ಶರೀರ ರಷ್ಯನ್ ಹೃದಯ ಹಿಂದುಸ್ಥಾನಿ

`ಹಣ ನಗದೀಕರಿಸುವುದಕ್ಕೆ ಮಿತಿ ಹೇರಿದ ಭಾರತ ಸರ್ಕಾರದ ನಿರ್ಧಾರದಿಂದಾಗಿ ಒಂದೊಳ್ಳೆ ರೆಸ್ಟೋರೆಂಟ್‍ನಿಂದ ರಾತ್ರಿ ಊಟ 29-jan-2017ತರಿಸುವುದಕ್ಕೂ ಆಗದ ಸ್ಥಿತಿ ನಿರ್ಮಾಣವಾಗಿದೆ’ ಎಂದು ರಷ್ಯನ್ ರಾಯಭಾರಿ ಟೀಕಿಸಿದ ಸುದ್ದಿಯೊಂದು ಕಳೆದ ಡಿಸೆಂಬರ್ 6ರಂದು ಸುದ್ದಿಮಾಧ್ಯಮಗಳಲ್ಲಿ ಗಮನಸೆಳೆದಿದ್ದು ನಿಮಗೆ ನೆನಪಿರಬಹುದು. ಅವರು ಬೇರಾರೂ ಅಲ್ಲ, ಕಳೆದ ಗುರುವಾರ (ಜ.26) ವಿಧಿವಶರಾದ ಅಲೆಕ್ಸಾಂಡರ್ ಕಡಕಿನ್.
ಅಧಿಕ ಮೌಲ್ಯದ ನೋಟುಗಳನ್ನು ರದ್ದುಗೊಳಿಸಿದ ನ.8ರ ತೀರ್ಮಾನವನ್ನು ಟೀಕಿಸಿ ಡಿಸೆಂಬರ್ 2ರಂದು ವಿದೇಶಾಂಗ ಸಚಿವಾಲಯಕ್ಕೆ ಅವರು ಪತ್ರ ಬರೆದಿದ್ದರು. ಆ ಪತ್ರದ ಸಾರಾಂಶವೇ ಡಿಸೆಂಬರ್ 6ರಂದು ಸುದ್ದಿಮಾಧ್ಯಮಗಳಲ್ಲಿ ಪ್ರಸಾರವಾದದ್ದು. ಹಾಗೆಂದು ಅವರು ಭಾರತ-ವಿರೋಧಿಯೇನೂ ಅಲ್ಲ. ಭಾರತಕ್ಕೆ ಆಗಮಿಸಿದ ವಿದೇಶಿ ರಾಜತಾಂತ್ರಿಕ ಅಧಿಕಾರಿಗಳ ಪೈಕಿ ಭಿನ್ನಸ್ತರದಲ್ಲಿ ಗುರುತಿಸಲ್ಪಡುವವರು ಅಲೆಕ್ಸಾಂಡರ್. ಮೊನ್ನೆ ನಡೆದ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಹಿರಿಯ ರಾಜತಾಂತ್ರಿಕ ಅಧಿಕಾರಿ ಎಂಬ ನೆಲೆಯಲ್ಲಿ ಅವರು ಪಾಲ್ಗೊಳ್ಳಬೇಕಿತ್ತು. ಆದರೆ, ಅದೇ ದಿನ ಬೆಳಗ್ಗೆ ದಿಢೀರ್ ಹೃದಯಾಘಾತವಾದ ಹಿನ್ನೆಲೆಯಲ್ಲಿ ಅವರನ್ನು ನವದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. 67 ವರ್ಷದ ಅವರು ಅಲ್ಲೇ ಕೊನೆಯುಸಿರೆಳೆದರು.
