ವಿಕಾಸದ ಹಾದಿ – ಪರಂಪರಾಗತ ಕೃಷಿ

ದೇಶಾದ್ಯಂತ ಸಾವಯವ ಕೃಷಿ ವಿಸ್ತರಣೆಯ ಹಾದಿಯಲ್ಲಿದ್ದು, ಭಾರತದ ಕೃಷಿ ಕ್ಷೇತ್ರ ಬೃಹತ್ ಬದಲಾವಣೆಗೆ ತೆರೆದುಕೊಳ್ಳತೊಡಗಿದೆ. ಈ ಬೆಳವಣಿಗೆ ಕೃಷಿಕರಲ್ಲಿ ಆಶಾವಾದವನ್ನು ಮೂಡಿಸಿದ್ದು, ಹಲವರು ಪರಂಪರಾಗತ ಕೃಷಿಯ ಹಾದಿ ಹಿಡಿದಿದ್ದಾರೆ. ಸರ್ಕಾರಗಳು ಕೂಡ ಸಾವಯವ ಕೃಷಿಗೆ ಒತ್ತು ನೀಡತೊಡಗಿವೆ. ಈ ಹಿನ್ನೆಲೆಯಲ್ಲಿ ದೇಶದ ಸಾವಯವ ಕೃಷಿ ಕ್ಷೇತ್ರದ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

vittavani 1872016ಪ್ರಧಾನಿ ನರೇಂದ್ರ ಮೋದಿಯವರು ಜನವರಿ ಮಧ್ಯಭಾಗದಲ್ಲಿ ದೇಶದ ವಿವಿಧ ರಾಜ್ಯಗಳ ಕೃಷಿ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ‘ಸಾವಯವ ಕೃಷಿಯಲ್ಲಿ ಸಿಕ್ಕಿಂ ಮಾದರಿ ರಾಜ್ಯ. ಆರಂಭದಲ್ಲಿ ಅಲ್ಲಿ 100-150 ಗ್ರಾಮಗಳನ್ನು ಒಗ್ಗೂಡಿಸಿ ಸಾವಯವ ಕೃಷಿಯನ್ನು ಅಳವಡಿಸಿಕೊಂಡರು. ಕ್ರಮೇಣ ತಾಲೂಕು, ಜಿಲ್ಲೆ ಹೀಗೆ ಮುಂದುವರಿದು ಇಡೀ ರಾಜ್ಯವೇ ಸಾವಯವ ಕೃಷಿಯ ರಾಜ್ಯವಾಗಿದೆ’ ಎಂದು ಶ್ಲಾಘಿಸಿದರು.

‘ದೇಶದ ಇತರೆ ಭಾಗಗಳಲ್ಲೂ ಇಂತಹ ಕ್ರಾಂತಿ ಆಗಬೇಕು. ಕೃಷಿ ಚಟುವಟಿಕೆಯನ್ನು ರೈತರು ಮೂರು ಸಮಾನ ಭಾಗಗಳನ್ನಾಗಿ ಅಂದರೆ ಗೋಧಿ, ಅಕ್ಕಿ, ರಾಗಿ, ಜೋಳ, ಎಣ್ಣೆ ಬೀಜ ಇತ್ಯಾದಿ ಸಾಮಾನ್ಯ ಕೃಷಿ, ಆರ್ಥಿಕವಾಗಿ ಮೌಲ್ಯ ಒದಗಿಸುವ ಮರಗಳ ಸಾಕಣೆ, ಪಶುಸಂಗೋಪನೆ ಎಂದು ವಿಂಗಡಿಸಿಕೊಳ್ಳಬೇಕು. ಒಂದೊಮ್ಮೆ ಸಾಮಾನ್ಯ ಕೃಷಿಯಲ್ಲಿ ನಷ್ಟ ಉಂಟಾದರೆ, ಉಳಿದೆರಡು ಕೈ ಹಿಡಿಯುವ ಕಾರಣ ಕೃಷಿಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದಿಲ್ಲ. ಒಂದರ್ಥದಲ್ಲಿ ಹೇಳಬೇಕು ಎಂದರೆ ಬಹುಬೆಳೆ ವಿಧಾನವನ್ನು ಅನುಸರಿಸು ವುದು ಒಳಿತು. ಈ ವಿಷಯವಾಗಿ ಕೃಷಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ತುರ್ತಾಗಿ ಆಗಬೇಕು’ ಎಂದೂ ಹೇಳಿದ್ದರು.

