ಯಾರಿಗೂ ಕಮ್ಮಿ ಇಲ್ಲ ನಮ್ ಸೇನೆ…

ಸರ್ಜಿಕಲ್ ದಾಳಿ ಎಂದಾಕ್ಷಣ ನೆನಪಿಗೆ ಬರುವ ಚಿತ್ರಣ ಇಸ್ರೇಲ್ ಸೇನೆಯದ್ದು. ಆದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಸರ್ಜಿಕಲ್ ದಾಳಿ ನಂತರದಲ್ಲಿ ಜಗತ್ತಿನ ಗಮನ ಭಾರತೀಯ ಸೇನೆ ಕಡೆಗೆ ತಿರುಗಿದೆ. ಇದಕ್ಕೆ ಪೂರಕವಾಗಿ, ಎರಡೂ ಸೇನೆಗಳನ್ನು ಹೋಲಿಸಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆ ಇಸ್ರೇಲ್ ಮತ್ತು ಅಲ್ಲಿನ ಸೇನೆ ಕುರಿತ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. 

israeli-armyಈಗ್ಗೆ ಕೆಲದಿನಗಳ ಹಿಂದಿನ ಘಟನೆ. ಹಿಮಾಚಲ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ‘ಸರ್ಜಿಕಲ್ ದಾಳಿ ಎಂದಾಗ ಇದುವರೆಗೂ ಇಸ್ರೇಲ್ ಸೇನೆ ನೆನಪಾಗುತ್ತಿತ್ತು. ಇತ್ತೀಚೆಗೆ ಸರ್ಜಿಕಲ್ ದಾಳಿ ನಡೆಸಿ ಕಾಶ್ಮೀರದ ಗಡಿಭಾಗದಲ್ಲಿನ ಉಗ್ರ ನೆಲೆಗಳನ್ನು ನಾಶಗೊಳಿಸಿದ ಭಾರತೀಯ ಸೇನೆ ಜಗತ್ತಿನ ಗಮನಸೆಳೆಯಿತು. ನಮ್ಮ ಸೇನೆ ಜಗತ್ತಿನ ಯಾವ ಸೇನೆಗೂ ಕಮ್ಮಿ ಇಲ್ಲ ಎಂಬುದು ಇದರಿಂದ ಎಲ್ಲರಿಗೂ ಮನವರಿಕೆಯಾಗಿದೆ. ಇದು ಕೇವಲ ಸೈನ್ಯ ಅಥವಾ ನಿವೃತ್ತ ಸೈನಿಕರು ಖುಷಿ, ಹೆಮ್ಮೆ ಪಡಬೇಕಾದ ವಿಷಯವಲ್ಲ. ದೇಶದ ಪೌರರೆಲ್ಲ ಹೆಮ್ಮೆಪಡುವಂಥ ವಿಚಾರ’ ಎಂದು ಹೇಳಿದ್ದರು.

ಇಸ್ರೇಲ್ ಸೇನೆಯ ಸಮರ ಚಾಣಾಕ್ಷತೆ, ಕೌಶಲಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಈ ಹೋಲಿಕೆ ಮಾಡಿದ್ದರು. ಇಸ್ರೇಲ್ ಸೇನೆಗೆ ಅಂಥದ್ದೊಂದು ಜಾಗತಿಕ ಇಮೇಜ್ ಇದೆ. ಆದರೆ, ಸರ್ಜಿಕಲ್ ದಾಳಿ ಹೆಸರಿನಲ್ಲಿ ಗಡಿಭಾಗದಲ್ಲಿ ಅಮಾಯಕ ಪೌರರ ಹತ್ಯೆ ನಡೆಸಿದೆ ಎಂಬ ಆರೋಪ ಇತ್ತೀಚಿನ ವರ್ಷದಲ್ಲಿ ಇಸ್ರೇಲ್ ಸೇನೆಗೆ ಮೆತ್ತಿಕೊಂಡಿರುವುದನ್ನೂ ಅಲ್ಲಗಳೆಯುವಂತಿಲ್ಲ.

