ವಿಲಕ್ಷಣ ವ್ಯಕ್ತಿತ್ವ

donald-trumpಹೆಸರು ಡೊನಾಲ್ಡ್ ಜಾನ್ ಟ್ರಂಪ್. ವಯಸ್ಸು 70. ಎತ್ತರ 6 ಅಡಿ 3 ಇಂಚು. ಕೆಂಚು ಕೂದಲು, ಕೀಟಲೆ ಮಾಡುವಂತಹ ನೋಟ, ನಡವಳಿಕೆಯಲ್ಲಿ ಇನ್ನೂ ಪುಟಿಯುವ ಅದಮ್ಯ ಜೀವನೋತ್ಸಾಹ. ಇಂಥ ವ್ಯಕ್ತಿ ಅಮೆರಿಕದಲ್ಲಿ ಮೊನ್ನೆ ನ.8ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಯಾರೂ ನಿರೀಕ್ಷಿಸದ ರೀತಿಯಲ್ಲಿ ಅಭೂತಪೂರ್ವ ಗೆಲುವು ಕಂಡು ನಿಯೋಜಿತ ಅಧ್ಯಕ್ಷರೆನಿಸಿಕೊಂಡರು.
ಅಮೆರಿಕದ ಅಧ್ಯಕ್ಷ ಅಂದರೆ ಜಗತ್ತಿನ ಅತ್ಯಂತ ಪ್ರಭಾವಿ ನಾಯಕ. ಇದು ಉತ್ಪ್ರೇಕ್ಷೆಯ ಮಾತಲ್ಲ. ಐವತ್ತು ರಾಜ್ಯಗಳನ್ನು ಒಳಗೊಂಡ ಸಂಯುಕ್ತ ಸಂಸ್ಥಾನ ಅಮೆರಿಕ. ಇಲ್ಲಿ ಅಧ್ಯಕ್ಷರೇ ಸರ್ಕಾರ ಮತ್ತು ಸಾರ್ವಭೌಮ ರಾಜ್ಯದ ಮುಖ್ಯಸ್ಥರು. ಫೆಡರಲ್ ಸರ್ಕಾರದ ಕಾರ್ಯಾಂಗದ ಮುಖ್ಯಸ್ಥನ ಸ್ಥಾನ ಹಾಗೂ ಸೇನೆಯ `ಕಮಾಂಡರ್ ಇನ್ ಚೀಫ್’ ಹೊಣೆಗಾರಿಕೆಯೂ ಅವರದ್ದೇ. ಜಾಗತಿಕ ವಿದ್ಯಮಾನಗಳನ್ನು ನಿರ್ವಹಿಸಬಲ್ಲಷ್ಟು ಪ್ರಭಾವಿ ರಾಷ್ಟ್ರ ಅಮೆರಿಕ. ಹೀಗಾಗಿ, ಶ್ವೇತಭವನದಿಂದ ಹೊರಬೀಳುವ ನಿರ್ಣಯಗಳು ಇಡೀ ವಿಶ್ವದ ಮೇಲೆ ಪರಿಣಾಮ ಬೀರಬಲ್ಲಷ್ಟು ಪ್ರಭಾವಶಾಲಿಯಾಗಿರುತ್ತವೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಟ್ರಂಪ್ ಗೆದ್ದ ಕಾರಣ, ಅಮೆರಿಕನ್ನರು ಈ ಫಲಿತಾಂಶದ ವಿರುದ್ಧವೇ ಪ್ರತಿಭಟನೆ ನಡೆಸುತ್ತಿದ್ದಾರೆ. ಅದಕ್ಕೆ ಕಾರಣ ಇಷ್ಟೆ- ಅದುವರೆಗೂ ಟ್ರಂಪ್ ವಿರುದ್ಧ ಇನ್ನಿಲ್ಲದಂತೆ ಅಪಪ್ರಚಾರ ನಡೆಸಿದ್ದವರಿಗೆ ಆದ ಆಘಾತವದು. ಟ್ರಂಪ್ ವ್ಯಕ್ತಿತ್ವವೂ ಅಂತಹ ಅಪಪ್ರಚಾರಕ್ಕೆ ಎಡೆಮಾಡಿಕೊಡುವಂಥದ್ದೇ ಆಗಿದೆ. ಚುನಾವಣಾ ಕಣಕ್ಕಿಳಿಯುತ್ತಿದ್ದಂತೆ ವಲಸೆ ಹಿನ್ನೆಲೆ, ಮೂಲಭೂತವಾದದ ಕುರಿತ ಧೋರಣೆ ಮತ್ತು ಹೇಳಿಕೆ, ಸ್ತ್ರೀಯರ ಕುರಿತ ಹೇಳಿಕೆ ಮತ್ತು ಅವರೊಂದಿಗಿನ ಅಸಭ್ಯ ವರ್ತನೆಗಳು ಹೀಗೆ ಸಾಲು ಸಾಲು ವಿಷಯಗಳು ಟ್ರಂಪ್ ವಿರುದ್ಧದ ಪ್ರಚಾರಕ್ಕೆ ಬಳಸಲ್ಪಟ್ಟವು.
