ಸ್ವಚ್ಛ ಭಾರತಕ್ಕೆ `ಪರಮ’ ಸೇವೆ

ಹಾತ್ಮ ಗಾಂಧಿಯವರು ನಡೆಸಿದ ಚಂಪಾರಣ್ ಸತ್ಯಾಗ್ರಹದ 100ನೇ ವರ್ಷ ಸಂಪನ್ನಗೊಂಡದ್ದರ ಹಿನ್ನೆಲೆಯ ಕಳೆದ ಮಂಗಳವಾರ ಬಿಹಾರದ ಮೋತಿಹಾರದಲ್ಲಿ `ಸತ್ಯಾಗ್ರಹ್ ಸೇ ಸ್ವಚ್ಛಾಗ್ರಹ್’ ಕಾರ್ಯಕ್ರಮ ನಡೆಯಿತು. ಆ ಕಾರ್ಯಕ್ರಮವನ್ನು `ಸ್ವಚ್ಛ ಭಾರತ’ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನಾಗಿ ರೂಪಿಸಲಾಗಿತ್ತು. ಸ್ವಚ್ಛ ಭಾರತದ `ಸ್ವಚ್ಛಾಗ್ರಹಿ’ಗಳಾಗಿ 20,000ಕ್ಕೂ ಹೆಚ್ಚು ಜನ ಅಲ್ಲಿ ಸೇರಿದ್ದರು. ಎಂದಿನಂತೆಯೇ ಪ್ರಧಾನಿ ನರೇಂದ್ರ ಮೋದಿ ಭಾಷಣ ಕೇಳುವುದಕ್ಕಾಗಿಯೇ ಅಲ್ಲಿದ್ದವರು ಕಾತರರಾಗಿದ್ದರು. ಅದು ಸ್ವಚ್ಛ ಭಾರತ ಯೋಜನೆಗೆ ಸಂಬಂಧಿಸಿದ ಕಾರ್ಯಕ್ರಮವಾದ್ದರಿಂದ ಪ್ರಧಾನಿ ಮೋದಿ ಮಾತನಾಡುತ್ತ,`…..ಹಲವು ವರ್ಷಗಳ ಕಾಲ ಐಎಎಸ್ ಅಧಿಕಾರಿಯಾಗಿದ್ದವರು ಉದ್ಯೋಗ ಬಿಟ್ಟು ಅಮೆರಿಕಕ್ಕೆ ಹೋಗಿದ್ದರು. ಅಲ್ಲಿ ಅವರು ಸುಖವಾಗಿ ಬದುಕುತ್ತಿದ್ದರು. ನಮ್ಮ ಸರ್ಕಾರ ರಚನೆಯಾದ ಬಳಿಕ ವಿದೇಶದಲ್ಲಿ ನೆಲೆಸಿರುವ ಅನೇಕ ಭಾರತೀಯರನ್ನು ತಾಯ್ನಾಡಿಗೆ ಬರುವಂತೆ ಆಹ್ವಾನಿಸಿದೆವು. ಹಲವರು ಅದಕ್ಕೆ ಸ್ಪಂದಿಸಿ ಭಾರತಕ್ಕೆ ವಾಪಸಾಗಿ ತವರಿನ ಸೇವೆಯಲ್ಲಿ ತೊಡಗಿದ್ದಾರೆ. ಅವರ ಪೈಕಿ ಅಮೆರಿಕದ ಆ ಐಷಾರಾಮಿ ಜೀವನ ಬಿಟ್ಟು ಭಾರತಕ್ಕೆ ಬಂದವರ ಪೈಕಿ ಈ ಅಧಿಕಾರಿಯೂ ಒಬ್ಬರು. ನಾನು ಈ ಮಾತು ಹೇಳುತ್ತಿರುವಂತೆಯೇ ಟಿವಿಯವರು ಅವರನ್ನು ಕೆಲಕಾಲ ತೋರಿಸಿದ್ದನ್ನು ಗಮನಿಸಿದೆ. ನೀವೂ ಗಮನಿಸಿರುತ್ತೀರಿ. ಈಗ ಮತ್ತೊಮ್ಮೆ ಕ್ಯಾಮರಾಗಳನ್ನು ಅವರೆಡೆಗೆ ತಿರುಗಿಸಿ ದೇಶದ ಜನರಿಗೆ ಅವರನ್ನೊಮ್ಮೆ ತೋರಿಸಿ ಎಂದು ಟಿವಿಯವರಿಗೆ ಮನವಿ ಮಾಡುತ್ತೇನೆ..’ ಎಂದು ಹೇಳುತ್ತಿರುವಂತೆ ಎಲ್ಲ ಟಿವಿ ಚಾನೆಲ್‍ಗಳ ಕ್ಯಾಮರಾಗಳೂ ಆ ವ್ಯಕ್ತಿಯೆಡೆಗೆ ಮುಖಮಾಡಿದವು. ಅವರೂ ಪ್ರೇಕ್ಷಕರ ಸಾಲಿನಿಂದ ಎದ್ದು ನಿಂತು ಎಲ್ಲರಿಗೂ ನಮಸ್ಕಾರ ಮಾಡಿದರು.