ನವದೆಹಲಿಗೆ 1971ರಲ್ಲಿ ಬಂದಾಗ ಅವರಿಗಿನ್ನೂ 22 ವರ್ಷ ವಯಸ್ಸು. ಪ್ರೊಬೆಷನರಿ ಅಧಿಕಾರಿಯಾಗಿ ನವದೆಹಲಿಯ ರಷ್ಯನ್ ರಾಯಭಾರ ಕಚೇರಿಗೆ ಪ್ರವೇಶ ಪಡೆದ ಅವರು 1972ರಿಂದ 1978ರ ತನಕ ಯುಎಸ್‍ಎಸ್‍ಆರ್‍ನ ರಾಯಭಾರ ಕಚೇರಿಯ ತೃತಿಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದರು. ಹಾಗೆ ಆರಂಭವಾದ ಅವರ ರಾಜತಾಂತ್ರಿಕ ಹೊಣೆಗಾರಿಕೆ ಹಂತ ಹಂತವಾಗಿ ಹೆಚ್ಚಳವಾಗಿ 2009ರ ಅ.27ರಿಂದೀಚೆಗೆ ಅವರು ಭಾರತದಲ್ಲೇ ರಷ್ಯನ್ ರಾಯಭಾರಿಯಾಗಿ ಸೇವೆಯಲ್ಲಿದ್ದರು. ಈ ಸುದೀರ್ಘ ಸೇವಾವಧಿಯ ಬಹುಪಾಲು ಭಾರತದಲ್ಲೇ ಆಗಿತ್ತು ಎನ್ನುವುದು ವಿಶೇಷ. ಭಾರತ ಹಾಗೂ ರಷ್ಯಾ ನಡುವಿನ ದ್ವಿಪಕ್ಷೀಯ ಬಾಂಧವ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಲೆಕ್ಸಾಂಡರ್ ಪ್ರಮುಖ ಪಾತ್ರವಹಿಸಿದ್ದರು. ಇದರ ದ್ಯೋತಕವಾಗಿ 2016ರ ಜುಲೈನಲ್ಲಿ ರಷ್ಯಾ ಅಧ್ಯಕ್ಷರ ಸಿಬ್ಬಂದಿ ಮುಖ್ಯಸ್ಥ ಸರ್ಗೆ ಇವಾನೋವ್ ಅವರು ಅಲೆಕ್ಸಾಂಡರ್‍ಗೆ `ಆರ್ಡರ್ ಆಫ್ ಫ್ರೆಂಡ್‍ಷಿಪ್’ ಪುರಸ್ಕಾರ ನೀಡಿ ಗೌರವಿಸಿದ್ದರು. ಕಳೆದವಾರ ಅಲೆಕ್ಸಾಂಡರ್ ನಿಧನರಾದಾಗ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಕ ಟ್ವೀಟ್ ಮಾಡಿ, `ಅಲೆಕ್ಸಾಂಡರ್ ಅವರ ನಿಧನದಿಂದ ದುಃಖಿತರಾಗಿದ್ದೇವೆ. ಅವರು ಭಾರತದ ಅತ್ಯುತ್ತಮ ಸ್ನೇಹಿತ ಹಾಗೂ ನಿರರ್ಗಳವಾಗಿ ಹಿಂದಿಯಲ್ಲಿ ಮಾತನಾಡಬಲ್ಲ ಪ್ರೀತಿಪಾತ್ರರಾದ ರಾಜತಾಂತ್ರಿಕ ಅಧಿಕಾರಿಯಾಗಿದ್ದರು. ಭಾರತ ಹಾಗೂ ರಷ್ಯಾ ನಡುವಿನ ಬಾಂಧವ್ಯ ಗಟ್ಟಿಗೊಳಿಸುವಲ್ಲಿ ಅವಿಶ್ರಾಂತವಾಗಿ ಶ್ರಮಿಸಿದ್ದರು’ ಎಂದಿದ್ದರು. ಇವೆಲ್ಲವೂ ಅಲೆಕ್ಸಾಂಡರ್ ಹಿರಿಮೆಯನ್ನು ಸಾರುವಂಥವು.
