ಟಾಸ್ಕ್​ಮಾಸ್ಟರ್ ಪಿಣರಾಯಿ

P.Vijayanವಾಡಿಕೆಯಂತೆ ಕೇರಳದಲ್ಲಿ ಈ ಸಲದ ಪರ್ಯಾಯ ಎಡರಂಗ ಸರ್ಕಾರದ್ದು. ಶ್ರಮಿಕ ವರ್ಗದ ಪರವಾಗಿರುವ ಎಡರಂಗ ಸರ್ಕಾರ ಬಂದರೆ ಕೈಗಾರಿಕೆಗಳಿಗೆ ಹಿನ್ನಡೆ ಎಂಬ ಮಾತು ಸರ್ವವೇದ್ಯ. ಆದರೆ, ‘ಪಿಣರಾಯಿ’ ಎಂದೇ ಪ್ರಸಿದ್ಧರಾಗಿರುವ ಪಿಣರಾಯಿ ವಿಜಯನ್ ಆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಲೇ ಅವರೊಬ್ಬ ಟಾಸ್ಕ್ಮಾಸ್ಟರ್ ಎಂಬ ಮಾತು ವ್ಯಾಪಕವಾಗಿ ಅನುರಣಿಸುತ್ತಿತ್ತು. ಅವರು ಪಕ್ಷದ ಸಿದ್ಧಾಂತ, ರೂಢಿಗತ ಸಂಪ್ರದಾಯಗಳನ್ನು ಬದಿಗೊತ್ತಿ, ಕೇರಳದಲ್ಲೂ ಸಿಲಿಕಾನ್ ವ್ಯಾಲಿ ಮಾದರಿಯ ಐಟಿ ಹಬ್ಗಳನ್ನು ಸ್ಥಾಪಿಸಲಾಗುವುದು; ಕೈಗಾರಿಕೆ ಅದರಲ್ಲೂ ವಿಶೇಷವಾಗಿ ಐಟಿ ಸೆಕ್ಟರ್, ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯ ಭೂ ಸ್ವಾಧೀನ ಪ್ರಕ್ರಿಯೆ ಸೇರಿ ಎಲ್ಲ ರೀತಿಯ ‘ಬೆಂಬಲ’ವನ್ನೂ ಸರ್ಕಾರ ನೀಡಲಿದೆ ಎಂದು ಘೊಷಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಕಾರ್ಪೆರೇಟ್ ವಲಯದಲ್ಲಿ ಹೊಸ ಆಶಾಕಿರಣ ಮೂಡಿದೆ. ಇನ್ನೊಂದೆಡೆ, ಪಿಣರಾಯಿ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೊತೆ ಹೋಲಿಸುವ ಕೆಲಸವೂ ರಾಜಕೀಯ ಚಾವಡಿಯಲ್ಲಿ ಅಲ್ಲಲ್ಲಿ ನಡೆದಿದೆ.

