ಸತ್ವಪರೀಕ್ಷೆ ಗೆದ್ದ ಸಜ್ಜನಿಕೆ

ಕಂಚಿ ಶ್ರೀ ಜಯೇಂದ್ರ ಸರಸ್ವತೀ ಸ್ವಾಮೀಜಿ
ಕಂಚಿ ಶ್ರೀ ಜಯೇಂದ್ರ ಸರಸ್ವತೀ ಸ್ವಾಮೀಜಿ

ಕಂಚಿ ಕಾಮಕೋಟಿ ಪೀಠದ ಶ್ರೀ ಜಯೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಧಾರ್ಮಿಕಶ್ರದ್ಧೆಯುಳ್ಳ ಹಿಂದುಗಳ ಪಾಲಿಗೆ ಮೊನ್ನೆಯ ದಿನ `ಶುಭ ಶುಕ್ರವಾರ’. ಮಠದ ಆಡಿಟರ್(ಲೆಕ್ಕಪರಿಶೋಧಕ) ರಾಧಾಕೃಷ್ಣನ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಶ್ರೀಗಳು ಸೇರಿ 8 ಜನ ನಿರ್ದೋಷಿಗಳು ಎಂದು ಚೆನ್ನೈನ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿತು. ಇದಕ್ಕೂ ಮುನ್ನ ಶ್ರೀಮಠದ ಅಧೀನದ ಕಂಚೀಪುರಂನ ವರದರಾಜ ದೇಗುಲದ ಮ್ಯಾನೇಜರ್ ಶಂಕರರಾಮನ್ ಹತ್ಯೆ ಪ್ರಕರಣದಲ್ಲಿ ಪುದುಚೆರಿ ನ್ಯಾಯಾಲಯ 2013ರಲ್ಲಿ ಶ್ರೀಗಳನ್ನು ದೋಷಮುಕ್ತಗೊಳಿಸಿತ್ತು. ಎರಡೂ ಪ್ರಕರಣಗಳಲ್ಲಿ ಶ್ರೀಗಳ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವ ಸಾಕ್ಷೃಗಳಿಲ್ಲ ಎಂಬುದನ್ನು ಕೋರ್ಟ್‍ಗಳು ಸಾರಿ ಹೇಳಿದವು. ಇದರೊಂದಿಗೆ, ದೇಶದ ಸಂತಪರಂಪರೆಯ ಮೇಲೆ ನಡೆಯುತ್ತಿರುವ ಆಕ್ರಮಣ, ಷಡ್ಯಂತ್ರಗಳ ಮುಖವಾಡಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗತೊಡಗಿದೆ.
ಸೆರೆವಾಸ ಸೇರಿ ಇಷ್ಟೆಲ್ಲ ಕ್ಲೇಶಗಳನ್ನೆದುರಿಸಿದ ಶ್ರೀ ಜಯೇಂದ್ರ ಸರಸ್ವತೀ ಸ್ವಾಮೀಜಿಯವರಿಗೀಗ 80 ವರ್ಷ. ಸಜ್ಜನಿಕೆಗೆ ಹೆಸರಾದ ಅವರು, ಕಂಚಿ ಕಾಮಕೋಟಿ ಪೀಠದ 69ನೇ ಪೀಠಾಧಿಪತಿ. ಕಂಚಿ ಕಾಮಕೋಟಿ ಪೀಠ ಪುರಾತನವಾದುದು. ತಮಿಳುನಾಡಿನ ರಾಜಧಾನಿ ಚೆನ್ನೈನಿಂದ ನೈಋತ್ಯಕ್ಕೆ 74 ಕಿ.ಮೀ. ದೂರದಲ್ಲಿದೆ. ಆದಿ ಶಂಕರಾಚಾರ್ಯರಿಂದ ಸ್ಥಾಪಿತವಾದ ಪೀಠ ಇದಾಗಿದ್ದು, ದೇಶ ವಿದೇಶಗಳಲ್ಲಿ ಶಿಷ್ಯರು, ಭಕ್ತರನ್ನು ಹೊಂದಿದೆ. ಶ್ರೀ ಜಯೇಂದ್ರ ಸರಸ್ವತೀ ಸ್ವಾಮೀಜಿಯವರು ಪೀಠಾರೋಹಣ ಮಾಡಿದ ಬಳಿಕ ಪೀಠ ಕೈಗೊಂಡಿರುವ ಧಾರ್ಮಿಕ, ಸಾಮಾಜಿಕ ಕೆಲಸ ಕಾರ್ಯಗಳು ಅಪಾರ.