ಭಾರತೀಯ ಸೇನೆ ಯಾಕೆ ಬೆಸ್ಟ್?

‘ಇಸ್ರೇಲ್ ನಡೆಸುವ ಕಾರ್ಯಾಚರಣೆಯ ಪರಿಸ್ಥಿತಿಗೂ ಕಾಶ್ಮೀರದಲ್ಲಿರುವ ಸ್ಥಿತಿಗತಿಗೂ ವ್ಯತ್ಯಾಸವಿದೆ. ಇಸ್ರೇಲಿ ಸೇನೆಯ ಸರ್ಜಿಕಲ್ ಕಾರ್ಯಾಚರಣೆಗಿಂತ ಭಾರತೀಯ ಸೇನೆಯ ಸರ್ಜಿಕಲ್ ದಾಳಿ ಹೆಚ್ಚು ಸಂಘಟಿತ ಮತ್ತು ನಿಖರವಾದುದು. ಕಾಶ್ಮೀರದ ಗಡಿಭಾಗದುದ್ದಕ್ಕೂ ಭಾರತೀಯ ಸೈನಿಕರು ಸುಸಜ್ಜಿತ ಮತ್ತು ಸುಸಂಘಟಿತ ಪಾಕಿಸ್ತಾನಿ ಸೇನೆಯನ್ನು ಪ್ರತಿನಿತ್ಯ ಎದುರಿಸಬೇಕು. ಇಂತಹ ಸರ್ಜಿಕಲ್ ದಾಳಿ ನಡೆಸುವುದಕ್ಕೆ ಅನುವುವಾಗುವಂತಹ ಅಂತರ(ಉಗ್ರ ನೆಲೆಗಳು ಹಾಗೂ ಪಾಕಿಸ್ತಾನ ಸೇನೆಯ ಇರುವಿಕೆಯ ದೂರ)ವನ್ನು ಭಾರತೀಯ ಸೇನೆ ಗುರುತಿಸಬೇಕು. ಎಲ್ಲದಕ್ಕೂ ಮುಖ್ಯವಾಗಿ ಗಡಿಭಾಗದ ಭೌಗೋಳಿಕ ಪ್ರದೇಶ ಗುಡ್ಡಗಾಡು ಹಾಗೂ ಹಿಮಾವೃತ ಪ್ರದೇಶವಾದ್ದರಿಂದ ಕಾರ್ಯಾಚರಣೆ ತುಸು ಕಷ್ಟವೇ. ಇಸ್ರೇಲ್ನ ಪರಿಸ್ಥಿತಿ ಈ ರೀತಿ ಸಂಕಷ್ಟದಾಯಕವಾಗಿಲ್ಲ. ಅಲ್ಲಿನ ಸೇನೆ ಸೆಣೆಸುತ್ತಿರುವುದು ಪ್ಯಾಲೆಸ್ತೀನಿಯರು ಹಾಗೂ ಲೆಬನೀಸ್ ಗಡಿಯ ಉಗ್ರರ ಜತೆಗೆ. ಕಾರ್ಯಾಚರಣೆ ನಡೆಯುವುದು ಸಮತಟ್ಟು ಪ್ರದೇಶದಲ್ಲಿ. ಹೀಗಾಗಿ ಪ್ರಧಾನಿಯವರ ಹೋಲಿಕೆ ಸೂಕ್ತವಾದುದು’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ರಕ್ಷಣಾ ಅಧ್ಯಯನ ಮತ್ತು ವಿಶ್ಲೇಷಣಾ ಸಂಸ್ಥೆಯ ಗೌರವಾನ್ವಿತ ಫೆಲೊ ನಿವೃತ್ತ ಬ್ರಿಗೇಡಿಯರ್ ಗುರ್ವಿುತ್ ಕನ್ವಾಲ್.