ಪಿಣರಾಯಿ ಎಂಬುದು ಉತ್ತರ ಕೇರಳದ ಕಣ್ಣೂರು ಜಿಲ್ಲೆಯ ಪುಟ್ಟ ಗ್ರಾಮ. ಹಿಂದುಳಿದ ವರ್ಗದ ತೀಯಾ ಜನಾಂಗದ ಕೋರನ್ ಹಾಗೂ ಕಲ್ಯಾಣಿ ದಂಪತಿಗೆ ಹುಟ್ಟಿದ ಹದಿನಾಲ್ಕು ಮಕ್ಕಳ ಪೈಕಿ ಬದುಕಿ ಉಳಿದ ಮೂವರಲ್ಲಿ ವಿಜಯನ್ ಒಬ್ಬರು. 1945ರ ಮೇ 24ರಂದು ಜನನ. ತಂದೆ ತೆಂಗಿನ ಮರದಿಂದ ನೀರಾ ಇಳಿಸುವ ಕೆಲಸ ಮಾಡುತ್ತಿದ್ದರು. ಕಡುಬಡತನದ ಕೌಟುಂಬಿಕ ವಾತಾವರಣದಲ್ಲಿ ಜನಿಸಿದ ವಿಜಯನ್, ತಲಶ್ಶೇರಿಯ ಸರ್ಕಾರಿ ಬ್ರೆನ್ನೆನ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣಕ್ಕೆ ಸೇರುವ ಮುನ್ನ ಒಂದು ವರ್ಷ ಕೈಮಗ್ಗದಲ್ಲಿ ನೇಕಾರನಾಗಿ ಕೆಲಸ ಮಾಡಿದ್ದರು. ಕೆಲಸ ಮಾಡುತ್ತಲೇ ಶಿಕ್ಷಣ ಮುಂದುವರಿಸಿದ ಅವರು ಅದೇ ಕಾಲೇಜಿನಲ್ಲಿ ಪದವಿಯನ್ನೂ ಪೂರ್ಣಗೊಳಿಸಿದರು. ಇದೇ ಅವಧಿಯಲ್ಲಿ ಅವರು ವಿದ್ಯಾರ್ಥಿ ರಾಜಕೀಯಕ್ಕೆ ಪ್ರವೇಶಿಸಿ, ಕೇರಳ ಸ್ಟೂಡೆಂಟ್ ಫೆಡರೇಷನ್ನ ಸದಸ್ಯರಾಗಿದ್ದರು. ಈ ಸಂಘಟನೆಯು ಭಾರತದ ಅವಿಭಜಿತ ಕಮ್ಯೂನಿಸ್ಟ್ ಪಕ್ಷದ ಯುವ ಘಟಕವಾಗಿತ್ತು. ಹೀಗೆ ರಾಜಕೀಯ ಪ್ರವೇಶಿಸಿದ ಅವರು, 1964ರಲ್ಲಿ ಕಮ್ಯೂನಿಸ್ಟ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕೆಎಸ್ಎಫ್ನ ಕಣ್ಣೂರು ಜಿಲ್ಲಾ ಕಾರ್ಯದರ್ಶಿಯಾದರು. ಈಗ ಕೆಎಸ್ಎಫ್ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ(ಎಸ್ಎಫ್ಐ) ಎಂದು ಗುರುತಿಸಲ್ಪಟ್ಟಿದೆ. ಹೀಗೆ ಯುವಘಟಕದಲ್ಲಿ ಹಂತ ಹಂತವಾಗಿ ಬಡ್ತಿ ಪಡೆದ ಅವರು ಅಧ್ಯಕ್ಷರಾಗಿಯೂ ಕೆಲಸ ಮಾಡಿದರು. ಕೊನೆಗೆ ಕೇರಳ ಸ್ಟೇಟ್ ಯೂತ್ ಫೆಡರೇಷನ್(ಈಗ ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ)ಗೆ ಸೇರ್ಪಡೆಗೊಂಡು ಅದರ ರಾಜ್ಯ ಅಧ್ಯಕ್ಷರೂ ಆದರು. ಆ ಅವಧಿಯಲ್ಲಿ ತುರ್ತು ಪರಿಸ್ಥಿತಿ ಇದ್ದ ಕಾರಣ ಭೂಗತ ಅಡುಗುದಾಣಗಳಿಂದ ರಾಜಕೀಯ ಚಟುವಟಿಕೆಗಳು ನಡೆಯುತ್ತಿದ್ದವು. ಪಿಣರಾಯಿ ಒಂದೂವರೆ ವರ್ಷ ಸೆರೆವಾಸವನ್ನೂ ಅನುಭವಿಸಿದ್ದರು.