ಶ್ರೀಗಳ ಪೂರ್ವಾಶ್ರಮದ ಹೆಸರು ಸುಬ್ರಮಣಿಯಂ. ಹಿಂದಿನ ತಂಜಾವೂರ್ ಜಿಲ್ಲೆಯ ಇರುಲ್‍ನೀಕ್ಕಿ ಎಂಬಲ್ಲಿ 1935ರ ಜುಲೈ 18ರಂದು ಜನನ. ಮಹಾದೇವ ಅಯ್ಯರ್ ಮತ್ತು ಸರಸ್ವತಿ ದಂಪತಿಯ ಜ್ಯೇಷ್ಠ ಪುತ್ರ. ಸರ್ಕಾರಿ ಉದ್ಯೋಗಿಯಾಗಿದ್ದ ತಂದೆಗೆ ವಿಲ್ಲುಪುರಂಗೆ ವರ್ಗಾವಣೆಯಾಗಿತ್ತು. ಆಗ ಐದು ವರ್ಷ ತುಂಬಿದ್ದ ಮಗನನ್ನು ವಿಲ್ಲುಪುರಂನ ಭೀಮನಾಯಕನ್ ಗಾರ್ಡನ್‍ನ ಎಲಿಮೆಂಟರಿ ಶಾಲೆಗೆ ಸೇರಿಸಿದ್ದರು. ಮಗನಿಗೆ ಎಂಟು ವರ್ಷವಾದಾಗ 1943ರ ಮೇ 9ರಂದು ಆದಿತ್ಯಪುರಂ ಗ್ರಾಮದಲ್ಲಿ ಬ್ರಹ್ಮೋಪದೇಶ ಕೊಡಿಸಿದರು. 1948ರ ಹೊತ್ತಿಗೆ ಬಾಲಕ ಸುಬ್ರಮಣಿಯಂ ಋಗ್ವೇದ ಸಂಹಿತಾ ಅಧ್ಯಯನ ಪೂರ್ಣಗೊಳಿಸಿದ್ದ. ಅಷ್ಟು ಹೊತ್ತಿಗೆ ಮಹಾದೇವ ಅಯ್ಯರ್ ಅವರಿಗೆ ತಿರುಚ್ಚಿಗೆ ವರ್ಗಾವಣೆಯಾಗಿತ್ತು. ಆಗ ಮಗನನ್ನು ತಿರುವನೈಕೋಯಿಲ್‍ನ ಶಂಕರಾಚಾರ್ಯ ಮಠದ `ಜಗದ್ಗುರು ವಿದ್ಯಾಸ್ಥಾನಂ’ನಲ್ಲಿ ವೇದಾಧ್ಯಯನಕ್ಕೆ ಸೇರಿಸಲಾಯಿತು. ಇದೇ ಅವಧಿಯಲ್ಲಿ ಕಂಚಿ ಕಾಮಕೋಟಿ ಪೀಠಕ್ಕೆ ಉತ್ತರಾಧಿಕಾರಿ ಹುಡುಕಾಟದಲ್ಲಿದ್ದರು ಅಂದಿನ ಶ್ರೀಗಳಾದ ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ಸ್ವಾಮೀಜಿ.
