ತೈವಾನ್ ಚುಕ್ಕಾಣಿ ತ್ಸಾಯಿ ಕೈಗೆ

ತ್ಸಾಯಿ ಇಂಗ್ ವೆನ್, ತೈವಾನ್ ಅಧ್ಯಕ್ಷೆ
ತ್ಸಾಯಿ ಇಂಗ್ ವೆನ್, ತೈವಾನ್ ಅಧ್ಯಕ್ಷೆ

ತೈವಾನ್​ನಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿ (ಡಿಪಿಪಿ) ಭಾರಿ ಗೆಲುವು ದಾಖಲಿಸಿದ್ದು, ತ್ಸಾಯಿ ಇಂಗ್ ವೆನ್ ಅಧ್ಯಕ್ಷ ಪಟ್ಟಕ್ಕೇರಿದ್ದಾರೆ. ತೈವಾನ್​ನ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಮಹಿಳೆಯೊಬ್ಬರು ಈ ಪಟ್ಟವನ್ನು ಅಲಂಕರಿಸಿರುವುದು. ಇದು ಆ ದೇಶಕ್ಕೆ ಸೀಮಿತ ಎಂದು ಭಾವಿಸಿದರೆ ತಪ್ಪಾದೀತು. ಈ ಬೆಳವಣಿಗೆಯ ನೇರ ಪರಿಣಾಮ ಬೀಜಿಂಗ್ ಮೇಲಾಗಿದ್ದು, ಅಲ್ಲೀಗ ತಲೆಶೂಲೆ ಆರಂಭವಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಒಮ್ಮೆ ಈ ದೇಶಗಳ ಇತಿಹಾಸವನ್ನು ಸಂಕ್ಷಿಪ್ತವಾಗಿ ಸ್ಮರಿಸಿದರೆ ಒಳಿತು. ಜಪಾನ್ ಆಳ್ವಿಕೆ ಬಳಿಕ 1940ರ ದಶಕದಲ್ಲಿ ತೈವಾನ್ ಚೀನಾ ಜತೆ ಸೇರ್ಪಡೆಗೊಂಡು ರಿಪಬ್ಲಿಕ್ ಆಫ್ ಚೀನಾ (ತೈವಾನ್) ಎಂದು ಕರೆಸಿಕೊಂಡು ‘ಒಂದು ದೇಶ ಎರಡು ವ್ಯವಸ್ಥೆ’ ಎನಿಸಿಕೊಂಡಿತು. 1987ರ ತನಕ ಇಲ್ಲಿ ಸೇನಾಡಳಿತ ಜಾರಿಯಲ್ಲಿತ್ತು. ನಂತರ 90ರ ದಶಕದ ಆರಂಭದಲ್ಲಿ ನಡೆದ ಚುನಾವಣೆಯಲ್ಲಿ ‘ಸ್ವತಂತ್ರ ತೈವಾನ್’ ಪ್ರತಿಪಾದಿಸುತ್ತಿದ್ದ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ (ಡಿಪಿಪಿ) ಮತ್ತು ಚೀನಾಪರ ಒಲವುಳ್ಳ ಚೀನಾದ ಗುವೋ ಮಿಂದಾಂಗ್ (ಕೆಎಂಟಿ) ಪಕ್ಷದ ನಡುವೆ ಪೈಪೋಟಿ ನಡೆಯಿತು. 2000ದಲ್ಲಿ ಡಿಪಿಪಿ ಅಧಿಕಾರಕ್ಕೆ ಬಂದು 2008ರ ತನಕ ಆಳ್ವಿಕೆ ನಡೆಸಿತು. ಇದಾಗಿ ಮತ್ತೆ ಅಧಿಕಾರ ಕೆಎಂಟಿ ತೆಕ್ಕೆಗೆ ಬಿತ್ತು. ಈಗ ಎಂಟು ವರ್ಷಗಳ ಬಳಿಕ ಮತ್ತೆ ಡಿಪಿಪಿಗೆ ಗೆಲುವು ದಕ್ಕಿದೆ. ‘ಒಂದು ದೇಶ ಎರಡು ವ್ಯವಸ್ಥೆ’ ವಿಚಾರದಲ್ಲಿ ಡಿಪಿಪಿಗೆ ಭಿನ್ನಮತವಿದೆ. ಇದಕ್ಕೆ ಇಂಬುನೀಡುವಂತೆ ತ್ಸಾಯಿ ಇಂಗ್ ವೆನ್ 2008ರಲ್ಲಿ ಡಿಪಿಪಿಯ ಅಧ್ಯಕ್ಷರಾದರೋ, ‘ಸ್ವತಂತ್ರ ತೈವಾನ್’ ಚಿಂತನೆಯ ಕಿಚ್ಚು ಹೆಚ್ಚಿತು. 2010ರಲ್ಲಿ, ಎರಡನೇ ವಿಶ್ವ ಯುದ್ಧದ ನಂತರದ ಆರು ದಶಕ ಕಾಲ ತೈವಾನ್​ನ ಚಿತ್ರಣ ನೀಡುವ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ತ್ಸಾಯಿ, ರಿಪಬ್ಲಿಕ್ ಆಫ್ ಚೀನಾ ಅಲ್ಲ ಗವರ್ನಮೆಂಟ್ ಆಫ್ ತೈವಾನ್ ಎಂದು ಹೇಳಿಕೆ ನೀಡಿದ್ದರು. ಇದು ಚೀನಾ ವಿರೋಧಿ ಹೇಳಿಕೆ ಎಂದು ತೀವ್ರ ಟೀಕೆ ವ್ಯಕ್ತವಾದಾಗ ಅವರು, ಎರಡೂ ಒಂದೇ ಎಂದು ತೇಪೆ ಹಚ್ಚುವ ಪ್ರಯತ್ನ ಮಾಡಿದ್ದರು. ಈ ಎಲ್ಲ ಹಿನ್ನೆಲೆಯಿಂದಾಗಿ, ವೆನ್ ಪಟ್ಟಾಭಿಷೇಕ ಚೀನಾಕ್ಕೆ ತಲೆನೋವಾಗಿ ಪರಿಣಮಿಸಿದೆ.