ಇಂತಹ ಟ್ರಂಪ್ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಗೆ ಇಳಿಯುವ ಮುನ್ನ, ಅಮೆರಿಕದ ಅತ್ಯಂತ ಪ್ರಸಿದ್ಧ ಹಾಗೂ ವರ್ಣರಂಜಿತ ಶತಕೋಟ್ಯಧಿಪತಿ ಉದ್ಯಮಿ. ನ್ಯೂಯಾರ್ಕ್ ಸಮೀಪದ ಜಮೈಕಾದ ಕ್ವೀನ್ಸ್‍ನಲ್ಲಿ 1946ರ ಜೂನ್ 14ರಂದು ಟ್ರಂಪ್ ಜನನ. ತಂದೆ ಫ್ರೆಡ್ ಟ್ರಂಪ್(ಜರ್ಮನ್ ಮೂಲದವರು) ನ್ಯೂಯಾರ್ಕ್‍ನ ರಿಯಲ್‍ಎಸ್ಟೇಟ್ ಉದ್ಯಮ ಸಾಮ್ರಾಟ. ತಾಯಿ ಮೇರಿ ಟ್ರಂಪ್(ಸ್ಕಾಟಿಷ್ ಮೂಲದವರು). ಐವರು ಮಕ್ಕಳ ಪೈಕಿ ಎರಡನೆಯವರು(ಕೆಲವೆಡೆ ನಾಲ್ಕನೆಯವರು ಎಂದಿದೆ). ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಟ್ರಂಪ್ ತಂದೆಯ ಕಂಪನಿಯಲ್ಲೇ ಕೆಳಸ್ತರದ ಹೊಣೆಗಾರಿಕೆ ನಿಭಾಯಿಸಿ ಬೆಳೆಯಬೇಕೆಂಬ ನಿರೀಕ್ಷೆ ಕುಟುಂಬದ್ದಾಗಿತ್ತು. ಶಾಲೆಯಲ್ಲಿ ಬಾಲಕ ಟ್ರಂಪ್‍ನ ಕೀಟಲೆ ಹೆಚ್ಚಾದಾಗ, ಆತನನ್ನು ಮಿಲಿಟರಿ ಅಕಾಡೆಮಿ ಸ್ಕೂಲ್‍ಗೆ ಕಳುಹಿಸಲಾಗಿತ್ತು(1964). ಅಲ್ಲೂ ಹೊಸ ಹುಡುಗರನ್ನು ರ್ಯಾಗಿಂಗ್ ಮಾಡಿದ್ದರ ಫಲವಾಗಿ ಸ್ಟೂಡೆಂಟ್ ಕಮಾಂಡ್ ಸ್ಥಾನದಿಂದ ವರ್ಗಾಯಿಸಲ್ಪಟ್ಟಾಗ ಅದನ್ನು ಬಡ್ತಿ ಎಂದು ಹೇಳಿಕೊಂಡವರು ಈ ಟ್ರಂಪ್. ಈ ಘಟನೆ ನಡೆದು ಐವತ್ತು ವರ್ಷಗಳಾದ ಬಳಿಕವೂ 2014ರಲ್ಲೂ ಅವರು ಅದನ್ನು ಶಿಕ್ಷೆ ಎಂದು ಒಪ್ಪಿಕೊಂಡಿಲ್ಲ. ಇಷ್ಟೆಲ್ಲ ತುಂಟತನ ಹೊಂದಿದ್ದ ಅವರು ಪ್ರತಿಭಾವಂತರೂ ಆಗಿದ್ದರು. ಹೀಗಾಗಿ, ಶಿಕ್ಷಣವೂ ಮುಂದುವರಿಯಿತು. ಮುಂದೆ ಉದ್ಯೋಗಕ್ಕಾಗಿ ತಂದೆಯ ಕಂಪನಿ ಸೇರುವ ಮುನ್ನ ಅವರಿಂದಲೇ, 10 ಲಕ್ಷ ಡಾಲರ್ ಸಾಲ ಪಡೆದು ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿದರು ಟ್ರಂಪ್. 1971ರಲ್ಲಿ ಕಂಪನಿಯ ಆಡಳಿತ ಕೈಗೆತ್ತಿಕೊಂಡ ಡೊನಾಲ್ಡ್ ಟ್ರಂಪ್, ಅದಕ್ಕೆ ಟ್ರಂಪ್ ಆರ್ಗನೈಸೇಷನ್ ಎಂದು ಮರುನಾಮಕರಣ ಮಾಡಿದರು.