ಶತ್ರುರಾಷ್ಟ್ರದ ಅಧೀನ ಇರುವ ಭೌಗೋಳಿಕ ಪ್ರದೇಶದೊಳಕ್ಕೆ ಹೋಗಿ ದಾಳಿ ನಡೆಸುವುದು ಸಾಮಾನ್ಯ ವಿಷಯವಲ್ಲ. ಭಾರತೀಯ ಸೇನೆಯು 250 ಕಿ.ಮೀ. ಉದ್ದದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಐದು ಆಯ್ದೆ ಭಿನ್ನ ಪ್ರದೇಶಗಳಲ್ಲಿ ಈ ದಾಳಿಯನ್ನು ನಡೆಸಿತ್ತು. ಗಡಿಯೊಳಗೆ ಕೆಲವೆಡೆ 500 ಮೀಟರ್ ಇನ್ನು ಕೆಲವೆಡೆ 3 ಕಿ.ಮೀ. ಒಳಗೆ ಈ ದಾಳಿ ನಡೆದಿತ್ತು. ಪಾಕಿಸ್ತಾನ ಸೇನೆ ಸದಾ ಎದುರುಬದುರಾಗಿರುವ ಗಡಿ ಭಾಗದಲ್ಲಿ ಇಷ್ಟು ಒಳಕ್ಕೆ ನುಗ್ಗಿ ದಾಳಿ ನಡೆಸುವ ಸಾಮರ್ಥ್ಯವನ್ನು ಕಡೆಗಣಿಸಲಾಗದು ಎನ್ನುವ ಅಭಿಪ್ರಾಯ ಕರ್ನಲ್ ಕೆ.ವಿ.ಕುಬೇರ್ ಅವರದ್ದು.

ಮೊಸ್ಸಾದ್

ಇಸ್ರೇಲ್ನ ಸೇನೆ ಎಂದಾಕ್ಷಣ ಮೊದಲು ನೆನಪಿಗೆ ಬರುವಂಥದ್ದೇ ಮೊಸ್ಸಾದ್. ಗೂಢಚರ್ಯು ಮತ್ತು ವಿಶೇಷ ಕಾರ್ಯಾಚರಣೆಗಳ ಸಂಸ್ಥೆ ಇದಾಗಿದೆ. ಇಸ್ರೇಲ್ನ ಗುಪ್ತಚರ ಇಲಾಖೆ, ಸೇನಾ ಗುಪ್ತಚರ ದಳ(AMAN),, ಆಂತರಿಕ ಸುರಕ್ಷೆಯ ದಳ (Shin Bet)ಗಳು ಇದರ ಅಧೀನದಲ್ಲೇ ಇರುತ್ತವೆ. ಗುಪ್ತಚರ ಮಾಹಿತಿ ಸಂಗ್ರಹ, ರಹಸ್ಯ ಕಾರ್ಯಾಚರಣೆ, ಉಗ್ರ ನಿಗ್ರಹ ಕಾರ್ಯಗಳು, ಜಗತ್ತಿನ ಯಹೂದ್ಯರ ರಕ್ಷಣೆಯ ಹೊಣೆಗಾರಿಕೆ ಇದರದ್ದು. ಈ ಸಂಸ್ಥೆಯು ನೇರವಾಗಿ ಪ್ರಧಾನಮಂತ್ರಿ ಅಧೀನದಲ್ಲೇ ಇರುತ್ತದೆ. 1949ರ ಡಿಸೆಂಬರ್ 13ರಂದು ಅಂದಿನ ಪ್ರಧಾನ ಮಂತ್ರಿ ಡೇವಿಡ್ ಬೆನ್ ಗುರಿಯೊನ್ ಆಶಯದಂತೆ ಮೊಸ್ಸಾದ್ ರಚನೆಯಾಗಿತ್ತು. ಅದುವರೆಗೆ ಪ್ರತ್ಯೇಕವಾಗಿ ಕೆಲಸ ಮಾಡುತ್ತಿದ್ದ ಗುಪ್ತಚರ ಇಲಾಖೆ, ಸೇನಾ ಗುಪ್ತಚರ ದಳ, ಆಂತರಿಕ ಸುರಕ್ಷೆಯ ದಳಗಳ ನಡುವೆ ಸಮನ್ವಯ ಸಾಧಿಸುವುದು ಉದ್ದೇಶವಾಗಿತ್ತು. 1951ರ ಮಾರ್ಚ್ನಲ್ಲಿ ಇದು ಪ್ರಧಾನಮಂತ್ರಿ ಕಚೇರಿಯ ಅಧೀನಕ್ಕೆ ಸೇರ್ಪಡೆಯಾಯಿತು.

