ವಿವಾದಗಳ ಸರದಾರ

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸದ್ಯ ಆಫ್ರಿಕಾದ ಮೊಜಾಂಬಿಕ್, ದಕ್ಷಿಣ ಆಫ್ರಿಕಾ, ತಾಂಜಾನಿಯಾ ಮತ್ತು ಕೀನ್ಯಾ ಈ ನಾಲ್ಕು ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಈಗಾಗಲೇ ಎರಡು ರಾಷ್ಟ್ರಗಳ ಪ್ರವಾಸವನ್ನು ಅವರು ಮುಗಿಸಿದ್ದಾರೆ. ಭಾರತಕ್ಕೆ ಎಲ್ಲ ರಾಷ್ಟ್ರಗಳ ಜೊತೆಗೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಅನಿವಾರ್ಯವೂ ಹೌದು. ಇಲ್ಲಿ ವ್ಯಕ್ತಿಗಿಂತ ರಾಷ್ಟ್ರ ಮುಖ್ಯ. ಈ ನಿಟ್ಟಿನಲ್ಲಿ ಆಫ್ರಿಕನ್ ರಾಷ್ಟ್ರಗಳ ಜೊತೆಗಿನ ಬಾಂಧವ್ಯಕ್ಕೂ ಭಾರತ ಪ್ರಾಮುಖ್ಯತೆ ನೀಡಬೇಕಾದ್ದೇ. ಇಂತಹ ಸನ್ನಿವೇಶದಲ್ಲಿ ಸಾಂರ್ದಭಿಕವಾಗಿ ಗಮನ ಸೆಳೆದವರು ದಕ್ಷಿಣ ಆಫ್ರಿಕಾದ ನಾಲ್ಕನೇ ಅಧ್ಯಕ್ಷ ಜೇಕಬ್ ಜೂಮಾ .

Jacob_Zumaಸ್ವಾರ್ಥದ ಹೊರತಾಗಿ ಬೇರೇನನ್ನೂ ಜೇಕಬ್ ಜೂಮಾ ಗಮನಿಸುವುದಿಲ್ಲ. ಸೆರೆವಾಸ ಅನುಭವಿಸುವುದನ್ನು ತಪ್ಪಿಸಿಕೊಳ್ಳುವುದಕ್ಕಷ್ಟೆ ಅವರ ಪ್ರಯತ್ನ ಸೀಮಿತವಾಗಿದ್ದು, ದೇಶದ ಹಿತಕ್ಕಾಗಿ ಏನೂ ಮಾಡುತ್ತಿಲ್ಲ ಎಂಬ ಆರೋಪ ಅವರ ಮೇಲಿದೆ. ಹೀಗೆ ವಿವಾದಗಳ ಸರದಾರರಾಗಿಯೇ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚು ಪ್ರಸಿದ್ಧರು. ಈಗ್ಗೆ ಮೂರು ತಿಂಗಳ ಹಿಂದೆ ಅವಿಶ್ವಾಸ ಗೊತ್ತುವಳಿಯನ್ನೂ ಎದುರಿಸಿದ್ದರು. ಇದನ್ನು ಗೆದ್ದ ಬಳಿಕ ಸರ್ಕಾರದ ಮೇಲಿನ ಜೇಕಬ್ ಹಿಡಿತ ಇನ್ನಷ್ಟು ಬಿಗಿಯಾಗಿದೆ. ಅಷ್ಟೇ ಅಲ್ಲ, ಆಡಳಿತಾರೂಢ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್(ಎಎನ್ಸಿ) ಅಧ್ಯಕ್ಷ ಸ್ಥಾನವೂ ಜೇಕಬ್ ತೆಕ್ಕೆಯಲ್ಲಿದೆ.