ಹೀಗೆ ಆರಂಭವಾದ ಅವರ ಉದ್ಯಮ ಸಾಮ್ರಾಜ್ಯದಲ್ಲಿ, ರಿಯಲ್ ಎಸ್ಟೇಟ್‍ನಿಂದ ಹಿಡಿದು, ಸ್ಟೀಕ್, ಕ್ಯಾಸಿನೋ, ಸೌಂದರ್ಯ ಸ್ಪರ್ಧೆ ಕಾರ್ಯಕ್ರಮ ಆಯೋಜನೆ ಮುಂತಾದವುಗಳಿದ್ದವು. ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಅವರು 515 ಕಂಪನಿಗಳ ಕಾರ್ಯನಿರ್ವಹಣಾಧಿಕಾರಿ ಸ್ಥಾನದಲ್ಲಿದ್ದರು. ಅವುಗಳ ಪೈಕಿ 268 ಕಂಪನಿಗಳಿಗೆ `ಟ್ರಂಪ್’ ಹೆಸರಿದ್ದವು. ಟ್ರಂಪ್ ಆರ್ಗನೈಸೇಷನ್‍ನ ಅಧೀನದಲ್ಲಿ ಜಗತ್ತಿನಾದ್ಯಂತ 15 ಐಷಾರಾಮಿ ಹೋಟೆಲ್‍ಗಳು ಮತ್ತು 17 ಗಾಲ್ಫ್ ಕೋರ್ಸ್‍ಗಳಿವೆ. ಮ್ಯಾನ್‍ಹಟನ್‍ನಲ್ಲಿ ಟ್ರಂಪ್ ಟವರ್, ಪಾಮ್ ಬೀಚ್‍ನಲ್ಲಿ ಮಾರ್ ಅ ಲಾಗೊ ಇವೆ. ಟರ್ಕಿ, ಉರುಗ್ವೆ, ಫಿಲಿಪ್ಪೀನ್ಸ್, ದಕ್ಷಿಣ ಕೊರಿಯಾಗಳಲ್ಲೂ ಹೋಟೆಲ್‍ಗಳಿದ್ದು, ಯುಎಇ, ಐರ್ಲೆಂಡ್, ಬ್ರಿಟನ್‍ಗಳಲ್ಲಿ ಗಾಲ್ಫ್ ಕೋರ್ಸ್‍ಗಳಿವೆ. ಸ್ವತಃ ಡೊನಾಲ್ಡ್ ಟ್ರಂಪ್ ಹೇಳುವಂತೆ ಅವರ ಉದ್ಯಮ ಸಮೂಹದ ಮೌಲ್ಯ 10 ಶತಕೋಟಿ ಡಾಲರ್ ಬೆಲೆಬಾಳುವಂಥದ್ದು. ಆದರೆ, ಬ್ಲೂಮ್‍ಬರ್ಗ್ ನ್ಯೂಸ್, ಫೆÇೀಬ್ರ್ಸ್ ನಿಯತಕಾಲಿಕೆಗಳ ಪ್ರಕಾರ ಕ್ರಮವಾಗಿ 2.9 ಮತ್ತು 1.4 ಶತಕೋಟಿ ಡಾಲರ್ ಮೌಲ್ಯದ್ದು ಟ್ರಂಪ್ ಸಾಮ್ರಾಜ್ಯ.
ಇಂತಹ ಟ್ರಂಪ್‍ರನ್ನು ವಿವಾದಗಳೂ ಬಿಟ್ಟಿಲ್ಲ. ಡೊನಾಲ್ಡ್ ಮತ್ತು ಅವರ ತಂದೆ 1973ರಲ್ಲಿ ಜನಾಂಗೀಯ ನೆಲೆಯಲ್ಲಿ ನ್ಯೂಯಾರ್ಕ್‍ನ 39 ಸೈಟ್‍ಗಳನ್ನು ಹಂಚಿದ್ದರು ಎಂಬ ಆರೋಪ ಎದುರಾಗಿ ಅವರ ವಿರುದ್ಧ ಪ್ರಕರಣವೂ ದಾಖಲಾಗಿತ್ತು. ಟ್ರಂಪ್ ಯೂನಿವರ್ಸಿಟಿ ಸ್ಥಾಪನೆಯಾದ ಬಳಿಕ ವಿದ್ಯಾರ್ಥಿಗಳಿಂದ ತಲಾ 35,000 ಡಾಲರ್ ಹಣ ಪೀಕಿಸಿದ್ದರು ಎಂಬ ಆರೋಪ ಎದುರಾಗಿತ್ತು. ಇದಲ್ಲದೇ, ಕ್ಯಾಸಿನೋ ನಿಯಮ ಉಲ್ಲಂಘನೆ, ಕಟ್ಟಡ ನಿರ್ಮಾಣಕ್ಕೆ ಪೆÇಲಂಡ್‍ನ ಅಕ್ರಮ ಕಾರ್ಮಿಕರನ್ನು ಬಳಸಿಕೊಂಡದ್ದು, ಅಧ್ಯಕ್ಷೀಯ ಪ್ರಚಾರದ ಸಂದರ್ಭದಲ್ಲಿ ಕ್ರಿಪ್ಪಲ್ಡ್ ಅಮೆರಿಕ – ಹೌ ಟು ಮೇಕ್ ಅಮೆರಿಕ ಗ್ರೇಟ್ ಅಗೇನ್ ಎಂಬ ಪುಸ್ತಕ ಖರೀದಿಗೆ 55,000 ಡಾಲರ್ ಖರ್ಚು ಮಾಡಿದ್ದು ಸೇರಿ ಹಲವು ಆರೋಪಗಳನ್ನು ಅವರು ಎದುರಿಸಿದ್ದಾರೆ. 2000ನೇ ಇಸವಿಯಿಂದೀಚೆಗೆ ಫೆಡರಲ್ ಕೋರ್ಟ್‍ನಲ್ಲಿ 72 ಬಾರಿ ಟ್ರಂಪ್ ವಿರುದ್ಧ ಪ್ರಕರಣ ದಾಖಲಾಗಿವೆ. ಟ್ರಂಪ್ ಹಾಗೂ ಅವರ ಕಂಪನಿ ವಿರುದ್ಧ ವಿವಿಧ ಕೋರ್ಟ್‍ಗಳಲ್ಲಿ 1,300 ಬಾರಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಏತನ್ಮಧ್ಯೆ, ಫ್ರೆಡ್ ಟ್ರಂಪ್ ಅತೀವ ಮದ್ಯಪಾನ, ಧೂಮಪಾನಗಳಿಂದ ಮೃತಪಟ್ಟರು(1991). ಆ ಸಂದರ್ಭದಲ್ಲಿ ಟ್ರಂಪ್ ಹೇಳಿದ್ದಿಷ್ಟು- `ನನ್ನ ತಂದೆಯೇ ನನ್ನ ಪ್ರೇರಣೆಯಾಗಿದ್ದರು’.