ಸಾವಯವ ಕೃಷಿ ಕ್ಷೇತ್ರದ ವಿಸ್ತರಣೆ: ರಾಸಾಯನಿಕಮುಕ್ತ ಕೃಷಿ ಚಟುವಟಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ದಿಟ್ಟ ಹೆಜ್ಜೆಯನ್ನು ಇರಿಸತೊಡಗಿದೆ. ಸಂಪೂರ್ಣ ಸಾವಯವ ಕೃಷಿ ರಾಜ್ಯವೆನಿಸಿರುವ ಸಿಕ್ಕಿಂ ಇದೀಗ ಉಳಿದ ರಾಜ್ಯಗಳಿಗೂ ಮಾದರಿಯಾಗಿದೆ. ಭಾರತ ಸರ್ಕಾರವೂ ಆಯಾ ರಾಜ್ಯಗಳ ಸಹಕಾರದೊಂದಿಗೆ ಸಾವಯವ ಕೃಷಿಗೆ ಕ್ಲಸ್ಟರ್ಗಳನ್ನು ಗುರುತಿಸುವ ಕೆಲಸವನ್ನು ಮಾಡತೊಡಗಿದೆ. ಕೇಂದ್ರ ಸರ್ಕಾರ ದೇಶಾದ್ಯಂತ 10,000 ಕ್ಲಸ್ಟರ್ಗಳನ್ನು ಗುರುತಿಸಿ ಅಲ್ಲಿ ವಿಶೇಷವಾಗಿ ಸಾವಯವ ಕೃಷಿ, ಪರಂಪರಾಗತ ಕೃಷಿಗೆ ಉತ್ತೇಜನ ನೀಡುವುದಕ್ಕೆ ಯೋಜನೆ ಸಿದ್ಧಪಡಿಸಿಕೊಂಡಿದೆ. ಈಗಾಗಲೇ ಹಲವು ರಾಜ್ಯಗಳು ವಿಶೇಷ ಸಾವಯವ ಕೃಷಿ ವಲಯಗಳನ್ನು ಗುರುತಿಸಿದ್ದು, ಸಾವಯವ ಕೃಷಿ ಚಟುವಟಿಕೆಗೆ ಉತ್ತೇಜನ ನೀಡಲಾರಂಭಿಸಿವೆ. ಮಹಾರಾಷ್ಟ್ರ ಈ ವಿಷಯದಲ್ಲಿ ಮುಂಚೂಣಿಯಲ್ಲಿದೆ. ರಾಜ್ಯಗಳು ಇದುವರೆಗೆ 7,500 ಕ್ಲಸ್ಟರ್ಗಳನ್ನು ಗುರುತಿಸಿವೆ. ಇಲ್ಲಿ ಪರಂಪರಾಗತ ಕೃಷಿ ವಿಕಾಸ ಯೋಜನೆ ಪ್ರಕಾರ ಕೃಷಿ ಚಟುವಟಿಕೆ ನಡೆಸುವುದಕ್ಕೆ ಅಗತ್ಯ ಉತ್ತೇಜನ ನೀಡಲು ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರವು 2016-17ನೇ ಹಣಕಾಸು ವರ್ಷದ ಮುಂಗಡಪತ್ರದಲ್ಲಿ ಸಾವಯವ ಕೃಷಿಗೆಂದು 297 ಕೋಟಿ ರೂ. ಮೀಸಲಿಟ್ಟಿದೆ. ಇದಕ್ಕೆ ಹೊರತಾಗಿ ಈಶಾನ್ಯ ರಾಜ್ಯಗಳಲ್ಲಿ ಸಾವಯವ ಕೃಷಿಗೆ ಹೆಚ್ಚುವರಿ ಮೊತ್ತವನ್ನೂ ಮೀಸಲಿರಿಸಿದೆ.