ಇಷ್ಟಾಗ್ಯೂ, ಅಭದ್ರತೆ ಅವರನ್ನು ಬಿಟ್ಟಿಲ್ಲ. ಸುತ್ತುವರಿದಿರುವ ನಾನಾ ವಿವಾದಗಳಿಂದಾಗಿ ಪ್ರತಿ ಕ್ಷಣ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಆಗಸ್ಟ್ 3ರಂದು ನಡೆಯುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷ ಸೋತರೆ,ಜೇಕಬ್ರನ್ನು ಪಕ್ಷ ಹಾಗೂ ಆಡಳಿತದಿಂದ ಕೆಳಕ್ಕಿಳಿಸಲು ಸೂಕ್ತ ವೇದಿಕೆ ಒದಗೀತು ಎಂದು ಎಎನ್ಸಿಯ ಹಲವು ಪ್ರಭಾವಿ ನಾಯಕರು ಆಶಾವಾದಿಗಳಾಗಿ ಕಾಯುತ್ತಿದ್ದಾರೆ. ಬೀದಿ ಬೀದಿಗಳಲ್ಲಿ ಜನ ಇದೇ ವಿಷಯವನ್ನು ಮಾತನಾಡುತ್ತಿದ್ದಾರೆ. ‘ಪಕ್ಷದಲ್ಲಿ ‘ಜಾಣ’ರು ಸಂಖ್ಯೆಯಲ್ಲಿ ಕಡಿಮೆ ಇದ್ದಾರು. ಆದರೆ, ಅವರು ಸಮಯ ಸಂದರ್ಭಕ್ಕಾಗಿ ಕಾಯುತ್ತಿದ್ದಾರೆ. ಜೇಕಬ್ ಅಧ್ಯಕ್ಷರಾಗಿರುವ ಕಾರಣ ಈ ಜಾಣರ ಬಲ ಕುಂದಿದೆ’ ಎಂಬಿತ್ಯಾದಿಯಾಗಿ ಹಲವು ರೀತಿಯ ವಿಶ್ಲೇಷಣೆಗಳನ್ನು ರಾಜಕೀಯ ಆಸಕ್ತರು ಮಾಡುತ್ತಿದ್ದಾರೆ ಎಂಬುದು ಮಾಧ್ಯಮಗಳ ವರದಿ.

ಈ ತೆರೆಮರೆಯ ವಿದ್ಯಮಾನಕ್ಕೆ ಹಲವು ಕಾರಣಗಳಿವೆ. ಕಳೆದ ವರ್ಷ ಡಿಸೆಂಬರ್ನಲ್ಲಿ ದೇಶದ ಕರೆನ್ಸಿ ಮೌಲ್ಯ ತೀವ್ರ ಕುಸಿತ ಕಂಡಾಗ ಹಣಕಾಸು ಸಚಿವ ನ್ಹಲಾನ್ಹ್ಲಾ ನೇನೆ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದಲ್ಲದೇ, ಒಂದೇ ವಾರದ ಅವಧಿಯಲ್ಲಿ ಮೂವರು ಹಣಕಾಸು ಸಚಿವರನ್ನು ಅಧ್ಯಕ್ಷ ಜೇಕಬ್ ಬದಲಾಯಿಸಿದ್ದರು. ಆಫ್ರಿಕಾದ ಎರಡನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆ ಎಂದು ಪರಿಗಣಿಸಲ್ಪಟ್ಟ ದೇಶದಲ್ಲಿ ಇಂತಹ ನಡೆ ಆರ್ಥಿಕ ವಲಯಕ್ಕೆ ಆಘಾತ ನೀಡಿದ್ದಲ್ಲದೇ ಆಕ್ರೋಶಕ್ಕೂ ಕಾರಣವಾಯಿತು. ಇನ್ನು 2016ರ ಮೊದಲ ತ್ರೖೆಮಾಸಿಕದ ವರದಿ ಪ್ರಕಾರ, ದಕ್ಷಿಣ ಆಫ್ರಿಕಾದ ರಫ್ತು ಇಳಿಮುಖವಾಗಿದ್ದು, ಆರ್ಥಿಕತೆ ಶೇಕಡ 1.2ರಷ್ಟು ಕುಸಿತ ಕಂಡಿದೆ. ನಿರುದ್ಯೋಗ ಪ್ರಮಾಣ ಎಂಟು ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದ್ದು 26.7% ಕ್ಕೆ ಏರಿದೆ. ಕಳೆದೆರಡು ದಶಕದಲ್ಲಿ ವ್ಯಾಪಾರ ವಿಶ್ವಾಸ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದರ ನೇರ ಪರಿಣಾಮ ದೇಶದ ಜನರ ಮೇಲಾಗಿದೆ. ಆದರೆ, ಅಧ್ಯಕ್ಷರ ಕುಟುಂಬದ ಮೇಲಾಗಿಲ್ಲ ಎಂಬುದು ಆರೋಪ. ಅಧ್ಯಕ್ಷರ ನಾಲ್ಕು ಪತ್ನಿಯರಿಗಾಗಿ 11 ಹೊಸ ಕಾರುಗಳಿಗಾಗಿ ಕಳೆದ ಮೂರು ವರ್ಷದಲ್ಲಿ ಸರ್ಕಾರದ ಬೊಕ್ಕಸದಿಂದ 3.74 ಲಕ್ಷ ಪೌಂಡ್ ಪಾವತಿಸಲಾಗಿದೆ. ಇತ್ತೀಚಿನ ಬಜೆಟ್ನಲ್ಲಿ ಅಧ್ಯಕ್ಷರಿಗಾಗಿ ಹೊಸ ಜೆಟ್ ವಿಮಾನ ಖರೀದಿಗೆ 1.75 ಮಿಲಿಯನ್ ಪೌಂಡ್ ಮೀಸಲಿಡಲಾಗಿದೆ. ಹೀಗೆ ಜೇಕಬ್ ಅವರ ಪ್ರತಿನಡೆಯಲ್ಲಿ ಜನ ಸ್ವಾರ್ಥಹಿತ ಕಾಣತೊಡಗಿದ್ದಾರೆ. ಇದರಿಂದಾಗಿ ಅವರ ಇಮೇಜ್ ತಳಮಟ್ಟಕ್ಕೆ ಕುಸಿದಿದೆ.