ಕಿಡಾನ್ ಎಂಬ ವಿಶೇಷ ಪಡೆ

ಇಸ್ರೇಲಿನ ರಕ್ಷಣಾ ಪಡೆಯಲ್ಲಿ ವಿಶೇಷ ಕಾರ್ಯಾಚರಣೆಗಳನ್ನು ನಡೆಸುವ ಘಟಕ ಇದಾಗಿದ್ದು, ಕಿಡಾನ್ ಎಂದು ಕರೆಯಲ್ಪಡುತ್ತದೆ. ರಹಸ್ಯ ಕಾರ್ಯಾಚರಣೆ ಅದರಲ್ಲೂ ಮುಖ್ಯವಾಗಿ ನಿಗದಿತ ಗುರಿ ಇರಿಸಿಕೊಂಡು ದಾಳಿ ಮಾಡುವ ಕಾರ್ಯಾಚರಣೆಗೆ ಇದು ಹೆಸರುವಾಸಿ. ಈ ಘಟಕಕ್ಕೆ ಇಸ್ರೇಲಿ ರಕ್ಷಣಾ ಪಡೆಯ ನಿವೃತ್ತ ಮತ್ತು ಅರ್ಹ ಪ್ರತಿಭಾವಂತ ಸೈನಿಕರನ್ನಷ್ಟೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಘಟಕದ ಕಾರ್ಯಾಚರಣೆ ಅತ್ಯಂತ ರಹಸ್ಯವಾಗಿ ನಡೆಯುವಂಥದ್ದಾಗಿದ್ದು, ಎಲ್ಲವೂ ಮೊಸ್ಸಾದ್ ನಿಯಂತ್ರಣ ಹಾಗೂ ಉಸ್ತುವಾರಿಯಲ್ಲೇ ನಡೆಯುತ್ತದೆ.

ಕಿಡಾನ್ ಕಾರ್ಯಾಚರಣೆ ವಿಷಯವನ್ನೇ ಕಥಾವಸ್ತುವನ್ನಾಗಿ ಇರಿಸಿಕೊಂಡ ಅನೇಕ ಕಾದಂಬರಿಗಳು ರಚನೆಯಾಗಿವೆ, ಸಿನಿಮಾಗಳು ತೆರೆಕಂಡಿವೆ. ಕಿಡಾನ್ ಹೆಸರಿನಲ್ಲೇ ಒಂದು ಹಾಸ್ಯ ಚಲನಚಿತ್ರ 2013ರ ಅಕ್ಟೋಬರ್ 10ರಂದು ತೆರೆಕಂಡಿತ್ತು. ಜೆಡಿ ವಲ್ಲೇಸ್ ಎಂಬ ಕಾದಂಬರಿಕಾರಿ 2015ರಲ್ಲಿ ಬಿಡುಗಡೆಯಾದ ತನ್ನ ಚೊಚ್ಚಲ ಕೃತಿ ’SILENT CATS: Deadly Dance’ನಲ್ಲಿ ಕಿಡಾನ್ ಕಾರ್ಯಾಚರಣೆ ಉಲ್ಲೇಖ ಮಾಡಿದ್ದಾರೆ.