2015ರ ಫೆಬ್ರವರಿಯಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡ ವೇಳೆ ತ್ಸಾಯಿ ಇಂಗ್ ವೆನ್, ‘ಈ ದೇಶ ಸುಧಾರಣೆಯನ್ನು ಬಯಸುತ್ತಿದೆ. ಆದರೆ, ಅದಾಗಬೇಕಾದರೆ ಜೊತೆಗೆ ಕಷ್ಟವನ್ನೂ ಸಹಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ನಾನು ಸಮಾಜವನ್ನು ಸಂಘಟಿಸುತ್ತೇನೆ ಮತ್ತು ನಾವೆಲ್ಲರೂ ಸಂಘಟಿತವಾಗಿ ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆ-ಸವಾಲುಗಳನ್ನು ಹಂತ ಹಂತವಾಗಿ ಎದುರಿಸಿ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದು ಘೊಷಿಸಿದ್ದರು.

ಇಷ್ಟು ಖಡಕ್ ಆಗಿ ಮಾತನಾಡುವ ವೆನ್​ಗೆ ಈಗ 59ರ ಹರೆಯ. ವೆನ್ ಮೃದು ಮಾತಿನವರಾದರೂ, ಕಟ್ಟರ್ ರಾಷ್ಟ್ರೀಯವಾದಿ ಚಿಂತನೆ ಹೊಂದಿರುವವರಾದ ಕಾರಣ ಅವರ ಜತೆಗೆ ವ್ಯವಹರಿಸುವುದು ಕಷ್ಟ ಎಂಬ ಭಾವನೆ ಬೀಜಿಂಗ್​ನಲ್ಲಿ ವ್ಯಕ್ತವಾಗತೊಡಗಿದೆ. ವೃತ್ತಿಯಲ್ಲಿ ವಕೀಲರಾಗಿರುವ ವೆನ್, ರಾಜಕೀಯ ಪ್ರವೇಶಿಸುವ ತನಕವೂ ತೈಪೆಯ ನ್ಯಾಷನಲ್ ಚೆಂಗ್ಚಿ ಯುನಿವರ್ಸಿಟಿ ಮತ್ತು ಸೂಚೌ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿದ್ದರು. ದಕ್ಷಿಣ ತೈವಾನಿನ ಫೆಂಗ್​ಗಾಂಗ್​ನಲ್ಲಿ ಬೆಳೆದ ವೆನ್ ಸ್ಥಳೀಯ ಮಾಧ್ಯಮಗಳಿಂದ ‘ಲಿಟ್ಲ್ ಯಿಂಗ್’ ಎಂದು ಕರೆಯಿಸಿಕೊಂಡವರು. 2010ರಲ್ಲಿ ತೈಪೆಯ ಮೇಯರ್ ಸ್ಥಾನಕ್ಕೆ ಹಾಗೂ 2012ರಲ್ಲಿ ತೈವಾನಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತವರು. ಹೀಗೆ ಎರಡು ಸೋಲುಗಳ ನಂತರ ಸಿಕ್ಕ ಗೆಲುವು ಈ ಬಾರಿಯದು.