ಹಲವು ಅಪವಾದಗಳಿಗೆ ತುತ್ತಾಗಿರುವ ಜೇಕಬ್ ಇದೀಗ ಎರಡನೇ ಅವಧಿಗೆ ರಾಷ್ಟ್ರಾಧ್ಯಕ್ಷರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಸಂವಿಧಾನ ಪ್ರಕಾರ ಇನ್ನೊಂದು ಅವಧಿಗೆ ಅಧ್ಯಕ್ಷರಾಗುವ ಅವಕಾಶ ಅವರಿಗಿಲ್ಲ. ಅವರ ರಾಜಕೀಯ ಬದುಕು ಆರಂಭವಾಗಿದ್ದು ಹದಿನೇಳನೇ ವಯಸ್ಸಿನಲ್ಲಿ. 1962ರಲ್ಲಿ ಎಎನ್ಸಿಯ ತೀವ್ರವಾದಿ ಗುಂಪು ಉಮುಖೊಂಟೊ ವಿ ಸೈಜ್ವೆಗೆ ಸೇರ್ಪಡೆಗೊಂಡರು. ಇದೇ ಅವಧಿಯಲ್ಲಿ ಸರ್ಕಾರ ಈ ಸಂಘಟನೆ ಮೇಲೆ ನಿಷೇಧ ಹೇರಿತ್ತು. ಹೀಗಾಗಿ 1963ರಲ್ಲಿ ಸೌತ್ ಆಫ್ರಿಕನ್ ಕಮ್ಯೂನಿಸ್ಟ್ ಪಾರ್ಟಿ ಸೇರಿ ಸೋವಿಯತ್ ಯೂನಿಯನ್ನಲ್ಲಿ ಸೇನಾ ತರಬೇತಿಯನ್ನೂ ಪಡೆದರು. ಇದಾಗಿ ಕೆಲಕಾಲಗಳ ನಂತರ ಎಎನ್ಸಿಯ ಗುಪ್ತಚರ ವಿಭಾಗ ಸೇರಿ ಅಲ್ಲಿನ ಮುಖ್ಯಸ್ಥರಾದರು. ಈ ಅವಧಿಯಲ್ಲವರು ಎಎನ್ಸಿಯ ನಾಯಕರ ಜೊತೆಗೆ ಸೆರೆಸಿಕ್ಕು 10 ವರ್ಷಗಳ ಕಾಲ ಸೆರೆವಾಸ ಅನುಭವಿಸಿದರು.