ಕೂಡಲೇ ಮಾತು ಮುಂದುವರಿಸಿದ ಪ್ರಧಾನಿ ಮೋದಿ, `ಇವರೇ ಪರಮೇಶ್ವರನ್ ಜಿ ಅಯ್ಯರ್’. ಅಮೆರಿಕದಿಂದ ಬಂದ ಕೂಡಲೇ ಅವರನ್ನು ದೇಶದ ಕೆಲಸದಲ್ಲಿ ಜೋಡಿಸಿಕೊಂಡೆ. ಅವರ ಕರ್ತವ್ಯ ನಿಷ್ಠೆ ಎಷ್ಟಿದೆ ಎಂದರೆ, ಸ್ವತಃ ಗ್ರಾಮ ಗ್ರಾಮಗಳಿಗೆ ತೆರಳಿ ಶೌಚಗೃಹದ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ. ಹಾಗೆಯೇ ಈ ದಿನ ಇಲ್ಲಿ ಸೇರಿರುವ ಸ್ವಚ್ಛಾಗ್ರಹಿಗಳನ್ನು ನೋಡಿದಾಗ ಸ್ವಚ್ಛ ಭಾರತ್ ಯಶಸ್ವಿಯಾಗುವುದೆಂಬ ಭರವಸೆ ಮೂಡಿದೆ’ ಎಂದರು.
ಹೌದು ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೂ ಅದಕ್ಕೆ ನಿಷ್ಠರಾಗಿ ಕೆಲಸ ಮಾಡುವ ಕಾರ್ಯಕರ್ತರ ಜತೆಗೆ ಯಾವುದೇ `ಇಗೋ’ ಇಲ್ಲದ ನಾಯಕರೂ ಬೇಕಾಗುತ್ತದೆ. ಯೋಜನೆಯ ನಾಯಕತ್ವ ವಹಿಸಿಕೊಂಡವರು `ಸ್ವಚ್ಛತಾ ಕೆಲಸ ನನ್ನದಲ್ಲ’ ಎಂದು ಕಚೇರಿ ಕೊಠಡಿಯೊಳಗೆ ಬಂಧಿಯಾಗಿ ಕುಳಿತುಕೊಂಡರೆ ಯಶಸ್ಸು ಸಿಗದು ಎಂಬುದು ವಾಸ್ತವ. ಪ್ರಧಾನಿಯವರ ಮಾತು ಕೇಳಿದಾಗ ನೆನಪಾಗಿದ್ದು, ಅಯ್ಯರ್ ಅವರ ಈ ಹಿಂದಿನ ಎರಡು ಸುದ್ದಿಗಳು.
