ವಯಸ್ಸಾಯ್ತೆಂದ ಕ್ಯೂಬಾ ಕಾಮ್ರೇಡ್

ಫಿಡೆಲ್ ಕ್ಯಾಸ್ಟ್ರೊ
ಫಿಡೆಲ್ ಕ್ಯಾಸ್ಟ್ರೊ

ಕ್ಯೂಬಾ ಎಂದಾಕ್ಷಣ ನೆನಪಾಗುವುದು ಅಮೆರಿಕಕ್ಕೆ ಸೆಡ್ಡು ಹೊಡೆದು ನಿಂತ ಕಮ್ಯೂನಿಸ್ಟ್ ನಾಯಕ `ಫಿಡೆಲ್ ಕ್ಯಾಸ್ಟ್ರೊ’. ಅದು ಬಿಟ್ಟರೆ ಸಿಗಾರ್, ಸಕ್ಕರೆಗಳಿಗೆ ಹೆಸರುವಾಸಿ ಆ ಕೆರೇಬಿಯನ್ ದೇಶ. ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕ್ಯೂಬಾಗೆ ಭೇಟಿ ನೀಡಿದಾಗ ಸುದ್ದಿಯಾದವರು ಫಿಡೆಲ್. ಇದಾಗಿ, ಕಳೆದ ಮಂಗಳವಾರ ಕ್ಯೂಬನ್ ಕಮ್ಯೂನಿಸ್ಟ್ ಪಾರ್ಟಿ ಆಫ್ ಕಾಂಗ್ರೆಸನ್ನು ಉದ್ದೇಶಿಸಿ ಹೇಳಿದ ಮಾತುಗಳಿಂದಾಗಿ ಜಗತ್ತಿನಾದ್ಯಂತ ಸುದ್ದಿಯಾದರು.
`ಶೀಘ್ರವೇ, ನಾನು 90 ವರ್ಷದವನಾಗುತ್ತಿದ್ದೇನೆ. ನನ್ನ ಅಂತ್ಯ ಕಾಲ ಸಮೀಪಿಸುತ್ತಿದೆ. ಇದು ಯಾವುದೇ ಪ್ರಯತ್ನ ಬಲದಿಂದಾದ್ದಲ್ಲ. ಪ್ರಕೃತಿ ಸಹಜವಾಗಿ ನಡೆದ ಪ್ರಕ್ರಿಯೆ ಇದಾಗಿದ್ದು, ನಮ್ಮೆಲ್ಲೆರ ಬದುಕಿನಲ್ಲಿ ಇದು ನಡೆದೇ ನಡೆಯುತ್ತದೆ. ಇನ್ನು ಎಲ್ಲ ಸಾಮಾನ್ಯರಲ್ಲಿ ನಾನೂ ಒಬ್ಬನಾಗುತ್ತಿದ್ದೇನೆ. ಎಲ್ಲ ಕಮ್ಯೂನಿಸ್ಟರು ಹುರುಪು ಹಾಗೂ ಘನತೆ ಗೌರವಗಳೊಂದಿಗೆ ಕೆಲಸ ಮಾಡಿದ್ದೇ ಆದಲ್ಲಿ ಹಾಗೂ ಮನುಷ್ಯರಿಗೆ ಅಗತ್ಯವಾದ ವಸ್ತುಗಳು ಮತ್ತು ಸಾಂಸ್ಕøತಿಕ ಸರಕನ್ನು ಉತ್ಪಾದಿಸಿದ್ದೇ ಆದಲ್ಲಿ, ಕ್ಯೂಬನ್ ಕಮ್ಯೂನಿಸ್ಟ್ ಪಕ್ಷದ ಸಿದ್ಧಾಂತಗಳು ಈ ಜಗತ್ತಿನಲ್ಲಿ ಹಾಗೆಯೇ ಉಳಿದುಕೊಳ್ಳಲಿದೆ’ ಎಂದು ಮಾರ್ಮಿಕವಾಗಿ ಫಿಡೆಲ್ ಹೇಳಿದ್ದರು. ಹೀಗೆ ಅವರಾಡಿದ `ಅಂತ್ಯಕಾಲದ ಮಾತು’ ಜಗತ್ತಿನ ಗಮನಸೆಳೆದಿದೆ.