ಉದ್ದೇಶಿತ ದಾಳಿಗೆ ಹೆಸರುವಾಸಿ

ಇಸ್ರೇಲಿನ ರಕ್ಷಣಾ ಪಡೆಗಳು ಉದ್ದೇಶಿತ ದಾಳಿ ನಡೆಸುವುದಕ್ಕೆ ಹಾಗೂ ನಿಗದಿತ ಸಂಭಾವ್ಯ ದಾಳಿಗಳನ್ನು ನಿಷ್ಪಲಗೊಳಿಸುವಲ್ಲಿ ಪರಿಣತಿ ಪಡೆದಂಥವು. ಇಸ್ರೇಲಿ-ಪ್ಯಾಲೆಸ್ತೀನ್ ಸಂಘರ್ಷದ ಅವಧಿಯಲ್ಲಿ ದೃಢೀಕರಿಸಲ್ಪಟ್ಟ ಅಂಶ ಇದು. ನಿಗದಿತ ವ್ಯಕ್ತಿಗಳನ್ನು ಹತ್ಯೆ ಮಾಡುವುದಕ್ಕೆ ಇಸ್ರೇಲಿ ಪಡೆಗಳು ತನ್ನ ಭೌಗೋಳಿಕ ಪ್ರದೇಶದಲ್ಲಿ ಅಥವಾ ಹೊರಗೆ ಪ್ಯಾಲಸ್ತೀನ್ ಗಡಿಯೊಳಗೆ ನುಗ್ಗಿ ಯೋಜನಾಬದ್ಧವಾಗಿ ದಾಳಿ ನಡೆಸುವುದನ್ನು ಉದ್ದೇಶಿತ ದಾಳಿ ಎನ್ನುತ್ತಾರೆ. ಇದಕ್ಕಾಗಿ ಹಲವು ಮಾದರಿಯ ದಾಳಿಗಳನ್ನು ಅದು ನಡೆಸುತ್ತಿದೆ. 2006ರ ಡಿ.14ರಂದು ಇಸ್ರೇಲ್ನ ಸುಪ್ರೀಂ ಕೋರ್ಟ್ ಕೂಡ ದೇಶ ರಕ್ಷಣೆ ಹಿನ್ನೆಲೆಯಲ್ಲಿ ನಡೆಸುವ ಇಂತಹ ಉದ್ದೇಶಿತ ದಾಳಿಯನ್ನು ಮಾನ್ಯ ಮಾಡಿದೆ. ಇದನ್ನು ಸರ್ಜಿಕಲ್ ದಾಳಿ ಎಂದೂ ಹೇಳುತ್ತಾರೆ.

ದಾಳಿಯ ಮಾದರಿಗಳು: ಇಸ್ರೇಲ್ ತನ್ನ ಕಾರ್ಯಾಚರಣೆಗೆ ವಿಶೇಷವಾಗಿ ಉದ್ದೇಶಿತ ದಾಳಿ(ಟಾರ್ಗೆಟೆಡ್ ಸ್ಟ್ರೈಕ್)ಗೆ ಎಎಚ್64 ಅಪಾಚೆ ಹೆಲಿಕಾಪ್ಟರನ್ನು ಬಳಸುತ್ತದೆ. ಇನ್ನು ಕೆಲವು ಕಡೆ ಎಫ್-16 ಸಮರ ವಿಮಾನವನ್ನು ಬಳಸಲಾಗಿದೆ. ಇತ್ತೀಚಿನ ದಾಳಿಗಳಲ್ಲಿ ಡ್ರೋನ್ಗಳನ್ನು ಅದು ಬಳಸಿದೆ. ಗುಪ್ತಚರ ಮಾಹಿತಿ ಪಡೆದು, ನಿಗದಿತ ವ್ಯಕ್ತಿಗಳನ್ನು ಅಥವಾ ನಿಗದಿತ ಉಗ್ರ ನೆಲೆಗಳನ್ನು ಗುರುತಿಸಿ ಅವುಗಳನ್ನಷ್ಟೇ ನಾಶ ಮಾಡುವ ಗುರಿಯನ್ನು ಈ ಕಾರ್ಯಾಚರಣೆ ನೆರವೇರಿಸುತ್ತದೆ.