ಕೂತ್ತುಪರಂಬ ವಿಧಾನಸಭಾ ಕ್ಷೇತ್ರದಿಂದ 1970ರಲ್ಲಿ ಮೊದಲ ಬಾರಿಗೆ ಕೇರಳ ವಿಧಾನಸಭೆ ಪ್ರವೇಶಿಸಿದ ವೇಳೆ ಅವರ ವಯಸ್ಸು ಕೇವಲ 25 ವರ್ಷ. ಅತ್ಯಂತ ಕಿರಿಯ ವಯಸ್ಸಿನ ಶಾಸಕ ಎಂಬ ಅವರ ಆ ದಾಖಲೆ ಇನ್ನೂ ಉಳಿದುಕೊಂಡಿದೆ. ಆ ಚುನಾವಣೆಯಲ್ಲಿ ಸಿಪಿಎಂ 28 ಸ್ಥಾನಗಳಿಸುವುದಕ್ಕಷ್ಟೇ ಯಶಸ್ವಿಯಾಗಿತ್ತು. ಅಂದು ಪಕ್ಷದ ಘಟಾನುಘಟಿ ನಾಯಕರಾಗಿದ್ದ ಟಿ.ಕೆ.ರಾಮಕೃಷ್ಣನ್, ಇ.ಕೆ.ಐ.ಬಾವಾ ಮುಂತಾದವರು ಸೋತು ಹೋಗಿದ್ದರು.

ತುರ್ತಪರಿಸ್ಥಿತಿಯ ಸಂದರ್ಭ ಪಿಣರಾಯಿ ಬಾಳಿನಲ್ಲೊಂದು ‘ಟರ್ನಿಂಗ್ ಪಾಯಿಂಟ್’. ಇದಾಗಿ 1977ರಲ್ಲಿ ನಡೆದ ಚುನಾವಣೆಯಲ್ಲಿ ಕೂತ್ತುಪರಂಬ ಕ್ಷೇತ್ರದಿಂದ ಗೆಲುವಿನ ನಗೆ ಬೀರಿದ್ದರು. ಆ ಅವಧಿಯಲ್ಲಿ ಶಾಸಕರಾಗಿದ್ದಾಗ ನಡೆದ ಒಂದು ಘಟನೆಯನ್ನು ಕೇರಳದ ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಬಿಳಿ ಪಂಚೆ, ಬಿಳಿ ಶರ್ಟ್, ತೆಳುವಾಗಿ ಟ್ರಿಮ್ ಮಾಡಿದ ಪೆನ್ಸಿಲ್ ಸ್ಕೆಚ್ನಂಥ ಮೀಸೆ – ಇವು ಪಿಣರಾಯಿ ಅವರನ್ನು ಸುಲಭವಾಗಿ ಗುರುತಿಸಬಲ್ಲ ಚಹರೆ. (ಬಡತನವನ್ನು ಮುಚ್ಚಿಹಾಕುವ ಸಲುವಾಗಿ ಬಿಳಿ ಪಂಚೆ, ಬಿಳಿ ಶರ್ಟ್ ಧರಿಸಲಾರಂಭಿಸಿದ್ದು ಎಂದು ತಮ್ಮ ಉಡುಪಿನ ರಹಸ್ಯವನ್ನು ಇತ್ತೀಚೆಗೆ ಅವರು ಮಾಧ್ಯಮದ ಜೊತೆ ಹಂಚಿಕೊಂಡಿದ್ದರು.) ತುರ್ತು ಪರಿಸ್ಥಿತಿ ನಂತರದಲ್ಲಿ ನಡೆದ ಮೊದಲ ವಿಧಾನಸಭಾ ಅಧಿವೇಶನ ಅದು. ರಕ್ತಸಿಕ್ತ ಉಡುಪು ಧರಿಸಿ ವಿಧಾನಸಭೆಗೆ ಆಗಮಿಸಿದ್ದ ಅವರು, ‘ನಾನೊಬ್ಬ ಶಾಸಕ ಎಂಬುದನ್ನೂ ಗಮನಿಸದೆ ಪೊಲೀಸರು ಯದ್ವಾತದ್ವ ಥಳಿಸಿದರು. ಇದು ಪ್ರಜಾಪ್ರಭುತ್ವವಾ?’ ಎಂದು ಗುಡುಗಿದ್ದರು. ಈ ಘಟನೆ, ಅವರ ರಾಜಕೀಯ ಬದುಕಿನಲ್ಲಿ ಮಹತ್ವದ ತಿರುವಾಗಿದ್ದು, ಪಕ್ಷದೊಳಗೂ ಪ್ರಭಾವ ಹೆಚ್ಚಿಸುವುದಕ್ಕೆ ಇದು ಸಹಕರಿಸಿತು. 1980ರ ದಶಕದ ಮಧ್ಯಭಾಗದಲ್ಲಿ ಪಕ್ಷ ಇಬ್ಭಾಗವಾಗುತ್ತಿದ್ದ ಸಂದರ್ಭದಲ್ಲಿ ಚುರುಕಾಗಿ ಪಕ್ಷ ಸಂಘಟನೆ ಕೆಲಸ ಮಾಡಿದರು. ಈ ನಡುವೆ, 1991ರಲ್ಲಿ ಪುನಃ ಕೂತ್ತುಪರಂಬ ಕ್ಷೇತ್ರದಿಂದ ಗೆಲುವು ಸಾಧಿಸಿದರು. 1996ರಲ್ಲಿ ಪಯ್ಯನ್ನೂರು ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1996-98ರಲ್ಲಿ ಇ.ಕೆ.ನಾಯನಾರ್ ಸರ್ಕಾರದ ಸಚಿವ ಸಂಪುಟದಲ್ಲಿ ಎರಡು ವರ್ಷಗಳ ಕಾಲ ವಿದ್ಯುತ್ ಮತ್ತು ಸಹಕಾರ ಸಚಿವರಾಗಿದ್ದರು. ಸುಮಾರು ಐದು ದಶಕಗಳ ರಾಜಕೀಯ ಬದುಕಿನಲ್ಲಿ ಸಚಿವರಾಗಿ ಅವರ ಅನುಭವ ಇಷ್ಟೆ. 1998ರಲ್ಲಿ ಪಕ್ಷದ ಕಾರ್ಯದರ್ಶಿಯಾದ ಅವರು, ಸಚಿವ ಸ್ಥಾನ ತ್ಯಜಿಸಬೇಕಾಯಿತು. ಸಚಿವರಾಗಿದ್ದ ಅವಧಿಯಲ್ಲಿ ಅವರ ಕೆಲಸ ನೋಡಿದ್ದ ಅಧಿಕಾರಿಗಳು, ಅವರನ್ನು ‘ಟಾಸ್ಕ್ಮಾಸ್ಟರ್’, ಉತ್ತಮ ಆಡಳಿತಗಾರ ಎಂದೇ ಈಗಲೂ ಸ್ಮರಿಸುತ್ತಾರೆ.

ಪಕ್ಷದ ಹಿರಿಯ ನಾಯಕ ವಿ.ಎಸ್.ಅಚ್ಯುತಾನಂದನ್ ಅವರೊಂದಿಗೆ 2007ರಲ್ಲಿ ಬಹಿರಂಗ ವಾಕ್ಸಮರ ನಡೆಸಿದ್ದಕ್ಕಾಗಿ ಪಕ್ಷದಿಂದ ಅಮಾನತು ಕೂಡ ಆಗಿದ್ದರು. ಆಗ ವಿ.ಎಸ್ ಕೂಡ ಅಮಾನತಾಗಿದ್ದರು. ಬಳಿಕ ಇಬ್ಬರನ್ನೂ ಪಕ್ಷಕ್ಕೆ ಮರುಸೇರ್ಪಡೆಗೊಳಿಸಲಾಗಿತ್ತು. ಏತನ್ಮಧ್ಯೆ, ರಾಜಕೀಯ ಲಾಭಕ್ಕಾಗಿ ಭ್ರಷ್ಟಾಚಾರ ಎಸಗಿದ ಆರೋಪವೂ ಪಿಣರಾಯಿ ಮೇಲಿತ್ತು. ಈ ವಿಷಯವಾಗಿ ಸಿಬಿಐ ಪ್ರಕರಣವನ್ನೂ ದಾಖಲಿಸಿತ್ತು. ಆದರೆ, ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ 2013ರಲ್ಲಿ ಅವರು ದೋಷಮುಕ್ತರಾಗಿದ್ದರು.

ಹೀಗೆ ರಾಜಕೀಯ ಬದುಕಿನಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದರೂ, ಹದಿನೇಳು ವರ್ಷ ಕಾಲ ಪಕ್ಷದ ಕಾರ್ಯದರ್ಶಿಯಾಗಿದ್ದ ಅವರು ದೀರ್ಘ ಅವಧಿಯ ಕಾರ್ಯದರ್ಶಿ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಈ ಅವಧಿಯಲ್ಲಿ ಅವರಿಗೆ ‘ಸರ್ವಾಧಿಕಾರಿ’ಯ ಇಮೇಜ್ ಕೂಡ ಸಿಕ್ಕಿತ್ತು. ಕೇರಳದಲ್ಲಿ ಸಂಘಪರಿವಾರ ಸಂಘಟನೆ ಬೆಳೆಯದಂತೆ ನೋಡಿಕೊಳ್ಳುವ ಹೆಚ್ಚಿನ ಪ್ರಯತ್ನ ವಿಜಯನ್ ನೇತೃತ್ವದಲ್ಲೇ ಆಗಿತ್ತು. ಎಡ-ಬಲ ಪಂಥೀಯರ ಸಂಘರ್ಷ ಕೇರಳದಲ್ಲಿ ಇಂದು ನಿನ್ನೆಯದಲ್ಲ. ಅದೊಂದು ರಕ್ತ ಚರಿತ್ರೆ. ಹೀಗಾಗಿಯೇ ಇತ್ತೀಚೆಗೆ ನಡೆದ ಚುನಾವಣೆ ವೇಳೆ, ಕಣದಲ್ಲಿ ಬಲಪಂಥೀಯ ಸಂಘಟನೆಗಳಿಂದ ತೀವ್ರ ಸ್ಪರ್ಧೆ ಎದುರಾಗಿತ್ತು. ಪಿಣರಾಯಿ ಅವರ ಖಾಸಗಿ ಬದುಕಿನ ಬಗ್ಗೆ ಹೇಳುವುದಾದರೆ, ಪತ್ನಿ ಕಮಲಾ ವೃತ್ತಿಯಲ್ಲಿ ಶಿಕ್ಷಕಿ. ಮಗಳು ವೀಣಾ ಬೆಂಗಳೂರಿನಲ್ಲಿ ಸ್ಟಾರ್ಟಪ್ ಒಂದರ ಮಾಲಕಿ. ಮಗ ವಿವೇಕ್ ಅಬುದಾಬಿಯಲ್ಲಿ ಬ್ಯಾಂಕ್ ಉದ್ಯೋಗಿ. ಅಂದ ಹಾಗೆ ಪಿಣರಾಯಿ ಅವರು ಚಿತ್ರನಟ ರಜನೀಕಾಂತ್ರ ದೊಡ್ಡ ಫ್ಯಾನ್. ಇದೇ ಮೊದಲ ಸಲ ಕೇರಳದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ವಿಜಯನ್ ಮೇಲೆ ಜನರ ನಿರೀಕ್ಷೆಯೂ ಹೆಚ್ಚಾಗಿದೆ. ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಹೀಗಾಗಿ ಅವರ ಹೊಣೆಗಾರಿಕೆ ವೃದ್ಧಿಸಿದ್ದು, ಅದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಸದ್ಯದ ಕುತೂಹಲ.

Leave a Reply

Your email address will not be published. Required fields are marked *