ಕೃಷಿ ಸಚಿವಾಲಯದ ಪ್ರಕಾರ, 2013-14ನೇ ಸಾಲಿನಲ್ಲಿ ದೇಶದ 7,23,039 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿ ನಡೆದಿದೆ. ಸಿಕ್ಕಿಂ (60,843.51ಹೆಕ್ಟೇರ್) ಸಂಪೂರ್ಣ ಸಾವಯವ ರಾಜ್ಯವಾಯಿತು. ಮಧ್ಯಪ್ರದೇಶ 2.32 ಲಕ್ಷ ಹೆಕ್ಟೇರ್ನಲ್ಲಿ ಸಾವಯವ ಕೃಷಿ ಅಳವಡಿಸಿಕೊಂಡಿದೆ. ಮಹಾರಾಷ್ಟ್ರ 85,536 ಹೆಕ್ಟೇರ್, ರಾಜಸ್ತಾನ 66,020 ಹೆಕ್ಟೇರ್, ಕರ್ನಾಟಕ 30,716 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿ ಅಳವಡಿಸಿಕೊಂಡಿತ್ತು.

ಕೇಂದ್ರ ವಾಣಿಜ್ಯ ಸಚಿವಾಲಯದ ಕೃಷಿ ಹಾಗೂ ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಮಂಡಳಿ ಪ್ರಕಾರ, ಭಾರತದಲ್ಲಿ 2015-16ರಲ್ಲಿ 13.5 ಲಕ್ಷ ಟನ್ ಪ್ರಮಾಣೀಕೃತ ಸಾವಯವ ಉತ್ಪನ್ನಗಳನ್ನು ಉತ್ಪಾದಿಸಲಾಗಿದೆ.

ಸಿಕ್ಕಿಂ ಮಾದರಿ

ಭಾರತದ ಮೊದಲ ಶೇಕಡ 100ರಷ್ಟು ಸಾವಯವ ಕೃಷಿ ರಾಜ್ಯ. ನಮ್ಮ ದೇಶದ ಈಶಾನ್ಯದ ಸಪ್ತರಾಜ್ಯಗಳ ಪೈಕಿ ಪುಟ್ಟ ರಾಜ್ಯ ಇದು. ಆರು ಲಕ್ಷ ಜನಸಂಖ್ಯೆ ಹೊಂದಿರುವ ಇದು ಹೂವುಗಳ ನಾಡು ಎಂದೇ ಪ್ರಸಿದ್ಧವಾಗಿದೆ. ಇದೀಗ ‘ಸಾವಯವ ರಾಜ್ಯ’ ಎಂಬ ಕೀರ್ತಿಗೂ ಭಾಜನವಾಗಿದೆ. 2003ರಲ್ಲಿ ಅಂದಿನ ಪವನ್ ಚಾಮ್ಲಿಂಗ್ ನೇತೃತ್ವದ ಸರ್ಕಾರ ಸಾವಯವ ಕೃಷಿಗೆ ಉತ್ತೇಜನ ನೀಡುವ ನಿರ್ಧಾರ ಕೈಗೊಂಡಿದ್ದರ ಫಲ ಈಗ ಕಾಣತೊಡಗಿದೆ. ಕಾಲಾನುಕ್ರಮದಲ್ಲಿ ರಾಜ್ಯದ 75ಸಾವಿರ ಹೆಕ್ಟೇರ್ ಪ್ರದೇಶ ಸಾವಯವ ಕೃಷಿ ಕ್ಷೇತ್ರವಾಗಿ ಬದಲಾಗಿದೆ. ಸಾವಯವ ಕೃಷಿಯ ರಾಷ್ಟ್ರೀಯ ಮಾರ್ಗಸೂಚಿ ಅನ್ವಯವೇ ಈ ಕೃಷಿ ಕ್ಷೇತ್ರಗಳು ಪ್ರಮಾಣೀಕರಿಸಲ್ಪಟ್ಟಿವೆ. ಸಾವಯವ ಕೃಷಿ ಅಳವಡಿಕೆಗೆ ಕೃಷಿಕರು ಸಾಕಷ್ಟು ಹೋರಾಟ ನಡೆಸಿದ್ದಾರೆ. ಅಲ್ಲಿ ರಾಸಾಯನಿಕ ಗೊಬ್ಬರದ ಬಳಕೆ ಇಲ್ಲದೆ ಇದ್ದರೂ, ಸಿಂಥೆಟಿಕ್ ಗೊಬ್ಬರಗಳ ಬಳಕೆ ತೀವ್ರವಾಗಿತ್ತು. ರಾಜ್ಯ ಸರ್ಕಾರ ಅದನ್ನು ನಿಷೇಧಿಸಿದ ಬಳಿಕ ಸಾವಯವ ಗೊಬ್ಬರದ ಬಳಕೆ ಎಲ್ಲರಿಗೂ ಅನಿವಾರ್ಯವಾಯಿತು. ಇಷ್ಟಾಗ್ಯೂ, ತೀರಾ ಇತ್ತೀಚಿನವರೆಗೂ ಅಲ್ಲಿ ರಾಸಾಯನಿಕ ಕೀಟನಾಶಕವೇ ಬಳಕೆಯಲ್ಲಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, ಸಾವಯವ ಕೀಟನಾಶಕ ಅದರಲ್ಲೂ ಗೋಮೂತ್ರದಿಂದ ತಯಾರಿಸಿದ ಕೀಟನಾಶಕವನ್ನೇ ಬಳಸತೊಡಗಿದ್ದಾರೆ. ದೇಶಾದ್ಯಂತ ಬೆಳೆಯುವ 13.5 ಲಕ್ಷ ಟನ್ ಸಾವಯವ ಕೃಷಿ ಉತ್ಪನ್ನಗಳ ಪೈಕಿ 80,000 ಟನ್ ಪಾಲು ಸಿಕ್ಕಿಂನದ್ದೇ ಆಗಿದೆ. ದೇಶಕ್ಕೆ ಮಾದರಿಯಾಗುವಂಥ ಸಾಧನೆ ಮಾಡಿರುವ ಸಿಕ್ಕಿಂ, ವಿಶೇಷವಾಗಿ ಕ್ಯಾಲಿಫೋರ್ನಿಯಾ, ವಿಸ್ಕನ್ಸಿನ್ ಮತ್ತು ಜಗತ್ತಿನ ಇತರೆ ಸಾವಯವ ಪ್ರದೇಶಗಳ ಜತೆ ಸಾವಯವ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಉತ್ತಮ ವ್ಯಾವಹಾರಿಕ ನಂಟು ಸ್ಥಾಪಿಸಿಕೊಂಡಿದೆ.