ಉದ್ದೇಶಿತ ದಾಳಿಗಳ ಬಗ್ಗೆ ಉದಾಹರಣೆಗಳನ್ನು ನೀಡುವುದಾದರೆ, ಹಮಾಸ್ ನಾಯಕರಾದ ಮಹಮೂದ್ ಅದಾನಿ(2001 ಫೆಬ್ರವರಿ), ಜಮೀಲ್ ಜದಲ್ಲಾಹ್(2001 ನವೆಂಬರ್), ಸಲಾಹ್ ಶಹಾದೆ (2002 ಜುಲೈ), ಅಹ್ಮದ್ ಯಾಸ್ಸಿನ್(2004 ಮಾರ್ಚ್), ಅಬ್ದೆಲ್ ಅಜೀಜ್ ಅಲ್-ರನ್ಟಿಸ್ಸಿ(2004 ಏಪ್ರಿಲ್), ಅದ್ನಾನ್ ಅಲ್-ಘೌಲ್(2004 ಅಕ್ಟೋಬರ್) ಮುಂತಾದವರ ಹತ್ಯೆಗಳನ್ನು ಉಲ್ಲೇಖಿಸಬಹುದು. ಇದಲ್ಲದೇ, Operation Wrath of God’- ಇದು ಮ್ಯೂನಿಚ್ ಹತ್ಯಾಕಾಂಡ(1972)ದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾದ ಪ್ಯಾಲೆಸ್ತೀನಿಯನ್ ಲಿಬರೇಷನ್ ಆರ್ಗನೈಸೇಷನ್(ಪಿಎಲ್ಒ) ಸೈನಿಕರು ಮತ್ತು ಬ್ಲ್ಯಾಕ್ ಸೆಪ್ಟೆಂಬರ್ ವಿರುದ್ಧದ ಕಾರ್ಯಾಚರಣೆ, ಆಪರೇಷನ್ ಸ್ಪ್ರಿಂಗ್ ಆಫ್ ಯೂತ್(1973)- ಇದು ಪಿಎಲ್ಒ ನಾಯಕರಾದ ಮುಹಮ್ಮದ್ ನಜರ್, ಕಮ್ಮಲ್ ಅದ್ವಾನ್, ಕಮ್ಮಲ್ ನಾಸಿರ್ ವಿರುದ್ಧ ಬೈರುತ್ನಲ್ಲಿ ನಡೆದ ಕಾರ್ಯಾಚರಣೆ. ಇಂಥ ಹಲವು ಕಾರ್ಯಾಚರಣೆಗಳನ್ನು ಮೊಸ್ಸಾದ್ ನಡೆಸಿದೆ.

ತಿರುಗುಬಾಣ

ಗಾಜಾ ಯುದ್ಧ(2014)ದ ಸಂದರ್ಭದಲ್ಲಿ ಇಸ್ರೇಲಿ ಸೇನೆ ನಡೆಸಿದ ಬಾಂಬ್ ದಾಳಿಯಿಂದಾಗಿ 2,165 ಪ್ಯಾಲೆಸ್ತೀನಿಯರು(1,644 ಪೌರರು) ಮೃತಪಟ್ಟಿದ್ದರು. ಉಗ್ರ ದಾಳಿಗೆ ಸಿಲುಕಿ ಮೃತಪಟ್ಟ ಇಸ್ರೇಲಿ ಸೈನಿಕರ ಸಂಖ್ಯೆ 66, ನಾಗರಿಕರ ಸಂಖ್ಯೆ 4 ಎಂಬುದನ್ನು ವಿಶ್ವಸಂಸ್ಥೆ ವರದಿ ದೃಢೀಕರಿಸಿದೆ. ಇಂತಹ ರಕ್ತಪಾತದಿಂದ ಇಸ್ರೇಲಿ ಸೇನೆ ಸಾಧಿಸಿದ್ದೇನು? ಎಂಬ ಪ್ರಶ್ನೆ ಮೂಡಿದೆ. ಉಗ್ರರ ವಿರುದ್ಧದ ಕಾರ್ಯಾಚರಣೆ ನೆಪದಲ್ಲಿ ಗಡಿಭಾಗದ ಜನರ ಮೇಲೂ ಸೇನೆ ದಾಳಿ ಮಾಡುತ್ತಿದೆ ಎಂಬ ಆರೋಪ ಎದುರಾಗಿದೆ. ಇದಲ್ಲದೇ, ಇಸ್ರೇಲಿನ ಸರ್ಜಿಕಲ್ ದಾಳಿ ಕುರಿತಂತೆ ವ್ಯಾಪಕ ಆರೋಪಗಳು ಕೇಳತೊಡಗಿವೆ. ಅದರ ಕಾರ್ಯಾಚರಣೆಯ ವೈಖರಿ ಬದಲಾಗಬೇಕೆಂಬ ಬೇಡಿಕೆಯೂ ಹೆಚ್ಚಾಗಿದೆ.