ಫಿಡೆಲ್‍ದು ಹೋರಾಟದ ಹಾದಿಯ ಬದುಕು. ಸೋಷಿಯಲಿಸ್ಟ್ ಆಗಿದ್ದವರು, ಬಂಡಾಯ ಎದ್ದು ಕೊನೆಗೆ ಕಮ್ಯೂನಿಸ್ಟ್ ಆಗಿ ಬದಲಾದರು. ಒಂದು ಲಕ್ಷ ಚಿಲ್ಲರೆ ಚ.ಕಿ.ಮೀ. ವ್ಯಾಪ್ತಿಯುಳ್ಳ ಕ್ಯೂಬಾ ಎಂಬ ಪುಟ್ಟ ರಾಷ್ಟ್ರದ `ದೊರೆ’ಯಂತೆ ಮೂರು ದಶಕಗಳಿಗೂ ಅಧಿಕ ಕಾಲ ಆಳ್ವಿಕೆ ನಡೆಸಿದವರು. ಆದರೆ, ಅವರಿಗೇನೂ ರಾಜಮನೆತನದ ಹಿನ್ನೆಲೆಯಿರಲಿಲ್ಲ. ಕ್ಯೂಬನ್ ಕಮ್ಯೂನಿಸ್ಟ್ ಪಕ್ಷದ `ಸರ್ವಸ್ವ’ವೆಂಬ ಛಾಪು ಮೂಡಿಸಿದರು.
ಕ್ಯೂಬಾದ ಬಿರಾನ್‍ನಲ್ಲಿ ಏಂಜೆಲ್ ಕ್ಯಾಸ್ಟ್ರೊ ಮತ್ತು ಲಿನಾ ರುಜ್ ದಂಪತಿಯ ಏಳು ಮಕ್ಕಳ ಪೈಕಿ ಒಬ್ಬರಾಗಿ ಫಿಡೆಲ್ 1926ರ ಆ.13ರಂದು ಜನಿಸಿದರು. ಫಿಡೆಲ್ ಅಲೆಜಂದ್ರೋ ಕ್ಯಾಸ್ಟ್ರೊ ರುಜ್ ಅವರ ಪೂರ್ಣ ಹೆಸರು. ತಂದೆ ಏಂಜೆಲ್ ಸ್ಪೇನ್‍ನ ಗ್ಯಾಲಿಸಿಯಾದಿಂದ ಕ್ಯೂಬಾಗೆ ವಲಸೆ ಬಂದು, ಸ್ವಂತ ದುಡಿಮೆಯಿಂದಲೇ ಸಿರಿವಂತರಾದವರು. ಮೊದಲ ಪತ್ನಿ ಜತೆಗೆ ವಿರಸವೇರ್ಪಟ್ಟು ವಿಚ್ಛೇದನ ಪಡೆದ ಬಳಿಕ ಆಕೆಗೆ ಅಡುಗೆ ಸಹಾಯಕಳಾಗಿದ್ದ ಲಿನಾ ರುಜ್‍ಳನ್ನೇ ಏಂಜೆಲ್ ವಿವಾಹವಾಗಿದ್ದರು. ಇಂತಹ ವಾತಾವರಣದಲ್ಲಿ ಬೆಳೆದ ಫಿಡೆಲ್ ಬಾಲ್ಯದಲ್ಲಿ ಬಹಳ ತುಂಟಾಟಿಕೆ, ಪುಂಡುತನ ತೋರುತ್ತಿದ್ದರು. ಹೀಗಾಗಿ ಶಾಲೆಯಿಂದಲೇ ಅವರನ್ನು ಹೊರಹಾಕಿದ್ದರು. ಪರಿಣಾಮ ಸಾಂಟಿಯಾಗೋದ ಖಾಸಗಿ ಶಾಲೆಗೆ ಫಿಡೆಲ್‍ರನ್ನು ಸೇರಿಸಿದ್ದರು. ಕೊನೆಗೆ 1945ರಲ್ಲಿ ಹವಾನದ ಪ್ರತಿಷ್ಠಿತ ಕಾಲೇಜಿನಲ್ಲಿ ಇತಿಹಾಸ, ಭೌಗೋಳಿಕ ಶಾಸ್ತ್ರಗಳಲ್ಲಿ ಪದವಿ ಶಿಕ್ಷಣ ಪಡೆದರು. ತರುವಾಯ 1950ರಲ್ಲಿ ಯುನಿವರ್ಸಿಟಿ ಆಫ್ ಹವಾನಾದಲ್ಲಿ ಡಾಕ್ಟರೇಟ್ ಪದವಿಯನ್ನೂ ಪಡೆದರು.