ಶ್ರೀಮಠದ ಆಸ್ಥಾನ ವಿದ್ವಾನ್ ಕೃಷ್ಣ ಶಾಸ್ತ್ರಿಗಳ್ ಅವರು ಶ್ರೀಗಳಿಗೆ ಸುಬ್ರಮಣಿಯಂ ಕುರಿತ ಮಾಹಿತಿಯನ್ನು ಒದಗಿಸಿದರು. ಹಿರಿಯ ಶ್ರೀಗಳು ಕೂಲಂಕಷವಾಗಿ ಪರಿಶೀಲಿಸಿ ಸುಬ್ರಮಣಿಯಂ ಅವರನ್ನೇ ಉತ್ತರಾಧಿಕಾರಿಯನ್ನಾಗಿ ಮಾಡಿಕೊಳ್ಳಲು ತೀರ್ಮಾನಿಸಿದರು. ಮಹಾದೇವ ಅಯ್ಯರ್ ದಂಪತಿ ಕೆಲಕಾಲ ಮೌನವಹಿಸಿ ಕೊನೆಗೆ ಒಪ್ಪಿಗೆ ನೀಡಿದರು. ಸುಬ್ರಮಣಿಯಂ ಅವರಿಗೆ ಪ್ರಾಯಪೂರ್ತಿ ಆದ ಬಳಿಕ ನಂತರ ಶಿಷ್ಯ ಸ್ವೀಕಾರದ ಪ್ರಕ್ರಿಯೆ ಆರಂಭವಾಯಿತು. 1954 ಮಾ.22ರಂದು ಶಿಷ್ಯ ಸ್ವೀಕಾರವಾಗಿ, ಸುಬ್ರಮಣಿಯಂ ಅವರಿಗೆ ಶ್ರೀ ಜಯೇಂದ್ರ ಸರಸ್ವತೀ ಎಂಬ ನಾಮಕರಣವಾಯಿತು. ಹದಿನಾರು ವರ್ಷ ಕಾಲ ಹಿರಿಗುರುಗಳ ಜೊತೆಗೆ ಇದ್ದು ಶ್ರೀಮಠದ ಪರಂಪರೆ, ಧಾರ್ಮಿಕ, ಸಾಂಸ್ಕøತಿಕ ಮಹತ್ವವನ್ನು ಅರಿತರು. ಹಿರಿಗುರುಗಳ ಆಶೀರ್ವಾದದೊಂದಿಗೆ 1970ರಲ್ಲಿ ಮೊದಲ ಸಲ ಸ್ವತಂತ್ರವಾಗಿ ಯಾತ್ರೆ ಹೊರಟರು. ಈ ಯಾತ್ರೆಯ ವೇಳೆಯಲ್ಲಿಯೇ ಅವರ ಸಮಾಜಮುಖೀ ಮನಸ್ಸಿನ ಅನಾವರಣವಾಗಿತ್ತು. ಇದಾಗಿ, ಅವರು ಕೈಗೊಂಡ ಒಂದೊಂದು ಕೆಲಸಗಳೂ ಸಮಾಜಮುಖಿಯಾಗಿದ್ದವು.
ಈ ಯಾತ್ರಾ ಅವಧಿಯಲ್ಲೇ ಚಿದಂಬರಂನ ನಟರಾಜ ವಿಗ್ರಹದ ಎಡ ಕಾಲು, ಹಸ್ತಗಳಿಗೆ ಚಿನ್ನದ ಕವಚ ತೊಡಿಸಿದರು. ತಿರುವನೈಕಾ ಜಂಬುಕೇಶ್ವರ ದೇವಸ್ಥಾನದಲ್ಲಿ ಕುಂಭಾಭಿಷೇಕಂ ನಡೆಸಿದರು. ಮರುವರ್ಷ ಆದಿ ಶಂಕರರ ಜನ್ಮಸ್ಥಳ ಕಾಲಡಿಯಲ್ಲಿ `ಕೀರ್ತಿ ಸ್ತಂಭ’ ಸ್ಥಾಪನೆಗೆ ಶಿಲಾನ್ಯಾಸ ಮಾಡಿದರು. ಗುರುವಾಯೂರು ದೇವಸ್ಥಾನ ಹಾಗೂ ಶಂಕರ ಮಠದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. 