ರಾಷ್ಟ್ರಪ್ರೇಮದ ಪಾಠ

ಇಸ್ರೇಲಿಗರಿಗೆ ಬಾಲ್ಯದಿಂದಲೇ ರಾಷ್ಟ್ರಪ್ರೇಮವನ್ನು ತುಂಬುವ ಕೆಲಸ ಮಾಡಲಾಗುತ್ತದೆ. ಪಠ್ಯಕ್ರಮದಲ್ಲೂ ಅಂಥದ್ದೇ ವ್ಯವಸ್ಥೆ ಇದೆ. ಐಡಿಸಿ ಹರ್ರಿkಲಿಯಾ ಎಂಬ ಸಂಸ್ಥೆ 2006ರಲ್ಲಿ ಪ್ರಕಟಿಸಿದ ’’Patriotism and Israel’s National Security’  ಎಂಬ ಸಮೀಕ್ಷೆ ಪ್ರಕಾರ, ಇಸ್ರೇಲಿನಲ್ಲೇ ಬಾಳಿ ಬದುಕಿ ಎಂದೇ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿರುವುದಾಗಿ ಶೇಕಡ 67ರಷ್ಟು ಇಸ್ರೇಲಿಗರು ಹೇಳಿದ್ದಾರೆ. ಇನ್ನು ಶೇಕಡ 19ರಷ್ಟು ಇಸ್ರೇಲಿಗರು ಇಸ್ರೇಲ್ನಲ್ಲೇ ಬಾಳಿ ಬದುಕುವಂತೆ ಮಕ್ಕಳನ್ನು ಉತ್ತೇಜಿಸಬೇಕು ಎಂಬ ವಿಷಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಶೇಕಡ 5ರಷ್ಟು ಜನರಿಗೆ ಇದು ಇಷ್ಟವಾಗಿಲ್ಲ. ಜಗತ್ತಿನ ಬೇರಾವುದೋ ದೇಶದಲ್ಲಿ ಜನಿಸುವುದಕ್ಕಿಂತ ಇಸ್ರೇಲಿನಲ್ಲೇ ಜನಿಸಿದ್ದು ಒಳ್ಳೆಯದಾಯಿತು ಎಂದು ಶೇಕಡ 68ರಷ್ಟು ಜನ ಹೇಳಿಕೊಂಡಿದ್ದಾರೆ. ಶೇಕಡ 19 ಜನ ಸಹಮತ ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಶೇಕಡ 5ರಷ್ಟು ಜನ ಇಸ್ರೇಲ್ನಲ್ಲಿ ಜನಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

http://vijayavani.net/%E0%B2%AF%E0%B2%BE%E0%B2%B0%E0%B2%BF%E0%B2%97%E0%B3%82-%E0%B2%95%E0%B2%AE%E0%B3%8D%E0%B2%AE%E0%B2%BF-%E0%B2%87%E0%B2%B2%E0%B3%8D%E0%B2%B2-%E0%B2%A8%E0%B2%AE%E0%B3%8D-%E0%B2%B8%E0%B3%87%E0%B2%A8/

Leave a Reply

Your email address will not be published. Required fields are marked *