ಈ ನಡುವೆ, 1947ರ ಜೂನ್‍ನಲ್ಲಿ ಡೊಮಿನಿಕನ್ ರಿಪಬ್ಲಿಕ್ ರಾಷ್ಟ್ರದಲ್ಲಿ ಬಲಪಂಥೀಯ ಮಿಲಿಟರಿ ಆಡಳಿತವನ್ನು ಕಿತ್ತೊಗೆಯುವ ಕ್ರಾಂತಿಯೊಂದು ನಡೆಯುತ್ತಿರುವುದು ಫಿಡೆಲ್ ಗಮನಕ್ಕೆ ಬಂತು. ಆ ಕ್ರಾಂತಿಕಾರರ ಜೊತೆ ಸೇರಿದ ಫಿಡೆಲ್ ಬಂಧನಕ್ಕೆ ಒಳಗಾಗುತ್ತಾರೆ. ಅಮೆರಿಕ ಒತ್ತಡಕ್ಕೆ ಸಿಲುಕಿ ಕ್ಯೂಬಾದ ಅಂದಿನ ಸರ್ಕಾರ ಆ ಕೆಲಸ ಮಾಡುತ್ತದೆ. ಇದಾಗಿ ಸೆರೆಯಿಂದ ಹೊರಬಂದ ಫಿಡೆಲ್ ಹವಾನಾಕ್ಕೆ ಬಂದು ವಿದ್ಯಾರ್ಥಿ ಪ್ರತಿಭಟನೆಯೊಂದರ ನಾಯಕತ್ವ ವಹಿಸಿದ್ದರು. ಅಲ್ಲಿ ಒಂದಷ್ಟು ಕಮ್ಯೂನಿಸ್ಟ್ ನಾಯಕರ ಪರಿಚಯ ಅವರಿಗಾಗುತ್ತದೆ. ಪ್ರತಿಭಟನೆಗಳ ಮೂಲಕ ಅವರು ದೇಶದ ಗಮನಸೆಳೆದರು. ಒಮ್ಮೆ ಎಡಕ್ಕೂ ಮತ್ತೊಮ್ಮೆ ಬಲಕ್ಕೂ ವಾಲುತ್ತಿದ್ದ ಫಿಡೆಲ್ ಕೊನೆಗೆ ವಾಲಿದ್ದು ಎಡಕ್ಕೆ, ಅದರ ತತ್ತ್ವಸಿದ್ಧಾಂತಕ್ಕೆ. ಕಾರ್ಲ್‍ಮಾರ್ಕ್ಸ್, ಫೆಡ್ರಿಕ್ ಏಂಜೆಲ್ಸ್, ವ್ಲಾದಿಮಿರ್ ಲೆನಿನ್‍ರ ಬರಹಗಳಿಗೆ ಮನಸೋತ ಅವರು, ಕ್ಯೂಬಾದ ಸಮಸ್ಯೆಯನ್ನು ಆಂತರಿಕ ಬಂಡವಾಳ ಶಾಹಿ ಸಮಾಜದ ಅಥವಾ ಭ್ರಷ್ಟ ರಾಜಕಾರಣಿಗಳ ಕೊಡುಗೆ ಎಂದೇ ವ್ಯಾಖ್ಯಾನಿಸುತ್ತಿದ್ದರು. ಹವಾನಾದ ಬಡವರ ಪರ, ವಿದ್ಯಾರ್ಥಿಗಳ ನಡುವೆ ಇದ್ದುಕೊಂಡು ರಾಜಕಾರಣ ಆರಂಭಿಸಿದರು. ಹೀಗೆ ರಾಜಕೀಯ ಜೀವನ ಆರಂಭಿಸಿದ ಅವರು, ಸರ್ಕಾರ ವಿರೋಧಿ ಚಳವಳಿಗಳ ನೇತೃತ್ವವಹಿಸಲಾರಂಭಿಸಿದರು. 1952ರಲ್ಲಿ ಚುನಾವಣೆಗೆ ಸ್ಪರ್ಧಿಸಿದರು. ಆದರೆ, ಅದೇ ವರ್ಷ ಮಾರ್ಚ್‍ನಲ್ಲಿ ಸರ್ಕಾರ ಪತನವಾಗಿ, ಚುನಾವಣೆ ಅಮಾನತುಗೊಂಡಿತು. ನಂತರದ ರಾಜಕೀಯ ಅಸ್ಥಿರತೆ ಅವಧಿಯಲ್ಲಿ 1953ರ ಜುಲೈನಲ್ಲಿ ಸಾಂಟಿಯಾಗೊದ ಸೇನಾ ಬ್ಯಾರಕ್‍ಮೇಲೆ ದಾಳಿ ನಡೆಸಿ ಬಂಧನಕ್ಕೊಳಗಾಗಿ 