ದಕ್ಷಿಣ ಭಾರತದಲ್ಲಿ ಕುಳಿತ ನಮಗೆ ಉತ್ತರ ಭಾರತದ ರಾಜ್ಯಗಳ ಎಲ್ಲ ಧನಾತ್ಮಕ ಪರಿಣಾಮದ ಸುದ್ದಿಗಳೂ ಸಿಗದು. ಆದಾಗ್ಯೂ ಕೆಲವೊಂದು ನೇಮಕ ಸುದ್ದಿಗಳಂತೆಯೇ ಸ್ವಚ್ಛ ಭಾರತ ಮಿಷನ್ ನೇತೃತ್ವವನ್ನು ಸರ್ಕಾರ 2016ರ Éಬ್ರವರಿಯಲ್ಲಿ ಪರಮೇಶ್ವರನ್ ಅಯ್ಯರ್ ಹೆಗಲಿಗೇರಿಸಿದ ಸುದ್ದಿ ಸಣ್ಣದಾಗಿ ಕಾಣಿಸಿಕೊಂಡಿತ್ತು. ಅವರ ಸೇವಾ ಅವಧಿ 2019ರ ಏಪ್ರಿಲ್‍ನಲ್ಲಿ ಕೊನೆಗೊಳ್ಳಲಿದೆ. ಅದಾಗಿ ಮರುವರ್ಷ Éಬ್ರವರಿ 18ರಂದು ಬಂದ ಸುದ್ದಿಯಲ್ಲಿ ಪರಮೇಶ್ವರನ್ ಅಯ್ಯರ್ ಕಾಣಿಸಿಕೊಂಡಿದ್ದರು. ಅಂದು ಅವರು ಶೌಚ ಗುಂಡಿಯೊಂದರ ದುರಸ್ತಿ ಮಾಡುತ್ತಿರುವ ÉÇೀಟೊ ಸುದ್ದಿ ದೇಶದ ಗಮನಸೆಳೆದಿತ್ತು. ಅದೇ ದಿನ 23 ರಾಜ್ಯಗಳ ಐಎಎಸ್ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಶೌಚ ಗುಂಡಿ ದುರಸ್ತಿಗೊಳಿಸುವ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ರಾರಾಜಿಸಿದ್ದವು. ಇವನ್ನೆಲ್ಲ ಗಮನಿಸಿದರೆ ಅಯ್ಯರ್, ಮಡಿ ಮೈಲಿಗೆ ಮನಸ್ಸಿಗೆ ಹಚ್ಚಿಕೊಳ್ಳದೇ ಯೋಜನೆಯ ಯಶಸ್ಸಿಗೆ ಕೆಲಸ ಮಾಡುತ್ತಿದ್ದಾರೆ ಎಂಬುದು ವೇದ್ಯವಾಗುತ್ತದೆ.
ಇಂತಹ ಅಯ್ಯರ್ ನೇಮಕ ಹೇಗಾಯಿತು ಗೊತ್ತ? 2014ರ ಅಕ್ಟೋಬರ್ 2ರಂದು ಮೋದಿ ಸರ್ಕಾರ ಸ್ವಚ್ಛ ಭಾರತ ಯೋಜನೆಗೆ ಚಾಲನೆ ನೀಡಿತ್ತು. ಇದು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, Àಲಿತಾಂಶ ಆಧಾರಿತವಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆಯೂ ಇತ್ತು. ಹೀಗಾಗಿ ಇದರ ನೇತೃತ್ವವನ್ನು ಗುಜರಾತ್ ಕೆಡರ್‍ನ 1980ರ ಬ್ಯಾಚಿನ ಐಎಎಸ್ ಅಧಿಕಾರಿ ವಿಜಯ ಲಕ್ಷ್ಮೀ ಜೋಶಿಯವರಿಗೆ ವಹಿಸಲಾಗಿತ್ತು. ಆದರೆ, 2015ರ ನವೆಂಬರ್‍ನಲ್ಲಿ ಅಚಾನಕ್ ಆಗಿ ಅವರು ಸ್ವಯಂ ನಿವೃತ್ತಿ ತೆಗೆದುಕೊಂಡರು. ಮತ್ತೆರಡು ತಿಂಗಳು ಈ ಯೋಜನೆಗೆ ಸರಿಯಾದ ನಾಯಕತ್ವ ಇರಲಿಲ್ಲ. ಕೊನೆಗೆ ಹುಡುಕಾಟ ನಡೆಸಿದಾಗ ನೈರ್ಮಲ್ಯ, ಸ್ವಚ್ಛತಾ ವಿಷಯದಲ್ಲಿ ಅಯ್ಯರ್ ಅವರ ಕೆಲಸ ಮೋದಿಯವರ ಗಮನ ಸೆಳೆಯಿತು. ಪರಿಣಾಮ 2016ರ É.3ರಂದು ನೇಮಕ ಆದೇಶ ಹೊರಬಿತ್ತು. ಮರುದಿನವೇ ಅಯ್ಯರ್ ಅಧಿಕಾರ ಗ್ರಹಣ ಮಾಡಿದರು ಕೂಡ. ಬಹುಶಃ ಐಎಎಸ್ ಅಧಿಕಾರಿಯೊಬ್ಬರು ನಿಭಾಯಿಸಬೇಕಾಗಿದ್ದ ಹೊಣೆಗಾರಿಕೆಯನ್ನು ಸಚಿವಾಲಯ ನಿವೃತ್ತ ಐಎಎಸ್ ಅಧಕಾರಿಗೆ ವಹಿಸಿದ್ದು ಇದೇ ಮೊದಲಿರಬೇಕು.