1987ರಲ್ಲಿ ದಕ್ಷಿಣ ಆಫ್ರಿಕಾ ಬಿಟ್ಟು ಮೊಜಾಂಬಿಕ್ಗೆ ತೆರಳಬೇಕಾಯಿತು. ಆದರೆ, ಅಲ್ಲಿನ ಸರ್ಕಾರ ಆಶ್ರಯ ನಿರಾಕರಿಸಿದ್ದರಿಂದ ಜಿಂಬಾಬ್ವೆಗೆ ಹೋದರು. ಆ ಸಂದರ್ಭದಲ್ಲಿ ಎಎನ್ಸಿಯ ಕೇಂದ್ರ ಕಚೇರಿಯೂ ಜಿಂಬಾಬ್ವೆಗೆ ಸ್ಥಳಾಂತರಗೊಂಡಿತ್ತು. ಅಲ್ಲಿ, ಅವರು ಪಕ್ಷದ ಭೂಗತ ಚಟುವಟಿಕೆಯ ಮುಖ್ಯಸ್ಥರಾಗಿ ನಿಯೋಜಿತರಾಗಿದ್ದರು. 1990ರಲ್ಲಿ ಎಎನ್ಸಿಯ ಮೇಲಿನ ನಿಷೇಧ ತೆರವಾದ ಬಳಿಕ ಸ್ವದೇಶಕ್ಕೆ ಮರಳಿ ಶಾಂತಿ ಮಾತುಕತೆ ನಡೆಸಿದ ಅಗ್ರ ನಾಯಕರ ಪೈಕಿ ಜೇಕಬ್ ಕೂಡ ಒಬ್ಬರು. 1990ರಲ್ಲಿ ದಕ್ಷಿಣ ನಟಲ್ ಪ್ರಾಂತ್ಯದ ಪಕ್ಷದ ಮುಖ್ಯಸ್ಥರಾಗಿ ಆಯ್ಕೆಯಾದರು. 1994ರಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು. ಅದೇ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ದೇಶದ ಆಡಳಿತ ಚುಕ್ಕಾಣಿ ಹಿಡಿಯಿತು. ಅದೇ ವರ್ಷ ಡಿಸೆಂಬರ್ನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿಯೂ ನಿಯುಕ್ತಿಹೊಂದಿದರು. 1999ರ ಜೂನ್ನಲ್ಲಿ ದಕ್ಷಿಣ ಆಫ್ರಿಕಾದ ಎಕ್ಸಿಕ್ಯೂಟಿವ್ ಡೆಪ್ಯುಟಿ ಪ್ರೆಸಿಡೆಂಟ್ ಆಗಿ ನೇಮಕಗೊಂಡರು. 2004ರಲ್ಲಿ ಮೊದಲ ಬಾರಿ ಶಸ್ತ್ರಾಸ್ತ್ರ ಖರೀದಿ (ಶಬ್ಬೀರ್ ಶೇಖ್ ಪ್ರಕರಣ)ದಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ತುತ್ತಾದರು. ಹೀಗೆ ಆರಂಭವಾದ ಭ್ರಷ್ಟಾಚಾರದ ಆರೋಪಗಳ ಸಂಖ್ಯೆ 800 ಆಸುಪಾಸು ತಲುಪಿತ್ತು. ಕೆಲವು ಪ್ರಕರಣಗಳಲ್ಲಿ ಕೋರ್ಟ್ ಅವರನ್ನು ದೋಷಮುಕ್ತಗೊಳಿಸಿದ್ದರೂ, ಹಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

