ಟಾಟಾ ಸ್ಕೈನಲ್ಲಿ ಉದಯಿಸಿದ ಚಂದ್ರ

ಹೌದು.. ಅಂದು 2016ರ ಅಕ್ಟೋಬರ್ 24. ಸೂರ್ಯ ಅಸ್ತಮಿಸುವ ಹೊತ್ತಿನಲ್ಲಿ 100 ಶತಕೋಟಿಗೂ ಅಧಿಕ ಮೌಲ್ಯದ ಟಾಟಾ ಸಾಮ್ರಾಜ್ಯ ಅಧ್ಯಕ್ಷರಾಗಿದ್ದ ಸೈರಸ್ ಪಲ್ಲೋನ್ಜಿ ಮಿಸ್ತ್ರಿ ಪದಚ್ಯುತರಾಗಿದ್ದು, ರತನ್ ಟಾಟಾ ಅವರನ್ನೇ ನಾಲ್ಕು ತಿಂಗಳ ಮಟ್ಟಿಗೆ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ವಿಷಯ ಭಾರಿ ಸಂಚಲನ ಮೂಡಿಸಿತ್ತು. ತರುವಾಯದ ಬೆಳವಣಿಗೆಗಳು ಎಲ್ಲರಿಗೂ ಗೊತ್ತಿರುವಂಥದ್ದೇ. ಟಾಟಾ ಗ್ರೂಪ್ ಬೆಳವಣಿಗೆ ಗಮನಿಸುತ್ತಿದ್ದವರಿಗೆ ಕಳೆದ ಗುರುವಾರ(ಜ.12) ಮತ್ತೊಂದು ಅಚ್ಚರಿ ಕಾದಿತ್ತು. ಟಾಟಾ ಗ್ರೂಪ್ ಅಧ್ಯಕ್ಷರಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್)ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎನ್. ಚಂದ್ರಶೇಖರನ್(54 ವರ್ಷ) ಅವರು ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಸಂಚಲನಕ್ಕೆ ಕಾರಣವಾಗಿತ್ತು. ಈ ನೇಮಕದೊಂದಿಗೆ ಟಾಟಾ ಸಾಮ್ರಾಜ್ಯದೊಳಗಿಂದಲೇ `ಚಂದ್ರ’ ಉದಯಿಸಿದಂತಾಗಿದೆ.
ಚಂದ್ರಶೇಖರನ್ ಆಪ್ತರಿಂದ `ಚಂದ್ರ’, `ಚಂದ್ರು’ ಎಂದೇ ಕರೆಯಿಸಿಕೊಳ್ಳುತ್ತಿರುವವರು. ಟಾಟಾ ಟ್ರಸ್ಟ್‍ನ ಈ ಸಲದ ಆಯ್ಕೆ ಹೇಗಿದೆ ಎಂದರೆ, ಅಧ್ಯಕ್ಷ ಸ್ಥಾನಕ್ಕೆ ನಿಯೋಜಿತರಾದವರು ಟಾಟಾ ಕುಟುಂಬದವರೂ ಅಲ್ಲ, ಟಾಟಾ ಷೇರುದಾರರೂ ಅಲ್ಲ, ಮಿಸ್ತ್ರಿ ಕುಟುಂಬಕ್ಕೆ ಸೇರಿದವರೂ ಅಲ್ಲ, ಪೂರ್ತಿ ಹೊರಗಿನವರು. ಆದಾಗ್ಯೂ, `ಒಳಗಿನವರು’ ಎಂಬುದು ವಿಶೇಷ. ಚಂದ್ರಶೇಖರನ್ ಅವರ ಜತೆಗೆ ಸ್ಪರ್ಧಿಗಳಾಗಿ ಜಾಗ್ವಾರ್ ಲ್ಯಾಂಡ್ ರೋವರ್‍ನ ಸಿಇಒ ರಾಲ್ಫ್ ಸ್ಪೆಥ್, ಯೂನಿಲಿವರ್‍ನ ಹರ್ಷ್ ಮನ್ವಾನಿ, ಸ್ಮಿತ್ ಗ್ರೂಪ್‍ನ ಜಾರ್ಜ್ ಬರ್ಕ್‍ಲಿ, ಪೆಪ್ಸಿ ಕಂಪನಿಯ ಸಿಇಒ ಇಂದ್ರಾ ನೂಯಿ ಮುಂತಾದವರಿದ್ದರು. ಮಿಸ್ತ್ರಿ ಅವರು ಪದಚ್ಯುತಗೊಂಡ ಬಳಿಕವಷ್ಟೇ ಚಂದ್ರಶೇಖರನ್ ಮತ್ತು ಸ್ಪೆಥ್ ಅವರು ಟಾಟಾ ಸನ್ಸ್‌ನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದರು.