ಇಷ್ಟೆಲ್ಲ ಕೇಳಿದ ಬಳಿಕ ಯಾರು ಈ ಅಯ್ಯರ್ ಎಂಬ ಕುತೂಹಲ ಕಾಡದೇ ಇರದು. ಲಭ್ಯ ಮಾಹಿತಿ ಪ್ರಕಾರ, ಅವರು 1981ನೇ ಬ್ಯಾಚಿನ ಉತ್ತರ ಪ್ರದೇಶ ಕೆಡರ್‍ನ ಐಎಎಸ್ ಅಧಿಕಾರಿ. ಆರಂಭದಲ್ಲಿ ರಕ್ಷಣಾ ಸಚಿವಾಲಯ, ಕೇಂದ್ರ ಜವಳಿ ಸಚಿವಾಲಯಗಳಲ್ಲಿ ಕೆಲಸ ಮಾಡಿದ್ದರು. ನಂತರ ಉತ್ತರ ಪ್ರದೇಶದ ಬಿಜ್ನೂರು ಜಿಲ್ಲೆಯ ಕಲೆಕ್ಟರ್ ಆಗಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕರ್ತವ್ಯ ನೆರವೇರಿಸಿದ್ದರು. ಹೀಗೆ, ವಿವಿಧ ಕ್ಷೇತ್ರಗಳ ಹೊಣೆಗಾರಿಕೆ ನಿಭಾಯಿಸಿದ ಬಳಿಕ 2009ರಲ್ಲಿ ಸ್ವಯಂ ನಿವೃತ್ತಿ ಪಡೆದ ಅವರು, ವಿಶ್ವ ಬ್ಯಾಂಕ್‍ನ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ವಿಶ್ವ ಬ್ಯಾಂಕ್ ಸೇರ್ಪಡೆಗೂ ಮುನ್ನ ಅವರು ವಿಶ್ವ ಆಹಾರ ಯೋಜನೆ ಅಡಿ ಕೆಲಸ ಮಾಡಿದ್ದರು. 1998ರ ಏಪ್ರಿಲ್‍ನಿಂದ 2006ರ Éಬ್ರವರಿ ತನಕ ಅವರು ವಿಶ್ವಸಂಸ್ಥೆಯ ಗ್ರಾಮೀಣ ಜಲ ಸ್ವಚ್ಛತಾ ಕಾರ್ಯಯೋಜನೆ ನಿಭಾಯಿಸಿದ್ದರು. ಭಾರತದ ಸರ್ಕಾರದ ಸೇವೆಯಲ್ಲೂ ಇದೇ ಕ್ಷೇತ್ರದಲ್ಲಿ ಅವರು ಹೆಚ್ಚು ಸೇವೆ ಸಲ್ಲಿಸಿದ್ದರು. ವಿಶ್ವ ಬ್ಯಾಂಕ್‍ನ ಹೊಣೆಗಾರಿಕೆ ನಿಭಾಯಿಸುವ ಸಂದರ್ಭದಲ್ಲಿ ಅವರು ಹನೋಯ್‍ನ ಕಚೇರಿಯಲ್ಲಿ ಲೀಡ್ ವಾಟರ್ ಆ್ಯಂಡ್ ಸ್ಯಾನಿಟೇಷನ್ ಸ್ಪೆಷಲಿಸ್ಟ್ ಹಾಗೂ ಪೆÇ್ರೀಗ್ರಾಂ ಲೀಡರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅದಕ್ಕೂ ಮುನ್ನ ವಾಷಿಂಗ್ಟನ್‍ನಲ್ಲಿ ಈಜಿಪ್ಟ್ ಮತ್ತು ಲೆಬನಾನ್‍ಗಳ ವಿಚಾರವಾಗಿ ಕೆಲಸ ಮಾಡಿದ್ದರು. ಅದೇ ರೀತಿ ವಿಶ್ವ ಬ್ಯಾಂಕ್‍ನ ವಾಟರ್ ಆ್ಯಂಕರ್ ಆಗಿ ಕೆಲಸ ನಿಭಾಯಿಸಿದ್ದರು.