ಅಲೆಕ್ಸಾಂಡರ್ ಯಾಕೆ ಭಿನ್ನರಾಗುತ್ತಾರೆ ಎಂದರೆ, ಅವರು ರಷ್ಯದ ರಾಜತಾಂತ್ರಿಕ ಅಧಿಕಾರಿಯಾಗಿದ್ದರೂ `ಭಾರತೀಯತೆ’ಯನ್ನು ರೂಢಿಸಿಕೊಂಡವರು. 2013ನೇ ಇಸವಿ ಅದು. ದೆಹಲಿಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅವರು, ಈ ದೇಶದ ನೆಲವು ತನ್ನ `ಕರ್ಮಭೂಮಿ’, `ಜ್ಞಾನಭೂಮಿ’ ಮತ್ತು `ಪ್ರೇಮ-ಮೈತ್ರಿ ಭೂಮಿ’ ಅಷ್ಟೇ ಅಲ್ಲ, `ತಪೋಭೂಮಿ’ಯೂ ಹೌದು ಎಂದಿದ್ದರು. ವಿದೇಶಿಯರು ಭಾರತೀಯ ಭಾಷೆಯಲ್ಲಿ ಮಾತನಾಡುವಾಗ ಅವರ ಭಾಷೆಯ ಶೈಲಿ ಬರುವುದು ಸಹಜ. ಆದರೆ, ಅಲೆಕ್ಸಾಂಡರ್ ಹಾಗಿರಲಿಲ್ಲ. ಹಿಂದಿ ಭಾಷೆಯ ತಾಪ ಹಾಗೂ ತಪದ ನಡುವೆ ಸಣ್ಣ ವ್ಯತ್ಯಾಸವಷ್ಟೇ ಇದ್ದು, ಅವುಗಳನ್ನು ಬಳಸುವ ವಿಷಯದಲ್ಲಿ ಬಹಳ ಜಾಣ್ಮೆ ತೋರುತ್ತಿದ್ದರು. ಅವರು ಹಿಂದಿ ಭಾಷೆ ಕಲಿತು, ಸ್ಥಳೀಯ ಸಂವಹನಕ್ಕೆ ಅದನ್ನೇ ಬಳಸುತ್ತಿದ್ದರು. ಇದೊಂದೇ ಅಂಶ ಸಾಕು ಅವರ ರಷ್ಯನ್ ರಾಯಭಾರಿಯಾಗಿದ್ದರೂ, ಹೃದಯದಲ್ಲಿ ಹಿಂದುಸ್ಥಾನಿಯಾಗಿದ್ದರು ಎನ್ನುವುದಕ್ಕೆ!
ಇಷ್ಟಕ್ಕೇ `ಹೃದಯದಲ್ಲಿ ಹಿಂದುಸ್ಥಾನಿ’ ಎಂದಲ್ಲ. ಅವರು ಭಾರತಕ್ಕೆ ಬಂದ ಬಳಿಕ ಹಿಂದಿ ಭಾಷೆ ಕಲಿತು ಅದರಲ್ಲೇ ವ್ಯವಹರಿಸತೊಡಗಿದ ಅವಧಿ, ಆ ವೇಗ ಎಲ್ಲವೂ ಅಚ್ಚರಿಯೇ ಸರಿ. ಐವತ್ತರ ದಶಕದ ಬಾಲಿವುಡ್ ಹಾಡುಗಳನ್ನು ಅದರಲ್ಲೂ ಶಾಸ್ತ್ರೀಯ ಹಾಡುಗಳನ್ನೂ ಅವರು ಹಾಡಬಲ್ಲವರಾಗಿದ್ದರು. ಲಕ್ಷಾಂತರ ಜನ ಗುನುಗುನಿಸುವ `ಸರ್ ಪೇ ಲಾಲ್ ಟೋಪಿ ರಸ್ಸೀ, ಫಿರ್ ಭೀ ದಿಲ್ ಹೇ ಹಿಂದುಸ್ಥಾನಿ’ ಎಂದು ಹಾಡು ಕೇಳಿದಾಗ, ಅಲೆಕ್ಸಾಂಡರ್ ಹೃದಯ ಬೀಗುತ್ತಿತ್ತು. ಎಷ್ಟೋ ಸಲ ದೆಹಲಿಯ ಆಪ್ತವಲಯದಲ್ಲವರು ತಾನು, `ಹಾಫ್ ಇಂಡಿಯನ್’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು ಕೂಡ. ಬಾಲಿವುಡ್ ಸಿನಿಮಾಗಳ ಬಗ್ಗೆ ವಿಪರೀತ ಒಲವು ಹೊಂದಿದ್ದ ಅವರು, ರಾಜ್ ಕಪೂರ್, ಶಶಿಕಪೂರ್ ಸೇರಿ ಹಲವರೊಂದಿಗೆ ನಿಕಟ ಸ್ನೇಹ ಹೊಂದಿದ್ದರು. ರಷ್ಯನ್ ರಾಯಭಾರ ಕಚೇರಿಯಲ್ಲಿ ಸಾಂಪ್ರದಾಯಿಕ ಕ್ರಿಶ್ಚಿಯನ್ ಪಾರ್ಟಿ ನಡೆಯುತ್ತಿದ್ದರೆ ಅಲ್ಲಿ ಅಲೆಕ್ಸಾಂಡರ್ ಅಪ್ಪಟ ಭಾರತೀಯ ಉಡುಗೆ ಶೆರ್ವಾನಿ ಹಾಗೂ ಸಫಾ ಹಾಕಿ ಹಾಜರಿರುತ್ತಿದ್ದರು. ಅಂತಹ ಭಾರತಪ್ರೇಮ ಅವರದ್ದು.
ಸೇವಾವಧಿಯಲ್ಲಿ ಭಾರತದ ಬಹುತೇಕ ಪ್ರಮುಖ ರಾಜಕಾರಣಿಗಳನ್ನು ಅಂದರೆ ಚರಣ್‍ಸಿಂಗ್‍ರಿಂದ ಹಿಡಿದು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿಯವರತನಕ ಬಹುತೇಕ ಎಲ್ಲರನ್ನೂ ಭೇಟಿ ಮಾಡಿದ್ದಾರೆ. ಇವರಲ್ಲಿ ಹೆಚ್ಚಿನವರ ಜತೆಗೆ ಅವರು ಉತ್ತಮ ಬಾಂಧವ್ಯವನ್ನೂ ಹೊಂದಿದ್ದರು ಎನ್ನುತ್ತವೆ ರಾಜತಾಂತ್ರಿಕ ವಲಯದ ಮೂಲಗಳು.
ಇನ್ನು, ರಾಜತಾಂತ್ರಿಕ ಅಧಿಕಾರಿಯಾಗಿ ಅವರು ಯುಎಸ್‍ಎಸ್‍ಆರ್‍ನ ವೈಭವವನ್ನೂ ಕಂಡಿದ್ದಾರೆ, ಅದೇ ರೀತಿ ಚದುರಿಹೋದ ಯುಎಸ್‍ಎಸ್‍ಆರ್, ಆ ನಂತರದಲ್ಲಿ ಉದಯಿಸಿದ ಪುಟ್ಟ ರಷ್ಯಾ, ಅದರ ಬೆಳವಣಿಗೆಗಳನ್ನು ಪ್ರತಿಹಂತದಲ್ಲಿ ನೋಡುತ್ತ ಕೆಲಸ ಮಾಡಿದವರು ಅವರು. 2005ರಿಂದೀಚೆಗೆ ಭಾರತ ಹಾಗೂ ಅಮೆರಿಕ ನಡುವಿನ ಬಾಂಧವ್ಯ ಸುಧಾರಿಸುತ್ತಿದ್ದರೂ, ಭಾರತ ಹಾಗೂ ರಷ್ಯಾ ನಡುವಿನ ಬಾಂಧವ್ಯ ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು ಅಲೆಕ್ಸಾಂಡರ್. ಭಾರತ-ಅಮೆರಿಕ ನಡುವಿನ ಅಣು ಒಪ್ಪಂದ ರೂಪುಗೊಳ್ಳುತ್ತಿರುವಾಗ ಅದರ ಹಿಂದಿರುವ ಕುಟಿಲತೆಯ ಬಗ್ಗೆ ಭಾರತ ಸರ್ಕಾರವನ್ನು