2005ರಲ್ಲಿ ಏಡ್ಸ್ ಜಾಗೃತಿ ಕಾರ್ಯಕರ್ತೆಯೊಬ್ಬರು ಜೇಕಬ್ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದರು. ಆದರೆ ಅದು ಸಮ್ಮತಿಯ ಮೇರೆಗೆ ನಡೆದುದಾಗಿತ್ತು ಎಂದು ಜೇಕಬ್ ಹೇಳಿದ್ದನ್ನು ಕೋರ್ಟ್ 2006ರಲ್ಲಿ ಮಾನ್ಯ ಮಾಡಿತ್ತು. 2009ರಲ್ಲಿ ಮೊದಲ ಬಾರಿ ಅಧ್ಯಕ್ಷರಾದ ಬಳಿಕ ಆಸ್ತಿವಿವರ ಬಹಿರಂಗಪಡಿಸದಿದ್ದುದು ವಿವಾದಕ್ಕೀಡಾಗಿತ್ತು. ಅದೇ ವರ್ಷ ಮುಖ್ಯನ್ಯಾಯಮೂರ್ತಿಗಳ ನೇಮಕದಲ್ಲೂ ವಿಪಕ್ಷ ನಾಯಕರ ಟೀಕೆ ಎದುರಿಸಿದ್ದರು. 2013ರಲ್ಲಿ ತಮ್ಮ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಭಾರತದ ಉತ್ತರಪ್ರದೇಶ ಮೂಲದ ಪ್ರಸಿದ್ಧ ಉದ್ಯಮಿಗಳಾದ ಅಜಯ್, ಅತುಲ್ ಮತ್ತು ರಾಜೇಶ್ ಗುಪ್ತಾ ಕುಟುಂಬದ ವಿವಾಹ ಸಮಾರಂಭದ ಅತಿಥಿಗಳ ಆಗಮನಕ್ಕೆ ವಾಯುನೆಲೆಯನ್ನು ಬಳಸಿಕೊಳ್ಳಲು ಅನುವು ಮಾಡಿಕೊಟ್ಟು ಸಂಸತ್ತಿನಲ್ಲಿ ತೀವ್ರ ಟೀಕೆ ಎದುರಿಸಿದ್ದರು. 2014ರ ಜನವರಿಯಲ್ಲಿ ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸಿದ ಬಳಿಕವಂತೂ ಸ್ವಾರ್ಥಹಿತ ಸಾಧನೆಯತ್ತಲೇ ಅವರ ಗಮನ ಎಂಬುದು ಜನಾಕ್ರೋಶಕ್ಕೆ ಕಾರಣ.

ಅಂದಹಾಗೆ, ಜೇಕಬ್ ಗೆಡ್ಲಿಯಿಹ್ಲೆಕಿಸಾ ಜೂಮಾ ಎಂಬುದು ಅವರ ಪೂರ್ಣ ಹೆಸರು. ಗೆಡ್ಲಿಯಿಹ್ಲೆಕಿಸಾ ಎಂದರೆ ಶತ್ರುಗಳನ್ನು ಅಟ್ಟಾಡಿಸಿ ಹತ್ಯೆಮಾಡುವಾಗ ನಗುತ್ತಿರುವಾತ ಎಂದರ್ಥವಂತೆ. ಕ್ವಾಝುುಲು ನಟಾಲ್ನ ನ್ಕಂಡ್ಲಾ ಎಂಬಲ್ಲಿ 1942 ಏಪ್ರಿಲ್ 12ರಂದು ಜೇಕಬ್ ಜನನ. ತಂದೆ ಪೊಲೀಸ್ ಇಲಾಖೆಯಲ್ಲಿದ್ದವರು, ಎರಡನೇ ವಿಶ್ವಯುದ್ಧದಲ್ಲಿ ಕೊನೆಯುಸಿರೆಳೆದಿದ್ದರು. ಮನೆಗೆಲಸ ಮಾಡುತ್ತ ತಾಯಿ ಇವರನ್ನು ಸಾಕಿ ಸಲಹಿದ್ದರು. ಹೀಗಾಗಿ ಜೇಕಬ್ಗೆ ಔಪಚಾರಿಕ ಶಿಕ್ಷಣ ಲಭಿಸಿಲ್ಲ. ಸ್ವ ಪ್ರಯತ್ನದಿಂದಲೇ ಮೇಲೆ ಬಂದ ಜೇಕಬ್ ಅವರು ಝುುಲು, ಫ್ರೆಂಚ್, ರಷ್ಯನ್, ಪೋರ್ಚುಗೀಸ್, ಸ್ವಾಹಿಲಿ, ಕ್ಸೋಸಾ ಭಾಷೆಗಳಲ್ಲಿ ಸುಲಲಿತವಾಗಿ ವ್ಯವಹರಿಸಬಲ್ಲರು. ಆರು ಬಾರಿ ಮದುವೆಯಾಗಿರುವ ಅವರು 20 ಮಕ್ಕಳನ್ನು ಹೊಂದಿದ್ದಾರೆ.

Leave a Reply

Your email address will not be published. Required fields are marked *