ಹೀಗಾಗಿ ಅವರು ಜಲ ಮತ್ತು ನೈರ್ಮಲ್ಯ ಸೇವಾ ಕ್ಷೇತ್ರದಲ್ಲಿ ಪರಿಣತರೆನ್ನುವುದರಲ್ಲಿ ಸಂದೇಹವಿಲ್ಲ. ಅವರ ಅನುಭವ ಈಗ ಸ್ವಚ್ಛ ಭಾರತ್ ಯೋಜನೆಯ ಯಶಸ್ಸಿಗೆ ಬುನಾದಿಯನ್ನು ರೂಪಿಸುತ್ತಿದೆ. ಸಹೋದ್ಯೋಗಿಗಳು ಮತ್ತು ಆಪ್ತರ ವಲಯದಲ್ಲವರು `ಪರಮ್’ ಎಂದೇ ಗುರುತಿಸಿಕೊಂಡವರು. `ಸ್ವಜಲ್ ಪೆÇ್ರೀಗ್ರಾಂ’ ಅವರ ಕನಸಿನ ಕೂಸು. ಅದರ ಅನುಷ್ಠಾನವನ್ನೂ ಅವರು ಯಶಸ್ವಿಯಾಗಿ ನೆರವೇರಿಸಿದ್ದಾರೆ. ವಿಯೆಟ್ನಾಂ, ಚೀನಾ, ಈಜಿಪ್ಟ್, ಲೆಬನಾನ್‍ಗಳಲ್ಲಿ ಇದೇ ಕ್ಷೇತ್ರದಲ್ಲಿ ವಿಶ್ವಬ್ಯಾಂಕ್ ಪರವಾಗಿ ದುಡಿದವರು.
ತಮಿಳುನಾಡು ಮೂಲದ ಅಯ್ಯರ್ 1959ರ ಏಪ್ರಿಲ್ 16ರಂದು ಜನಿಸಿದರು. ಕುಟುಂಬದ ಮಾಹಿತಿ ಲಭ್ಯವಿಲ್ಲ. ಶಿಕ್ಷಣದ ವಿಚಾರಕ್ಕೆ ಬಂದರೆ ಅವರು ಇಂಗ್ಲಿಷ್‍ನಲ್ಲಿ ಪದವಿ ಶಿಕ್ಷಣ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮತ್ತು ಪಬ್ಲಿಕ್ ಅಡ್ಮಿನಿಸ್ಟ್ರೇಷನ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಿರ್ವಹಣಾ ಶಾಸದಲ್ಲಿ ಡಿಪೆÇ್ಲೀಮಾ ಪಡೆದಿದ್ದಾರೆ.
ಸಾಮಾನ್ಯ ವಾಡಿಕೆ ಪ್ರಕಾರ ಪ್ರಧಾನಿ ಹುದ್ದೆಯಲ್ಲಿರುವವರು ಅಧಿಕಾರಿಗಳಿಗೆ ಈ ರೀತಿ ಸಾರ್ವಜನಿಕವಾಗಿ ಪ್ರಶಂಸೆ ವ್ಯಕ್ತಪಡಿಸುವುದಿಲ್ಲ. ಚಂಪಾರಣ್ ಸತ್ಯಾಗ್ರಹದ ನೂರು ವರ್ಷ ಸಂಪನ್ನಗೊಂಡ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಅನುಸರಿಸಿದ ನಡೆ ಅಯ್ಯರ್ ಅವರ ಸೇವಾ ನಿಷ್ಠೆಗೆ ನೀಡಿದ ಗೌರವ ಎನ್ನಬೇಕಷ್ಟೆ. ಹಾಗೆಯೇ, ಸ್ವಚ್ಛ ಭಾರತ್ ಯೋಜನೆ ಯಶಸ್ವಿಗೊಳಿಸುವ ವಿಷಯದಲ್ಲಿ ಅಯ್ಯರ್ ಮೇಲಿನ ನಿರೀಕ್ಷೆ ಹೆಚ್ಚಾಗಿದ್ದು, ಹೊಣೆಗಾರಿಕೆಯ ಮಹತ್ವವನ್ನು ಸಾರಿ ಹೇಳಿದಂತಾಗಿದೆ.

Leave a Reply

Your email address will not be published. Required fields are marked *