ಟಿಸಿಎಸ್‍ನಲ್ಲೇ ಮೂರು ದಶಕ ಕಾಲ ವಿವಿಧ ಹೊಣೆಗಾರಿಕೆಗಳನ್ನು ನಿಭಾಯಿಸಿದ ಚಂದ್ರಶೇಖರ್‍ಗೆ, ಟಾಟಾ ಗ್ರೂಪ್‍ನ ಸಂಸ್ಕøತಿ, ಮೌಲ್ಯ ಮತ್ತು ಆಚಾರ ವಿಚಾರಗಳ ಸ್ಪಷ್ಟತೆ ಇದೆ. ನಿಕಟಪೂರ್ವ ಅಧ್ಯಕ್ಷ ಮಿಸ್ತ್ರಿಯವರಲ್ಲಿ ಆ ಕೊರತೆ ಇದ್ದುದು ಸ್ಪಷ್ಟ. ಹೀಗಾಗಿ ಆಯ್ಕೆ ಸಮಿತಿಯು ಗ್ರೂಪ್‍ನ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸ್ಪರ್ಧಿಗಳನ್ನು ತುಲನೆ ಮಾಡಿದಾಗ, ಚಂದ್ರಶೇಖರನ್ ಅವರ ಪ್ರೊಫೈಲ್‌ ಒಂದು ತೂಕ ಹೆಚ್ಚು ಬಿತ್ತು. ಇದೇ ಕಾರಣಕ್ಕೆ ಅವರ ಆಯ್ಕೆಯೂ ಆಯಿತು. ಇದರ ಬೆನ್ನಲ್ಲೇ, ಟಾಟಾ ಗ್ರೂಪ್‍ನ ಆಯ್ಕೆಯನ್ನು ಕಾರ್ಪೊರೇಟ್‌ ವಲಯ ಸ್ವಾಗತಿಸಿದ ಪರಿ, ಚಂದ್ರಶೇಖರನ್ ಅವರ ಸಾಮಥ್ರ್ಯಕ್ಕೆ ಕೈಗನ್ನಡಿ ಎಂಬಂತೆ ಇತ್ತು. ಪದವಿ ವಿದ್ಯಾಭ್ಯಾಸ ಮುಗಿಯುತ್ತಲೇ ಕೃಷಿ ಕ್ಷೇತ್ರದ ಕಡೆಗೆ ಒಲವು ತೋರಿದ್ದ ಅವರು ಇಂದು ಕಾರ್ಪೊರೇಟ್ ಕ್ಷೇತ್ರದ ಸಾಧಕರಾಗಿ ಹೊರಹೊಮ್ಮಿರುವುದು ವಿಶೇಷ.
