಬಲಕ್ಕೆ 11 ಬಿಜೆಪಿ ಶಾಸಕರು ನಿಂತಿದ್ದಲ್ಲದೆ, ಮುಖ್ಯಮಂತ್ರಿ ಸ್ಥಾನಕ್ಕೆ ಅವರ ಹೆಸರನ್ನು ಸೂಚಿಸಿದ್ದೀಗ ಇತಿಹಾಸ.
ಈ ರೆಬಲ್ ನಾಯಕ ಪುಲ್ ಚೀನಾ ಗಡಿಭಾಗದ ಅಂಜೌ ಜಿಲ್ಲೆಯ ವಲ್ಲಾ ಗ್ರಾಮದಲ್ಲಿ ತೈಲುಂ ಪುಲ್ ಹಾಗೂ ಕೊರನ್ಲು ಪುಲ್ ದಂಪತಿಯ ಮಗನಾಗಿ 1969ರ ಜು.20ರಂದು ಜನಿಸಿದರು. ಮಾನವಶಾಸ್ತ್ರದಲ್ಲಿ ಪದವಿ ಪಡೆದವರು. ಪತ್ನಿ ದಂಗ್‍ವಿಮ್‍ಸಾಯಿ ಪುಲ್ ಮತ್ತು ಐವರು ಪುತ್ರರನ್ನೊಳಗೊಂಡ ಸಂತೃಪ್ತ ಸಂಸಾರ ಅವರದ್ದು. ಪ್ರವಾಸ, ಚೆಸ್, ಬ್ಯಾಡ್ಮಿಂಟನ್, ಓದುವುದು ಅವರ ಮುಖ್ಯ ಹವ್ಯಾಸಗಳು.
1995ರಲ್ಲಿ ರಾಜಕೀಯ ಪ್ರವೇಶಿಸಿದ ಅವರು, ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಯುಲಿಯಾಂಗ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. ಅಲ್ಲಿಂದೀಚೆಗೆ ಐದು ಬಾರಿ ಅದೇ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಮೊದಲ ಬಾರಿ ಆಯ್ಕೆಯಾದಾಗಲೇ ಮುಕುತ್ ಮಿಥಿ ಸಚಿವ ಸಂಪುಟದಲ್ಲಿ ಸಹಾಯಕ ಹಣಕಾಸು ಸಚಿವ ಸ್ಥಾನ ಸಿಕ್ಕಿತ್ತು. ಅಲ್ಲಿಂದೀಚೆಗೆ ಎಲ್ಲ ಮುಖ್ಯಮಂತ್ರಿಗಳ ಸಂಪುಟದಲ್ಲಿ ಹಣಕಾಸು, ವಿದ್ಯುತ್, ಭೂನಿರ್ವಹಣೆ, ಆರೋಗ್ಯ, ತೆರಿಗೆ, ಕಾನೂನು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾಮಾಜಿಕ ನ್ಯಾಯ ಈ ಮುಂತಾದ ಪ್ರಮುಖ ಖಾತೆಗಳ ಹೊಣೆಗಾರಿಕೆ ನಿರ್ವಹಿಸಿದ್ದಾರೆ. ಸಂಘಟನಾತ್ಮಕವಾಗಿಯೂ ಪಕ್ಷದಲ್ಲಿ ಹಲವು ಜವಾಬ್ದಾರಿ ನಿರ್ವಹಿಸಿದವರು. ಪ್ರಸ್ತುತ `ಬಂಡಾಯ ರಾಜಕಾರಣ’ದ ನಡುವೆ ಮುಖ್ಯಮಂತ್ರಿ ಹೊಣೆಗಾರಿಕೆಯನ್ನು ಅವರು ಹೇಗೆ ನಿಭಾಯಿಸಬಲ್ಲರು ಎಂಬುದು ಕುತೂಹಲದ ವಿಚಾರ.

Leave a Reply

Your email address will not be published. Required fields are marked *