1988ರಲ್ಲಿ ನೇಪಾಳದ ಅಂದಿನ ರಾಜ ಗಡಿ ಭಾಗದಲ್ಲಿ `ಜಗತ್ತಿನ ಏಕೈಕ ಹಿಂದು ರಾಜ್ಯಕ್ಕೆ ಸ್ವಾಗತ’ ಎಂದು ಬರೆಸಿದ್ದ ಕಮಾನು ಸ್ಥಾಪಿಸಿ ಲೋಕಾರ್ಪಣೆ ಮಾಡಿದ ಕಾರ್ಯಕ್ರಮಕ್ಕೆ ಶ್ರೀಗಳ ಸಾನ್ನಿಧ್ಯವಿತ್ತು. ಚೀನಾ, ನೇಪಾಳ ಸರ್ಕಾರಗಳಿಂದ ಗೌರವ ಪಡೆದಿರುವ ಶ್ರೀಗಳು, ಬಾಂಗ್ಲಾದೇಶಕ್ಕೂ ಭೇಟಿ ನೀಡಿದ್ದರು. ಹೀಗೆ ಭೇಟಿ ನೀಡಿದ ಸಂದರ್ಭದಲ್ಲಿ ಢಾಕೇಶ್ವರಿ ದೇವಸ್ಥಾನದ ಪ್ರವೇಶದ್ವಾರಕ್ಕೆ ಶ್ರೀಗಳ ಗೌರವಾರ್ಥ `ಶಂಕರಾಚಾರ್ಯ ಗೇಟ್’ ಎಂದು ನಾಮಕರಣ ಮಾಡಲಾಗಿತ್ತು. ಹಿರಿಗುರುಗಳ ಹೆಸರಿನಲ್ಲಿ `ಶ್ರೀ ಚಂದ್ರಶೇಖರ ಸರಸ್ವತೀ ವಿಶ್ವ ಮಹಾವಿದ್ಯಾಲಯ’ ಎಂಬ ಯೂನಿವರ್ಸಿಟಿ ಸ್ಥಾಪಿಸಿದ್ದು ವಿಶೇಷ ಸಾಧನೆ. ಅದಕ್ಕೀಗ ಡೀಮ್ಡ್ ವಿವಿ ಸ್ಥಾನಮಾನ ದೊರಕಿದೆ.
1994ರಲ್ಲಿ ಹಿರಿಗುರುಗಳು ಮುಕ್ತರಾದ ಬಳಿಕ ಕಂಚಿ ಪೀಠದ ಪೂರ್ಣ ಹೊಣೆ ಶ್ರೀಗಳದ್ದಾಯಿತು. ಇವೆಲ್ಲದರ ನಡುವೆ, ದೇಶದುದ್ದಗಲಕ್ಕೂ ಸಂಚರಿಸಿದ ಶ್ರೀಗಳು ಸಮಾಜದ ಪ್ರತಿಯೊಂದು ವರ್ಗದ ಜನರನ್ನೂ ತಮ್ಮೆಡೆಗೆ ಆಕರ್ಷಿಸಿದರು. ಮಠದ ಚಟುವಟಿಕೆಗಳನ್ನು ಸಾಮಾಜಿಕ ನೆಲೆಯಲ್ಲಿ ವಿಸ್ತರಿಸಿದರು. ಶಿಕ್ಷಣ, ಆರೋಗ್ಯ, ಉದ್ಯೋಗ, ದೇವಸ್ಥಾನ ಜೀರ್ಣೋದ್ಧಾರ ಸೇರಿ ಹಲವು ರೀತಿಯ ಸಮಾಜ ಸುಧಾರಣಾ ಕೆಲಸಗಳನ್ನು ಕೈಗೊಂಡರು. ಶ್ರೀಗಳ ದೂರದೃಷ್ಟಿಯ ಪರಿಣಾಮ ದೇಶದ ನಾನಾ ಭಾಗಗಳಲ್ಲಿ ಶಿಕ್ಷಣ, ಆರೋಗ್ಯ ಸಂಸ್ಥೆಗಳು ಸ್ಥಾಪನೆಯಾದವು. ಏತನ್ಮಧ್ಯೆ, ಶಂಕರರಾಮನ್ ಹತ್ಯೆ ಪ್ರಕರಣ, ಆಡಿಟರ್ ರಾಧಾಕೃಷ್ಣನ್ ಮೇಲಿನ ಹಲ್ಲೆ ಪ್ರಕರಣಗಳು ಶ್ರೀಗಳ ಪಾಲಿಗೆ ಸೆರೆವಾಸದಂತಹ ಕ್ಲೇಶವನ್ನುಂಟು ಮಾಡಿದವು.