ಈ ಬೆಳವಣಿಗೆಯ ನಂತರದಲ್ಲಿ, ಚಂದ್ರಶೇಖರನ್ ಬದುಕಿನ ಹಾದಿಯಲ್ಲಿ ಒಂದಷ್ಟು ದಿನ ಅವರೊಂದಿಗೆ ಒಡನಾಡಿದವರು ಒಬ್ಬೊಬ್ಬರಾಗಿ ಅವರ ಸಾಧನೆಯ ಹಾದಿಯ ವಿವರ ಬಿಚ್ಚಿಡತೊಡಗಿದ್ದಾರೆ. ಕೊಯಂಬತ್ತೂರಿನ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಎಂ.ಗುರುಸ್ವಾಮಿ,`ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಚಂದ್ರಶೇಖರನ್, ಕಾಲೇಜು ಸೇರಿದ ಮೇಲಷ್ಟೆ ಇಂಗ್ಲಿಷ್ ಭಾಷೆಯನ್ನು ಸರಿಯಾಗಿ ಕಲಿತದ್ದು. 1983ರಲ್ಲಿ ಎನ್ ಚಂದ್ರಶೇಖರನ್ ಅವರು ಅನ್ವಯಿಕ ವಿಜ್ಞಾನದಲ್ಲಿ ಬಿಎಸ್ಸಿ ಪದವಿ ಪೂರ್ಣಗೊಳಿಸಿದ ಸಂದರ್ಭ, ಕೃಷಿ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದರು. ತಮಿಳು ಬ್ರಾಹ್ಮಣರಾದ ಚಂದ್ರಶೇಖರನ್ ಕುಟುಂಬ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಮೋಹನೂರು ಗ್ರಾಮದಲ್ಲಿ ಕೃಷಿ ಜಮೀನು ಹೊಂದಿತ್ತು. ಆದರೆ, ಚಂದ್ರಶೇಖರನ್ ಅವರಿಗೆ ಕಂಪ್ಯೂಟರ್ ವಿಷಯದಲ್ಲಿದ್ದ ಪರಿಣತಿ ನಮ್ಮ ಗಮನಕ್ಕೆ ಬಂದಿತ್ತು. ಉನ್ನತ ಶಿಕ್ಷಣದ ಕುರಿತಂತೆ ಚಂದ್ರಶೇಖರನ್ ಅವರ ತಂದೆ ವೃತ್ತಿಯಲ್ಲಿ ವಕೀಲರಾದ ಎಸ್.ನಟರಾಜನ್ ಅವರು ನಮ್ಮ ಜತೆ ಸಮಾಲೋಚನೆ ನಡೆಸಿದಾಗ, ಎಂಸಿಎ ಮಾಡಿಸುವಂತೆ ಸಲಹೆ ನೀಡಿದ್ದೆವು. ಚಾರ್ಟರ್ಡ್ ಅಕೌಂಟೆಂಟ್ ಆಗಬೇಕು ಎಂಬ ಆಸೆಯೂ ಚಂದ್ರಶೇಖರನ್‍ಗೆ ಇತ್ತು. ಅದರಂತೆ, ಅವರು ಚಂದ್ರಶೇಖರನ್‍ರನ್ನು ತಿರುಚ್ಚಿಯ ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜಿ(ಸದ್ಯ ಇದು ಎನ್‍ಐಟಿ-ಟಿ ಎಂದೇ ಪ್ರಸಿದ್ಧ)ಗೆ ಎಂಸಿಎ ಕಲಿಯಲು ಸೇರಿಸಿದರು. ಅಲ್ಲಿ ಚಂದ್ರಶೇಖರನ್ ಪ್ರಥಮ ಬ್ಯಾಚಿನ ವಿದ್ಯಾರ್ಥಿ. ನಟರಾಜನ್ ಅವರಿಗೆ ಈಗ 84 ವರ್ಷ. ಮೊನ್ನೆ ಟಾಟಾ ಗ್ರೂಪ್ ಅಧ್ಯಕ್ಷರಾಗಿ ಚಂದ್ರಶೇಖರನ್ ಆಯ್ಕೆಯಾದ ವಿಚಾರ ಸುದ್ದಿಯಾಗುತ್ತಲೇ ಅವರು ಕರೆ ಮಾಡಿ, ಅಂದಿನ ಈ ಘಟನೆಗಳನ್ನೆಲ್ಲ ನೆನಪಿಸಿಕೊಂಡರು’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಎಂಸಿಎ ಪದವಿ ಪಡೆದ ನಂತರದಲ್ಲಿ 1987ರಲ್ಲಿ ಟಿಸಿಎಸ್ ಕಂಪನಿಗೆ ಇಂಟರ್ನಿಯಾಗಿ ಸೇರ್ಪಡೆಗೊಂಡ ಅವರು, ಕಂಪನಿಯಲ್ಲಿ ಕೆಳಮಟ್ಟದಿಂದ ಕೆಲಸ ಮಾಡಿ ಆಡಳಿತ ನಿರ್ವಹಣೆ ಮಾಡುವ ಹಂತಕ್ಕೆ ಬೆಳೆದವರು. ಇಪ್ಪತ್ತು ವರ್ಷಗಳ ಅವಧಿಯಲ್ಲಿ ಕೆಳ ಹಂತದ ವಿವಿಧ ಹೊಣೆಗಾರಿಕೆಗಳನ್ನು ನಿಭಾಯಿಸಿದ ಅವರು, 2007ರಲ್ಲಿ ಕಂಪನಿಯ ಚೀಫ್ ಆಪರೇಟಿಂಗ್ ಆಫೀಸರ್ ಹೊಣೆಗಾರಿಕೆ ಹೊತ್ತುಕೊಂಡರು. ಅದಾಗಿ, ಎರಡು ವರ್ಷದ ಬಳಿಕ ಅದೇ ಕಂಪನಿಯ ಸಿಇಒ ಆಗಿ ನೇಮಕವಾದರು. ಅಂದು ಅವರು ಟಾಟಾ ಗ್ರೂಪ್‍ನ ಅತ್ಯಂತ ಯುವ ಸಿಇಒಗಳ ಪೈಕಿ ಒಬ್ಬರಾಗಿದ್ದರು. ಅವರ ಆಡಳಿತಾವಧಿಯಲ್ಲಿ ಟಿಸಿಎಸ್‍ನ ಆದಾಯ ಮೂರು ಪಟ್ಟು ಹೆಚ್ಚಿದ್ದು 17ಶತಕೋಟಿ ಡಾಲರ್ ತಲುಪಿದೆ.
ಕೆಲಸದ ವಿಷಯಕ್ಕೆ ಬಂದರೆ, ಚಂದ್ರಶೇಖರನ್ ಅವರು `ಟಫ್ ಟಾಸ್ಕ್‍ಮಾಸ್ಟರ್’. ಅವರ ಕೆಲಸದ ಶೈಲಿಯೇ ಅಂಥದ್ದು- ಜತೆಗಿರುವವರನ್ನು ಉತ್ತೇಜಿಸುತ್ತ, ಅವರನ್ನು ಸಬಲರನ್ನಾಗಿಸುತ್ತ ಮುನ್ನಡೆಯುವುದು. ಟಿಸಿಎಸ್‍ನ ಸಿಇಒ ಎಂಬ ಹೊಣೆಗಾರಿಕೆ ಹೊತ್ತುಕೊಂಡಾಗ ಅದನ್ನು ಸಂಘಟನಾತ್ಮಕವಾಗಿ ಮರುವಿನ್ಯಾಸಗೊಳಿಸುವ ದೊಡ್ಡ ಸವಾಲು ಅವರ ಎದುರಿಗಿತ್ತು. ಹಾಗೆ, ಕಂಪನಿಯನ್ನು 23 ಘಟಕಗಳನ್ನಾಗಿ ವಿಂಗಡಿಸಿ, ಅವುಗಳ ನಾಯಕರೆನಿಸಿದವರು ಉಳಿದವರ ಜತೆಗೂಡಿ ಕೆಲಸ ಮಾಡಬೇಕು ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಹೀಗೆ, ಇಡೀ ವ್ಯವಸ್ಥೆಯನ್ನು ಬಲಗೊಳಿಸಿದ ಕೀರ್ತಿಗೆ ಅವರು