ಇನ್ನು ಕುಟುಂಬದ ಬಗ್ಗೆ ಹೇಳುವುದಾದರೆ, 1977ರಲ್ಲಿ ಇವಾನ್ ಝ್ಲೆನಿಕೋವಾರನ್ನು ವಿವಾಹವಾದ ಟ್ರಂಪ್ 1992ರಲ್ಲಿ ಅವರಿಗೆ ವಿಚ್ಛೇದನ ನೀಡಿದರು. ಈ ದಾಂಪತ್ಯದಲ್ಲಿ ಅವರಿಗೆ, ಡೊನಾಲ್ಡ್ ಟ್ರಂಪ್ ಜೂನಿಯರ್(38)- ಟ್ರಂಪ್ ಆರ್ಗನೈಸೇಷನ್‍ನಲ್ಲಿ ಎಕ್ಸಿಕ್ಯೂಟಿವ್ ವೈಸ್‍ಪ್ರೆಸಿಡೆಂಟ್, ಇವಾನ್ಕಾ(35)-ಮಾಜಿ ಮಾಡೆಲ್, ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಿದವರು, ಎರಿಕ್(32)- ಟ್ರಂಪ್ ಆರ್ಗನೈಸೇಷನ್ಸ್‍ನ ಜಾಗತಿಕ ವ್ಯವಹಾರ ನೋಡುತ್ತಿರುವವರು- ಎಂಬ ಮೂವರು ಮಕ್ಕಳು.
ಡೊನಾಲ್ಡ್ ಟ್ರಂಪ್ ಮತ್ತೆ 1993ರಲ್ಲಿ ಮರಿಯಾ ಮಾಪ್ಲೆಸ್ ಎಂಬಾಕೆಯನ್ನು ವಿವಾಹವಾಗಿದ್ದು, ಆರು ವರ್ಷಗಳ ದಾಂಪತ್ಯದಲ್ಲಿ ಟಿಫಾನಿ(23) ಎಂಬ ಮಗಳನ್ನು ಪಡೆದರು. ತರುವಾಯ, 2005ರಲ್ಲಿ ಮೆಲನಿಯಾ ನೌಸ್ ಎಂಬಾಕೆಯನ್ನು ವಿವಾಹವಾಗಿದ್ದು, ಈ ದಾಂಪತ್ಯದಲ್ಲಿ ಬ್ಯಾರೆನ್ (10) ಎಂಬ ಮಗನನ್ನು ಪಡೆದಿದ್ದಾರೆ.
ಸದ್ಯ ಅವರು ನಿಯೋಜಿತ ಅಧ್ಯಕ್ಷರಾಗಿರುವ ಕಾರಣ, ಅವರ ಉದ್ಯಮ ಸಾಮ್ರಾಜ್ಯವನ್ನು ನೋಡಿಕೊಳ್ಳುವವರಾರು? ಎಂಬ ಪ್ರಶ್ನೆ ಎದ್ದಿದೆ. ಅಷ್ಟೇ ಅಲ್ಲ, ಕಂಪನಿ ಹಿತಾಸಕ್ತಿಯ ಕಾರಣಕ್ಕೆ ಅವರು ರಾಷ್ಟ್ರಹಿತವನ್ನು ಬಲಿಕೊಟ್ಟರೆ ಎಂಬ ಸಂದೇಹವೂ ಕಾಡಿದೆ. ಈ ಸಂದೇಹವನ್ನು ಬಗೆಹರಿಸುವ ನಿಟ್ಟಿನಲ್ಲಿ ಟ್ರಂಪ್ ಒಂದು ಟ್ರಸ್ಟ್ ರಚನೆ ಮಾಡಿ ಅದರ ವ್ಯಾಪ್ತಿಗೆ ಉದ್ಯಮವನ್ನು ಬಿಡುವ ಯೋಜನೆಯಲ್ಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಆದರೂ, ಇವೆಲ್ಲ ತಿಳಿಯಾಗಲು ಇನ್ನೂ ಕಾಲಬೇಕು. ಇನ್ನು, ರಾಜಕೀಯ-ಆಡಳಿತಾತ್ಮಕ ಅನನುಭವಿ ಟ್ರಂಪ್ ಅಮೆರಿಕವನ್ನು ಹೇಗೆ ಮುನ್ನಡೆಸಿಯಾರು, ಜಾಗತಿಕ ವ್ಯವಹಾರಗಳನ್ನು ಹೇಗೆ ನಿಭಾಯಿಸಿಯಾರು ಎಂಬ ಕುತೂಹಲವಂತೂ ಇದ್ದೇ ಇದೆ.

Leave a Reply

Your email address will not be published. Required fields are marked *