ಎಚ್ಚರಿಸಿದ್ದರು ಕೂಡ. ಕೂಡಂಕೂಳಂ ಅಣುಶಕ್ತಿ ಸ್ಥಾವರದ ವಿರುದ್ಧ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾಗ ಆ ಬಗ್ಗೆ ಖೇದ ವ್ಯಕ್ತಪಡಿಸಿದವರಲ್ಲಿ ಅವರೂ ಒಬ್ಬರು. ಭಾರತೀಯ ಮಾಧ್ಯಮದವರ ಜತೆಗೂ ಉತ್ತಮ ಸ್ನೇಹ ಸಂಬಂಧ ಹೊಂದಿದ ಅವರು, ಎಲ್ಲವನ್ನೂ ಸಕಾರಾತ್ಮಕವಾಗಿಯೇ ಕಾಣುತ್ತಿದ್ದರು. ಪಾಕಿಸ್ತಾನ ಸೇನೆ ಕಾಶ್ಮೀರಭಾಗದ ಗಡಿಯ ಮೂಲಕ ಭಾರತದೊಳಕ್ಕೆ ಉಗ್ರರನ್ನು ಕಳುಹಿಸಿದ ವಿಧ್ವಂಸಕ ಕೃತ್ಯ ನಡೆಸುತ್ತಿರುವುದನ್ನು ನೇರವಾಗಿ ಖಂಡಿಸಿ, ಭಾರತದ ಪರ ನಿಲುವು ವ್ಯಕ್ತಪಡಿಸಿದ್ದರು. ಭಾರತ-ಪಾಕಿಸ್ತಾನ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕೆಂದು ಸ್ಪಷ್ಟವಾಗಿ ಪ್ರತಿಪಾದಿಸುತ್ತಿದ್ದರು. ಭಾರತದಲ್ಲಿದ್ದಾಗ ಹಿಮಾಚಲ ಪ್ರದೇಶದ ಕುಲುವಿಗೆ ಪದೇಪದೆ ಭೇಟಿ ನೀಡಿ ಅಲ್ಲಿ ಬಹುಕಾಲ ಕಳೆಯುತ್ತಿದ್ದರು. ರೋರಿಚ್ ಸ್ಮಾರಕ ಟ್ರಸ್ಟ್‍ಗೂ ಅನೇಕ ಬಾರಿ ಭೇಟಿ ಕೊಟ್ಟಿದ್ದರು.
ನ ಕಿಶಿನೆವ್ ಎಂಬ ಪಟ್ಟಣದಲ್ಲಿ 1949ರ ಜುಲೈ 22ರಂದು ಅಲೆಕ್ಸಾಂಡರ್ ಅವರ ಜನನ. ಮಾಸ್ಕೋ ಸ್ಟೇಟ್ ಇನ್‍ಸ್ಟಿಟ್ಯೂಟ್‍ನಲ್ಲಿ ಪದವಿ ಶಿಕ್ಷಣ ಪೂರೈಸಿದ ಅವರು, ಇಂಗ್ಲಿಷ್, ಹಿಂದಿ, ಉರ್ದು, ಫ್ರೆಂಚ್, ರೊಮಾನಿಯನ್ ಭಾಷೆಗಳನ್ನು ಬಲ್ಲವರಾಗಿದ್ದರು. ಹಿಂದಿ ಹಾಗೂ ಇಂಗ್ಲಿಷ್‍ನಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಹಲವು ಲೇಖನಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ ಕೂಡ.

Leave a Reply

Your email address will not be published. Required fields are marked *