15 ವರ್ಷ ಸೆರೆವಾಸದ ಶಿಕ್ಷೆಗೊಳಗಾಗುತ್ತಾರೆ. ಆದರೆ, 1955ರ ಮೇ 15ರಂದು ರಾಜಕೀಯ ಕೈದಿ ಎಂಬ ನೆಲೆಯಲ್ಲಿ ಫಿಡೆಲ್ ಹಾಗೂ ಸಹೋದರ ರೌಲ್‍ಗೆ ಬಿಡುಗಡೆಯಾಗಿದ್ದಲ್ಲದೇ, ಮೆಕ್ಸಿಕೋದಲ್ಲಿ ನೆಲೆ ಕಾಣುತ್ತಾರೆ. ಅಲ್ಲಿ, ಅರ್ಜೆಂಟೀನಾದ ಫಿಸಿಷಿಯನ್ ಚೆ ಗುವರಾ ಅವರನ್ನು ಭೇಟಿಯಾಗುತ್ತಾರೆ. ಈ ಮೂವರು ಸೇರಿ ಹೊಸ ಗೆರಿಲ್ಲಾ ಗ್ರೂಪನ್ನು ರಚಿಸುತ್ತಾರೆ. 1956ರಲ್ಲಾದ ದಾಳಿಯೊಂದರಿಂದ ತಪ್ಪಿಸಿಕೊಂಡ ಈ ಮೂವರು ಸಿಯೆರಾ ಮಾಸ್ಟ್ರಾ ಬೆಟ್ಟಗಳ ನಡುವೆ ಅವಿತುಕೊಳ್ಳುತ್ತಾರೆ. ಅಲ್ಲಿದ್ದುಕೊಂಡು ಗೆರಿಲ್ಲಾ ಯುದ್ಧ ಮುಂದುವರಿಸುತ್ತಾರೆ. ಕೊನೆಗೆ 1959ರಲ್ಲಿ ಕ್ಯೂಬಾವನ್ನು ವಶಕ್ಕೆ ಪಡೆದುಕೊಂಡು ಫಿಡೆಲ್ ಪ್ರಧಾನಿಯಾಗುತ್ತಾರೆ. ಬಳಿಕ ಅಮೆರಿಕಕ್ಕೆ ಭೇಟಿ ನೀಡಿದ ವೇಳೆ, ಉಪಾಧ್ಯಕ್ಷ ರಿಚರ್ಡ್ ನಿಕ್ಸನ್‍ರನ್ನು ಭೇಟಿ ಮಾಡಿ, ಔಪಚಾರಿಕ ರಾಜತಾಂತ್ರಿಕ ಸಂಬಂಧವನ್ನು ಪುನಸ್ಥಾಪಿಸಿದ್ದ. ಆದರೆ, ತರುವಾಯ ಅಮೆರಿಕದ ಕುಮ್ಮಕ್ಕಿನಲ್ಲಿ ಕೆಲವು ಕ್ಯೂಬನ್ನರು ಫಿಡೆಲರನ್ನು ಪದಚ್ಯುತಗೊಳಿಸಲು ಪ್ರಯತ್ನಿಸಿದ್ದರು. ಇದನ್ನು ಅರಿತ ಫಿಡೆಲ್ ಅಮೆರಿಕ ದ್ವೇಷ ಇನ್ನಷ್ಟು ಹೆಚ್ಚಾಯಿತು. ನಂತರದ ಬೆಳವಣಿಗೆಯಲ್ಲಿ ಹವಾನದಲ್ಲಿರುವ ರಾಯಭಾರ ಕಚೇರಿಯ ಸಿಬ್ಬಂದಿ ಕಡಿತ, ತರುವಾಯ ಅಮೆರಿಕನ್ ಉದ್ಯಮಗಳ ರಾಷ್ಟ್ರೀಕರಣ ಮುಂತಾದ ಕ್ರಮಗಳನ್ನು ಕೈಗೊಂಡ. ಪರಿಣಾಮ ಅಮೆರಿಕ ಸರ್ಕಾರ ತಿರುಗಿ ಬಿದ್ದು, ಕ್ಯೂಬಾದ ಜತೆಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಂಡಿತು. ಆರ್ಥಿಕ ದಿಗ್ಭಂದನಗಳನ್ನು ವಿಧಿಸಿತು. ಆದಾಗ್ಯೂ, ಫಿಡೆಲ್ ಎದೆಗುಂದಲಿಲ್ಲ. ಮುಂದೆ ಜನರಿಂದಲೇ ಚುನಾಯಿತರಾಗಿ ರಾಷ್ಟ್ರಾಧ್ಯಕ್ಷ ಪದವಿಯನ್ನು ಅಲಂಕರಿಸಿದರು. ಕಮ್ಯೂನಿಸ್ಟ್ ನಾಯಕನಾಗಿದ್ದರಿಂದ ರಷ್ಯಾದ ಜತೆ ಉತ್ತಮ ನಂಟು ಹೊಂದಿದ್ದ. ಅಲ್ಲಿನ ಬೆಂಬಲ ಆತನ ಆಳ್ವಿಕೆಗೆ ಇನ್ನಷ್ಟು ಬೆಂಬಲ ಒದಗಿಸಿತು. ಹೀಗೆ 32 ವರ್ಷ ಕಾಲ ಆಳ್ವಿಕೆ ನಡೆಸಿದ ಫಿಡೆಲ್ ಕೊನೆಗೆ ಅನಾರೋಗ್ಯದಿಂದಾಗಿ ಅಧಿಕಾರವನ್ನು ಸಹೋದರನಿಗೊಪ್ಪಿಸಿ ಕೆಳಗಿಳಿಯಬೇಕಾಯಿತು. ಈ ಅವಧಿಯಲ್ಲಿ 630ಕ್ಕೂ ಹೆಚ್ಚು ಸಲ ಅಮೆರಿಕ ಸಿಐಎ ನಡೆಸಿದ್ದ ಆತ್ಮಾಹುತಿ ದಾಳಿಗಳಿಂದ ಬಚಾವ್ ಆದ ಜಗತ್ತಿನ ಏಕೈಕ ನಾಯಕರೆನಿಸಿಕೊಂಡಿದ್ದಾರೆ.
ಖಾಸಗಿ ಬದುಕಿನ ಕಡೆಗೆ ನೋಡಿದರೆ, 1948ರಲ್ಲಿ ವಿದ್ಯಾರ್ಥಿ ನಾಯಕರಾಗಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿ ಮಿತ್ರಾ ಡಿಯಾಸ್ ಬಲಾರ್ಟ್ ಎಂಬಾಕೆಯನ್ನು ವಿವಾಹವಾಗುತ್ತಾರೆ. ಅದೊಂದು ಪ್ರೇಮವಿವಾಹವಾಗಿತ್ತು. 55ರಲ್ಲಿ ವಿಚ್ಛೇದನವಾದ ಬಳಿಕ ನಟಾಲಿಯಾ ರೆವುಲ್ಟಾ, ಡಲಿಯಾ ಸೊಟೊ ಡೆಲ್ ವಲ್ಲೆ ಹಾಗೂ ಮತ್ತೊಬ್ಬ ಮಹಿಳೆ ಜತೆ ಸಂಬಂಧ ಹೊಂದಿದ್ದರು. ಈ ಎಲ್ಲ ದಾಂಪತ್ಯದ ಮೂಲಕ ಅವರಿಗೆ ಒಟ್ಟು ಒಂಭತ್ತು ಮಕ್ಕಳು ಜನಿಸಿದ್ದರು.
`ತನ್ನ ಅಂತ್ಯ ಸಮೀಪಿಸುತ್ತಿದೆ’ ಎಂದು ಫಿಡೆಲ್ ಹೇಳಿದ್ದು, ಗಮನಿಸಿದರೆ, `ಎಷ್ಟೇ ಸಮರ್ಥನಿದ್ದರೂ ವಯೋಸಹಜ ಕಾಯಿಲೆಗಳು ಮನುಷ್ಯನನ್ನು ಹೈರಾಣಾಗಿಸುತ್ತವೆ, ಅಷ್ಟೇ ಅಲ್ಲ ವಯಸ್ಸು ಎನ್ನುವುದು ಕೂಡ ಮನುಷ್ಯನ ಓಟಕ್ಕೆ ತಡೆಯೊಡ್ಡುತ್ತವೆ’ ಎನ್ನುವ ಕಟು ಸತ್ಯವನ್ನು ಸಾರಿ ಹೇಳಿದಂತಿದೆ.

Leave a Reply

Your email address will not be published. Required fields are marked *