ಚೀನಿ ಭಾಷಿಕರಲ್ಲಿ ಪ್ರಭಾವಿ ಮಹಿಳೆ ಎಂದು ಗುರುತಿಸಿಕೊಂಡಿರುವ ವೆನ್, ಇಂಗ್ಲಿಷ್​ನಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವರು. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ದೇಶದ ಸಂಬಂಧವನ್ನು ವೃದ್ಧಿಸಬಲ್ಲವರು ಎಂಬ ಭಾವನೆ ತೈವಾನೀಯರಲ್ಲಿದೆ. ಇಷ್ಟಾಗ್ಯೂ, ಅವರು ತಮ್ಮ ಪ್ರತಿ ಹೆಜ್ಜೆಯ ಬಗ್ಗೆ ನಿಗೂಢತೆ ಕಾಪಾಡಿಕೊಳ್ಳುತ್ತಿರುವುದರಿಂದಾಗಿ, ಅವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಎಂಬ ಭಾವನೆ ವ್ಯಾಪಕವಾಗಿದೆ. ಇದಲ್ಲದೆ, ಅಮೆರಿಕದ ನಾಯಕರ ಜತೆಗೂ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದಿರುವುದು ಚೀನಾಕ್ಕೆ ತಲೆನೋವಾಗಿ ಪರಿಣಮಿಸಿದೆ.

ಇಂತಹ ವೆನ್ ರಾಜಕೀಯ ಪ್ರವೇಶ ಮಾಡಿದ್ದು 2004ರಲ್ಲಿ. ಅದಕ್ಕೂ ಮೊದಲು ಚೀನಾದ ‘ಮೇನ್​ಲ್ಯಾಂಡ್ ವ್ಯವಹಾರಗಳ ಕೌನ್ಸಿಲ್’ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ರಾಜಕೀಯ ಜೀವನದ ಅಲ್ಪಾವಧಿಯಲ್ಲೇ ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಹೆಗ್ಗಳಿಕೆ ಅವರದ್ದು. ಆದಾಗ್ಯೂ, ಆ ನಡೆ ಏನೂ ಹೂವಿನ ಹಾಸಿನದ್ದಾಗಿರಲಿಲ್ಲ. ಆರಂಭದ ರಾಜಕೀಯದ ಅನನುಭವದಿಂದಾಗಿ ‘ಹಾಲೋ ವೆಜಿಟೇಬಲ್’(ಟೊಳ್ಳು ತರಕಾರಿ) ಎಂದು ಲೇವಡಿಗೊಳಗಾದರು. 2004ರಲ್ಲಿ ಡಿಪಿಪಿಗೆ ಸೇರಿದ ವೆನ್, ಅದೇ ವರ್ಷ ಚುನಾಯಿತರಾಗಿ ಸಂಸತ್ತಿನಲ್ಲಿ ತೈವಾನನ್ನು ಪ್ರತಿನಿಧಿಸಿದ್ದರು. 2006ರಲ್ಲಿ ವೈಸ್ ಪ್ರೀಮಿಯರ್ ಆಗಿ ನೇಮಕವಾಗಿದ್ದರು. ಇದೇ ಅವಧಿಯಲ್ಲಿ ಗ್ರಾಹಕ ರಕ್ಷಣಾ ಆಯೋಗದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. 2008ರಲ್ಲಿ ಡಿಪಿಪಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ದಾಖಲಿಸಿದರು. ಇದೇ ಅವಧಿಯಲ್ಲಿ ಕೆಎಂಟಿ ಅಭ್ಯರ್ಥಿ ಮಾ ಯಿಂಗ ಜೋ ತನ್ನ ಪ್ರತಿಸ್ಪರ್ಧಿ ಯಾರು ಎಂದಾಗ, ತ್ಸಾಯಿ ಹೆಸರು ಸೂಚಿಸಿದ್ದರು. ಅದಾಗಲೇ ತ್ಸಾಯಿ ಅಲ್ಲಿನ ರಾಜಕೀಯದಲ್ಲಿ ಪ್ರಭಾವಿಯಾಗಿ ಬೆಳೆದಿದ್ದರು. 2014ರಲ್ಲಿ ಮತ್ತೆ ಡಿಪಿಪಿ ಅಧ್ಯಕ್ಷರಾಗಿ ಆಯ್ಕೆಯಾದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷ ಭರ್ಜರಿ ಗೆಲುವು ದಾಖಲಿಸುವಂತೆ ನೋಡಿಕೊಂಡರು. ಇದು ಪಕ್ಷವನ್ನು ದೇಶಾದ್ಯಂತ ಬಲಗೊಳ್ಳುವಂತೆ ಮಾಡಿತು. ಪರಿಣಾಮ ಅಧ್ಯಕ್ಷೀಯ ಚುನಾವಣೆಯಲ್ಲಿ ವೆನ್ ಶೇಕಡ 56.12 ಮತಗಳೊಂದಿಗೆ ಗೆಲುವು ಕಂಡರು.