ಏನೇನು ಬೆಳೆಯುತ್ತಾರೆ?

 • ಏಲಕ್ಕಿ
 • ಶುಂಠಿ ಅರಶಿಣ
 • ಆಫ್ಸೀಸನ್ ತರಕಾರಿ
 • ಹೂವುಗಳು
 • ಸಿಕ್ಕಿಂ ಕಿತ್ತಳೆ ಹಣ್ಣು
 • ಕೀವಿ
 • ಕಾಡುಗೋಧಿ
 • ಭತ್ತ
 • ಜೋಳ
 • ಸಿರಿಧಾನ್ಯ

ರಫ್ತು ಎಲ್ಲೆಲ್ಲಿಗೆ

 • ಯುರೋಪಿಯನ್
 • ಯೂನಿಯನ್ಝ್
 • ಅಮೆರಿಕ
 • ಸ್ವಿಜರ್ಲೆಂಡ್
 • ಕೊರಿಯಾ
 • ಆಸ್ಟ್ರೇಲಿಯಾ
 • ನ್ಯೂಜಿಲೆಂಡ್
 • ಆಗ್ನೇಯ ರಾಷ್ಟ್ರಗಳು
 • ಮಧ್ಯಪ್ರಾಚ್ಯ ರಾಷ್ಟ್ರಗಳು
 • ದಕ್ಷಿಣ ಆಫ್ರಿಕಾ

ಟಾಪ್ 10 ರಾಜ್ಯಗಳು ಮತ್ತು ಕ್ಲಸ್ಟರ್ಗಳ ಸಂಖ್ಯೆ

1.ಮಹಾರಾಷ್ಟ್ರ 932

2.ಮಧ್ಯಪ್ರದೇಶ 880

3.ರಾಜಸ್ಥಾನ 755

4.ಉತ್ತರ ಪ್ರದೇಶ 575

5.ಉತ್ತರಾಖಂಡ 550

6.ಕರ್ನಾಟಕ 545

7.ಆಂಧ್ರಪ್ರದೇಶ 411

8.ಬಿಹಾರ 327

9.ಒಡಿಶಾ 320

10 ತೆಲಂಗಾಣ 300

ಟಾಪ್ 10ರಲ್ಲಿ ಕರ್ನಾಟಕ

ಸಾವಯವ ಕೃಷಿ ಕ್ಲಸ್ಟರ್ಗಳನ್ನು ಗುರುತಿಸಿರುವ 29 ರಾಜ್ಯಗಳ ಪೈಕಿ ಟಾಪ್ 10ರಲ್ಲಿ ಕರ್ನಾಟಕವೂ ಒಂದು.