ಭಾಜನರಾದರು. ಒಂದು ಕಂಪನಿಯನ್ನು ನಡೆಸುವುದಕ್ಕೂ 100ಕ್ಕೂ ಹೆಚ್ಚು ಕಂಪನಿಗಳ ಗುಂಪನ್ನು ಮುನ್ನಡೆಸುವುದಕ್ಕೂ ಬಹಳ ವ್ಯತ್ಯಾಸವಿದೆ. ಟಾಟಾ ಗ್ರೂಪ್‍ನಲ್ಲಿರುವ 100ಕ್ಕೂ ಹೆಚ್ಚು ಕಂಪನಿಗಳಲ್ಲಿ ಹಲವು ನಷ್ಟದಲ್ಲಿವೆ. ಬೆರಳೆಣಿಕೆ ಕಂಪನಿಗಳಷ್ಟೇ ಲಾಭದಲ್ಲಿವೆ. ಟಾಟಾ ಸ್ಟೀಲ್‍ನ ಯುರೋಪಿಯನ್ ವ್ಯವಹಾರ ಕಳೆದ ಐದು ವರ್ಷಗಳಿಂದ 34,000 ಕೋಟಿ ರೂಪಾಯಿ ನಷ್ಟದಲ್ಲಿದೆ. ಟಾಟ ಮೋಟಾರ್ಸ್‍ನ ಗ್ರಾಹಕ ವಾಹನಗಳ ಮಾರುಕಟ್ಟೆ ಪಾಲು ಕಳೆದ ಐದು ವರ್ಷಗಳ ಅವಧಿಯಲ್ಲಿ ತೀವ್ರವಾಗಿ ಕುಸಿಇದೆ. ಪ್ರಯಾಣಿಕ ವಾಹನಗಳ ಮಾರುಕಟ್ಟೆ ಪಾಲು ಕೂಡ ಕಳೆದ ವರ್ಷ ಶೇಕಡ 5 ಕುಸಿತ ಕಂಡಿದೆ. ಡೊಕೊಮೊ ಜತೆಗಿನ ಟಾಟಾ ಟೆಲಿಕಾಂ ವಹಿವಾಟಿನ ನಷ್ಟ, ನಷ್ಟದಲ್ಲಿರುವ ಹೋಟೆಲ್ ಉದ್ಯಮ ಹೀಗೆ ಸಾಲು ಸಾಲು ಸವಾಲುಗಳು ಚಂದ್ರಶೇಖರನ್ ಹಾದಿಯಲ್ಲಿದೆ. ಫೆಬ್ರವರಿ 21ರಂದು ಹೊಣೆಗಾರಿಕೆ ಸ್ವೀಕರಿಸಲಿರುವ ಅವರು ಈ ಎಲ್ಲ ಸವಾಲುಗಳನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಸದ್ಯದ ಕುತೂಹಲ.
ಇನ್ನು ವೈಯಕ್ತಿಕ ವಿಚಾರಕ್ಕೆ ಬಂದರೆ, ಮಧಮೇಹ ಇರುವುದರಿಂದಾಗಿ ಕಳೆದ ಒಂಭತ್ತು ವರ್ಷಗಳಿಂದ ಬೆಳಗ್ಗೆ ಎದ್ದು ಜಾಗಿಂಗ್ ಮಾಡುತ್ತಾರೆ. ಮ್ಯಾರಥಾನ್ ಓಟಗಳಲ್ಲಿ ಭಾಗವಹಿಸುತ್ತಿರುವ ಕಾರಣ `ಮ್ಯಾರಥಾನ್ ರನ್ನರ್’ ಎಂದೂ ಗುರುತಿಸಿಕೊಂಡಿದ್ದಾರೆ. ಪ್ರಾಣಿ ಪ್ರಿಯರಾಗಿರುವ ಅವರು ರೇ ಎಂಬ ನಾಯಿಯೊಂದನ್ನು ಸಾಕಿದ್ದರು. ಅದು 2014ರಲ್ಲಿ ನಿಧನವಾಗಿದೆ. ಸಮಯಾವಕಾಶ ಇದ್ದಾಗೆಲ್ಲ ಫೋಟೊಗ್ರಫಿ ಮಾಡುತ್ತಿರುತ್ತಾರೆ. ಪತ್ನಿ ಲಲಿತಾ, ಮಗ ಪ್ರಣವ್. ಮುಂಬೈನಲ್ಲೇ ವಾಸ.

Leave a Reply

Your email address will not be published. Required fields are marked *