ಚುನಾವಣೆಗೆ ಮೊದಲೇ ಅವರು ಒಂದೊಮ್ಮೆ ಗೆದ್ದರೆ, ತಲೆಮಾರುಗಳ ನ್ಯಾಯ (ಯುವ ಜನರ ನಿರುದ್ಯೋಗ ಸಮಸ್ಯೆ, ಕೌಟುಂಬಿಕ ಹೊಣೆಗಾರಿಕೆಗೆ ಪರಿಹಾರ), ಸರ್ಕಾರಿ ಸಂಸ್ಥೆಗಳ ಸುಧಾರಣೆ, ಶಾಸಕಾಂಗದ ಸುಧಾರಣೆ, ಕಾಲಕಾಲಕ್ಕೆ ನ್ಯಾಯ, ಕಾನೂನು ಪರಿಷ್ಕರಣೆ, ತಾರತಮ್ಯ ನೀತಿಯನ್ನು ಕೊನೆಗಾಣಿಸುವುದು ಸೇರಿ ಐದು ಸುಧಾರಣೆಗಳನ್ನು ಜಾರಿಗೊಳಿಸುವುದಾಗಿ ಘೊಷಿಸಿದ್ದರು.

ಅಂದ ಹಾಗೆ, ವೆನ್ ಹುಟ್ಟಿದ್ದು 1956ರ ಅ.31ರಂದು ತೈಪೇಯ ಝೋಂಗ್​ಶಾನ್ ಜಿಲ್ಲೆಯಲ್ಲಿ. ತಂದೆ ತ್ಸಾಯಿ ಜಿ ಶೆಂಗ್ ಹಕ್ಕ ಜನಾಂಗದವರಾದರೆ, ತಾಯಿ ಚಾಂಗ್ ಜಿನ್ ಫೆಂಗ್ ತೈವಾನಿ. ಬಾಲ್ಯದಲ್ಲಿ ಆಪ್ತರಿಂದ ‘ಇಂಗ್’ ಎಂದೇ ಕರೆಯಿಸಿಕೊಂಡವರು. ತೈಪೆಯಲ್ಲಿ ವಿದ್ಯಾಭ್ಯಾಸ ಪೂರೈಸಿದ ಅವರು, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್​ನಲ್ಲಿ ಕಾನೂನಿನ ವಿಷಯದಲ್ಲಿ ಪಿಎಚ್​ಡಿ ಪದವಿ ಪಡೆದರು. ಅವಿವಾಹಿತರಾದ ಅವರಿಗೆ ಬೆಕ್ಕು ಎಂದರೆ ಪಂಚಪ್ರಾಣ. ರಾಜಕೀಯ ಕ್ಷೇತ್ರದಲ್ಲಿ ಗಾಡ್​ಫಾದರ್​ಗಳಿಲ್ಲದೇ ಸ್ವ ಪ್ರಯತ್ನದಿಂದ ಮೇಲೆದ್ದುದು ಅವರ ಸಾಮರ್ಥ್ಯಕ್ಕೆ ಕೈಗನ್ನಡಿ. ಪ್ರಥಮ ಪ್ರಜೆಯಾಗಿ ಅಧಿಕಾರ ಸ್ವೀಕರಿಸಿರುವ ತ್ಸಾಯಿ ಇಂಗ್ ವೆನ್, ‘ಹೊಸ ಯುಗ ಆರಂಭವಾಗಿದೆ, ತೈವಾನಿನ ಸಾರ್ವಭೌಮತೆಯನ್ನು ಕಾಪಾಡುತ್ತ ಸರ್ಕಾರದ ಬಗ್ಗೆ ಜನರ ವಿಶ್ವಾಸವನ್ನು ಮರುಸ್ಥಾಪಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಇಬ್ಭಾಗವಾಗಬೇಕಿಲ್ಲ, ಅದಕ್ಕೋಸ್ಕರ ಎಲ್ಲರೂ ಒಂದಾಗಬೇಕು ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಎಲ್ಲ ದೇಶಗಳೂ ಅಂತಾರಾಷ್ಟ್ರೀಯ ಕಾನೂನನ್ನು ಗೌರವಿಸಬೇಕು’ ಎಂದಿದ್ದಾರೆ. ಅವರ ಈ ಮಾತು ತೈವಾನಿನ ಭವಿಷ್ಯದ ಹಾದಿಗೆ ದಿಕ್ಸೂಚಿಯಂತಿದೆ.

Leave a Reply

Your email address will not be published. Required fields are marked *