ಕೃಷಿ ಸಚಿವಾಲಯದ ಮಾಹಿತಿ ಪ್ರಕಾರ, 2015-16ರಲ್ಲಿ 1,829 ಕೋಟಿ ರೂಪಾಯಿ ಮೌಲ್ಯದ, 2,63,687 ಮೆಟ್ರಿಕ್ ಟನ್ ಸಾವಯವ ಉತ್ಪನ್ನಗಳ ರಫ್ತು ಮಾಡಲಾಗಿತ್ತು.

ಇದರಲ್ಲಿ, ಕಬ್ಬು, ಎಣ್ಣೆ ಬೀಜ, ಬೇಳೆ ಕಾಳು, ಸಿರಿಧಾನ್ಯ, ಹತ್ತಿ, ಔಷಧೀಯ ಸಸ್ಯ, ಚಹಾ, ಹಣ್ಣು ಹಂಪಲು, ಸಂಬಾರ ದಿನಸಿಗಳು, ತರಕಾರಿ, ಕಾಫಿ ಮುಂತಾದ ಆಹಾರ ಉತ್ಪನ್ನಗಳು ಒಳಗೊಂಡಿವೆ.

ಬೇಡಿಕೆ-ಪೂರೈಕೆ: ಪ್ರಾದೇಶಿಕ ಹಾಗೂ ಜಾಗತಿಕ ಮಟ್ಟದ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಸಾವಯವ ಕೃಷಿ ಉತ್ಪನ್ನಗಳ ಇಳುವರಿ ಹೆಚ್ಚಿಸುವುದಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ 8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿ ನಡೆಯುತ್ತಿದ್ದು, 2017-18ರವೇಳೆಗೆ ಈ ಕೃಷಿ ಕ್ಷೇತ್ರ 10 ಲಕ್ಷ ಹೆಕ್ಟೇರ್ಗೆ ವಿಸ್ತರಣೆಯಾಗಲಿದೆ ಎಂಬ ವಿಶ್ವಾಸದಲ್ಲಿದೆ ಕೇಂದ್ರ ಕೃಷಿ ಸಚಿವಾಲಯ.

ಕ್ಲಸ್ಟರ್ ಎಂದರೆ.. ಒಂದು ಕ್ಲಸ್ಟರ್ ಸುಮಾರು 20 ಹೆಕ್ಟೇರ್ ಪ್ರದೇಶ. 10,000 ಕ್ಲಸ್ಟರ್ ಎಂದರೆ 2 ಲಕ್ಷ ಹೆಕ್ಟೇರ್. ಪ್ರತಿ ಕ್ಲಸ್ಟರ್ನಲ್ಲಿ 50 ಅಥವಾ ಹೆಚ್ಚು ಕೃಷಿಕರಿರುತ್ತಾರೆ. ಕ್ಲಸ್ಟರ್ನ ಪ್ರತಿಯೊಬ್ಬ ಕೃಷಿಕನಿಗೂ ಕೃಷಿ ಚಟುವಟಿಕೆ ನಡೆಸಲು ವಿಶೇಷವಾಗಿ ಬಿತ್ತನೆ ಬೀಜ ಖರೀದಿ, ಕೊಯ್ಲು ಮತ್ತು ಕೃಷಿ ಉತ್ಪನ್ನ ಸಾಗಿಸುವುದಕ್ಕಾಗಿ ಪ್ರತಿ ಎಕರೆಗೆ 20,000 ರೂಪಾಯಿಯಂತೆ ಮೂರು ವರ್ಷ ಕಾಲ ಸರ್ಕಾರವು ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ನೆರವು ಒದಗಿಸಲಿದೆ.

Leave a Reply

Your email address will not be published. Required fields are marked *