ಇಷ್ಟು ವರ್ಷ ಕಂಚಿ ಶ್ರೀಗಳು ಅನುಭವಿಸಿರಬಹುದಾದ ಸುದೀರ್ಘ ಯಾತನೆ ಏನೆಂಬುದನ್ನು ಅರಿಯಲು, `ರಾಮನಿಗೆ 14 ವರ್ಷ ಕಾನನ ಕ್ಲೇಶ; ಕಂಚಿ ಶ್ರೀಗಳಿಗೆ 14 ವರ್ಷ ಕಾನೂನು ಕ್ಲೇಶ! ಸಜ್ಜನಿಕೆಗೆ ಸತ್ತ್ವಪರೀಕ್ಷೆಯೇ ಎಂದೂ!’ ಎಂಬ ರಾಘವೇಶ್ವರಭಾರತೀ ಶ್ರೀಗಳ ಒಂದು ಟ್ವೀಟ್ ಸಾಕು. ಮಾರ್ಚ್‍ನಲ್ಲಿ ಕಂಚಿಯಲ್ಲಿ ನಡೆದ ಶ್ರೀಗಳ ಸಹಸ್ರಚಂದ್ರ ದರ್ಶನ ಕಾರ್ಯಕ್ರಮದ ವೇಳೆ, `ಸತ್ಯವನ್ನು ಬಹುಕಾಲ ಮುಚ್ಚಿಡಲಾಗದು. ಶ್ರೀಗಳ ವಿರುದ್ಧ ದಾಖಲಿಸಿದ್ದ ಪ್ರಕರಣದಲ್ಲಿ ಏನೂ ಹುರುಳಿರಲಿಲ್ಲ. ಆದರೆ, ವರ್ಷಗಳ ಹಿಂದೆ ರಾಜಕೀಯ ಕಾರಣಕ್ಕಾಗಿ ಕಂಚಿ ಮಠದ ವಿರುದ್ಧ ಬಹುದೊಡ್ಡ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಬಂದಿತ್ತು ಎಂಬುದು ಎಲ್ಲರಿಗೂ ಗೊತ್ತಿದ್ದ ವಿಷಯವೇ ಆಗಿತ್ತು’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದರು. ಅವರ ಈ ಮಾತು ಪ್ರಸ್ತುತ ರಾಜಕೀಯ, ಸಾಮಾಜಿಕ ಸನ್ನಿವೇಶಕ್ಕೆ ಹಿಡಿದ ಕೈಗನ್ನಡಿಯೂ ಹೌದು.
ನಮ್ಮದು ಸಂವಿಧಾನಬದ್ಧ ಪ್ರಜಾಪ್ರಭುತ್ವ ದೇಶ. ಕಾನೂನಿಗಿಂತ ಮೇಲೆ ಯಾರೂ ಇಲ್ಲ ಎಂಬುದು ನಿಜ. ಆದರೆ ಕಾನೂನನ್ನು ಸ್ವಾರ್ಥ ಸಾಧನೆಗೆ ಉಪಯೋಗಿಸುವ ಹಿತಶತ್ರುಗಳು, ಶತ್ರುಗಳೂ ಇರುತ್ತಾರೆ. ಆದರೆ, ಸಮಾಜ ಸತ್ಫಥದಲ್ಲಿ ಮುನ್ನಡೆಯುವಂತೆ ಮಾಡುವ ಹೊಣೆಯಿರುವ ಧರ್ಮಪೀಠದಲ್ಲಿರುವವರಿಗೂ ಇಂಥ ತೊಂದರೆ ತಪ್ಪಿದ್ದಲ್ಲ ಎಂಬುದು ವಿಪರ್ಯಾಸವೇ ಸರಿ.

Leave a Reply

Your email address will not be published. Required fields are marked *